ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಪೃಥ್ವಿ ವಸತಿ ಶಾಲೆಗೆ ಕಾಯಕಲ್ಪ ನೀಡಿದ್ದಾರೆ.
ಪೃಥ್ವಿ ವಸತಿ ಶಾಲೆ ಮಳೆಯಿಂದ ಸೋರುತ್ತಿತ್ತು. ಅಲ್ಲದೆ ಲಾಕ್ ಡೌನ್ ನಿಂದ ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸುಮಾರು 40 ಕ್ಕೂ ಹೆಚ್ಚು ಮಕ್ಕಳಿರುವ ಈ ಶಾಲೆಗೆ ಕಿಚ್ಚ ಸುದೀಪ್ ನೆರವು ನೀಡಿದ್ದಾರೆ.
ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವಿಶೇಷ ಚೇತನ ಮಕ್ಕಳ ಪಾಲಿಗೆ ಬೆಳಕಾಗಿದೆ. ಮಂಗಳವಾರ ಕಿಚ್ಚ ಸುದೀಪ್ ಚಾರಿಟೇಬಲ್ ರಾಜ್ಯ ಮುಖಂಡ ರಮೇಶ್ ಕಿಟ್ಟಿ ಹಾಗೂ ಜಿಲ್ಲಾ ಮುಖಂಡರಾದ ಸೋಮ ನಾಯಕ, ಪರಶಿವ ಅವರ ತಂಡ ಶಾಲೆಗೆ ಭೇಟಿ ನೀಡಿ, ಒಂದು ತಿಂಗಳಿಗಾಗುವಷ್ಟು ಆಹಾರದ ಕಿಟ್ ವಿತರಿಸಿ ವಸತಿ ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿ ಮಾಡಲೂ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ವಸತಿ ಶಾಲೆ ಬಾಡಿಗೆ ಕಟ್ಟಡದಲ್ಲಿದ್ದು ಅವಕಾಶ ಕೊಟ್ಟರೇ ಇದೇ ಕಟ್ಟಡವನ್ನು ದುರಸ್ತಿ ಮಾಡಿಸಲಾಗುವುದು. ಇಲ್ಲವೇ ಬೇರೆ ಕಟ್ಟಡ ನೋಡಿ ಶಾಲೆಯನ್ನು ಸ್ಥಳಾಂತರಿಸುವ ಕೆಲಸವನ್ನು ಚಾರಿಟೇಬಲ್ ಸೊಸೈಟಿ ಮಾಡಲು ಮುಂದಾಗಿದೆ.
ಕೊರೊನಾದಿಂದ ಸಂಕಷ್ಟದಲ್ಲಿರುವ ಸಾಕಷ್ಟು ಮಂದಿಗೆ ಸುದೀಪ್ ಟ್ರಸ್ಟ್ ಸಹಾಯ ಮಾಡಿದೆ. ಕಷ್ಟ ಎಂದವರ ನೆರವಿಗೆ ತಕ್ಷಣಕ್ಕೆ ಧಾವಿಸುವ ಸುದೀಪ್ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.