ಪ್ರೇಮ್ ನಿರ್ದೇಶನದ “ಕಲಿ’ ಚಿತ್ರಕ್ಕೆ ಅಶೋಕ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯನವರು ಚಿತ್ರಕ್ಕೆ ಚಾಲನೆ ನೀಡಿದ್ದರು. ಶಿವರಾಜಕುಮಾರ್ ಹಾಗೂ ಸುದೀಪ್ ಮೊದಲ ಬಾರಿಗೆ ಜೊತೆಯಾಗಿ ನಟಿಸುವ ಸಿನಿಮಾ “ಕಲಿ’ ಆಗಿದ್ದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿತ್ತು. ಆದರೆ, ಸಿನಿಮಾ ಮಾತ್ರ ಮುಂದುವರಿಯಲೇ ಇಲ್ಲ. ಕೆಲ ದಿನಗಳ ಬಳಿಕ “ಕಲಿ’ ನಿಂತೋಯ್ತಂತೆ ಎಂಬ ಸುದ್ದಿ ಬಂತು.
ಹಾಗಾದರೆ ಪ್ರೇಮ್ ಮುಂದೇನು ಮಾಡುತ್ತಾರೆಂದು ಯೋಚಿಸುತ್ತಿದ್ದಾಗ ಸಿಕ್ಕ ಉತ್ತರ “ದಿ ವಿಲನ್’. ಶಿವಣ್ಣ ಹಾಗೂ ಸುದೀಪ್ ಕಾಂಬಿನೇಶನ್‌ನಲ್ಲಿ ಪ್ರೇಮ್ “ದಿ ವಿಲನ್’ ಆರಂಭಿಸಿದ್ದರು. ಎಲ್ಲಾ ಓಕೆ ಅಷ್ಟೊಂದು ಅದ್ಧೂರಿಯಾಗಿ ಆರಂಭವಾದ “ಕಲಿ’ ಚಿತ್ರ ನಿಂತು ಹೋಗಿದ್ದೇಕೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿತ್ತು. ಈಗ ಸುದೀಪ್ ಅದಕ್ಕೆ ಉತ್ತರಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಶಿವಣ್ಣ ನಡೆಸಿಕೊಡುತ್ತಿರುವ “ನಂ.1 ಯಾರಿ ಶಿವಣ್ಣ’ ಕಾರ್ಯಕ್ರಮದಲ್ಲಿ ಸುದೀಪ್ “ಕಲಿ’ ಬಗ್ಗೆ ಮಾತನಾಡಿದ್ದಾರೆ.
ಸುದೀಪ್ ಹೇಳುವಂತೆ ಪ್ರೇಮ್ “ಕಲಿ’ ಚಿತ್ರದಲ್ಲಿ ಮಹಾಭಾರತದ ಒಂದು ಭಾಗವನ್ನಿಟ್ಟುಕೊಂಡು ಸ್ಕ್ರಿಪ್ಟ್ ಮಾಡಿದ್ದರಂತೆ. ಆ ಸ್ಕ್ರಿಪ್ಟ್ನ ಕೆಲವು ಅಂಶ ಸುದೀಪ್‌ಗೆ ಪಾಸಿಟಿವ್ ಆಗಿ ಕಾಣಲಿಲ್ಲವಂತೆ. ಅದಕ್ಕೆ ಸರಿಯಾಗಿ ಅನೇಕರು, “ಮಹಾಭಾರತದ ಆ ಒಂದು ಭಾಗವನ್ನು ಮುಟ್ಟಬೇಡಿ, ಅದು ಪಾಸಿಟಿವ್ ಸ್ಕ್ರಿಪ್ಟ್ ಆಗಲ್ಲ’ ಎಂದರಂತೆ. ಸುದೀಪ್ ಈ ವಿಚಾರವನ್ನು ಪ್ರೇಮ್ ಹಾಗೂ ನಿರ್ಮಾಪಕ ಸಿ.ಆರ್.ಮನೋಹರ್ ಅವರಿಗೂ ಹೇಳಿದರಂತೆ.
ಆದರೆ, “ಕಲಿ’ ಪ್ರೇಮ್ ಡ್ರಿಮ್ ಪ್ರಾಜೆಕ್ಟ್ ಜೊತೆಗೆ ಶಿವಣ್ಣ -ಸುದೀಪ್ ಒಟ್ಟಿಗೆ ನಟಿಸುತ್ತಿರುವ ಸಿನಿಮಾ. ಹೀಗಿರುವಾಗ ಸಿನಿಮಾ ನಿಂತು ಹೋದರೆ ಗಾಂಧಿನಗರದಲ್ಲಿ ಏನೇನೋ ಮಾತನಾಡುತ್ತಾರೆಂಬ ಭಯ ಕೂಡಾ ಪ್ರೇಮ್‌ಗಿತ್ತಂತೆ. ಹಾಗಾಗಿ, ಪ್ರೇಮ್ ಸ್ವಲ್ಪ ಆಲೋಚಿಸಿದರಂತೆ.
ಆಗ ಸುದೀಪ್, “ನಮ್ಮಿಬ್ಬರನ್ನಿಟ್ಟುಕೊಂಡೇ ಬೇರೆ ಸ್ಕ್ರಿಪ್ಟ್ ಮಾಡಿ’ ಎಂದರಂತೆ. ಅದಕ್ಕೆ ಸಿ.ಆರ್.ಮನೋಹರ್ ಹಾಗೂ ಪ್ರೇಮ್ ಇಬ್ಬರೂ ಒಪ್ಪಿದರಂತೆ. ಹಾಗೆ ಸಿದ್ಧವಾಗಿದ್ದೆ “ದಿ ವಿಲನ್’. “ಕಲಿ’ ಸಿನಿಮಾದಲ್ಲಿದ್ದ ತಾಂತ್ರಿಕ ವರ್ಗವೇ “ದಿ ವಿಲನ್’ನಲ್ಲಿ ಮುಂದುವರಿದಿದೆ. ಈಗ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಹಂತದಲ್ಲಿದೆ. ಸದ್ಯದಲ್ಲೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ.