Advertisement

ಬಸ್‌ ಸೌಕರ್ಯಕ್ಕೆ ದಿಢೀರ್‌ ರಸ್ತೆ ತಡೆ

02:29 PM Jul 16, 2022 | Team Udayavani |

ನಾರಾಯಣಪುರ: ಮಾರನಾಳ ಕ್ರಾಸ್‌ನಲ್ಲಿ ಶುಕ್ರವಾರ ಬರದೇವನಾಳ, ಮಾರನಾಳ ಗ್ರಾಮಗಳ ಶಾಲೆ-ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಶಾಲಾ ಸಮಯಕ್ಕೆ ಸರಿಯಾಗಿ ಬಸ್‌ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ದಿಢೀರ್‌ ರಸ್ತೆ ತಡೆ ನಡೆಸಿ ಸುರಪುರ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಬರೆದ ಮನವಿ ಶಿರಸ್ತೇದಾರ್‌ ಕಲ್ಲಪ್ಪ ಅವರಿಗೆ ಸಲ್ಲಿಸಿದರು.

Advertisement

ಬರದೇವನಾಳ, ಮಾರನಾಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ತಾಂಡಾಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗಕ್ಕೆ ನಾರಾಯಣಪುರ, ಲಿಂಗಸುಗೂರು, ನಾಲತವಾಡ, ಮುದ್ದೇಬಿಹಾಳಕ್ಕೆ ಹೋಗಲು ಬಸ್‌ ಗಳನ್ನೇ ನೆಚ್ಚಿಕೊಂಡಿದ್ದಾರೆ. ಈಗಾಗಲೇ ಹುಣಸಗಿ, ನಾರಾಯಣಪುರಕ್ಕೆ ಶಾಲಾ ಸಮಯದಲ್ಲಿ ಒಂದೆ ಬಸ್‌ ಸಂಚರಿಸುತ್ತಿದೆ. ಜೊತೆಗೆ ಹೆಚ್ಚುವರಿ ಬಸ್‌ ಬಿಟ್ಟರೆ ಸರಿಯಾಗಿ ಶಾಲೆ-ಕಾಲೇಜು ತಲುಪಬಹುದು. ಬೆಳಗ್ಗೆ 9 ಗಂಟೆಗೆ ಬೆಳಗಾವಿ ಬಸ್‌ ಬರುತ್ತಿದ್ದು, ಅದು ಮಾರನಾಳ ಹಾಗೂ ಬರದೇವನಾಳ ಕ್ರಾಸ್‌ ಬಳಿ ನಿಲ್ಲಿಸುವಂತಾದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿಗಳು ಸುರಪುರ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಬರೆದ ಮನವಿಯಲ್ಲಿ ವಿವರಿಸಿದ್ದಾರೆ.

ಕೂಡಲೇ ಸಾರಿಗೆ ಅಧಿಕಾರಿಗಳು ಬಸ್‌ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಶಾಲಾ ಸಮಯಕ್ಕೆ ಹೆಚ್ಚುವರಿ ಬಸ್‌ ಬಿಡುವಂತೆ ಮನವಿ ಮಾಡಿದ್ದಾರೆ. ಹುಣಸಗಿ ನಾರಾಯಣಪುರ ಮಾರ್ಗ ಮಧ್ಯೆ ವಿದ್ಯಾರ್ಥಿಗಳ ದಿಢೀರ್‌ ರಸ್ತೆ ತಡೆ ನಡೆಸಿದ್ದರಿಂದ ರಸ್ತೆ ಸಂಚಾರ ಬಂದ್‌ ಆಗಿತ್ತು.

ವಿಷಯ ತಿಳಿದು ಮಾರನಾಳ ಕ್ರಾಸ್‌ಗೆ ನಾರಾಯಣಪುರ ಪಿಎಸೈ ಭಾಗಣ್ಣ, ಕೊಡೇಕಲ್‌ ಠಾಣೆ ಎಎಸೈ ಯಲ್ಲಪ್ಪ, ಪೊಲೀಸ್‌ ಸಿಬ್ಬಂದಿ ಆಗಮಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಶಾಸಕ ರಾಜುಗೌಡರ ಗಮನಕ್ಕೆ ತಂದಿದ್ದಾರೆ. ಶಾಸಕರು ಸಾರಿಗೆ ಘಟಕದ ಅಧಿಕಾರಿಗಳೊಂದಿಗೆ ಮಾತನಾಡಿ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡುತ್ತಾರೆಂದು ಬರವಸೆ ನೀಡಿದ್ದಾರೆ ಎಂದು ಮನವೊಲಿಸಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಅಂತ್ಯಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next