Advertisement

ಕುಂದಾಪುರ: ಗಾಳಿ, ಮಳೆಯಿಂದಾಗಿ ಲಕ್ಷಾಂತರ ರೂ. ಹಾನಿ

09:30 AM Mar 16, 2018 | Team Udayavani |

ಕುಂದಾಪುರ: ತಾಲೂಕಿನಾದ್ಯಂತ ಬುಧವಾರ ಸಂಜೆಯಿಂದ ರಾತ್ರಿಯಿಡೀ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ. ಕುಂದಾಪುರ ಪೇಟೆಯಲ್ಲಿಯೂ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. 

Advertisement

ತೆಂಗಿನ ಮರ ಬಿದ್ದು 3 ಲಕ್ಷ ರೂ. ಹಾನಿ
ರಾತ್ರಿ 8.30ರ ಸುಮಾರಿಗೆ ಸುರಿದ ಭಾರೀ ಗಾಳಿ, ಮಳೆಯಿಂದಾಗಿ ಆನಗಳ್ಳಿ ಗ್ರಾಮದನ ತಪ್ಲೋ ನಿವಾಸಿ ಲಕ್ಷ್ಮೀ ಮೊಗವೀರ ಅವರ ಮನೆಯ ಮಹಡಿಗೆ ತೆಂಗಿನ ಮರವೊಂದು ಬಿದ್ದ ಪರಿಣಾಮ 3 ಲಕ್ಷ ರೂ. ಗೂ ಅಧಿಕ ನಷ್ಟ ಉಂಟಾಗಿದೆ. ಬಳ್ಕೂರು ಗ್ರಾಮದ ಜಪ್ತಿಯಲ್ಲಿ ಲಕ್ಷ್ಮಣ್‌ ಪೂಜಾರಿ ಅವರ ಮನೆಯ ದನದ ಕೊಟ್ಟಿಗೆಗೆ ತೆಂಗಿನ ಮರ ಬಿದ್ದು, ಸುಮಾರು 25 ಸಾವಿರ ರೂ. ನಷ್ಟ ಸಂಭವಿಸಿದೆ. ಕಂದಾವರ ನಿವಾಸಿ ಭಾಸ್ಕರ ಶೇರಿಗಾರ್‌ ಅವರ ಮನೆಯ ದನದ ಕೊಟ್ಟಿಗೆಗೆ ತೆಂಗಿನ ಮರ ಬಿದ್ದ ಪರಿಣಾಮ 20 ಸಾವಿರ ರೂ. ಹಾನಿ ಉಂಟಾಗಿದೆ. 


ಗೋಡೆಗೆ ಬಡಿದ ಸಿಡಿಲು

ತೆಕ್ಕಟ್ಟೆಯ ಪಾರ್ವತಿ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಗೋಡೆ ಬಿರುಕು ಬಿಟ್ಟಿದ್ದು, ಭಾಗಶಃ ಹಾನಿಯಾಗಿದೆ. 

ಧರೆಗುರುಳಿದ ತೆಂಗಿನ ಮರ


ವಿನಾಯಕ ಚಿತ್ರ ಮಂದಿರದ ಆವರಣದಲ್ಲಿದ್ದ ತೆಂಗಿನ ಮರ ಬಿದ್ದು, ಅದೃಷ್ಟವಶಾತ್‌ ಭಾರೀ ಅನುಹುತವೊಂದು ತಪ್ಪಿದ ಘಟನೆ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಸಂಭವಿಸಿದೆ. ಚಿತ್ರಮಂದಿರದಲ್ಲಿ ಸಂಜೆ 7.30ರ ಕೊನೆಯ ಶೋ ಪ್ರದರ್ಶನವಾಗುತ್ತಿತ್ತು. ಚಿತ್ರ ವೀಕ್ಷಿಸಲು ಬಂದವರು ತೆಂಗಿನ ಮರ ಬಿದ್ದ ಜಾಗದ ಪಕ್ಕದಲ್ಲೇ ಕಾರು, ಬೈಕ್‌ ಇನ್ನಿತರ ವಾಹನಗಳನ್ನು ನಿಲ್ಲಿಸಿದ್ದರು. ಜಾಲಾಡಿಯ ಸೀತಾ ದೇವಾಡಿಗ ಅವರ ಮನೆಗೆ ತೆಂಗಿನ ಮರ ಬಿದ್ದು ಸುಮಾರು 15 ಸಾವಿರ ರೂ. ನಷ್ಟ ಸಂಭವಿಸಿದೆ. 

ಮನೆಗೆ ಬಡಿದ ಸಿಡಿಲು
ಖಾರ್ವಿಕೇರಿಯ ನಿವಾಸಿ ಮಾಧವ ಖಾರ್ವಿ ಅವರ ಮನೆ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು, ಅದರ ಕಿಡಿ ಮನೆಗೂ ವ್ಯಾಪಿಸಿದ್ದರಿಂದ ಮನೆಯೊಳಗಿದ್ದ ಮಾಧವ ಅವರು ಗಾಯಗೊಂಡಿದ್ದಾರೆ. ಅಕ್ಕ-ಪಕ್ಕದ ಮನೆಗಳಿಗೂ ಹಾನಿಯಾಗಿದೆ. ವಿದ್ಯುತ್‌ ಸಂಪರ್ಕದ ತಂತಿಗಳು ಸಂಪೂರ್ಣ ಸುಟ್ಟು ಹೋಗಿವೆ. 

Advertisement

ರಾತ್ರಿಯಿಡಿ ಕರೆಂಟಿಲ್ಲ
ಕೋಟೇಶ್ವರ, ಶಂಕರನಾರಾಯಣ, ತೆಕ್ಕಟ್ಟೆ, ಹಾಲಾಡಿ, ಬೆಳ್ವೆ, ಸಿದ್ದಾಪುರ, ಬೈಂದೂರು, ಶಿರೂರು, ಕೊಲ್ಲೂರು, ವಂಡ್ಸೆ, ಮರವಂತೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಗಾಳಿ, ಮಳೆಯಿಂದಾಗಿ ಅಲ್ಲಲ್ಲಿ ಮರಗಳು ವಿದ್ಯುತ್‌ ತಂತಿಗಳು, ವಿದ್ಯುತ್‌ ಕಂಬಗಳ ಮೇಲೆ ಬಿದ್ದಿದ್ದು, ಇದರಿಂದ ಈ ಭಾಗದಲ್ಲಿ ರಾತ್ರಿಯಿಡಿ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿತ್ತು. ಕಾಸಾಡಿಯಲ್ಲಿ ಕೂಡ ಮರ ಉರುಳಿ ವಿದ್ಯುತ್‌ ತಂತಿಗೆ ಹಾನಿಯಾಗಿವೆ. 


ಬುಧವಾರ ರಾತ್ರಿ ಆಗಮಿಸಿದ ದಿಢೀರ್‌ ಮಳೆಯಿಂದಾಗಿ ಕುಂದಾಪುರದಿಂದ ಬೈಂದೂರು ತನಕ ರಾ.ಹೆ. ಕಾಮಗಾರಿಗೆ ಹಾಕಿದ ಮಣ್ಣು ರಸ್ತೆಗೆ ಬಿದ್ದಿದೆ. ಅಲ್ಲಲ್ಲಿ ಬಿರುಕು ಬಿಟ್ಟಿದ್ದು ಇನ್ನೊಂದು ಮಳೆ ಬಂದರೆ ಯಾವುದೇ ಮುಂಜಾಗರೂಕತೆ ಕೈಗೊಳ್ಳದೇ ಇರುವ ಕಾರಣ ವಾಹನ ಸವಾರರಿಗೆ ಅಡಚಣೆಯಾಗುವ ಸಂಭವವಿದೆ. 


ಕುಂದಾಪುರ:
ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಭತ್ತ ಹಾಗೂ ಶೇಂಗಾ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನ ಹೆಮ್ಮಾಡಿ, ಗುಡ್ಡಮ್ಮಾಡಿ ಪರಿಸರ ಸೇರಿದಂತೆ ವಿವಿಧೆಡೆ ಕೊಯ್ದಿಟ್ಟ ಭತ್ತ ಗದ್ದೆಯಲ್ಲಿಯೇ ಬಾಕಿಯಾಗಿದ್ದು ಇದರ ಬೈಹುಲ್ಲು ರೈತನ ಉಪ ಯೋಗಕ್ಕೆ ಲಭ್ಯವಾಗದಂತಾ ಗಿದೆ. ಗುಡ್ಡಮ್ಮಾಡಿಯ ಗುಲಾಬಿ ಅವರು ಹೇಳುವಂತೆ ಕಾರ್ತಿ ಬೆಳೆಯ ಬೈಹುಲ್ಲು ಒದ್ದೆಯಾದರೂ ಹಸುಗಳಿಗೆ ತಿನ್ನಲು ಸಾಧ್ಯ. ಆದರೆ ಸುಗ್ಗಿ ಬೆಳೆಯ ಬೈಹುಲ್ಲಿಗೆ ನೀರು ಬಿದ್ದರೆ ಅದು ಕಹಿಯಾಗುತ್ತದೆ. ಹಸುಗಳಿಗೆ ತಿನ್ನಲಾಗದು. ಆದ್ದರಿಂದ ಮಳೆಗೆ ಸಿಲುಕಿದ ಬೈಹುಲ್ಲು ರೈತನಿಗೆ ಉಪಯೋಗಕ್ಕೆ ಇಲ್ಲದೆ ನಷ್ಟವಾಗಿದೆ ಎಂದು.

Advertisement

Udayavani is now on Telegram. Click here to join our channel and stay updated with the latest news.

Next