Advertisement

ವಸತಿ ಶಾಲೆ ವಿದ್ಯಾರ್ಥಿಗಳ ದಿಢೀರ್‌ ಪ್ರತಿಭಟನೆ

04:30 PM Aug 16, 2022 | Team Udayavani |

ವಾಡಿ: ಪಟ್ಟಣದ ಬಳಿರಾಮ ಚೌಕ್‌ ಹತ್ತಿರವಿರುವ ಇಂದಿರಾ ಗಾಂಧಿ  ವಸತಿ ಶಾಲೆಯ ಸುಮಾರು 160ಕ್ಕೂ ಹೆಚ್ಚು ಬಾಲಕ ಮತ್ತು ಬಾಲಕಿಯರು ವಸತಿ ನಿಲಯದ ಅವ್ಯವಸ್ಥೆ ಖಂಡಿಸಿ ಸ್ವಯಂ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Advertisement

ಹುಳು ಹುಪ್ಪಡಿ ಕಲ್ಲು ಕಸ ತುಂಬಿದ ಅಕ್ಕಿಯಿಂದ ತಯಾರಿಸಿದ ಕಳಪೆ ಊಟ ಕೊಡುತ್ತಾರೆ. ಹೊಟ್ಟೆ ತುಂಬುವುದಿಲ್ಲ ರುಚಿ ಕೇಳುವಂತಿಲ್ಲ. ಪಾಠದ ಕೋಣೆ ಮತ್ತು ವಸತಿ ಕೋಣೆಗಳಿಗೆ ಬಾಗಿಲುಗಳಿಲ್ಲ. ಶೌಚಾಲಯ ಶುಚಿಗೊಳಿಸುವವರಿಲ್ಲ. ಗೋಡೆಗಳಿಂದ ನೀರಿಳಿದು ಮಲಗಲು ಸಾಧ್ಯವಾಗುತ್ತಿಲ್ಲ. ವಿದ್ಯುತ್‌ ಸಮಸ್ಯೆ ಜೀವಂತವಿದೆ. ಫ್ಯಾನ್‌ ವ್ಯವಸ್ಥೆ ಇಲ್ಲ. ಕೆಟ್ಟ ಫ್ಯಾನ್‌ ಗಳನ್ನು ನಾವೇ ರಿಪೇರಿ ಮಾಡಿಸಬೇಕು. ಸೊಳ್ಳೆ ಕಾಟದಿಂದ ನಿದ್ರೆಯೂ ಇಲ್ಲ ಅಭ್ಯಾಸವೂ ಆಗುತ್ತಿಲ್ಲ. ಸಮಸ್ಯೆಗಳು ಗಮನಕ್ಕೆ ತಂದರೆ ವಾರ್ಡನ್‌ ಹೆದರಿಸುತ್ತಾರೆ ಎಂದು ದೂರಿದರು.

ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದನ್ನು ಕಂಡು ಸ್ಥಳೀಯರು ವಿದ್ಯಾರ್ಥಿಗಳ ಬೆನ್ನಿಗೆ ನಿಂತಿದ್ದರು. ನಾವು ಮಲಗುವ ಖಾಸಗಿ ಕಟ್ಟಡದ ವಿಶ್ರಾಂತಿ ಕೋಣೆಗಳಿಗೆ ಬಾಗಿಲಿಲ್ಲ. ಶೌಚಾಲಯಕ್ಕೂ ಬಾಗಿಲು ಅಳವಡಿಸಿಲ್ಲ. ರಾತ್ರಿ ಬೆಳಕಿನ ವ್ಯವಸ್ಥೆಯಿಲ್ಲ. ಭಯದಲ್ಲೇ ಮಲಗುತ್ತಿದ್ದೇವೆ ಎಂದು ವಿದ್ಯಾರ್ಥಿನಿಯರು ಕಷ್ಟ ಹೇಳಿಕೊಂಡರೆ, ಊಟ ಸೇರದೇ ಆರೋಗ್ಯ ಹದಗೆಡುತ್ತಿದೆ. ಮಲಗುವ ಕೋಣೆಗಳು ಸರಿಯಾಗಿಲ್ಲ. ಸ್ನಾನ ಮತ್ತು ಶೌಚಾಲಯಗಳ ನೀರು ಪಾಠದ ಕೋಣೆಗಳತ್ತ ಹರಿದು ದುರ್ವಾಸನೆ ಹಬ್ಬುತ್ತದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಅಭ್ಯಾಸ ಅಸಹ್ಯ ಎನ್ನಿಸುತ್ತಿದೆ ಎಂದು ಆರೋಪಿಸಿದರು.

ಪಿಎಸ್ ಸಂಧಾನ: ಮಕ್ಕಳ ದಿಢೀರ್‌ ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಮಹಾಂತೇಶ ಜಿ.ಪಾಟೀಲ, ಸಮಸ್ಯೆ ಆಲಿಸಿದರು. ಹೋರಾಟಕ್ಕೆ ಮುಂದಾದ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿದರು. ಈ ಕುರಿತು ಮೇಲಾಧಿ ಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next