ಸುಳ್ಯ: ಹಂದಿ ಪೂರೈಕೆಯಲ್ಲಿ ಕುಸಿತ ಹಾಗೂ ಇನ್ನಿತರ ಕಾರಣಗಳಿಂದ ಹಂದಿ ಮಾಂಸ ಧಾರಣೆಯಲ್ಲಿ ದಿಢೀರ್ ಏರಿಕೆ ಕಂಡಿರುವುದು ಹಂದಿ ಸಾಕಣೆದಾರರಿಗೆ ಸಿಹಿ ಹಾಗೂ ಹಂದಿ ಮಾಂಸ ಪ್ರಿಯರಿಗೆ ಕಹಿಯಾಗಿದೆ.
ಕರಾವಳಿ ಜಿಲ್ಲೆಯಲ್ಲಿ ಮೀನು, ಕೋಳಿ, ಕುರಿ-ಆಡಿನ ಮಾಂಸದಂತೆಯೇ ಹಂದಿ ಮಾಂಸಕ್ಕೂ ಸಾಕಷ್ಟು ಬೇಡಿಕೆ ಇದೆ. ಗ್ರಾಮೀಣ ಭಾಗದಲ್ಲಂತೂ ಹಂದಿ ಮಾಂಸ ಪ್ರಿಯರು ಹೆಚ್ಚು ಇದ್ದಾರೆ.
ತಿಂಗಳ ಅಂತರದಲ್ಲಿ ಹಂದಿ ಮಾಂಸದ ಬೆಲೆ ಏರಿಕೆ ಕಂಡಿದೆ. ತಿಂಗಳ ಹಿಂದೆ ಸರಾಸರಿ ಕೆ.ಜಿ.ಗೆ 240 ರೂ. ಇದ್ದ ಬೆಲೆ ಏಕಾಏಕಿ 440 ರೂ.ಗೆ ಏರಿಕೆ ಕಂಡು ಬಳಿಕ 300ಕ್ಕೆ ಇಳಿದಿತ್ತು. ಪ್ರಸ್ತುತ 280ರಿಂದ 330 ರೂ. ಆಸುಪಾಸಿನಲ್ಲಿದೆ. ಈಗ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಂದಿ ಮಾಂಸಕ್ಕೆ ಬೇಡಿಕೆ ಇದ್ದು ಸಹಜವಾಗಿ ಬೆಲೆ ಏರಿಕೆ ಕಂಡಿದೆ ಎನ್ನಲಾಗಿದೆ. ಉತ್ತಮ ಬೆಲೆಯ ಹಿನ್ನೆಲೆಯಲ್ಲಿ ಸ್ಥಳೀಯ ಹಂದಿ ಸಾಕಣೆದಾರರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವುದರಿಂದಲೂ ಅವರಲ್ಲಿ ಹಂದಿಗಳ ಸಂಖ್ಯೆ ಕಡಿಮೆಯಾಗುತ್ತ ಬರುತ್ತಿದೆ.
ಹಂದಿ ಸಾಕಣೆ ಸವಾಲಿನ ಕೆಲಸವಾಗಿರುವುದರಿಂದ ಮತ್ತು ಶ್ರಮಕ್ಕೆ ತಕ್ಕಂತೆ ನಿರೀಕ್ಷಿತ ಆದಾಯ ಕೆಲವೊಮ್ಮೆ ಲಭಿಸುತ್ತಿಲ್ಲ ಎಂಬ ಕಾರಣಕ್ಕೆ ಹಲವರು ಹಂದಿ ಸಾಕಣೆಯನ್ನೇ ಕೈಬಿಟ್ಟಿದ್ದಾರೆ. ಆದಾಯಕ್ಕಿಂತ ಅಸಲೇ ಹೆಚ್ಚಾಗುತ್ತದೆ, ನಿರ್ವಹಣೆಯೂ ತ್ರಾಸದಾಯಕ ಎಂಬುದು ಅವರ ಅಭಿಪ್ರಾಯ.
ಹಂದಿಯ ಪೂರೈಕೆ ಕುಸಿತ ಕಂಡಿರುವುದರಿಂದ ಮಾರುಕಟ್ಟೆಯಲ್ಲಿ ಹಂದಿ ಮಾಂಸಕ್ಕೆ ಬೆಲೆ ಏರಿಕೆಯಾಗಿದೆ. ಸದ್ಯ ಹಂದಿ ಸಾಕಣೆದಾರರಿಗೆ ಉತ್ತಮ ಬೆಲೆ ಸಿಗುತ್ತಿದೆ. ಆದರೆ ಎಲ್ಲ ಅವಧಿಯಲ್ಲೂ ಈ ರೀತಿ ಉತ್ತಮ ಬೆಲೆ ಇರುವುದಿಲ್ಲ.
– ಪೂವಪ್ಪ ಗೌಡ ಮರೋಳಿ, ಎಡಮಂಗಲ, ಹಂದಿ ಸಾಕಣೆದಾರ