Advertisement

ಅರ್ಥಪೂರ್ಣ ಅರ್ವತ್ತರ ಅರ್ಪಣೆ

06:00 AM May 04, 2018 | Team Udayavani |

ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ ವಜ್ರ ಮಹೋತ್ಸವದಂಗವಾಗಿ ಆರು ದಿನ ಆರು ವೇದಿಕೆಗಳಲ್ಲಿ ಯಕ್ಷಗಾನ , ಸಮ್ಮಾನ, ಗೌರವಾರ್ಪಣೆ, ಗುರುವಂದನೆ ಕಾರ್ಯಕ್ರಮಗಳನ್ನು ಏರ್ಪಡಲಾಗಿತ್ತು 

Advertisement

ನಿರಂತರ ಕ್ರಿಯಾಶೀಲವಾಗಿ ಯಕ್ಷಗಾನ ಕಲಿಕೆ, ಪ್ರದರ್ಶನ, ಪ್ರಸಾರಕ್ಕೆ ಶ್ರಮಿಸುತ್ತಾ ಬಂದ ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಅರ್ವತ್ತರ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿ ಹೊಸ ಮಾರ್ಗ ನಿರ್ಮಿಸಿತು. ಸಮ್ಮಾನ, ಗೌರವ, ಪುರಸ್ಕಾರ, ಅಭಿನಂದನೆ ಪ್ರದರ್ಶನಗಳನ್ನು ಅನುಕ್ರಮವಾಗಿ ಗುರುಗಳಿಗೆ, ಸಂಸ್ಥೆಯನ್ನು ಕಟ್ಟಿ ಬೆಳೆಸಿದವರಿಗೆ, ಹವ್ಯಾಸಿ ಕಲಾವಿದರಿಗೆ, ಮಂಡಳಿಯ ಹಿಂದಿನ ಸದಸ್ಯರಿಗೆ ಮತ್ತು ಕಲಾರಸಿಕರಿಗೆ ಅರ್ಪಿಸಿ ಅರ್ವತ್ತರ ಅರ್ಪಣೆ ಶೀರ್ಷಿಕೆಯಲ್ಲಿ ಸ್ಮರಣೀಯವಾಗಿಸಿತು.


ಅರ್ವತ್ತರ ನೆನಪಿನಲ್ಲಿ ಆರು ದಿನ ಆರು ಬೇರೆ ಬೇರೆ ವೇದಿಕೆ ನಿರ್ಮಿಸಿ ಕಾರ್ಯಕ್ರಮ ಆಯೋಜಿಸಿತ್ತು. ವೇದಿಕೆಗೆ ಆಶ್ರಯದಾತರಾಗಿದ್ದ ಅಣ್ಣಾಜಿ ಬಲ್ಲಾಳ, ಸ್ಥಾಪಕ ಸದಸ್ಯರು ಮತ್ತು ಸಂಸ್ಥೆಯ ಉತ್ಕರ್ಷಕ್ಕೆ ಕಾರಣರಾಗಿದ್ದ ಕಿದಿಯೂರು ಜನಾರ್ದನ ಆಚಾರ್ಯ, ಕಪ್ಪೆಟ್ಟು ಬಾಬು ಶೆಟ್ಟಿಗಾರ್‌, ಕೆ. ಭೋಜ ಪೂಜಾರಿ, ಗೋಪಾಲಕೃಷ್ಣ ಉಪಾಧ್ಯ, ಕೆ. ಆನಂದ ಗಾಣಿಗರ ಹೆಸರಿಡುವ ಮೂಲಕ ಹಿರಿಯ ಚೇತನಗಳನ್ನು ಗೌರವಿಸಿತು. ಎ.14ರಂದು ಅಂಬಲಪಾಡಿಯಲ್ಲಿ ಉದ್ಘಾಟನೆ, 19ರಂದು ಸಮಾರೋಪ, ಉಳಿದ ನಾಲ್ಕುದಿನ ಅನುಕ್ರಮವಾಗಿ ಶಿರ್ವ, ಹಂಗಾರಕಟ್ಟೆ, ಮಂದಾರ್ತಿ, ಬ್ರಹ್ಮಾವರಗಳಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು. ಉದ್ಘಾಟನೆಯ ದಿನ ಮಂಡಳಿಯ ಗುರುಗಳಾದ ಶತಮಾನದ ಅಂಚಿನಲ್ಲಿರುವ ಹಿರಿಯಡ್ಕ ಗೋಪಾಲರಾಯರನ್ನು ಸಮ್ಮಾನಿಸಿ ಗುರುವಂದನೆ ಅರ್ಪಿಸಿತು. ಮಂಡಳಿಯಲ್ಲಿ ನಿಡುಗಾಲ ತೊಡಗಿಸಿಕೊಂಡ ಎ.ರಾಘವೇಂದ್ರ ಉಪಾಧ್ಯ, ಕೆ.ಎಸ್‌.ಗೋಪಾಲಕೃಷ್ಣ ಭಟ್‌, ತಮ್ಮಯ್ಯ ಶೇರಿಗಾರರಿಗೆ ಗೌರವ ಅರ್ಪಿಸಲಾಯಿತು. ಅರ್ವತ್ತರ ಪುರಸ್ಕಾರವನ್ನು ಹವ್ಯಾಸಿ ಕಲಾವಿದ ಗುಳ್ಮೆ ನಾರಾಯಣ ಪ್ರಭು ಅವರಿಗೆ ಪ್ರದಾನ ಮಾಡಲಾಯಿತು. ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.

ಮುಂದೆ ಪ್ರತಿನಿತ್ಯ ಸಂಜೆ 6.30ರಿಂದ ಸುಮಾರು ಹತ್ತು ಗಂಟೆಯವರೆಗೆ ಆರಂಭದಲ್ಲಿ ಮಂಡಳಿಯ ಬಾಲಕಲಾವಿದರ ಪೂರ್ವರಂಗ, ಚಿಕ್ಕ ಸಭಾಕಾರ್ಯಕ್ರಮದಲ್ಲಿ ಪ್ರತಿಭಾವಂತ ಹವ್ಯಾಸಿ ಕಲಾವಿದರಿಗೆ ಅರ್ವತ್ತರ ಪುರಸ್ಕಾರ ಅನಂತರ ಯಕ್ಷಗಾನ ಪ್ರದರ್ಶನ ಹೀಗೆ ನಾಲ್ಕು ದಿನಗಳಲ್ಲಿ ಕ್ರಮವಾಗಿ ಕೆ.ಜಿ ಮಂಜುನಾಥ, ಶಶಿಕಲಾ ಪ್ರಭು, ಕೆ.ಜೆ ರತ್ನಾಕರ ಆಚಾರ್ಯ, ಸುಜಯೀಂದ್ರ ಹಂದೆ ಅರ್ವತ್ತರ ಪುರಸ್ಕಾರ ಸ್ವೀಕರಿಸಿದರು. ಶ್ವೇತಕುಮಾರ ಚರಿತ್ರೆ, ತಾಮ್ರಧ್ವಜ ಕಾಳಗ, ತುಳಸೀ ಜಲಂಧರ, ಕವಿರತ್ನ ಕಾಳಿದಾಸ ಪ್ರಸಂಗಗಳು ಪ್ರಸ್ತುತಗೊಂಡವು.

ಸಮಾರೋಪ ಸಮಾರಂಭದಲ್ಲಿ ಕೃಷ್ಣಮೂರ್ತಿ ತುಂಗ ಅರ್ವತ್ತರ ಪುರಸ್ಕಾರ ಸ್ವೀಕರಿಸಿದರು. ಆರು ಜನ ಸಂಸ್ಥೆಯ ಪ್ರಾಕ್ತಾನ ಕಲಾವಿದರಿಗೆ ಬೆಳ್ಳಿಯ ಫ‌ಲಕ ಗೌರವಿಸಲಾಯಿತು. ಅನಂತ ಪದ್ಮನಾಭ ಭಟ್‌, ಅರವಿಂದ ಶೆಟ್ಟಿಗಾರ್‌, ಕೆ. ಬಾಲಕೃಷ್ಣ ಭಟ್‌, ಕೆ. ಮಾಧವ, ಶೇಕರ ಶೆಟ್ಟಿಗಾರ್‌, ಕುತ್ಪಾಡಿ ವಿಠಲ ಗಾಣಿಗ ಈ ಅಭಿನಂದನೆಗೆ ಪಾತ್ರರಾದರು. ಮಳೆಯ ತೊಂದರೆಗೊಳಗಾಗಿ ಬಾಲಕಲಾವಿದರಿಂದ ನಡೆಸಬೇಕಿದ್ದ ಸುದರ್ಶನ ವಿಜಯ ಮರುದಿನ ಅಂಬಲಪಾಡಿ ದೇವಳದ ವಠಾರದಲ್ಲಿ ಜರುಗಿತು. ಸಂಸ್ಥೆಯ ಆಶ್ರಯದಾತರಾದ ಡಾ| ನಿ.ಬೀ. ವಿಜಯ ಬಲ್ಲಾಳರು ಉದ್ಘಾಟನೆ ಮತ್ತು ಸಮರೋಪ ಸಮಾರಂಭದಲ್ಲಿ ಭಾಗವಹಿಸಿ ಸದಸ್ಯರನ್ನು ಪ್ರೋತ್ಸಾಹಿಸಿದರು.

ಸಂಸ್ಥೆಯ ಅಧ್ಯಕ್ಷ ಮುರಳಿ ಕಡೆಕಾರ್‌ ಅವರ ನಾಯಕತ್ವದಲ್ಲಿ ಎಲ್ಲ ಸದಸ್ಯರ ಸಹಕಾರದಿಂದ ಎಲ್ಲ ಕಾರ್ಯಕ್ರಮಗಳು ಸಮರ್ಪಕವಾಗಿ ಮೂಡಿ ಬಂದವು. ಒಂದೇ ಕಡೆ ನಡೆಸದೆ ಬೇರೆ ಬೇರೆ ಕಡೆಗಳಲ್ಲಿ ಆಯೋಜಿಸಿದ್ದು, ಅರ್ವತ್ತರ ಅರ್ಪಣೆಯ ಪುರಸ್ಕಾರಕ್ಕೆ ಪ್ರತಿಭಾವಂತ ಅರ್ಹ ಹವ್ಯಾಸಿ ಕಲಾವಿದರನ್ನು ಆರಿಸಿದ್ದು, ಚಿಕ್ಕ ಸಭಾಕಾರ್ಯಕ್ರಮ, ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ ನೀಡಿದವರನ್ನೇ ಅಭ್ಯಾಗತರಾಗಿ ಆಯ್ಕೆ ಮಾಡಿದ್ದು, ಆಸಕ್ತ ರಸಿಕ ಸಂದೋಹಕ್ಕೆ ಮಂಡಳಿಯಲ್ಲಿ ಈ ಹಿಂದೆ ಸಿದ್ಧಪಡಿಸಿದ ಯಶಸ್ವಿಯಾದ ಪ್ರಸಂಗಗಳನ್ನೇ ಪ್ರದರ್ಶಿಸಿದ್ದು ಕಾರ್ಯಕ್ರಮದ ಧನಾತ್ಮಕ ಅಂಶಗಳು. ಕಾರ್ಯದರ್ಶಿ ಕೆ.ಜೆ.ಕೃಷ್ಣರಲ್ಲಿ ತರಬೇತಿ ಪಡೆದ ಮಕ್ಕಳು ಪ್ರತಿದಿನ ನಡೆಸುತ್ತಿದ್ದ ಪೂರ್ವರಂಗ ವೈವಿಧ್ಯ ಪೂರ್ಣವಾಗಿತ್ತು. ಪರಂಪರೆಗೆ ಲೋಪವಾಗದಂತೆ ಸಮಯಮಿತಿಯಲ್ಲಿ ಯಕ್ಷಗಾನವನ್ನು ಹೇಗೆ ನೀಡಬಹುದೆಂಬುದಕ್ಕೆ ಮಾದರಿಯಾಯಿತು.

Advertisement

ನಾ.ಹೆ.

Advertisement

Udayavani is now on Telegram. Click here to join our channel and stay updated with the latest news.

Next