Advertisement

ಸಮರ್ಥ ನಿರ್ದೇಶನದಲ್ಲಿ ಮೂಡಿಬಂದ ಸುದರ್ಶನ ಗರ್ವಭಂಗ 

06:00 AM Mar 23, 2018 | Team Udayavani |

ಯಕ್ಷಗಾನ ಪ್ರದರ್ಶನಕ್ಕೆ ನಿರ್ದೇಶಕರಿರಬೇಕೆ ಬೇಡವೇ ಎನ್ನುವ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ವಸ್ತುವಿನಲ್ಲಿ ತೆಳುವಾದ ಹಂದರವಿದ್ದರೂ ಉತ್ತಮ ಕಲಾವಿದ ಹಾಗೂ ಸಮರ್ಥ ನಿರ್ದೇಶಕರ ಕೂಡುವಿಕೆಯಿಂದ ಪ್ರದರ್ಶನ ಯಶಸ್ವಿಯಾಗಲು ಸಾಧ್ಯ ಎಂಬುದು ಬೆಂಗಳೂರಿನಲ್ಲಿ ಇತ್ತೀಚೆಗೆ ರುಜುವಾತುಗೊಂಡಿತು. ಯಕ್ಷದೇಗುಲ ಬೆಂಗಳೂರು ಇವರು ನಯನ ಸಭಾಂಗಣದಲ್ಲಿ ಕೋಟ ಸುದರ್ಶನ ಉರಾಳರು ಸಂಯೋಜಿಸಿದ ಸುದರ್ಶನ ಗರ್ವಭಂಗ ಪ್ರಸಂಗಕ್ಕೆ ಯಕ್ಷಗಾನ ಸಂಘಟಕ, ವೇಷಧಾರಿ ಹಾಗೂ ಯಕ್ಷಗಾನದ ಸರ್ವ ಅಂಗಗಳಲ್ಲಿ ಪರಿಣಿತರಾದ ಕೆ. ಮೋಹನ್‌ ಅವರು ನಿರ್ದೇಶನ ನೀಡಿದ್ದರು. ಪ್ರದರ್ಶನ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು. 

Advertisement

    ದೇವೇಂದ್ರನ ಒಡ್ಡೋಲಗದೊಂದಿಗೆ ಪ್ರಾರಂಭವಾದ ಪ್ರಸಂಗದಲ್ಲಿ ದೇವೇಂದ್ರನಾಗಿ ಗಣೇಶ್‌ , ವಾಯುವಾಗಿ ಪ್ರಕಾಶ್‌ ಉಳ್ಳೂರರು ಪಾತ್ರ ನಿರ್ವಹಿಸಿದರು. ಅವರ ಕುಣಿತ, ಮಾತುಗಳಲ್ಲಿ ಸಂಪ್ರದಾಯ ನಿಷ್ಠೆಯನ್ನು ಕಾಣಬಹುದಾಗಿತ್ತು. ಬಣ್ಣದ ವೇಷವಾದ ಶತ್ರುಪ್ರಸೂದನನ ಒಡ್ಡೋಲಗದಲ್ಲೂ ಕೂಡ ನಿರ್ದೇಶಕರಿಗಿರುವ ಸಂಪ್ರದಾಯದ ಮೇಲಿನ ಗೌರವ ಹಾಗೂ ಹೊಸತನವನ್ನು ನೀಡಬೇಕೆಂಬ ಕಾಳಜಿಯನ್ನು ಗುರುತಿಸಿ ಬಡಗುತಿಟ್ಟಿನ ಸಮರ್ಥ ಬಣ್ಣದ ವೇಷಧಾರಿ ಕೃಷ್ಣಮೂರ್ತಿ ಉರಾಳ ಅಕ್ಕಿ ಹಿಟ್ಟಿನ ಚಿಟ್ಟೆ ಇಟ್ಟು ಶತ್ರುಪ್ರಸೂದನನ ಪಾತ್ರವನ್ನು ವಹಿಸಿದ್ದರು. ತೆರೆಯ ಕುಣಿತದಲ್ಲಿ ಅವರು ತೋರಿದ ಹಾವಭಾವ ಚೇತೋಹಾರಿಯಾಗಿದ್ದು, ತೆರೆಯನ್ನು ಒಂದು ಕಡೆ ಸರಿಸಿ ಮುಖದಲ್ಲಿ ತೋರಿದ ಅಭಿನಯ ಹಾಗೂ ಇನ್ನೊಂದೆಡೆ ಸರಿಸಿ ಪುನಃ ಮುಖವನ್ನು ತೋರಿಸಿದ ಅಭಿನಯ ವಿಶಿಷ್ಟವಾಗಿತ್ತು. ರಾಕ್ಷಸ ಪಾತ್ರದಿಂದ ಮುಖ ವರ್ಣನೆ, ಸ್ನಾನ, ಭಸ್ಮಧಾರಣೆ, ಲಿಂಗಾರ್ಚನೆಯನ್ನು ಸುಮಾರು 15-20 ನಿಮಿಷಗಳ ಕಾಲ ತೋರಿಸಿದರು. ಎಲ್ಲವೂ ಕೂಡ ಲವಲವಿಕೆಯಿಂದ ಇದ್ದು ಎಲ್ಲೂ ಬೇಸರ ತೋರಿಸಲಿಲ್ಲ. ದೇವಲೋಕಕ್ಕೆ ಲಗ್ಗೆ ಇಟ್ಟಿದ್ದು, ವಾಯು ಹಾಗೂ ದೇವೇಂದ್ರನೊಂದಿಗಿನ ಕದನ ಎಲ್ಲವೂ ಚುರುಕಾಗಿ ನಡೆಯಿತು. ಇಲ್ಲಿನ ಸಂಭಾಷಣೆಯಲ್ಲೂ ಪೌರಾಣಿಕ ವಿಚಾರಗಳು ಚರ್ಚೆಯಾದವು. ದೂತನಾಗಿ ಬಂದ ಪ್ರಶಾಂತ ಹೆಗಡೆಯವರ ಹಾಸ್ಯ ಚೆನ್ನಾಗಿತ್ತು. ವಿಷ್ಣು ಮತ್ತು ಲಕ್ಷ್ಮೀಯರ ಮಾತುಕತೆಯಲ್ಲಿ ವಿಷ್ಣುವಿನ ಹಿಂದಿನ ಅವತಾರಗಳ ವಿಷಯ ಚರ್ಚಿತವಾಗಿದ್ದವು. ವಿಷ್ಣು ಪಾತ್ರಧಾರಿಯಾಗಿ ತಮ್ಮಣ್ಣ ಗಾಂವ್ಕರ್‌ ಹಾಗೂ ಲಕ್ಷ್ಮೀಯಾಗಿ ಗಣಪತಿ ಹೆಗಡೆಯವರು ಭಾಗವಹಿಸಿದ್ದು ಕುಣಿತ, ಮಾತು, ಹಾವಭಾವಗಳೆಲ್ಲ ಹಿಂದಿನ ಕಾಲದ ಅಲೆಯನ್ನು ನೋಡಿದಂತಾಗುತ್ತಿತ್ತು. ಲಕ್ಷ್ಮೀಯಿಂದ ವಿಷ್ಣುವಿನ ಸಾಹಸಗಾಥೆಯನ್ನು ಕೇಳಿಸಿಕೊಂಡ ಸುದರ್ಶನ ಚಕ್ರವು ಅಸಮಾಧಾನಗೊಳ್ಳುತ್ತದೆ. ಆಗ ಸುದರ್ಶನ ಪಾತ್ರಧಾರಿಯಾಗಿ ಪ್ರವೇಶಿಸಿದ ಎಚ್‌. ಸುಜಯೀಂದ್ರ ಹಂದೆಯವರು ರಂಗದಲ್ಲಿ ಮಿಂಚು ಹರಿಸಿ ಮಾತಿನಲ್ಲಿ ಹಾಗೂ ಅಭಿನಯದಲ್ಲಿ ಮತ್ತು ಕುಣಿತದಲ್ಲಿ ತಾವೊಬ್ಬರು ನುರಿತವರು ಎಂಬುದನ್ನು ತೋರಿಸಿಕೊಟ್ಟರು. ವಿಷ್ಣುವಿನ ಛಾಯೆಯ ಹಿಂದೆ ತಾನಿದ್ದ ಪರಿಯನ್ನು ಹೇಳುತ್ತಾ ಸುದರ್ಶನ ಬೀಗುತ್ತಾ ಹೋಗುತ್ತಾನೆ. ತನಗೆ ಸರಿಯಾದ ಗೌರದ ಸಿಕ್ಕಿಲ್ಲವೆಂದು ವಿಷ್ಣುವನ್ನು ತ್ಯಜಿಸಿ ಹೊರಡುತ್ತಾನೆ. ಈ ಭಾಗವೆಲ್ಲ ಬಹಳ ಮನೋಜ್ಞವಾಗಿ ಬಂದಿದೆ. ಮೂವರು ಪಾತ್ರಧಾರಿಗಳು ನ್ಯಾಯ ಒದಗಿಸಿ ಶತ್ರುಪ್ರಸಾದನನಿಂದ ಪದಚ್ಯುತಗೊಂಡ ದೇವೆಂದ್ರ ವಿಷ್ಣುವಿನಲ್ಲಿ ಸಹಾಯ ಯಾಚಿಸಿದಾಗ ಸುದರ್ಶನ ಚಕ್ರವಿಲ್ಲದೆ ಯುದ್ಧಕ್ಕೆ ತೆರಳಿ ಸೋಲೋಪ್ಪುತ್ತಾನೆ. ಆಗ ರಾಕ್ಷಸನೊಂದಿಗೆ ಹೋರಾಡಲು ಬಂದ ಸುದರ್ಶನ ವರದ ವಹಿಮೆಯಿಂದಾಗಿ ಗೆಲ್ಲುತ್ತಾನೆ. ಇಲ್ಲೂ ಕೂಡ ಸುಜಯೀಂದ್ರ ಹಂದೆ ಹಾಗೂ ಕೃಷ್ಣಮೂರ್ತಿ ಉರಾಳರ ನಡುವೆ ನಡೆದ ಸಂಭಾಷಣೆ ಹಾಗೂ ಕುಣಿತ ಹಾಗೂ ಅಭಿನಯಗಳು ಅತ್ಯಾಕರ್ಷಕವಾಗಿತ್ತು. ಜಯದ ಬೀಗಿನಿಂದ ಬಂದ ಸುದರ್ಶನ ವಿಷ್ಣುವಿನ ಶಾಪಕ್ಕೆ ಗುರಿಯಾಗುವಲ್ಲಿ ಪ್ರಸಂಗ ಮುಕ್ತಾಯವಾಗುತ್ತದೆ. 

    ಹೀಗೆ ಸರಳ ವಿಚಾರವನ್ನು ಹೊಂದಿದ ಪ್ರಸಂಗ 2 ಗಂಟೆಗಳ ಕಾಲ ನಡೆದು ಪ್ರೇಕ್ಷಕರ ಮನಗೆದ್ದಿತು. ಎಲ್ಲಾ ಕಲಾವಿದರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಭಾಗವತರಾಗಿದ್ದ ಲಂಬೋದರ ಹೆಗಡೆ ಹಾಗೂ ದೇವರಾಜ್‌ ದಾಸ್‌ ಅವರಿಗೆ ಗಣಪತಿ ಭಟ್‌ರ ಮದ್ದಲೆ ಸಹಕಾರಿಯಾಗಿತ್ತು. ಚಂಡೆವಾದಕರಾಗಿ ಮಾಧವ ಹಾಗೂ ಮಂಜುನಾಥ ನಾವಡರಿದ್ದರು. ಪ್ರದರ್ಶನದ ಮೊದಲಿಗೆ ಹಿರಿಯ ಭಾಗವತರಾದ ಕೆಪ್ಪೆಕೆರೆ ಸುಬ್ರಾಯ ಹೆಗಡೆಯವರನ್ನು ಸನ್ಮಾನಿಸಲಾಯಿತು. 

ಡಾ| ಆನಂದರಾಮ ಉಪಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next