Advertisement

ಮಹಿಳೆಯರು ನಡೆಸಿದ ಸುಧನ್ವ ಕಾಳಗ

05:56 PM Nov 07, 2019 | mahesh |

ಚೇಂಪಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಜಿ.ಎಸ್‌.ಬಿ.ಎಸ್‌ ಸೇವಾ ಸಂಘದ ಆಶ್ರಯದಲ್ಲಿ ಸುಧನ್ವ ಕಾಳಗ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಕಿರಣ್‌ ಪೈ ಮಾರ್ಗದರ್ಶನದಲ್ಲಿ ತರಬೇತುಗೊಂಡ ಮಹಿಳಾ ಯಕ್ಷಗಾನ ತಂಡದ ಈ ಪ್ರದರ್ಶನ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಭಾಗವತರಾಗಿ ಲಂಬೋದರ ಹೆಗಡೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ, ಚಂಡೆಯಲ್ಲಿ ರಾಕೇಶ್‌ ಮಲ್ಯ ಸಹಕರಿಸಿದರು.

Advertisement

ಕುರುಕ್ಷೇತ್ರ ಯುದ್ಧದ ಬಳಿಕ ಧರ್ಮರಾಯನು ಅಶ್ವಮೇಧ ಯಾಗವನ್ನು ಕೈಗೊಳ್ಳುತ್ತಾನೆ. ಅರ್ಜುನನ ಬೆಂಗಾವಲಿನಲ್ಲಿ ಯಾಗದ ಕುದುರೆ ಚಂಪಕಾವತಿ ನಗರವನ್ನು ಪ್ರವೇಶಿಸುತ್ತದೆ. ಆಗ ಅಲ್ಲಿಯ ದೊರೆ ಹಂಸಧ್ವಜನು ಶ್ರೀ ಕೃಷ್ಣನ ದರುಶನ ಭಾಗ್ಯ ಸಿಗುತ್ತದೆ ಎಂಬ ಕಾರಣಕ್ಕಾಗಿ ಅಶ್ವವನ್ನು ಕಟ್ಟಿಹಾಕಿ ಮಗನಾದ ಸುಧನ್ವ ನನ್ನು ಅರ್ಜುನನೆದುರು ಯುದ್ಧಕ್ಕೆ ಹೋಗುವಂತೆ ಹೇಳುತ್ತಾನೆ. ಇದಕ್ಕೆ ಒಪ್ಪಿದ ಸುಧನ್ವನು ಹೆಂಡತಿ ಪ್ರಭಾವತಿಗೆ ಹೇಳಿಹೋಗಲು ಬಂದಾಗ ಆಕೆಯು ಸಂತಾನ ಭಾಗ್ಯವನ್ನು ಕರುಣಿಸಿ ಹೋಗಿ ಎಂದು ಕೇಳಿಕೊಳ್ಳುತ್ತಾಳೆ. ಸುಧನ್ವನು ಇದಕ್ಕೆ ಸಮ್ಮತಿಸಿದ್ದರಿಂದ ಯುದ್ಧಕ್ಕೆ ಹೊರಡುವುದು ವಿಳಂಬವಾಗುತ್ತದೆ. ಇದರಿಂದ ಕುಪಿತನಾದ ಹಂಸಧ್ವಜನು ಸುಧನ್ವನನ್ನು ಕುದಿಯುವ ಎಣ್ಣೆಯ ಕೊಪ್ಪರಿಗೆಗೆ ಹಾಕುವಂತೆ ಹೇಳುತ್ತಾನೆ. ಆದರೆ ಕೃಷ್ಣನ ಧ್ಯಾನದಿಂದ ಸುಧನ್ವನಿಗೆ ಬಿಸಿಯ ಅನುಭವವಾಗುವುದಿಲ್ಲ. ಮುಂದೆ ಸುಧನ್ವರ್ಜುನ ಕಾಳಗದಲ್ಲಿ ಅರ್ಜುನನನಿಗೆ ಸುಧನ್ವನನ್ನು ಸೋಲಿಸುವುದು ಕಷ್ಟವಾಗಿ ಆತನು ಕೃಷ್ಣನ ಮೊರೆ ಹೋಗುತ್ತಾನೆ. ನಂತರದ ಯುದ್ಧದಲ್ಲಿ ಸುಧನ್ವನಿಗೆ ಸೋಲಾದರೂ ಭಗವಂತನ ದರುಶನ ಭಾಗ್ಯದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ.

ಸುಧನ್ವನಾಗಿ ಕಿರಣ್‌ ಪೈಯವರ ನೃತ್ಯ, ಮಾತುಗಾರಿಕೆ ಮೆಚ್ಚುಗೆಗೆ ಪಾತ್ರವಾಯಿತು. ಪ್ರಭಾವತಿಯಾಗಿ ಕಾವ್ಯಾ ಚಂದ್ರು ಸ್ತ್ರೀ ಸಹಜ ಭಾವನೆಗಳನ್ನು ಉತ್ತಮವಾಗಿ ವ್ಯಕ್ತಪಡಿಸಿದರು.ಅರ್ಜುನನಾಗಿ ಭಾರತಿ ಸುದರ್ಶನ್‌, ಕೃಷ್ಣನಾಗಿ ಪ್ರಗತಿ ಕಾಮತ್‌, ವೃಷಕೇತನಾಗಿ ಐಶ್ವರ್ಯಾ ಕಾಮತ್‌, ಪ್ರದ್ಯುಮ್ನನಾಗಿ ಅನ್ನಪೂರ್ಣಾ ಕಾಮತ್‌, ಬಾಲಗೋಪಾಲನಾಗಿ ಪರಿಣಿತಾ ಶೆಣೈ ಪಾತ್ರ ನಿರ್ವಹಿಸಿದ್ದರು.

ಶಾಂತಲಾ ಎನ್‌ ಹೆಗ್ಡೆ

Advertisement

Udayavani is now on Telegram. Click here to join our channel and stay updated with the latest news.

Next