ಹಾವೇರಿ: ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿ ತಮ್ಮ ಸಹಾಯಹಸ್ತ ಚಾಚಿದ್ದ ಖ್ಯಾತ ನಟ ಸೋನು ಸೂದ್ ಅವರನ್ನು ಇಲ್ಲಿಯ ಸುಡುಗಾಡು ಸಿದ್ಧರ ಕುಟುಂಬದ ಯುವಕರು ಭೇಟಿಯಾಗಿ ಶಾಶ್ವತ ಸೂರಿಗಾಗಿ ಮೊರೆಯಿಟ್ಟಿದ್ದಾರೆ.
ಅಲೆಮಾರಿಗಳ ಸಂಕಷ್ಟ ಆಲಿಸಿದ ಸೋನು ಸೂದ್ ತಮ್ಮ ಕೈಲಾದ ನೆರವು ನೀಡುವುದಾಗಿ ಭರವಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಇಲ್ಲಿಯ ಹೊರವಲಯದಲ್ಲಿರುವ ಶಾಂತಿನಗರದ ಬಳಿ ನಗರಸಭೆಯ ನಿವೇಶನದಲ್ಲಿ ತಾತ್ಕಾಲಿಕ ಟೆಂಟ್ ಗಳಲ್ಲಿ ವಾಸವಾಗಿರುವ ಸುಡುಗಾಡು ಸಿದ್ಧರ ಕುಟುಂಬಗಳ ಯುವಕರು ತಮ್ಮ ಜನಾಂಗದ ಸುಮಾರು 40 ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಿಕೊಳ್ಳುವುದಕ್ಕಾಗಿ ಬಹುಭಾಷಾ ನಟ ಸೋನು ಸೂದ್ ಅವರನ್ನು ಶುಕ್ರವಾರ ಮುಂಬೈನ ಅವರ ನಿವಾಸದಲ್ಲಿ ಭೇಟಿಯಾಗಿ ಅಳಲು ತೋಡಿಕೊಂಡರು.
ಗುರುವಾರ ರಾತ್ರಿ ಹಾವೇರಿಯಿಂದ ದಾದರ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಅಲೆಮಾರಿ ಸುಡುಗಾಡು ಸಿದ್ಧರ ಕುಟುಂಬದ ಆರು ಜನ ಯುವಕರಾದ ಶೆಟ್ಟಿ ವಿಭೂತಿ, ಗಂಗಾಧರ ಬಾದಗಿ, ಹುಸೇನಪ್ಪ ಬಾದಗಿ, ರವಿ ಬಾದಗಿ, ಆನಂದ ಕೋಮಾರಿ, ರಮೇಶ ಉಕ್ಕುಂದ ಶುಕ್ರವಾರ ಬೆಳಗ್ಗೆ ಮುಂಬೈ ತಲುಪಿದ್ದಾರೆ.
ಮುಂಬೈ ಮಹಾನಗರದಲ್ಲಿ ಸೋನು ಸೂದ್ ಮನೆ ಹುಡುಕಲು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12ರವರೆಗೂ ಅಲೆದಾಡಿದ್ದಾರೆ. ಅವರಿವರನ್ನು ಕೇಳುತ್ತ ಅಂತೂ ಸೂದ್ ಅವರ ಮನೆ ಹುಡುಕವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟು ದೂರದಿಂದ ತಮ್ಮ ಭೇಟಿಗೆ ಬಂದ ವಿಷಯ ತಿಳಿದ ನಟ ಸೋನು ಸೂದ್ 12.30ಕ್ಕೆ ಅಲೆಮಾರಿ ಯುವಕರನ್ನು ಭೇಟಿಯಾಗಿದ್ದಾರೆ. ಅಲೆಮಾರಿಗಳಾದ ನಾವು ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದೇವೆ. ಸ್ಥಳೀಯ ಆಡಳಿತದಿಂದ ನಮಗೆ ಸೂರು ಸಿಗುತ್ತಿಲ್ಲ. ತಾವು ನಮ್ಮ ನೆರವಿಗೆ ಬರಬೇಕೆಂದು ಯುವಕರು ಮೊರೆ ಇಟ್ಟರು.
ಯುವಕರ ಸಮಸ್ಯೆ ಶಾಂತಚಿತ್ತರಾಗಿ ಆಲಿಸಿದ ಸೋನು ಸೂದ್, ಸದ್ಯ ದೇಶಾದ್ಯಂತ ಜನರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಶಾಶ್ವತ ಸೂರು ಕಲ್ಪಿಸುವುದು ಕಷ್ಟ. ಆದರೆ, ನಿಮ್ಮ ಸಮುದಾಯಕ್ಕೆ ಅಗತ್ಯವಿರುವ ರೇಶನ್, ಔಷಧ, ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿದ್ದರೆ ಅದಕ್ಕೆ ನೆರವು, ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.
ಬಹುಭಾಷಾ ಚಿತ್ರನಟ ನಮ್ಮನ್ನು ಭೇಟಿಯಾಗಿ ಅರ್ಧ ತಾಸು ನಮ್ಮೊಂದಿಗಿದ್ದು ಸಮಸ್ಯೆ ಅಲಿಸಿದರು. ಕೈಲಾದ ಸಹಾಯ ನೀಡುವುದಾಗಿ ಭರವಸೆ ನೀಡಿದರು. ಇದು ನಮಗೆ ಖುಷಿ ನೀಡಿತು ಎಂದು ಸೋನು ಸೂದ್‌ರನ್ನು ಭೇಟಿಯಾದ ಯುವಕರು ತಿಳಿಸಿದ್ದಾರೆ.