ವಾಡಿ: ಅಡುಗೆ ಅನಿಲ, ಆಹಾರ ಮತ್ತು ಹಾಲು ಉತ್ಪನ್ನಗಳ ಮೇಲೆ ವಿಧಿಸಲಾದ ಜಿಎಸ್‌ಟಿ ಖಂಡಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ರವಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಎಸ್‌ಯುಸಿಐ (ಸಿ) ಪಕ್ಷದ ಪದಾಧಿಕಾರಿಗಳು, ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ಕ್ರಮದ ವಿರುದ್ಧ ಘೋಷಣೆ ಕೂಗುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಸ್‌ಯುಸಿಐ ಪಕ್ಷದ ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ, ಜಿಎಸ್‌ಟಿ ಎಂಬ ಬಡವರ ದೇಹದ ರಕ್ತ ಹೀರುತ್ತಿದೆ. ದುಡಿಯುವ ಜನರ ಬದುಕಿನ ಮೇಲೆ ಬರೆ ಎಳೆದಿರುವ ಸರ್ಕಾರ ಅತ್ಯಂತ ಕೆಟ್ಟ ದಿನಗಳನ್ನು ಉಡುಗೊರೆಯಾಗಿ ಕೊಟ್ಟಿದೆ. ಮಕ್ಕಳು ಕುಡಿಯುವ ಹಾಲಿನ ಮೇಲೂ ಈ ಭ್ರಷ್ಟ ಸರ್ಕಾರದ ಕೆಂಗಣ್ಣು ಬಿದ್ದಿರುವುದು ಅಮಾನವೀಯವಾಗಿದೆ. ಬಡವರ ಕಷ್ಟ ಅರಿಯದ ಹೃದಯಹೀನ ಸರ್ಕಾರ ನಮ್ಮನ್ನಾಳುತ್ತಿದ್ದು, ಜನರು ಎಚ್ಚೆತ್ತುಕೊಳ್ಳಬೇಕು ಎಂದರು.
ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ, ದವಸದಾನ್ಯ, ಔಷಧಗಳು, ಕಟ್ಟಡ ಸಾಮಾಗ್ರಿಗಳು, ಪೇಪರ್ ದರ, ವಿದ್ಯುತ್ ದರ, ಜೀವನಾವಶ್ಯಕ ವಸ್ತುಗಳ ಬೆಲೆ ನಿರಂತರವಾಗಿ ಗಗನಕ್ಕೇರುತ್ತಿರುವುದು ಜನದ್ರೋಹಿ ಸರ್ಕಾರದ ಸಾಧನೆಯಾಗಿದೆ. ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಮತ್ತು ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಪೌಷ್ಟಿಕಾಂಶದ ಆಹಾರ ಒದಗಿಸಬೇಕಾದ ಕೇಂದ್ರ ಸರ್ಕಾರ, ಜಿಎಸ್‌ಟಿ ಹೆಚ್ಚಿಸಿ ಹಸಿದವರ ಹೊಟ್ಟೆಗೆ ಹೊಡೆದಿದೆ. ಅಕ್ಕಿ, ಗೋಧಿ, ಹಾಲು, ಮೊಸರಿನ ಮೇಲೆ ಜಿಎಸ್‌ಟಿ ಹೇರಿ ಬಡಜನರ ಮೇಲೆ ಕ್ರೂರ ಪ್ರಹಾರ ನಡೆಸಿದೆ. ಜಿಎಸ್‌ಟಿ ರದ್ಧುಗೊಳಿಸದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಎಸ್‌ಯುಸಿಐ (ಸಿ) ಸದಸ್ಯರಾದ ಗುಂಡಣ್ಣ ಕುಂಬಾರ, ಮಲ್ಲಿನಾಥ ಹುಂಡೇಕಲ್, ಶರಣು ಹೇರೂರ, ಗೌತಮ ಪರತೂರಕರ, ಶಿವುಕುಮಾರ ಆಂದೋಲಾ, ಮಲ್ಲಣ್ಣ ದಂಡಬಾ, ವಿಠ್ಠಲ ರಾಠೊಡ, ವೆಂಕಟೇಶ ದೇವದುರ್ಗಾ, ಗೋವಿಂದ ಯಳವಾರ, ಅರುಣ ಹಿರೆಬಾನರ್, ರಾಜು ಒಡೆಯರ್, ಗೋದಾವರಿ, ಜಯಶ್ರೀ, ಶರಣಮ್ಮ, ಕೋಕಿಲಾ, ರೇಣುಕಾ, ಚೌಡಪ್ಪ ಗಂಜಿ, ದತ್ತು ಹುಡೇಕರ, ಸಿದ್ದು ಮದ್ರಿಕಿ, ಅವಿನಾಶ ಒಡೆಯರ, ಶ್ರೀಶೈಲ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.