Advertisement

ನಿರೀಕ್ಷೆಗೆ ಸಿಕ್ಕ ನ್ಯಾಯ : ಚಿತ್ರರಂಗಕ್ಕೆ ಆಗಿಲ್ಲ ಅನ್ಯಾಯ

08:31 PM May 05, 2017 | Karthik A |

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಮೇಲೆ ಗಾಂಧಿನಗರದಲ್ಲಿ ದೊಡ್ಡದೊಂದು ಆರೋಪ ಕೇಳಿ ಬರುತ್ತಿದೆ. ಇದು ಆರೋಪ ಎನ್ನುವುದಕ್ಕಿಂತ, ಕಳೆದೊಂದೂವರೆ ವರ್ಷದಲ್ಲಿ ಗೋವಿಂದು ಅವರ ಕೆಲಸಗಳನ್ನು ನೋಡಿ, ತಮಾಷೆಗೆ ಹೀಗೆ ಹೇಳಲಾಗುತ್ತಿದೆ. ಗೋವಿಂದು ಅಧ್ಯಕ್ಷರಾದ ಮೇಲೆ, ಅವರು ಮತ್ತು ಅವರ ಕಾರ್ಯಕಾರಿ ಸಮಿತಿಯು ಚಿತ್ರರಂಗದಲ್ಲಿದ್ದ ಬಾಕಿ ಕೆಲಸಗಳನ್ನೆಲ್ಲಾ ಬಹುತೇಕ ಮಾಡಿ ಮುಗಿಸಿದ್ದು, ಅವರ ನಂತರ ಅಧ್ಯಕ್ಷರಾಗುವವರಿಗೆ ಯಾವುದೇ ಕೆಲಸವನ್ನು ಉಳಿಸಿಲ್ಲವಂತೆ. ಹಾಗಾಗಿ ಗೋವಿಂದು ಅವರ ನಂತರ ಅಧ್ಯಕ್ಷರಾಗುವವರಿಗೆ ಹೆಚ್ಚು ಕೆಲಸಗಳಿರುವುದಿಲ್ಲ ಎಂಬ ಜೋಕು ಕೇಳಿ ಬರುತ್ತಿದೆ.

Advertisement

ಈ ಜೋಕುಗಳನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೆ, ಕಳೆದ ಹಲವು ವರ್ಷಗಳಲ್ಲಿ ಆಗದ ಹಲವು ಕೆಲಸಗಳು ಗೋವಿಂದು ಅವರು ಅಧ್ಯಕ್ಷರಾದ ಮೇಲೆ ಆಗಿದೆ. ಪ್ರಮುಖವಾಗಿ 100ರಿಂದ 125 ಕನ್ನಡ ಚಿತ್ರಗಳಿಗೆ ಹೆಚ್ಚಿದ ಸಹಾಯಧನ, ಪ್ರತಿವರ್ಷ ಏಪ್ರಿಲ್‌ 24ರಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ, ಮೈಸೂರಿನ ಹಿಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಾಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರ ಕಲ್ಯಾಣ ನಿಧಿ ಮೊತ್ತವನ್ನು 1.75 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಳ … ಹೀಗೆ ಹಲವು ಕೆಲಸಗಳಾಗಿವೆ. ಇನ್ನು ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲೂ ಗರಿಷ್ಠ 200 ರೂಪಾಯಿ ಪ್ರವೇಶದರ ನಿಗದಿ ಮತ್ತು ಮಲ್ಟಿಪ್ಲೆಕ್ಸ್‌ನ ಎಲ್ಲಾ ಪರದೆಗಳಲ್ಲೂ ಪ್ರೈಂಟೈಮ್‌ನಲ್ಲಿ ಕಡ್ಡಾಯವಾಗಿ ಕನ್ನಡ ಚಿತ್ರಗಳ ಪ್ರದರ್ಶನದ ಕುರಿತಾಗಿ ಈಗಾಗಲೇ ಜಾರಿಗೆ ಬಂದಿದೆ. ಜೊತೆಗೆ ‘ಮಾಸ್ತಿಗುಡಿ’ ದುರಂತದಲ್ಲಿ ಮೃತಪಟ್ಟ ಅನಿಲ್‌ ಮತ್ತು ಉದಯ್‌ ಕುಟುಂಬಕ್ಕೆ ಸರ್ಕಾರದಿಂದ ತಲಾ ಐದು ಲಕ್ಷ ಮಂಜೂರು ಮಾಡಿಸಿದ್ದು, ಎ.ಟಿ. ರಘು ಅವರಿಗೆ ಸರ್ಕಾರದಿಂದ ಐದು ಲಕ್ಷ ಕೊಡಿಸಿದ್ದು … ಹೀಗೆ ಹಲವು ಕೆಲಸಗಳಾಗಿವೆ. ಚಿತ್ರ ಪ್ರದರ್ಶನದ ವಿಷಯದಲ್ಲಿ ಮಂಡಳಿ ಮಹತ್ವದ ಹೆಜ್ಜೆ ಇಟ್ಟಿದ್ದು, ಅದೂ ಸಹ ಸದ್ಯದಲ್ಲೇ ಜಾರಿಗೆ ಬರುವ ಹಾಗಿದೆ. ಅದೇ ಕಾರಣಕ್ಕೇ, ಗೋವಿಂದು ಅವರ ನಂತರ ಹೊಸ ಅಧ್ಯಕ್ಷರಿಗೆ ಹೆಚ್ಚು ಕೆಲಸವಿರುವುದಿಲ್ಲ ಎನ್ನಲಾಗುತ್ತಿದೆ.

‘ನಾನು ಅಧ್ಯಕ್ಷನಾದಾಗಲೇ ಜವಾಬ್ದಾರಿ ಮತ್ತು ನಿರೀಕ್ಷೆ ಎರಡೂ ಜಾಸ್ತಿ ಇತ್ತು. ನಾನು ಏಳೆಂಟು ವರ್ಷಗಳ ಹಿಂದೆಯೇ ಅಧ್ಯಕ್ಷನಾಗಬಹುದಿತ್ತು. ಆದರೆ, ಆಗ ಹಿರಿಯರಿದ್ದರು. ಹಾಗಾಗಿ ಅವರ ಹಿರಿತನಕ್ಕೆ ಗೌರವ ಕೊಟ್ಟು, ಅವರೆಲ್ಲಾ ಆಗಲಿ ಎಂದು ನಾನು ಅಧ್ಯಕ್ಷನಾಗಿರಲಿಲ್ಲ. ಇನ್ನು ನಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದು ಬಹಳ ದೊಡ್ಡ ಬಹುಮತದಿಂದ. ಹಾಗಾಗಿ ಜವಾಬ್ದಾರಿ ಜಾಸ್ತಿ ಇತ್ತು. ಮೂರೂ ವಲಯದವರನ್ನೂ ನಂಬಿಕೆಗೆ ತೆಗೆದುಕೊಂಡು, ಸಮಸ್ಯೆಗಳನ್ನ ಪಟ್ಟಿ ಮಾಡಿಕೊಂಡು ಸರ್ಕಾರದ ಜೊತೆಗೆ ಚರ್ಚೆ ಮಾಡಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕೆಲಸವನ್ನು ಮರೆಯುವ ಹಾಗಿಲ್ಲ. ಅವರು ಈಗಿಂದಲ್ಲ, ಬಹಳ ಹಿಂದಿನಿಂದಲೂ ಚಿತ್ರರಂಗದ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ಬಹಳ ವರ್ಷಗಳ ಹಿಂದೆಯೇ ಚಿತ್ರರಂಗಕ್ಕೆ ಸಮಸ್ಯೆಯಾಗಿದ್ದ ಟರ್ನ್ಓವರ್‌ ಟ್ಯಾಕ್ಸ್‌ ಮನ್ನ ಮಾಡಿದ್ದರು. ಆ ನಂತರ ಕನ್ನಡ ಚಿತ್ರರಂಗಕ್ಕೆ ಹಲವು ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕನ್ನಡ ಚಿತ್ರಗಳನ್ನು ಅತೀ ಹೆಚ್ಚು ಪ್ರದರ್ಶನ ಮಾಡುವ ಚಿತ್ರಮಂದಿರಗಳಿಗೆ ಏನಾದರೂ ಪ್ರೋತ್ಸಾಹ ಕೊಡಿ ಎಂದು ಚೀಟಿಯಲ್ಲಿ ಬರೆದು ಕಳಿಸಿದೆ. ತಕ್ಷಣವೇ ಮುಖ್ಯಮಂತ್ರಿಗಳು, ಕನ್ನಡ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಪ್ರಶಸ್ತಿ ಘೋಷಿಸಿದರು. ಮುಂದಿನ ವರ್ಷದಿಂದ ಅದೂ ಜಾರಿಗೆ ಬರಬಹುದು’ ಎನ್ನುತ್ತಾರೆ ಅವರು.

ಸರಿ, ಇದುವರೆಗೂ ಹಾಕಿಕೊಂಡಿದ್ದ ಬಹುತೇಕ ಯೋಜನೆಗಳೇನೋ ಕಾರ್ಯರೂಪಕ್ಕೆ ಬಂದಿವೆ. ಇನ್ನೇನಾದರೂ ಹೊಸ ಯೋಜನೆಗಳು ಎಂದರೆ, ಸಣ್ಣ ಪಟ್ಟಿ ಕೊಡುತ್ತಾರೆ ಗೋವಿಂದು. ‘ಕಿರುತೆರೆಗೆ ರಿಕ್ರಿಯೇಷನ್‌ ಕ್ಲಬ್‌ ಕಟ್ಟಿಕೊಳ್ಳುವುದಕ್ಕೆ ಜಾಗ ಕೊಟ್ಟಂತೆ, ನಮಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡೆಕರೆ ಜಾಗ ಕೊಡಿ ಎಂದು ಕೇಳಿದ್ದೀವಿ. ಅಲ್ಲಿ ಬರೀ ರಿಕ್ರಿಯೇಷನ್‌ ಕ್ಲಬ್‌ ಅಷ್ಟೇ ಅಲ್ಲ, ಸಣ್ಣ ಚಿತ್ರಮಂದಿರ, ಕಥೆ-ಸಂಗೀತಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುವುದಕ್ಕೆ ಒಂದಿಷ್ಟು ಕೊಠಡಿಗಳು … ಇವೆಲ್ಲಾ ಒಳಗೊಂಡ ಒಂದು ಕಟ್ಟಡ ಕಟ್ಟುವ ಯೋಚನೆ ಇದೆ. ಇನ್ನು ಮೈಸೂರಿನಲ್ಲಿ ಚಿತ್ರನಗರಿ ಆಗುತ್ತಿರುವುದು ಗೊತ್ತೇ ಇದೆ. ಈಗಾಗಲೇ ಸರ್ಕಾರ 100 ಎಕರೆ ಅದಕ್ಕಾಗಿ ಜಾಗ ಗೊತ್ತು ಮಾಡಿದೆ. ಚಿತ್ರನಗರಿ ಬಂದ ಮೇಲೆ ಕಲಾವಿದರು ಮತ್ತು ಕಾರ್ಮಿಕರಿಗೆ ನಿವೇಶನದ ಪ್ರಸ್ತಾಪ ಇಟ್ಟಿದ್ದೇವೆ. ಇನ್ನು ಯೂಎಫ್ಓ ಮತ್ತು ಕ್ಯೂಬ್‌ಗೆ ಪರ್ಯಾಯವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಪ್ರದರ್ಶನ ವ್ಯವಸ್ಥೆ ಮಾಡುವ ಕುರಿತಾಗಿ ಯೋಚಿಸುತ್ತಿದೆ. ಅದಕ್ಕೊಂದು ಸಮಿತಿ ಮಾಡಿದ್ದು, ಆ ಸಮಿತಿ ವರದಿ ಕೊಟ್ಟಿದೆ. ಮುಂದಿನ ಬಜೆಟ್‌ನಲ್ಲಿ ಮಂಡನೆಯಾಗಲಿದೆ. ಅದೇ ರೀತಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಡಾ ರಾಜಕುಮಾರ್‌ ಜಯಂತಿಯನ್ನು ಮುಂದಿನ ವರ್ಷದಿಂದ ಆಚರಿಸಲಾಗುತ್ತದೆ’ ಎನ್ನುತ್ತಾರೆ ಗೋವಿಂದು.

ಅಂದಹಾಗೆ, ಗೋವಿಂದು ಅವರ ಕಾರ್ಯಾವಧಿ ಜೂನ್‌ನಲ್ಲಿ ಮುಗಿಯಲಿದೆಯಂತೆ. ‘ನನಗೆ ಮುಂದುವರೆಯುವ ಆಸೆ ಇಲ್ಲ. ಮುಂದೊಮ್ಮೆ ಅವಕಾಶ ಸಿಕ್ಕಿದಾಗ ನೋಡೋಣ. ನಾನು ಅಧ್ಯಕ್ಷನಾಗಿ ಇರಲಿ, ಇರದಿರಲಿ, ಮುಂದೆ ಯಾರೇ ಅಧ್ಯಕ್ಷರಾಗಲಿ ನನ್ನ ಕೆಲಸ ಮುಂದುವರೆಯುತ್ತದೆ. ನನ್ನ ಅಧಿಕಾರವಧಿಯಲ್ಲಿ ಆದ ಕೆಲಸಗಳನ್ನೆಲ್ಲಾ ಪೂರ್ತಿಯಾಗಿ ನಾನೇ ಮಾಡಿದೆ ಅಂತ ಹೇಳುವುದಿಲ್ಲ. ನಮ್ಮ ಕಾರ್ಯಕಾರಿ ಸಮಿತಿ ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಸೇರಿದಂತೆ ಚಿತ್ರರಂಗದ ಹಲವು ವಿಭಾಗಗಳ ಮುಖ್ಯಸ್ಥರ ಸಹಕಾರ ಮತ್ತು ಪ್ರೋತ್ಸಾಹದಿಂದ ಸಾಧ್ಯವಾಗಿದೆ. ನಾನು ಅಧ್ಯಕ್ಷನಾದ ಸಂದರ್ಭದಲ್ಲಿ ನನ್ನ ಮೇಲೆ ಯಾವ ನಿರೀಕ್ಷೆ ಇತ್ತೋ, ಅದಕ್ಕೆ ನ್ಯಾಯ ಸಲ್ಲಿಸಿದ್ದೇನೆ’ ಎನ್ನುತ್ತಾರೆ ಗೋವಿಂದು.

Advertisement

– ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next