ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ನಟ ಪ್ರಕಾಶ್ ರೈ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ವಕ್ತಾರ ಎಸ್.ಸುರೇಶ್‌ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ಇತ್ತೀಚೆಗೆ ಎಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.
ನಟ ಪ್ರಕಾಶ್ ರೈ ಅವರು ಕರ್ನಾಟಕದಲ್ಲಿ ಆಗಿರುವ ಗೌರಿ ಹತ್ಯೆಗೆ ಪ್ರಧಾನಿ ಸ್ಪಂದಿಸಿಲ್ಲ ಎಂದು ಹಗುರವಾಗಿ ಮಾತನಾಡಿದ್ದಾರೆ. ಅವರಿಂದ ಈ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಕೇಂದ್ರ ಸರ್ಕಾರ ಈ ಕುರಿತು ಸಿಬಿಐ ತನಿಖೆಗೆ ಒಪ್ಪಿಲ್ಲದೇ ಇದ್ದರೆ ಅವರ ಟೀಕೆಗೆ ಅರ್ಥ ಬರುತ್ತಿತ್ತು. ಹೀಗಾಗಿ ಪ್ರಕಾಶ್ ರೈ ಹೇಳಿಕೆ ಖಂಡಿಸುತ್ತೇನೆ ಎಂದರು.
ಇನ್ನೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್‌ಕುಮಾರ್, ಪ್ರಕಾಶ್ ರೈ ಅವರು ಗೌರಿ ಲಂಕೇಶ್ ಹತ್ಯೆ ಕುರಿತು ಪ್ರಧಾನಿ ಹೆಸರು ಪ್ರಸ್ತಾಪಿಸಿರುವುದು ಕೇವಲ ಎದುರು ಕುಳಿತಿದ್ದ ಜನರ ಚಪ್ಪಾಳೆ ಗಿಟ್ಟಿಸುವ ಉದ್ದೇಶದ್ದು. ತಮ್ಮ ಕಮ್ಯುನಿಸ್ಟ್ ಸಿದ್ಧಾಂತದ ಪ್ರತಿಪಾದನೆಗೆ ತಕ್ಕಂತೆ ಅವರು ಮಾತನಾಡಿರುವುದು ರಾಜಕೀಯವಾಗಿ ಅವರ ಅಪಕ್ವತೆಗೆ ಸಾಕ್ಷಿಯಾಗಿದೆ. ನಟರಾಗಿ ಅವರು ವೇದಿಕೆಗೆ ತಕ್ಕಂತೆ ಮಾತನಾಡಿದ್ದಾರೆ ಎಂದು ವಂಗ್ಯವಾಡಿದ್ದಾರೆ.
ಹಿಂದೆ ಕಾವೇರಿ ವಿವಾದದ ವಿಚಾರದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದ್ದ ಪ್ರಕಾಶ್ ರೈ, ತಾನೊಬ್ಬ ನಟ ಮಾತ್ರ ಎಂದಿದ್ದರು. ಆದರೆ, ಈಗ ರಾಜ್ಯದಲ್ಲಿ ನಡೆದ ಹತ್ಯೆಗೆ ಪ್ರಧಾನಿ ಪ್ರತಿಕ್ರಿಯಿಸಬೇಕೆಂದು ಹೇಳುವ ಅಗತ್ಯವಿಲ್ಲ. ಪ್ರಕಾಶ್ ರೈ ಅವರು ರಾಜಕೀಯವಾಗಿ ಸಕ್ರಿಯರಾಗಲು ಬಯಸಿದ್ದರೆ ತಮ್ಮದೇ ಪಕ್ಷ ಸ್ಥಾಪಿಸಿಕೊಳ್ಳಲಿ ಎಂದು ಸಲಹೆ ಮಾಡಿದ್ದಾರೆ.