ಬರ್ಮಿಂಗಂ: ಭಾರತ-ಪಾಕಿಸ್ಥಾನ ನಡುವಿನ ಮತ್ತೂಂದು ಸುತ್ತಿನ “ಕ್ರಿಕೆಟ್ ಕದನ’ ಮುಗಿದಿದೆ. ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ ಸರ್ವಾಂಗೀಣ ಪ್ರಾಬಲ್ಯ ಮೆರೆದ ಟೀಮ್ ಇಂಡಿಯಾ ಪಾಕ್ ಪಡೆಯನ್ನು ಸೊಲ್ಲೆತ್ತದಂತೆ ಮಾಡಿ ಸೋಲಿನ ಪ್ರಪಾತಕ್ಕೆ ತಳ್ಳಿದೆ. ಭಾರತದ ಅಭಿಮಾನಿಗಳೆಲ್ಲ ವಿಪರೀತ ಸಂತಸದಲ್ಲಿದ್ದಾರೆ.
ಭಾರತದ ಗೆಲುವಿಗೆ ಅನೇಕ ಕಾರಣಗಳನ್ನು ಪಟ್ಟಿ ಮಾಡಬಹುದು. ಆದರೆ ನಾಯಕ ವಿರಾಟ್ ಕೊಹ್ಲಿ ಪ್ರಕಾರ ಯುವರಾಜ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗೇ ಪಂದ್ಯದ ಟರ್ನಿಂಗ್ ಪಾಯಿಂಟ್. ಯುವಿ 32 ಎಸೆತಗಳಿಂದ 53 ರನ್ ಬಾರಿಸುವ ಮೂಲಕ ತಂಡವನ್ನು ಒತ್ತಡ ಮುಕ್ತವಾಗಿಸಿದರು ಎಂದು ಕೊಹ್ಲಿ ಪ್ರಶಂಸಿಸಿದ್ದಾರೆ.
ತಿರುವು ಕೊಟ್ಟ ಯುವರಾಜ್: “ಅನುಮಾನವೇ ಇಲ್ಲ, ಯುವರಾಜ್ ಆಟವೇ ಈ ಪಂದ್ಯಕ್ಕೊಂದು ತಿರುವು ಒದಗಿಸಿದ್ದು. ಅವರ ಈ ಆಟ ನಮ್ಮೆಲ್ಲರಲ್ಲೂ ಹೊಸ ಆತ್ಮವಿಶ್ವಾಸ ಮೂಡಿಸಿತು. ಚೆಂಡನ್ನು ಚೆನ್ನಾಗಿ ಬಡಿದಟ್ಟಬಹುದು ಎಂದು ತೋರಿಸಿ ಕೊಟ್ಟವರೇ ಯುವರಾಜ್. 50 ರನ್ ಮಾಡಿದ್ದರೂ ನನಗೆ ನಿರಾಳವಾಗಿ ಆಡಲು ಸಾಧ್ಯವಾಗಿರಲಿಲ್ಲ. ಆದರೆ ಯುವಿ ಬಂದೊಡನೆ ನುಗ್ಗಿ ಬೀಸಲಾರಂಭಿಸಿದರು. ಇದರಿಂದ ನನ್ನ ಮೇಲಿನ ಒತ್ತಡವನ್ನೂ ತೊಡೆದು ಹಾಕಿದರು. ಲೋ ಫುಲ್‌ಟಾಸ್, ಯಾರ್ಕರ್‌ಗಳಿಗೆಲ್ಲ ಅವರು ಫೋರ್, ಸಿಕ್ಸ್‌ಗಳ ರುಚಿ ತೋರಿಸಿದರು. ಇದು ಕೇವಲ ಅವರಿಂದಷ್ಟೇ ಸಾಧ್ಯವಾಗಬಹುದಾದ ಆಟ. ಅವರ ಪುನರಾಗಮನವನ್ನು ವೀಕ್ಷಿಸುವುದೇ ಕಣ್ಣಿಗೊಂದು ಹಬ್ಬ…’ ಎಂದು ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠನ ಗುಣಗಾನ ಮಾಡಿದರು.
“ಇದು ನಮ್ಮ ಪಾಲಿಗೆ ಪಂದ್ಯಾವಳಿಯ ಆರಂಭ ಮಾತ್ರ. ಸವಾಲು ಇನ್ನೂ ದೊಡ್ಡದಿದೆ. ನಾವು ಎಲ್ಲದಕ್ಕೂ ಸಿದ್ಧರಾಗಿಯೇ ಇದ್ದೇವೆ. ತಂಡದಲ್ಲಿ ಸಾಕಷ್ಟು ಮಂದಿ ಬಿಸಿ ರಕ್ತದ ಯುವಕರಿದ್ದಾರೆ. ಆದರೆ ಪಾಕಿಸ್ಥಾನ ವಿರುದ್ಧದ ಗೆಲುವು ನಮ್ಮ ಪಾಲಿಗೆ ಅತೀ ದೊಡ್ಡದು. ನಾವು ಆಡಿದ ರೀತಿ ಅಮೋಘ ಮಟ್ಟದಲ್ಲಿತ್ತು. ಇದು ಇಡೀ ತಂಡಕ್ಕೆ ಹೊಸ ಸ್ಫೂರ್ತಿ ತುಂಬಿದೆ…’ ಎಂದು ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಭಾರತ ವನ್ನು ಮುನ್ನಡೆಸುತ್ತಿರುವ ಕೊಹ್ಲಿ ಹೇಳಿದರು.
ರೋಹಿತ್ -ಧವನ್ ಆರಂಭಿಕ ಜತೆಯಾಟ ವನ್ನೂ ಕೊಹ್ಲಿ ಶ್ಲಾ ಸಲು ಮರೆಯಲಿಲ್ಲ. “ಇಂಗ್ಲೆಂಡಿನಲ್ಲಿ ಆಡುವಾಗ ಆರಂಭಿಕ ಜತೆ ಯಾಟ ಅತ್ಯಂತ ನಿರ್ಣಾಯಕ. ರೋಹಿತ್- ಧವನ್ ಆಟ ಇದಕ್ಕೊಂದು ನಿದರ್ಶನ. ರೋಹಿತ್ ಆಮೋಘ ರೀತಿಯಲ್ಲಿ ಅಂತಾರಾಷ್ಟ್ರೀಯ ಪುನರಾಗಮನ ಸಾರಿದರು. ಐಪಿಎಲ್‌ನಲ್ಲೂ ಅವರ ಆಟ ಉತ್ತಮವಾಗಿಯೇ ಇತ್ತು.
ಆದರೆ ಐಪಿಎಲ್‌ಗೂ ಅಂತಾರಾಷ್ಟ್ರೀಯ ಪಂದ್ಯಗಳಿಗೂ ಭಾರೀ ವ್ಯತ್ಯಾಸ ವಿದೆ. ಇದು ಕ್ವಾಲಿಟಿ ಬೌಲಿಂಗ್ ದಾಳಿ ಸಮ್ಮುಖ ದದಲ್ಲಿ ರನ್ ಪೇರಿಸಬೇಕಾದ ಸವಾಲನ್ನು ನಮ್ಮ ಮುಂದಿರಿಸುತ್ತದೆ’ ಎಂದ ಕೊಹ್ಲಿ, ಕೊನೆಯಲ್ಲಿ ಪಾಂಡ್ಯ ಸಿಡಿಲಬ್ಬರದ ಆಟಕ್ಕೆ ದೊಡ್ಡ ಥ್ಯಾಂಕ್ಸ್ ಹೇಳಿದರು. ಅವರಲ್ಲಿ “ಅಮೋಘ ಪ್ರತಿಭೆ’ ಇರುವ ಕಾರಣಕ್ಕಾಗಿಯೇ ಧೋನಿಗಿಂತ ಮೊದಲೇ ಬ್ಯಾಟಿಂಗಿಗೆ ಇಳಿಸಲಾಯಿತು ಎಂದರು.