Advertisement

ಮೌಸ್‌ ಬದಿಗಿಟ್ಟ ಬಾಲೆ, ಮೇಟಿ ಹಿಡಿದು ಗೆದ್ದಳು!

10:13 AM Feb 10, 2020 | sudhir |

ಅನಾರೋಗ್ಯದ ಕಾರಣಕ್ಕೆ ತಂದೆ ಹಾಸಿಗೆ ಹಿಡಿದರೆ ಅಥವಾ ಆಸ್ಪತ್ರೆಯ ಪಾಲಾದರೆ ಮನೆಯ ಜವಾಬ್ದಾರಿಯನ್ನು ಗಂಡು ಮಕ್ಕಳಿಗೆ ವಹಿಸುತ್ತಾರೆ. ಅಥವಾ ತಾಯಿಯೇ ಆ ಜವಾಬ್ದಾರಿಗೆ ಹೆಗಲು ಕೊಡುತ್ತಾಳೆ. ಇಲ್ಲವಾದರೆ, ಹತ್ತಿರದ ಸಂಬಂಧಿಗಳಿಗೆ ಜಮೀನಿನ ಉಸ್ತುವಾರಿ ವಹಿಸಲಾಗುತ್ತದೆ. ಆದರೆ, ಇಲ್ಲಿ ಹಾಗಾಗಿಲ್ಲ. ಜಮೀನು ನೋಡಿಕೊಳ್ಳುವ ಕೆಲಸಕ್ಕೆ ಮಗಳೇ ಎದ್ದು ಬಂದಿದ್ದಾಳೆ. ಅದೂ ಏನು? ಸಾಫ್ಟ್ವೇರ್‌ ಎಂಜಿನಿಯರ್‌ ಕೆಲಸಕ್ಕೆ ರಾಜೀನಾಮೆ ನೀಡಿ, ಕೃಷಿ ಕೆಲಸಕ್ಕೆ ಮುಂದಾಗಿದ್ದಾಳೆ. ಚೆನ್ನಾಗಿ ಕೆಲಸ ಮಾಡಿ, ಅಪ್ಪನಿಗಿಂತಲೂ ಹೆಚ್ಚಿನ ಬೆಳೆ ತೆಗೆದು ಬೀಗಿದ್ದಾಳೆ. ಜ್ಯೋತ್ಸ್ನಾ ದೊಂಡ್‌ ಎಂಬ ಈ ಸಾಧಕಿಯ ಕಥೆಯನ್ನು ನೀವು ಓದಲೇಬೇಕು.

Advertisement

ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ಲೋನ್ವಾಡಿ ಎಂಬ ಹಳ್ಳಿ. ಅಲ್ಲಿ ವಿಜಯ್‌ ದೊಂಡ್‌ ಎಂಬ ಕೃಷಿಕ. ಇವರ ಪತ್ನಿಯ ಹೆಸರು ಲತಾ. ಈ ದಂಪತಿಯ ಪೈಕಿ ವಿಜಯ್‌ ವಕೀಲರಾಗಬೇಕೆಂದೂ, ಲತಾ ವೈದ್ಯೆ ಆಗಬೇಕೆಂದೂ ಕನಸು ಕಂಡಿದ್ದರಂತೆ. ಆದರೆ, ಜಮೀನು ನೋಡಿಕೊಳ್ಳಲು ಯಾರೂ ಇಲ್ಲವೆಂಬ ಕಾರಣಕ್ಕೆ ಲಾಯರ್‌ ಆಗಬೇಕೆಂಬ ಕನಸಿಗೆ ತಿಲಾಂಜಲಿಯಿಟ್ಟ ವಿಜಯ್‌, ಕೃಷಿಕನಾಗಿ, ದ್ರಾಕ್ಷಿ ಬೆಳೆಗಾರನಾದರು. ಮೆಡಿಕಲ್‌ ಓದಿಸಲು ಆರ್ಥಿಕ ಚೈತನ್ಯ ಇಲ್ಲದ್ದರಿಂದ ಹಾಗೂ ಒಳ್ಳೆಯ ಸಂಬಂಧ ಕೂಡಿ ಬಂದಿದ್ದರಿಂದ, ಡಾಕ್ಟರ್‌ ಆಗಬೇಕೆಂಬ ಕನಸಿಗೆ ನಿಂತಲ್ಲೇ ಕೈಮುಗಿದ ಲತಾ, ಗೃಹಿಣಿಯಾಗಿ ವಿಜಯ್‌ರ ಮನೆ ಸೇರಿದರು.

ಜ್ಯೋತ್ಸ್ನಾ ಮತ್ತು ಅಜಯ್‌. ನಾವು ಸಾಧಿಸಲು ಆಗದ್ದನ್ನು ಮಕ್ಕಳು ಸಾಧಿಸಲಿ ಎಂದು ಹೆತ್ತವರು ಆಸೆ ಪಡುತ್ತಾರಲ್ಲವೆ? ವಿಜಯ್‌ ಮತ್ತು ಲತಾ ದಂಪತಿಯೂ ಇಂಥ ಯೋಚನೆಯಿಂದ ಹೊರತಾಗಿರಲಿಲ್ಲ. ಚೆನ್ನಾಗಿ ಓದಿ ಎಂಜಿನಿಯರ್‌ ಅಥವಾ ಡಾಕ್ಟರ್‌ ಥರದ ದೊಡ್ಡ ಹುದ್ದೆ ಪಡೆಯಬೇಕು ಎಂದು ಜ್ಯೋತ್ಸ್ನಾಗೆ ಬಾಲ್ಯದಲ್ಲೇ ಹೇಳಿಕೊಟ್ಟರು.

“ಚಿಕ್ಕ ಕುಟುಂಬ ಸುಖೀ ಕುಟುಂಬ’ ಎಂಬ ಸಮಾಧಾನ ವಿಜಯ್‌- ಲತಾಗೆ ಇತ್ತು. ಹೀಗಿದ್ದಾಗಲೇ, 1998ರಲ್ಲಿ ನಡೆದ ಅಪಘಾತದಲ್ಲಿ ಕಾಲು ಮುರಿದುಕೊಂಡು ವಿಜಯ್‌ ಅವರು, ಅಸ್ಪತ್ರೆ ಸೇರ ಬೇಕಾಯಿತು. ಆಗ ಜ್ಯೋತ್ಸ್ನಾಗೆ ಕೇವಲ 6 ವರ್ಷ. ಅವಳ ತಮ್ಮನಿಗೆ ಬರೀ 1 ವರ್ಷ. ಈ ಸನ್ನಿವೇಶದಲ್ಲಿ , ಗಂಡ, ಮಕ್ಕಳು, ವ್ಯವಸಾಯ- ಈ ಎಲ್ಲದರ ಜವಾಬ್ದಾರಿಯನ್ನೂ ತಾವೇ ಹೊರಲು ಲತಾ ನಿರ್ಧರಿಸಿದರು. ಈ ಸಂದರ್ಭದಲ್ಲಿ ದಿನವೂ ಅಮ್ಮನೊಂದಿಗೆ ಜಮೀನಿಗೆ ಹೋಗುತ್ತಿದ್ದ ಜ್ಯೋತ್ಸ್ನಾ, ಎಲ್ಲ ಕೆಲಸವನ್ನೂ ತಾನೂ ಕಲಿತಳು. 12 ವರ್ಷ ತುಂಬುವುದರೊಳಗೆ, ದ್ರಾಕ್ಷಿ ಬೆಳೆ ಕುರಿತ ಸಮಗ್ರ ಮಾಹಿತಿಯೂ ಜ್ಯೋತ್ಸ್ನಾಗೆ ಅರ್ಥವಾಗಿ ಹೋಗಿತ್ತು.

“ಶಾಲೆಗೆ ಹೋಗುವ ಮೊದಲು ಹಾಗೂ ಶಾಲೆ ಮುಗಿದ ನಂತರ ತೋಟಕ್ಕೆ ಹೋಗಿ ಕೃಷಿ ಕೆಲಸ ಮಾಡುವುದು ನನಗೆ ಅಭ್ಯಾಸ ಆಗಿ ಹೋಗಿತ್ತು. ಹೀಗೆ ಮಾಡಿದರೆ, ಅಮ್ಮನಿಗೂ ಕೆಲಸದ ಹೊರೆ ಕಡಿಮೆಯಾಗಿ ರಿಲ್ಯಾಕ್ಸ್‌ ಅನ್ನಿಸಬಹುದು ಎಂದುಕೊಂಡು ಪರೀಕ್ಷೆಯ ದಿನಗಳಲ್ಲೂ ತೋಟದ ಕೆಲಸ ಮಾಡಿದೆ’ ಎನ್ನುತ್ತಾಳೆ ಜ್ಯೋತ್ಸ್ನಾ.

Advertisement

“ಅಪ್ಪ ಮೊದಲಿನಂತೆ ಎದ್ದು ಓಡಾಡಲು ಏಳು ವರ್ಷ ಹಿಡಿಯಿತು. ಕಡೆಗೂ 2005ರಲ್ಲಿ ಅವರು ಸರಾಗವಾಗಿ ನಡೆಯುತ್ತಾ ತೋಟಕ್ಕೆ ಬಂದೇ ಬಿಟ್ಟರು. “ಸದ್ಯ. ನಮ್ಮ ಮನೆಯ ನೆಮ್ಮದಿ ಮರಳಿ ಬಂತು ಎಂದುಕೊಂಡು ತೋಟದ ಹೊಣೆಯನ್ನು ಅಪ್ಪನಿಗೆ ಒಪ್ಪಿಸಿ ನಿರಾಳರಾದೆವು. “ಎಂಜಿನಿಯರಿಂಗ್‌ನಲ್ಲಿ ಶಿಕ್ಷಣ ಪಡೆಯಲು ಹೆಚ್ಚಿನ ಪರ್ಸೆಂಟೇಜ್‌ ಬೇಕು. ಹಾಗಾಗಿ ವ್ಯಾಸಂಗದ ಕೆಡೆಗೆ ಹೆಚ್ಚು ಗಮನ ವಿರಲಿ’ ಎಂದು ಅಪ್ಪ ಕಿವಿಮಾತು ಹೇಳಿದರು ಎನ್ನುತ್ತಾಳೆ ಜ್ಯೋತ್ಸ್ನಾ.

2010ರಲ್ಲಿ ನಾಸಿಕ್‌ ಜಿಲ್ಲೆಯ ಅಷ್ಟೂ ದ್ರಾಕ್ಷಿ ಬೆಳೆಗಾರರನ್ನು ಅಕಾಲಿಕ ಮಳೆ ಇನ್ನಿಲ್ಲದಂತೆ ಕಾಡಿತು. ದ್ರಾಕ್ಷಿಯನ್ನು ಕೊಯ್ಲು ಮಾಡುವ ಸಮಯದಲ್ಲೇ ಭಾರೀ ಮಳೆ ಸುರಿದು ಬೆಳೆಯಲ್ಲಾ ಹಾಳಾಯಿತು. ಆ ಸಂದರ್ಭದಲ್ಲಿ ಬೆಳೆ ಉಳಿಸಿಕೊಳ್ಳಲು, ಮಳೆಯಿಂದ ಬೆಳೆಗೆ ರಕ್ಷಣೆ ಒದಗಿಸಲು, ಅಗತ್ಯ ವಸ್ತುಗಳನ್ನು ತರಲೆಂದು ವಿಜಯ್‌ ಸಿಟಿಗೆ ಹೋದರು. ಅಗತ್ಯವಿದ್ದ ಕೃಷಿ ಸಲಕರಣೆಗಳು ಮತ್ತು ಕೀಟನಾಶಕವನ್ನು ತರುತ್ತಿದ್ದಾಗಲೇ ಅನಾಹುತವಾಗಿ ಹೋಯಿತು.

ಮಳೆ ನೀರಿಂದ ನೆಲ ಒದ್ದೆಯಾಗಿತ್ತು. ಗೊಬ್ಬರದ ಮೂಟೆ ಹೊತ್ತುಕೊಂಡು ಹೋಗುತ್ತಿದ್ದ ವಿಜಯ್‌, ಕಾಲು ಜಾರಿ ಬಿದ್ದುಬಿಟ್ಟರು. ಆ ರಭಸಕ್ಕೆ, ಮೊದಲೇ ಪೆಟ್ಟಾಗಿದ್ದ ಜಾಗಕ್ಕೆ ಮತ್ತೆ ಏಟು ಬಿತ್ತು. ಪೆಟ್ಟಿನ ತೀವ್ರತೆ ಎಷ್ಟಿತ್ತೆಂದರೆ, ರಾತ್ರೋರಾತ್ರಿ ವಿಜಯ್‌ರನ್ನು ಐಸಿಯುಗೆ ಸೇರಿಸಲಾಯ್ತು.

ಕಗ್ಗತ್ತಲ ರಾತ್ರಿ, ಹೊರಗೆ ಜೋರು ಮಳೆ, ಅಪ್ಪ ಇನ್ನೂ ಬರಲಿಲ್ಲ ಎಂದು ಮಗಳೂ, ಯಜಮಾನರು ಯಾಕೆ ಇನ್ನೂ ಕಾಲ್‌ ಮಾಡಲಿಲ್ಲ ಎಂಬ ಆತಂಕದಲ್ಲಿ ಪತ್ನಿಯೂ ಇದ್ದಾಗಲೇ ಆಗಿರುವ ಅನಾಹುತದ ಸುದ್ದಿ ಮನೆ ತಲುಪಿತು. ಸುರಿವ ಮಳೆಯಲ್ಲೇ ಆಸ್ಪತ್ರೆಗೆ ಧಾವಿಸಿದರು ಲತಾ. ಪತ್ನಿಯನ್ನು ಕಂಡಾಕ್ಷಣ- “ನನಗೇನೂ ಆಗಿಲ್ಲ. ನನ್ನನ್ನು ನೋಡಿಕೊಳ್ಳಲು ಡಾಕ್ಟರ್ ಇದ್ದಾರೆ. ದ್ರಾಕ್ಷಿ ಬೆಳೆಯ ಗತಿ ಏನು? ವರ್ಷದ ಶ್ರಮಕ್ಕೆ ಪ್ರತಿಫ‌ಲ ಸಿಗುವ ಟೈಂ ಇದು. ರೋಗ ನಿಯಂತ್ರಿಸುವ ಔಷಧಿ ತಂದಿದ್ದೀನಿ. ದ್ರಾಕ್ಷಿ ನೆಲಕ್ಕೆ ಬಿದ್ದು ಹಾಳಾಗದಂತೆ ಕಾಪಾಡುವ ಮತ್ತನೆಯ ಶೀಟ್‌ಗಳನ್ನೂ ತಂದಿದ್ದೇನೆ. ನಾಳೆಯಿಂದಲೇ ಕೃಷಿ ಕೆಲಸ ಶುರು ಮಾಡಿ’ ಅಂದರಂತೆ ವಿಜಯ್‌.

ಆ ನಂತರದಲ್ಲಿ ಏನೇನಾಯಿತು ಎಂಬುದನ್ನು ಜ್ಯೋತ್ಸ್ನಾ ವಿವರಿಸುವುದು ಹೀಗೆ: ಅಪ್ಪ ಆಸ್ಪತ್ರೆ ಸೇರಿದ ಮೇಲೆ ತುಂಬಾ ಕಷ್ಟವಾಯ್ತು. ಅದುವರೆಗೂ ಬಿ.ಇ.ಗೆ ಸೇರಬೇಕು ಅಂದು ಕೊಂಡಿದ್ದವಳು, ಕಡಿಮೆ ಖರ್ಚಿನ ಕೋರ್ಸ್‌ ಮಾಡಲು ನಿರ್ಧರಿಸಿದೆ. ಕಂಪ್ಯೂಟರ್‌ ಎಂಜಿನಿಯರಿಂಗ್‌ ವಿಷಯದಲ್ಲಿಯೇ ಬಿ.ಎಸ್ಸಿಗೆ ಸೇರಿದೆ. ನಮ್ಮೂರು ಲೋನ್ವಾಡಿ ಪುಟ್ಟ ಗ್ರಾಮ. ಅಲ್ಲಿಂದ ಬಸ್‌ ಓಡಾಡುವ ಮುಖ್ಯರಸ್ತೆಗೆ ಎರಡು ಕಿ.ಮೀ. ದೂರವಿತ್ತು. ಅಲ್ಲಿಂದ ಕಾಲೇಜಿಗೆ 20 ಕಿ.ಮೀ. ದೂರವಿತ್ತು. ದಿನವೂ ಬೆಳಗ್ಗೆ ಐದೂ ವರೆಯಿಂದ 7 ಗಂಟೆಯವರಿಗೆ ತೋಟದ ಕೆಲಸ, ಆನಂತರ ಮನೆಗೆ ಬಂದು ಗಡಿಬಿಡಿಯಲ್ಲಿಯೇ ತಯಾರಾಗಿ ಕಾಲೇಜಿಗೆ ಹೋಗುವುದು, ಸಂಜೆ ಕಾಲೇಜಿಂದ ನೇರವಾಗಿ ತೋಟಕ್ಕೆ ಹೋಗಿ, ಸಂಜೆಯವರೆಗೂ ದುಡಿದು ಮನೆಗೆ ವಾಪಸ್ಸಾಗುವುದು ನನ್ನ ದಿನಚರಿ ಆಯಿತು.

ಇದಕ್ಕೂ ಮೊದಲು, ಅಂದರೆ ಆರೋಗ್ಯ ಚೆನ್ನಾಗಿದ್ದ ದಿನಗಳಲ್ಲಿ ಅಪ್ಪನೊಂದಿಗೆ ನಾನೂ ತೋಟಕ್ಕೆ ಹೋಗುತ್ತಿದ್ದೆನಲ್ಲ; ಆಗಲೇ ಟ್ರ್ಯಾಕ್ಟರ್‌ ಓಡಿಸುವುದನ್ನು ಟ್ರ್ಯಾಕ್ಟರ್‌ನಲ್ಲಿ ಉಳುಮೆ ಸೇರಿದಂತೆ ಎಲ್ಲ ಕೃಷಿ ಕೆಲಸ ಮಾಡುವುದನ್ನೂ ಅಪ್ಪ ಹೇಳಿಕೊಟ್ಟಿದ್ದರು. ಆಗೆಲ್ಲ ಅಪ್ಪನ ಮಾರ್ಗದರ್ಶನದಲ್ಲೇ ಕೆಲಸ ಮಾಡುತ್ತಿದ್ದೆ. ತಪ್ಪುಗಳು ಆದಾಗಲೆಲ್ಲ- “ನೋಡು, ಇಲ್ಲಿ ತಪ್ಪಾಗಿದೆ ಹೀಗೆ ಮಾಡಿದ್ರೆ ಬೆಳೆಗೂ ಭೂಮಿಗೂ ಪೆಟ್ಟು ಬೀಳುತ್ತೆ’ ಎಂದು ಅಪ್ಪ ಎಚ್ಚರಿಸುತ್ತಿದ್ದರು. ಆಗ ಕಲಿತಿದ್ದುದನ್ನು ಈಗ ಅಪ್ಪನ ಅನುಪಸ್ಥಿತಿಯಲ್ಲಿ ಪ್ರಯೋಗ ಮಾಡೇಬಿಡೋಣ ಅಂದುಕೊಂಡೆ. ಅದೊಂದು ದಿನ, ಆಸ್ಪತ್ರೆಯಲ್ಲಿ ಅಪ್ಪನಿಗೂ ವಿಷಯ ತಿಳಿಸಿದೆ. ಕೂಡಲೇ ಎದ್ದು ಕುಳಿತ ಅಪ್ಪ- ಟ್ರ್ಯಾಕ್ಟರ್‌ನ ಕ್ಲಚ್‌ ಎಲ್ಲಿರುತ್ತೆ? ಕೃಷಿ ಉಪಕರಣಗಳನ್ನು ಜೋಡಿಸುವಾಗ, ರಿವರ್ಸ್‌ ತಗೊಳ್ಳುವಾಗ ಟ್ರ್ಯಾಕ್ಟರ್‌ನ್ನು ಹೇಗೆ ಆಪರೇಟ್‌ ಮಾಡಬೇಕು ಎಂಬುದನ್ನು ಮತ್ತೆ ಮತ್ತೆ ವಿವರಿಸಿ ಹೇಳಿದರು. ಆನಂತರದಲ್ಲಿ, ದಿನವೂ ಅಪ್ಪನಿಂದ ಸಲಹೆ ಪಡೆಯುವುದು, ಮರುದಿನ ಅದನ್ನು ಕಾರ್ಯರೂಪಕ್ಕೆ ತರುವುದು ನನ್ನ ಕೆಲಸವಾಯಿತು. ಈ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫ‌ಲವೇ ಸಿಕ್ಕಿತು. ಒಳ್ಳೆಯ ಬೆಳೆ ಬಂತು. ಮಾರುಕಟ್ಟೆಯಲ್ಲಿ ಒಳ್ಳೆಯ ರೇಟೂ ಸಿಕ್ಕಿತು.

ಈ ನಡುವೆಯೇ ನನ್ನ ಮಾಸ್ಟರ್ಸ್‌ ಡಿಗ್ರಿ ಮುಗೀತು. ಕ್ಯಾಂಪಸ್‌ ಇಂಟರ್‌ವ್ಯೂನಲ್ಲಿ ಒಳ್ಳೆಯ ಸಂಬಳದ ಕೆಲಸವೂ ಸಿಕ್ಕಿತು. ಜಿಲ್ಲಾ ಕೇಂದ್ರವಾದ ನಾಸಿಕ್‌ನಲ್ಲಿ ಕೆಲಸ. ಸಾಫ್ಟ್ವೇರ್‌ ಎಂಜಿನಿಯರ್‌ ಅಂದಮೇಲೆ ವಿವರಿಸಿ ಹೇಳಬೇಕೆ? ಕೆಲವೊಮ್ಮೆ ಎರಡು ಮೂರು ಗಂಟೆ ಹೆಚ್ಚುವರಿಯಾಗಿ ದುಡಿಯಲೇ ಬೇಕಿತ್ತು. ಅದುವರೆಗೂ ಮನೆ, ತೋಟ, ಕಾಲೇಜು, ಆಸ್ಪತ್ರೆ ಇದಿಷ್ಟೇ ನನ್ನ ಪ್ರಪಂಚ ಎಂದು ಓಡಾಡಿಕೊಂಡಿದ್ದವಳಿಗೆ, ಇಡೀ ದಿನ ಕಂಪ್ಯೂಟರ್‌ ಮುಂದೆ ಕೂತು ದುಡಿಯುವುದು, ಟಾರ್ಗೆಟ್‌, ಪ್ರಮೋಷನ್‌, ಇನ್‌ಕ್ರಿಮೆಂಟ್‌, ಹೊಸ ಕಂಪನಿ ಎಂದೆಲ್ಲ ಯೋಚಿಸುವುದು ಕಷ್ಟ ಅನ್ನಿಸತೊಡಗಿತು. ಎಲ್ಲಕ್ಕಿಂತ ಹೆಚ್ಚಾಗಿ, ತೋಟವನ್ನು, ಅಲ್ಲಿನ ಪ್ರಶಾಂತ ವಾತಾವರಣವನ್ನು, ದ್ರಾಕ್ಷಿ ಗಿಡಗಳ ನಡುವೆ ಸುಂಯ್ಯನೆ ತೇಲಿ ಬಂದು ಮುದ ನೀಡುತ್ತಿದ್ದ ತಂಗಾಳಿಯನ್ನು “ಮಿಸ್‌’ ಮಾಡಿಕೊಳ್ಳುತ್ತಿದ್ದೇನೆ ಅನಿಸಿತು.

“ಅಪ್ಪ ಈಗಲೂ ಹಾಸಿಗೆಯಲ್ಲೇ ಇದ್ದಾರೆ. ಅಮ್ಮನಿಗೂ ವಯಸ್ಸಾಗಿದೆ. ತಮ್ಮನ ವಿದ್ಯಾಭ್ಯಾಸಕ್ಕೆ ಖರ್ಚು ಇದ್ದೇ ಇರುತ್ತದೆ. ಹಾಗಾಗಿ ಯಾವ ಕಾರಣಕ್ಕೂ ದುಡುಕಬೇಡ. ಹತ್ತು ಬಾರಿ ಯೋಚಿಸಿ, ಒಂದು ಹೆಜ್ಜೆ ಮುಂದಿಡು ಎಂದು ಒಳಮನಸ್ಸು ಎಚ್ಚರಿಸಿತು. ಮನಸಿನ ಮಾತಿಗೆ ಕಿವಿಗೊಟ್ಟೆ. ಭವಿಷ್ಯದಲ್ಲಿ ತೊಂದರೆ ಎದುರಾದರೆ,

ಅಂಥ ಸಂದರ್ಭಕ್ಕಿರಲಿ ಎಂದು ತಮ್ಮನ ವಿದ್ಯಾಭ್ಯಾಸಕ್ಕೆ, ಮನೆ ಖರ್ಚಿಗೆ, ಅಪ್ಪನಿಗೆ ಬೇಕಿರುವ ಔಷಧಿಗೆ, ತುರ್ತು ಸಂದರ್ಭದ ಅಗತ್ಯಕ್ಕೆ ಎಂದಿಲ್ಲಾ ಒಂದಷ್ಟು ಹಣವನ್ನು ಕೊಡಿಟ್ಟೆ. ನಂತರ, ಒಂದೆರಡು ವರ್ಷದ
ಮಟ್ಟಿಗೆ ಯಾರ ಸಹಾಯ ಇಲ್ಲದಿದ್ದರೂ ನೆಮ್ಮದಿಯಿಂದ ಬದುಕಬಹುದು ಎಂಬುದನ್ನು ಎರಡೆರಡು ಬಾರಿ ಗ್ಯಾರಂಟಿ ಮಾಡಿ ಕೊಂಡು ಕಡೆಗೊಮ್ಮೆ ಸಾಫ್ಟ್ವೇರ್‌ ಎಂಜಿನಿಯರ್‌ ಕೆಲಸಕ್ಕೆ ಗುಡ್‌ಬೈ ಹೇಳಿದೆ. ಅಲ್ಲಿಂದ ಸೀದಾ, ದ್ರಾಕ್ಷಿ ತೋಟಕ್ಕೆ ನಡೆದುಬಂದೆ.

ಹೊಸ ಕೆಲಸದಲ್ಲಿ ಟಾರ್ಗೆಟ್‌, ಡೆಡ್‌ಲೈನ್‌,ಪ್ರಮೋಷನ್‌, ಡಿಸ್ಮಿಸ್‌, ಇನ್‌ಕ್ರಿಮೆಂಟ್‌… ಇಂಥ ಯಾವ ರಗಳೆಯೂ ಇರಲಿಲ್ಲ. ಹಾಗೆಯೇ ಕೃಷಿ ಕೆಲಸ “ಸಖತ್‌ ಈಸಿ’ಯೂ ಇರಲಿಲ್ಲ. ದ್ರಾಕ್ಷಿ ಬೆಳೆಗೆ ಸಾಕಷ್ಟು ನೀರು ಬೇಕು. ಕುಗ್ರಾಮದಲ್ಲಿ ಕೃಷಿ ಕೆಲಸ ಅಂದರೆ ಕೇಳಬೇಕೆ?ಬೋರ್‌ನಿಂದ ನೀರೆತ್ತಲು ಕರೆಂಟೇ ಇರುತ್ತಿರಲಿಲ್ಲ. ಹೆಚ್ಚಿನ ದಿನಗಳಲ್ಲಿ ರಾತ್ರಿಯ ಹೊತ್ತು, ಅದೂ ಏನು.? ಮಧ್ಯರಾತ್ರಿಯ ವೇಳೆ ಕರೆಂಟ್‌ ಬರುತ್ತಿತ್ತು. ಇದ್ದ ಕೆಲಸಕ್ಕೆ ಗುಡ್‌ಬೈ ಹೇಳಿ, ಕೃಷಿ ಕೆಲಸಕ್ಕೆ ಧುಮುಕಿದ್ದಾಗಿದೆ. ಎಷ್ಟೇ ಕಷ್ಟವಾದರೂ ಇಲ್ಲಿಯೇ ಏನಾದರೂ ಸಾಧಿಸಬೇಕು ಎಂದು ನನಗೆ ನಾನೇ ಹೇಳಿಕೊಂಡೆ. ನಂತರ, ತಮ್ಮನನ್ನು ಜೊತೆ ಮಾಡಿಕೊಂಡು ತೋಟದ ಮನೆಯಲ್ಲೇ ಉಳಿದುಕೊಂಡೆ. ನಡುರಾತ್ರಿ ಕರೆಂಟ್‌ ಬಂದ ತಕ್ಷಣ ದಡಬಡಿಸಿ ಎದ್ದು ಬೆಳೆಗೆ ನೀರು ಹಾಯಿಸುವುದು ನಮ್ಮ ಕೆಲಸವಾಯಿತು.

ನಮ್ಮ ಪರಿಶ್ರಮ ವ್ಯರ್ಥವಾಗಲಿಲ್ಲ. ಆರು ತಿಂಗಳ ಅವಧಿಯಲ್ಲಿ ದ್ರಾಕ್ಷಿ ಗಿಡಗಳು ಗಟ್ಟಿಯಾಗಿ ನಿಂತವು. ನೋಡನೋಡುತ್ತಲೇ ದ್ರಾಕ್ಷಿ ಹಣ್ಣಿನ ಗೊನೆಯೂ ಕಾಣಿಸಿಕೊಂಡಿತು. ಸಾಮಾನ್ಯವಾಗಿ ಒಂದು ಜೊಂಪೆಯಲ್ಲಿ 15-20 ಹಣ್ಣು ಇರ್ತವಂತೆ. ಆದರೆ, ಈ ಬಾರಿ ಮಾತ್ರ ಒಂದೊಂದು ಜೊಂಪೆಯಲ್ಲಿ 25 ರಿಂದ 30 ಹಣ್ಣುಗಳು ಸಿಕ್ಕವು. ಅದೃಷ್ಟವೆಂಬಂತೆ, 2108ರಲ್ಲಿ ಹೀಗೆ ಬೆಳೆ ಬಂದಾಗ, ದ್ರಾಕ್ಷಿಗೆ ಒಳ್ಳೆಯ ಮಾರುಕಟ್ಟೆಯೂ ಇತ್ತು. ನಂಬಿದರೆ ನಂಬಿ ಬಿಟ್ರೆ ಬಿಡಿ: ಸಾಫ್ಟ್ವೇರ್‌ ಎಂಜಿಯರ್‌ ಆಗಿ ಸಂಪಾದಿಸ್ತಾ ಇದ್ದೆನಲ್ಲ; ಅದ ಕ್ಕಿಂತ ಎರಡಲ್ಲ, ಮೂರು ಪಟ್ಟು ಹೆಚ್ಚಿನ ಹಣವನ್ನು ದ್ರಾಕ್ಷಿ ಬೆಳೆಯಿಂದ ಪಡೆದುಕೊಂಡೆ. ಇದನ್ನು ಗಮನಿಸಿದ ರಾಜ್ಯ ಸರ್ಕಾರ, ಅದೇ ವರ್ಷ “ಶ್ರೇಷ್ಠ ಕೃಷಿ ಸಾಧಕಿ’ ಪ್ರಶಸ್ತಿ ನೀಡಿ ಗೌರವಿಸಿತು…’ ಹೀಗೆಲ್ಲಾ ವಿವರಿಸುವಾಗ ಜ್ಯೋತ್ಸ್ನಾರ ಕಂಗಳಲ್ಲಿ ಸಾರ್ಥಕಭಾವದ ಮಿಂಚು.
***
ಮಕ್ಕಳಿಗೆ ಎಲ್ಲ ಪೋಷಕರೂ ಕೃಷಿ ಕೆಲಸ ಹೇಳಿಕೊಡ್ತಾರಲ್ಲ; ಹಾಗೆಯೇ ನಾನೂ ಹೇಳಿಕೊಟ್ಟಿದ್ದೆ. ಆದರೆ, ಅದನ್ನೇ ವೃತ್ತಿಯಾಗಿ ತಗೊಂಡು ಮಗಳು ಸಾಧನೆ ಮಾಡಬಹುದು ಎಂಬ ಕನಸೂ ನಮ ಗಿರಲಿಲ್ಲ. ಕೃಷಿಯಲ್ಲಿ ಅವಳು ನಮ್ಮನ್ನೆಲ್ಲ ಹಿಂದೆ ಹಾಕಿದ್ದಾಳೆ. ಈಗ, ಬಹುಬೆಳೆ ಪದ್ಧತಿಯ ಕೃಷಿಗೂ ಮುಂದಾಗಿದ್ದಾಳೆ. ಅವಳ ತಂದೆ ಅಂತ ಹೇಳಿಕೊಳ್ಳಲು ನನಗೆ ಹೆಮ್ಮೆ ಅನ್ನುತ್ತಾರೆ ವಿಜಯ್‌ ದೌಂಡ್‌. ಜ್ಯೋತ್ಸ್ನಾಳಂಥ ಮಗಳು ಊರಿಗೊಬ್ಬರು ಇರಬಾರದೆ?

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next