Advertisement

ಡ್ರೋನ್‌ ಮೂಲಕ ಕೊರೊನಾ ಲಸಿಕೆ ಯಶಸ್ವಿ ರವಾನೆ

10:10 AM Nov 14, 2021 | Team Udayavani |

ಬೆಂಗಳೂರು: ಪ್ರತಿಷ್ಠಿತ ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರೀಸ್‌ (ಎನ್‌ಎಎಲ್‌) ಶನಿವಾರ ನಗರದ ಹೊರವಲಯದಲ್ಲಿ ಕೋವಿಡ್‌-19 ಲಸಿಕೆಗಳನ್ನು ಡ್ರೋನ್‌ ಮೂಲಕ ಯಶಸ್ವಿಯಾಗಿ ಸಾಗಣೆ ಮಾಡಿತು. ಸುಮಾರು 50 ವಯಲ್ಸ್‌ ಕೋವಿಡ್‌ ಲಸಿಕೆಗಳು ಹಾಗೂ ಅದಕ್ಕೆ ಬೇಕಾದ ಚುಚ್ಚುಮದ್ದುಗಳನ್ನು ಹೊತ್ತ ಡ್ರೋನ್‌, ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಯಶಸ್ವಿಯಾಗಿ ರವಾನಿಸಿತು.

Advertisement

ಸ್ವತಃ ಎನ್‌ಎಎಲ್‌ ಅಭಿವೃದ್ಧಿಪಡಿಸಿದ “ಅಕ್ಟಾಕಾಫ್ಟರ್‌’ ಡ್ರೋನ್‌ ಅನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಿಜಿಸಿಎ ಅನುಮತಿ ಪಡೆದು ಸಾಗಣೆ ಮಾಡಲಾಯಿತು. ಅಕ್ಟಾಕಾಫ್ಟರ್‌ ಬೆಳಗ್ಗೆ 9.43ಕ್ಕೆ ಚಂದ್ರಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕೋವಿಡ್‌ ಲಸಿಕೆಯನ್ನು ವಿಶೇಷವಾದ ಕಂಟೈನರ್‌ನಲ್ಲಿ ತುಂಬಿಸಿಕೊಂಡು 7 ಕಿ.ಮೀ. ದೂರದಲ್ಲಿರುವ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೇವಲ 10 ನಿಮಿಷಗಳಲ್ಲಿ ತಲುಪಿಸಿತು.

ಲಸಿಕೆ ತಲುಪಿಸಿದ ಡ್ರೋನ್‌, ಬಳಿಕ ಮತ್ತೆ ಚಂದಾಪುರಕ್ಕೆ ವಾಪಾಸ್‌ ಆಯಿತು. ಈ ಇಡೀ ಪ್ರಕ್ರಿಯೆ ಕೇವಲ 20 ನಿಮಿಷದಲ್ಲಿ ಮುಕ್ತಾಯಗೊಂಡಿತು. ಭೂಮಿ ಯಿಂದ 300 ಮೀಟರ್‌ ಎತ್ತರದಿಂದ ಸೆಕೆಂಡ್‌ಗೆ ಹತ್ತು ಮೀಟರ್‌ ವೇಗದಲ್ಲಿ ಡ್ರೋನ್‌ ಈ 14 ಕಿ.ಮೀ. (ಹೋಗಿ-ಬರುವ) ಅನ್ನು ಕ್ರಮಿಸಿತು. ಸಾಮಾನ್ಯವಾಗಿ ರಸ್ತೆ ಮೂಲಕ ರಸ್ತೆ ಮಾರ್ಗದಲ್ಲಿ ಚಂದ್ರಾಪುರದಿಂದ ಹಾರಗದ್ದೆಗೆ ಲಸಿಕೆ ಸಾಗಿಸಲು 30ರಿಂದ 40 ನಿಮಿಷ ಸಮಯ ಬೇಕಾಗುತ್ತದೆ.

ಇದನ್ನೂ ಓದಿ:- ದೇಶದಲ್ಲಿ 11,271 ಹೊಸ ಕೋವಿಡ್ ಪ್ರಕರಣಗಳು ಪತ್ತೆ; ಕೇರಳದಲ್ಲೇ 6,468 ಪ್ರಕರಣಗಳು!

ಡ್ರೋನ್‌ ಮೂಲಕ ವೇಗ ಮತ್ತು ಸುರಕ್ಷಿತವಾಗಿ ಲಸಿಕೆ ರವಾನೆಯಾಗಿದ್ದು, ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿಗೆ ಸಂತಸ ತಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿ ಡಾ. ಮನೀಷಾ ಹರ್ಷ ವ್ಯಕ್ತಪಡಿಸಿದರು.

Advertisement

ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಸಿಎಸ್‌ಐಆರ್‌-ಎನ್‌ಎಲ್‌ನ ಮಾನವರಹಿತ ಏರಿಯಲ್‌ ವಾಹನ ವಿಭಾಗದ ಮುಖ್ಯಸ್ಥ ಡಾ.ಪಿ.ವಿ. ಸತ್ಯನಾರಾಯಣ ಮೂರ್ತಿ, ದೂರದ ಪ್ರದೇಶಗಳಿಗೆ ಸಕಾಲದಲ್ಲಿ ಲಸಿಕೆ ತಲುಪಿಸಲು ಈ ಡ್ರೋನ್‌ ಸಹಕಾರಿಯಾಗಿದೆ. ಗುಡ್ಡಗಾಡು ಪ್ರದೇಶಗಳು, ರಸ್ತೆ ಸಂಪರ್ಕ ಇಲ್ಲದಿರುವ ಅನೇಕ ಹಳ್ಳಿಗಳು, ಲಸಿಕೆ ಶೇಖರಣೆ ವ್ಯವಸ್ಥೆ ಇಲ್ಲದ ಊರುಗಳು ಸಾಕಷ್ಟಿವೆ.

ಅಂತಹ ಕಡೆಗಳಲ್ಲಿ ಈ ಡ್ರೋನ್‌ ಅನುಕೂಲ ಆಗಲಿದೆ. ಅಷ್ಟೇ ಅಲ್ಲ, ಬೆಂಗಳೂರಿನಂತಹ ಅತಿಹೆಚ್ಚು ವಾಹ ನದಟ್ಟಣೆ ಇರುವ ಪ್ರದೇಶಗಳಲ್ಲೂ ಉಪಯುಕ್ತ ವಾಗಿದೆ. ಆದರೆ, ಇದಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸೇರಿದಂತೆ ಹಲವು ಅನುಮತಿ ಗಳು ಅತ್ಯಗತ್ಯ ಎಂದು ಹೇಳಿದರು. ಅಕ್ಟಾಕಾಫ್ಟರ್‌ ಡ್ರೋನ್‌ 20 ಕೆಜಿ ಸಾಮಗ್ರಿಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಒಳಗೊಂಡಿದ್ದು, ಗಂಟೆಗೆ 36 ಕಿ.ಮೀ. ವೇಗದಲ್ಲಿ ಸತತ 40 ನಿಮಿಷ ಹಾರಾಟ ನಡೆಸುತ್ತದೆ.

ಇದನ್ನು ಕೃಷಿ ನಿರ್ವಹಣೆ, ಕೀಟ ಸಿಂಪಡಣೆ, ಗಣಿಗಾರಿಕೆ ಸಮೀಕ್ಷೆ, ಔಷಧ, ಲಸಿಕೆ, ಮಾನವನ ಅಂಗಾಂ ಗಗಳ ಸಾಗಣೆ ಸೇರಿದಂತೆ ಹಲವು ಉದ್ದೇಶಗಳಿಗೂ ಬಳಸಬಹುದು. ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್‌, ಆನೇಕಲ್‌ ತಾಲೂಕು ಆರೋಗ್ಯಾಧಿಕಾರಿ ಡಾ.ವಿನಯ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next