ಮುಂಡರಗಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತವಾಗಿರುವ ಕಪ್ಪತ್ತಗುಡ್ಡವನ್ನು ರಾಜ್ಯ ಸರಕಾರದ ಅರಣ್ಯ, ಜೀವವೈವಿಧ್ಯತೆ, ಪರಿಸರ ಇಲಾಖೆಯಿಂದ ವನ್ಯಜೀವಿಧಾಮವಾಗಿ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇದರಿಂದ ಕಪ್ಪತ್ತಗುಡ್ಡ ಉಳುವಿಗಾಗಿ ನಡೆದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. ಇದು ಪರಿಸರ ಪ್ರೇಮಿಗಳಲ್ಲಿ ಸಂತೋಷದ ವಾತಾವರಣ ಸೃಷ್ಟಿಸಿದೆ.
ಹಲವು ದಶಕಗಳಿಂದ ಕಪ್ಪತ್ತಗುಡ್ಡದ ಜೌಷಧೀಯ ಸಸ್ಯ, ಜೀವವೈಧ್ಯತೆ, ಪರಿಸರ ಉಳಿಸಲು ಲಿಂಗೈಕ್ಯ ಡಾ| ತೋಂಟದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕಪ್ಪತ್ತಗುಡ್ಡದ ಹೋರಾಟಗಳು ನಡೆದಿತ್ತು. ಗದಗ ಭಾಗ ಸೇರಿದಂತೆ ರಾಜ್ಯದ ಹಲವಾರು ಪರಿಸರವಾದಿಗಳು ಭಾಗವಹಿಸಿದ್ದರು. ಇವರೆಲ್ಲರ ಪರಿಸರ ಹೋರಾಟ ತಾತ್ವೀಕ ಸುಖಾಂತ್ಯ ಕಂಡಂತಾಗಿದೆ.
ಕರ್ನಾಟಕ ಸರಕಾರದ ಅರಣ್ಯ, ಜೀವವೈವಿಧ್ಯತೆ, ಪರಿಸರ ಇಲಾಖೆ ಅಧಿಧೀನ ಕಾರ್ಯದರ್ಶಿ ಕೆ.ಆರ್. ರಮೇಶ ಅವರು ರಾಜ್ಯಪಾಲರ ಆದೇಶದ ಮೇರೆಗೆ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವಾಗಿ ಘೋಷಣೆ ಮಾಡಿ ಮೇ 16ರಂದು ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಕಪ್ಪತ್ತಗುಡ್ಡ ವನ್ಯಜೀವಿಧಾಮವು ರಾಜ್ಯದ ಸೆಕ್ಷನ್-26-ಎ(1)(ಬಿ)ಯ ವನ್ಯಜೀವಿ (ರಕ್ಷಣೆ) ಕಾಯ್ದೆ-1972ರನ್ವಯ ತಿದ್ದುಪಡಿ (2006). ಕೇಂದ್ರ ಕಾಯ್ದೆ-53ರ -1972ರನ್ವಯವಾಗಿ ಸೇಡ್ಯೂಲ್-1ರ ಪ್ರಕಾರ ಕಪ್ಪತ್ತಗುಡ್ಡ ವನ್ಯಜೀವಿಧಾಮವಾಗಿ ಘೋಷಣೆ ಮಾಡಲಾಗಿದೆ.
ಕಪ್ಪತ್ತಗುಡ್ಡ ವನ್ಯಜೀವಿಧಾಮದ ಪರಿಕಲ್ಪನೆ: ಜ. 9ರಂದು ರಾಜ್ಯ ವನ್ಯಜೀವಿ ಮಂಡಳಿಯ 11ನೇ ಸಭೆಯು ರಾಜ್ಯದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದಾಗ ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಮುಂದುವರೆದಂತೆ ಕಪ್ಪತ್ತಗುಡ್ಡ ವನ್ಯಜೀವಿಧಾಮವಾಗಿ ಘೋಷಿಸಲ್ಪಟ್ಟಿತ್ತು. ಕಪ್ಪತ್ತಗುಡ್ಡವು ಜೀವವೈವಿಧ್ಯತೆ, ಅಪರೂಪದ ಸಸ್ಯಗಳು ಹಾಗೂ ಜೌಷಧೀಯ ಸಸ್ಯಗಳು ರಕ್ಷಿಸಬೇಕು. ಕಪ್ಪತ್ತಗುಡ್ಡದ ವನ್ಯಜೀವಿಧಾಮವು ಪರಿಸರದ ಜೀವಿವೈವಿಧ್ಯತೆ ಸೂಕ್ಷ ್ಮ ಪ್ರದೇಶವಾಗಿದೆ. ಜೀವವೈವಿಧ್ಯತೆಯ ಸಸ್ಯ ಸಂಪತ್ತು, ಅಮೂಲ್ಯ ಹಾಗೂ ವಿಶಿಷ್ಟತೆಯಿಂದ ಕೂಡಿದೆ. ಈ ವಿಶಿಷ್ಟವಾದ ಪರಿಸರ ವೈವಿಧ್ಯತೆಯನ್ನು ಮಾನವ ಸಮಾಜದ ಮುಂದಿನ ಪೀಳಿಗೆಗಾಗಿ ಕಾಯ್ದಿಡಲು ಸಂರಕ್ಷಣೆ ಮಾಡಬೇಕಿದೆ. ಜೀವವೈವಿಧ್ಯತೆ, ಸಸ್ಯವೈವಿಧ್ಯತೆ ಸಂಪತ್ತು ನಾಶವಾಗದಂತೆ ಕಾಪಾಡಬೇಕೆಂದು ಕಪ್ಪತ್ತಗುಡ್ಡ ವನ್ಯಜೀವಿಧಾಮ ಘೋಷಣೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಕಂದಾಯ ಗ್ರಾಮಗಳು ವ್ಯಾಪ್ತಿಯಲ್ಲಿಲ್ಲ: ಕಪ್ಪತ್ತಗುಡ್ಡದ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಗದಗ, ಶಿರಹಟ್ಟಿ, ಮುಂಡರಗಿ ಭಾಗದ ಯಾವುದೇ ಕಂದಾಯ ಗ್ರಾಮಗಳು, ಪಟ್ಟಾ ಜಮೀನುಗಳು, ಕಂದಾಯ ಜಮೀನುಗಳು ಒಳಪಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಲಾಗಿದೆ.
ಜೊತೆಗೆ ಕಪ್ಪತ್ತಗುಡ್ಡದ ವನ್ಯಜೀವಿಧಾಮದ ವ್ಯಾಪ್ತಿಯು ಗದಗ, ಶಿರಹಟ್ಟಿ, ಮುಂಡರಗಿ ಸೇರಿದಂತೆ 24415.73 ಹೆಕ್ಟೇರ್ ಅಥವಾ 244.15 ಕಿಮೀ ಒಳಗೊಂಡಿದೆ. ಇದರಿಂದ ಈ ಭಾಗದ ಕಪ್ಪತ್ತಗುಡ್ಡದ ಪ್ರದೇಶದ ಸಂರಕ್ಷಣೆಯಲ್ಲಿ ಒಂದು ದೊಡ್ಡಮಟ್ಟದ ಬದಲಾವಣೆಯನ್ನು ಭವಿಷ್ಯದ ದಿನಗಳಲ್ಲಿ ಕಾಣಬಹುದಾಗಿದೆ. ಜೊತೆಗೆ ಕಪ್ಪತ್ತಗುಡ್ಡದ ಅಪರೂಪದ ಸಸ್ಯಗಳು, ಚಿರತೆ, ಕತ್ತೆ ಕಿರುಬ, ಜಿಂಕೆ,ನವಿಲುಗಳು, ಕಾಡು ಹಂದಿಗಳು ಸೇರಿದಂತೆ ಈ ಪರಿಸರದಲ್ಲಿರುವ ಪ್ರತಿಜೀವಿಗಳಿಗೆ ಬದುಕಲು ಮುಕ್ತವಾದ ವಾತಾವರಣವು ಪ್ರಾಪ್ತಿಯಾಗಲಿದೆ.
.ಹು.ಬಾ. ವಡ್ಡಟ್ಟಿ