ಬೆಂಗಳೂರು: ಇತ್ತೀಚೆಗೆ ದುರ್ಘಟನೆಯೊಂದರಲ್ಲಿ ತುಂಡಾಗಿ ಚರ್ಮದೊಂದಿಗೆ ನೇತಾಡುತ್ತಿದ್ದ ವ್ಯಕ್ತಿಯೊಬ್ಬರ ಮೊಣಕೈ ಅನ್ನು ಹಾಸ್ಮಾಟ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಿದ್ದಾರೆ.
ಈ ಕುರಿತು ಆಸ್ಪತ್ರೆಯ ಸಿಎಂಡಿ ಮತ್ತು ಆರ್ಥೋಪೆಡಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಥಾಮಸ್ ಚಾಂಡಿ ಅವರು ಮಾತನಾಡಿ, ಶಿವಾಜಿನಗರದ ಮೊಯಿನ್ ಖುರೇಷಿ ಎಂಬವರು ಬಲ ಮೊಣಕೈ ತುಂಡಾದ ಸ್ಥಿತಿಯಲ್ಲಿ ಹಾಸ್ಮಾಟ್ ಆಸ್ಪತ್ರೆಗೆ ಬಂದಿದ್ದರು. ಅಂದು ಅವರ ಕೈನ ರಕ್ತನಾಳಗಳು, ನರಗಳು, ಮಾಂಸಖಂಡಗಳು, ಸ್ನಾಯುರಜ್ಜುಗಳು ಪೂರ್ಣ ಪ್ರಮಾಣದಲ್ಲಿ ತುಂಡಾಗಿದ್ದವು. ಮೂಳೆ ಮುರಿದು ಚರ್ಮದ ಸಹಾಯದಿಂದ ನೇತಾಡುತ್ತಿತ್ತು.
ಹಾಸ್ಮಾಟ್ ತಜ್ಞರಾದ ಡಾ.ಕಣ್ಣನ್ ಕುಮಾರ್, ಟ್ರಾಮಾ ತಜ್ಞ ಡಾ.ರವಿಶಂಕರ್, ಅರಿವಳಿಕೆ ತಜ್ಞ ಡಾ.ಮಾರಿಯನ್ ಕೆಲ್ವಿನ್ ಮನೋಜ್ ಹಾಗೂ ನಾನ್ನನ್ನು ಒಳಗೊಂಡ ತಂಡ ಸತತ ಮೂರು ಗಂಟೆ ಕಾಲ ತುರ್ತು ಶಸ್ತ್ರಚಿಕಿತ್ಸೆ ನಡೆಸಿದೆವು. ಶಸ್ತ್ರಚಿಕಿತ್ಸೆಗೆ ವಿಶೇಷ ಆಪರೇಟಿಂಗ್ ಮೈಕ್ರೋಸ್ಕೋಪ್ ಬಳಸಿ, ರಕ್ತನಾಳಗಳು, ನರಗಳು, ಸ್ನಾಯುಗಳ ತುದಿಗಳನ್ನು ಸರಿಪಡಿಸಿ ಪುನಃ ಜೋಡಿಸಲಾಯಿತು. ಮುರಿದ ಮೂಳೆಯನ್ನು ಪ್ಲೇಟ್ ಮತ್ತು ಸೂðಗಳಿಂದ ಸರಿಪಡಿ ಸಿದ್ದು, ಮಣಿಕಟ್ಟಿನ ಜಾಯಿಂಟ್‌ಗೆ ಬಾಹ್ಯ ಫಿಕ್ಸೆಟರ್ ಬಳಸಲಾಯಿತು. ಇದರ ಜತೆಯಲ್ಲಿ ರೋಗಿಯ ಎಡ ಭಾಗದ ತೊಡೆ ಹಾಗೂ ಇತರ ಭಾಗಗಳಲ್ಲಿ ಆಗಿದ್ದ ತೀವ್ರ ಸ್ವರೂಪದ ಗಾಯಗಳನ್ನು ಸಹ ಗುಣ ಪಡಿಸಲಾಯಿತು ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ (ಜು.21) ಮೊಣಕೈಗೆ ಹಾಕಿದ್ದ ಪ್ಲೇಟ್ ತೆಗೆದು ಮೊಣಕೈ, ಮಣಿಕಟ್ಟು, ಬೆರಳುಗಳ ಸ್ಥಿತಿಯನ್ನು ಪರೀಕ್ಷಿಸಿದ್ದು, ಎಲ್ಲವೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ ಎಂದ ಹೇಳಿದರು. ಸಂಧಿವಾತ, ಆರ್ಥೋಪೆಡಿಕ್ಸ್, ನ್ಪೋರ್ಟ್ಸ್ ಮೆಡಿಸಿನ್, ಮೂಳೆಮುರಿತ ಮುಂತಾದ ಚಿಕಿತ್ಸೆಗಳಿಗೆ ಹಾಸ್ಮಾಟ್ ಆಸ್ಪತ್ರೆ ಹೆಸರಾಗಿದೆ.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಅಜಿತ್ ಬೆನೆಡಿಕ್ಟ್ ಅವರು ಮಾತನಾಡಿ, ನಮ್ಮಲ್ಲಿನ ತಜ್ಞ ವೈದ್ಯರು, ಸಿಬ್ಬಂದಿ ಹಾಗೂ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಹಾಗೂ ಆ ಕ್ಷಣದಲ್ಲಿ ನಮ್ಮ ವೈದ್ಯರು ತೆಗೆದುಕೊಂಡ ದಿಟ್ಟ ನಿರ್ಧಾರ ಈ ಯಶಸ್ಸಿಗೆ ಕಾರಣ ಎಂದರು.