Advertisement
ಬೆಳಗಾದರೆ ಜಗತ್ತಿನ ಎಲ್ಲರನ್ನೂ ಎಬ್ಬಿಸುವವನು ಸೂರ್ಯನೊಬ್ಬನೇ. ನಾವೂ ಕಣ್ಣುಜ್ಜಿಕೊಳ್ಳುತ್ತೇವೆ, ಇಲ್ಲೆಲ್ಲೋ ಸುದೀಪ್, ಅಲ್ಲೆಲ್ಲೋ ವಿರಾಟ್ ಕೊಹ್ಲಿ, ಇನ್ನೆಲ್ಲೋ ನರೇಂದ್ರ ಮೋದಿ, ಪ್ರಪಂಚದ ತುದಿಯಲ್ಲೆಲ್ಲೋ ಬಿಲ್‌ಗೇಟ್ಸ್, ಬರಾಕ್ ಒಬಾಮ… ಇವರೆಲ್ಲರೂ ನಮ್ಮಂತೆಯೇ ಕಣ್ಣುಜ್ಜಿಕೊಳ್ಳುವರು. ಕನ್ನಡಿಯ ಮುಂದೆ ನಿಂತು, ಹಲ್ಲುಜ್ಜಿಕೊಳ್ಳುವರು. ಬೆಳಗ್ಗಿನ ವಿಧಿವಿಧಾನಗಳ ಹೊರತಾಗಿ ಅಲ್ಲಿಂದಾಚೆಗೆ ಪ್ರತಿಯೊಬ್ಬರ ಕೆಲಸಗಳೂ ಬದಲಾಗುತ್ತವೆ. ನಡೆಯುವ ಹಾದಿಗಳು ಕವಲೊಡೆಯುತ್ತವೆ. ವಿಭಿನ್ನ ಕನಸುಗಳನ್ನು ಚೇಸ್ ಮಾಡಲು ಹೊರಡುತ್ತೇವೆ. ಟೈಮ್ ಓಡುತ್ತಲೇ ಇರುತ್ತೆ. ನಾವೂ ಅದರೊಟ್ಟಿಗೇ ಸಾಗುತ್ತೇವೆ. ಮೇಲೆ ಪ್ರಸ್ತಾಪಿಸಿದ ಗಣ್ಯರೂ ಓಡುತ್ತಾರೆ. ಆದರೆ, ಅಂತಿಮವಾಗಿ ಯಶಸ್ಸು ಅನ್ನೋದು ನಮ್ಮ ಕೈಗೆ ಸಿಕ್ಕಿರೋದಿಲ್ಲ. ಅವರೆಲ್ಲರ ಖಾತೆಯೊಳಗೆ ಯಶಸ್ಸು ಹೋಗಿ ಕೂತಿರುತ್ತೆ! ಅವರಷ್ಟೇ ಗುರಿ ಮುಟ್ಟಿರುತ್ತಾರೆ!ಎಷ್ಟೋ ಸಲ ಹಾಗನ್ನಿಸುತ್ತದೆ; “ಯಶಸ್ವೀ ಪುರುಷರ ದಿನ ಹೊಳಪೇರಿಸಿಕೊಂಡು, ನಮ್ಮ ದಿನ ಕಳೆಗುಂದುವುದೇಕೆ?’
Related Articles
Advertisement
ಬಹುಶಃ ಈ ವಿಚಾರದಲ್ಲಿ ಅರ್ನೆಸ್ಟ್ ಹಮ್ಮಿಂಗ್ವೇ ನಿಮ್ಮನ್ನು ತಟ್ಟಿ ಎಬ್ಬಿಸುತ್ತಾನೆ. ಅವನು ಕಾಡುವ ಕತೆಗಳನ್ನು ಕೊಟ್ಟ ಹೆಸರಾಂತ ಇಂಗ್ಲಿಷ್ ಸಾಹಿತಿ. ಅವನು ಜೀವಮಾನವಿಡೀ ಬರೆದ ಕತೆ, ಕಾದಂಬರಿ, ಪತ್ರಗಳನ್ನು ಓದಲು ನಮಗೆ ವರುಷವೂ ಸಾಲದು. ಆದರೆ, ಆತ ಹೀಗೆ ಬರೆಯಲು ದಿನವಿಡೀ ಕೂರುತ್ತಿರಲಿಲ್ಲ. ಚಿಕಾಗೋ, ಪ್ಯಾರಿಸ್, ಕ್ಯೂಬಾ, ಚೀನಾ, ಸ್ಪೇನ್ ಎನ್ನುತ್ತಾ ಅವನು, ಬೆಕ್ಕು ವಾಸಸ್ಥಳ ಬದಲಿಸಿದಂತೆ ಹೋದಲ್ಲೆಲ್ಲ ಬೆಟ್ಟದ ಮೇಲೆಯೇ ಮನೆ ಕಟ್ಟಿಕೊಳ್ಳುತ್ತಿದ್ದ. ಕಾರಣ, ಸೂರ್ಯ ಹುಟ್ಟುವುದನ್ನು ನೋಡಲು. ಬೆಳಗ್ಗೆ ಸೂರ್ಯ ಏಳುವ ಮೊದಲೇ ಎದ್ದು, ಟೈಪ್‌ರೈಟರ್ ಮುಂದೆ ಕುಳಿತು ಪೂರ್ವ ದಿಗಂತವನ್ನು ನೋಡುತ್ತಿದ್ದ. ಆತ ಕತೆ- ಕಾದಂಬರಿ ಬರೆಯುತ್ತಿದ್ದುದೇ ಬೆಳಗ್ಗಿನ ಫ್ರೆಶ್ ಮೂಡ್‌ನಲ್ಲಿ. ಎರಡೂವರೆ- ಮೂರು ತಾಸು ಬರವಣಿಗೆ. ಉಳಿದಂತೆ ಇಡೀ ದಿನ ಆತ ಬರೆಯುತ್ತಿರಲಿಲ್ಲ! ಸುತ್ತಾಡುತ್ತಿದ್ದ. ಅನುಭವ ದಕ್ಕಿಸಿಕೊಳ್ಳುತ್ತಿದ್ದ. ಮುಂಜಾನೆಯ ಆ ದಿನಚರಿಯೇ ಆತನನ್ನು ಜಗತ್ತಿನ ಹೆಸರಾಂತ ಕಾದಂಬರಿಕಾರನನ್ನಾಗಿಸಿತು.
ಎಲ್ಲ ಯಶಸ್ವೀ ಪುರುಷರಿಗೆ ಎನರ್ಜಿ ನೀಡುವುದೇ ಬೆಳಗ್ಗೆ. ಸ್ಟೀವ್ ಜಾಬ್ಸ್ ಹೇಳುವ ಹಾಗೆ, “ಪ್ರತಿ ದಿನ ಮುಂಜಾನೆ ಕನ್ನಡಿ ಮುಂದೆ ನಿಂತು, ಇದೇ ನನ್ನ ಕೊನೆಯ ದಿನ. ಇವತ್ತೇ ವಿಶೇಷವಾದುದ್ದನ್ನು ನಾನು ಮಾಡಬೇಕು’ ಎನ್ನುವ ಹಠ ತೊಟ್ಟಾಗಲೇ, ಅವರಂಥದ್ದೇ ಸಾಧನೆಯ ರೆಕ್ಕೆಗಳು ನಮ್ಮಲ್ಲೂ ಮೂಡಲು ಸಾಧ್ಯ. ನಿಮ್ಮನ್ನು ಗಟ್ಟಿಗೊಳಿಸುವ, ನಿಮಗೆ ಪ್ರಬುದ್ಧತೆಯ ಹೊಳಪು ನೀಡುವ ಯಾವುದೇ ಕೆಲಸವನ್ನು ಬೆಳಗ್ಗೆ ಒಂದು ತಾಸು ಮಾಡಿದರೆ ನೀವು ಅಲ್ಲಿ ಗೆದ್ದಂತೆ. ಮಿಕ್ಕ ಇಪ್ಪತೂ¾ರು ತಾಸುಗಳನ್ನು ಮುನ್ನಡೆಸಲು ಆ ಒಂದು ತಾಸು ಸಾಕು! ಪ್ರತಿ ಮುಂಜಾನೆಯಲ್ಲಿ ನಿಮ್ಮ ಆಸಕ್ತಿ ಕ್ಷೇತ್ರವನ್ನು ಪೋಷಿಸುತ್ತಾ ಬಂದರೆ, ಮುಂದೊಂದು ದಿನ ಅದೇ ಆಸಕ್ತಿ ನಿಮ್ಮನ್ನು ಪೋಷಿಸುತ್ತದೆ. ನೀವು ಗೆಲ್ಲುವ ತನಕ, ಗುರಿ ಮುಟ್ಟುವ ತನಕ, ಅದೇ ನಿಮಗೆ ಡ್ರಾಪ್ ಕೊಡುತ್ತದೆ.
ಯಶಸ್ವೀ ಪುರುಷರ ಗುಟ್ಟೂ ಅದೇ. ಅವರೆಂದೂ ಮುಂಜಾವನ್ನು ಕಾಲಹರಣಕ್ಕೆ ಬಳಸಿಕೊಳ್ಳುವುದಿಲ್ಲ. ಸಂಕಲ್ಪದ ಗುಂಗಿನಲ್ಲೇ ಇರುತ್ತಾರೆ. ಇಡೀ ದಿನದ ಅವರ ಶೇ.50ರಷ್ಟು ಕೆಲಸ ಒಂದು ಮುಂಜಾವಿನಲ್ಲೇ ಆಗಿಹೋಗುತ್ತದೆ. ಬೇಕಿದ್ದರೆ, ನಾಳೆಯಿಂದಲೇ ಅಂಥ ಬೆಳಗ್ಗೆಯನ್ನು ನೀವು ಅಡಾಪ್ಟ್ ಮಾಡಿಕೊಳ್ಳಿ. ಮುಂದೊಂದು ದಿನ ಯಶಸ್ವೀ ವ್ಯಕ್ತಿಗಳ ಸಾಲಿನಲ್ಲಿ ನೀವಿರುತ್ತೀರಿ.
ಯಶಸ್ವೀ ವ್ಯಕ್ತಿಗಳ ಮುಂಜಾನೆ ಹೀಗಿರುತ್ತೆ!1. ನರೇಂದ್ರ ಮೋದಿ, ಪ್ರಧಾನಿ
ಏಳ್ಳೋದು: ಬೆಳಗ್ಗೆ 5ಕ್ಕೆ
ರಾತ್ರಿ ಮಲಗೋದು 12 ಅಥವಾ 1 ಗಂಟೆ. ನಾಲ್ಕೈದು ತಾಸು ನಿದ್ದೆ. 15 ನಿಮಿಷದಲ್ಲಿ ಫ್ರೆಶ್‌ಅಪ್ ಆಗಿ, ಯೋಗ- ಪ್ರಾಣಾಯಾಮದಲ್ಲಿ 1 ತಾಸು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಪ್ರಮುಖ ಪತ್ರಿಕೆಗಳನ್ನು ಓದುತ್ತಾರೆ. ಅದಾಗಲೇ ವಿವಿಧ ಅಧಿಕಾರಿಗಳಿಗೆ ಪ್ರಧಾನಿ ಅವರಿಂದ ಫೋನ್ ಹೋಗಿರುತ್ತೆ. ಮೋದಿ ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಆರೆಸ್ಸೆಸ್‌ನ ದಿನಗಳಿಂದಲೇ ರೂಢಿಸಿಕೊಂಡವರು. 2. ಶಿವರಾಜ್ ಕುಮಾರ್, ನಟ
ಏಳ್ಳೋದು: ಬೆಳಗ್ಗೆ 5ಕ್ಕೆ
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ 8 ಕಿ.ಮೀ. ವಾಕಿಂಗ್ ಮಾಡ್ತಾರೆ. ನಂತರ ಮನೆಗೆ ಬಂದಾಗ ಕೂಡಲೇ ಒಂದಿಷ್ಟು ಎಕ್ಸರ್‌ಸೈಜ್. ಸ್ನಾನ ಮುಂಗಿದ ಕೂಡಲೇ ದೇವರಪೂಜೆ. ನಂತರ ದಿನಪತ್ರಿಕೆ ಓದಿ, ಅಪ್‌ಡೇಟ್ ಆಗ್ತಾರೆ. ಶೂಟಿಂಗ್‌ನಲ್ಲಿ ಎಂಥದ್ದೇ ಕಠಿಣ ದೃಶ್ಯದ ಚಿತ್ರೀಕರಣವಿರಲಿ, ಶಿವಣ್ಣ ಈ ವಯಸ್ಸಿನಲ್ಲೂ ಜೋಶ್‌ಫುಲ್ಲಾಗಿಯೇ ಪಾಲ್ಗೊಳ್ತಾರೆ. ಸೆಂಚುರಿ ಸ್ಟಾರ್ ಅವರನ್ನು ಹೀಗೆ ರೀಚಾರ್ಜ್ ಮಾಡೋದು ಅದೇ ಮುಂಜಾನೆ. 3. ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಏಳ್ಳೋದು: ಬೆಳಗ್ಗೆ 5ಕ್ಕೆ
ರಾತ್ರಿ ಮಲಗೋದೇ 12- 1 ಗಂಟೆಗೆ! ಬೆಳಗ್ಗೆ ಏಳ್ಳೋದು 5 ಗಂಟೆ! ನಾಲ್ಕೈದು ತಾಸು ನಿದ್ರೆ ಮುಗಿಸಿ, 1 ತಾಸು ಯೋಗ ಮಾಡ್ತಾರೆ. 6 ಗಂಟೆಯಷ್ಟೊತ್ತಿಗೆ ಮನೆಗೆ ಬಂದ ನೂರಾರು ಜನರ ಸಮಸ್ಯೆ ಆಲಿಸುತ್ತಾರೆ. ಅದಾದಮೇಲೆ ಅಷ್ಟೂ ಕನ್ನಡ- ಇಂಗ್ಲಿಷ್ ಪತ್ರಿಕೆಗಳನ್ನು ಓದುತ್ತಾರೆ. ಇಡೀ ದಿನ ರಾಜ್ಯ ಸುತ್ತಿದರೂ ಗೌಡರಿಗೆ ಆಯಾಸ ಆಗದೇ ಇರಲು ಮುಂಜಾನೆಯ ಯೋಗಾಭ್ಯಾಸವೇ ಕಾರಣ. 4. ವಿಜಯ ಸಂಕೇಶ್ವರ, ಉದ್ಯಮಿ
ಏಳ್ಳೋದು: ಬೆಳಗ್ಗೆ 4.30ಕ್ಕೆ
ಕೇವಲ ಅರ್ಧ ತಾಸಿನಲ್ಲಿ ರೆಡಿ ಆಗ್ತಾರೆ. 5 ಗಂಟೆಗೆ ಇವರ ಉದ್ಯಮದ ಕೆಲಸಗಳು ಶುರುವಾಗುತ್ತವೆ. “ನನ್ನ ಪ್ರತಿಸ್ಪರ್ಧಿಗಳು ಮುಂಜಾನೆ 6 ಗಂಟೆಯಿಂದ ಕೆಲಸ ಆರಂಭಿಸುತ್ತಾರೆ. ಆದರೆ, ನಾನು ಅವರಿಗಿಂತ ಒಂದು ತಾಸು ಮೊದಲೇ ಕೆಲಸ ಶುರುಮಾಡುತ್ತೇನೆ. ಅವರಿಗಿಂತ ಒಂದು ತಾಸು ಹೆಚ್ಚು ಕೆಲಸ ಮಾಡಿರುತ್ತೇನೆ. ಇದೇ ನನ್ನ ಯಶಸ್ಸಿನ ಗುಟ್ಟು’ ಎನ್ನುತ್ತಾರವರು. 5. ವಿರಾಟ್ ಕೊಹ್ಲಿ, ಕ್ರಿಕೆಟಿಗ
ಏಳ್ಳೋದು: ಬೆಳಗ್ಗೆ 5ಕ್ಕೆ
6 ಗಂಟೆಯೊಳಗೆ ತಯಾರಾಗಿ, ಅವರು ಕಾರ್ಡಿಯೋ ಎಕ್ಸರ್‌ಸೈಜ್‌ಗೆ ಸಿದ್ಧರಾಗಿರುತ್ತಾರೆ. ಸ್ನಾಯುಗಳ ಬಲವರ್ಧನೆಗೆ ಪೂರಕ ವ್ಯಾಯಾಮ ಮಾಡ್ತಾರೆ. ಇದರಿಂದ ಬ್ಯಾಟಿಂಗ್‌ಗೆ ನೆರವಾಗುತ್ತದೆ ಅನ್ನೋದು ವಿರಾಟ್ ನಂಬಿಕೆ. ನಂತರ ಒಂದಿಷ್ಟು ನೆಟ್ ಪ್ರಾಕ್ಟೀಸ್. ಬೌಲರ್‌ಗಳ ಎಸೆತದ ತಂತ್ರಗಳ ವಿಡಿಯೋಗಳನ್ನು ನೋಡ್ತಾರೆ. ಈ ಕೆಲ್ಸವನ್ನು ವಿರಾಟ್ ಮುಗಿಸೋದು ಬೆಳಗ್ಗೆ 9ರೊಳಗೆ! 6. ಮುಖೇಶ್ ಅಂಬಾನಿ
ಏಳ್ಳೋದು: ಬೆಳಗ್ಗೆ 5ಕ್ಕೆ
ಇವರದ್ದು ಕೂಡ ನಾಲ್ಕು ತಾಸು ನಿದ್ದೆ. 5.30ರ ವೇಳೆಗೆ ಮನೆಯ 2ನೇ ಫ್ಲೋರ್‌ನಲ್ಲಿರುವ ಜಿಮ್‌ನಲ್ಲಿ ಶಾರೀರಿಕ ಅಭ್ಯಾಸ ನಡೆಸುತ್ತಾರೆ. ನಂತರ ಅರ್ಧ ತಾಸು ಈಜುತ್ತಾರೆ. 7 ಗಂಟೆ ಒಳಗೆ ಎಲ್ಲ ದಿನಪತ್ರಿಕೆಗಳನ್ನು ಓದಿ ಮುಗಿಸಿರುತ್ತಾರೆ. 8 ಗಂಟೆಯೊಳಗೆ ಮುಖೇಶ್ ಅಂಬಾನಿ ತಮ್ಮ ಕಚೇರಿಯನ್ನು ತಲುಪಿರುತ್ತಾರೆ. – ನವೀನ್ ಕುಮಾರ್