ಪಡುಬಿದ್ರಿ: ಪಡುಬಿದ್ರಿಯ ಕಾಡಿಪಟ್ಣ ಬಳಿ ಕಡಲ ತೀರದಲ್ಲಿ ಮಗುಚಿಬಿದ್ದ ಸ್ಥಿತಿಯಲ್ಲಿ ಪತ್ತೆಯಾದ ಅಲಯನ್ಸ್ ಟಗ್ ಮೇಲಕ್ಕೆತ್ತುವ ಕಾರ್ಯಾಚರಣೆ ಕೊನೆಗೂ ಸಫಲವಾಗಿದ್ದು,ಟಗ್ಗಿನ ಒಳಭಾಗದಲ್ಲಿ ನಾಪತ್ತೆಯಾದ ಮೂವರು ಸಿಬ್ಬಂದಿಗಳ ದೇಹಗಳ ಶೋಧನೆ ಕಾರ್ಯಾಚರಣೆ ನಡೆಯುತ್ತಿದೆ.
ಮೇ 15 ರಂದು ಸಮುದ್ರದಲ್ಲಿ ಮುಳುಗಿ ಪಡುಬಿದ್ರಿ ಯಲ್ಲಿ ಪತ್ತೆಯಾದ ಈ ಟಗ್ ತೆರವು ಕಾರ್ಯಾಚರಣೆ ಕಳೆದ 5 ದಿನಗಳಿಂದ ನಡೆಯುತ್ತಿದ್ದು,ಯಂತ್ರಗಳ ಕೊರತೆ ಹಾಗು ತಾಂತ್ರಿಕ ದೋಷಗಳಿಂದ ಕಾರ್ಯಾಚರಣೆ ವಿಫಲವಾಗಿತ್ತು.ಈ ಹಿನ್ನೆಲೆ ಕಳೆದ ಭಾನುವಾರ ಪಡುಬಿದ್ರಿ ಕಾಡಿಪಟ್ಣದ ವಿಷ್ಣು ಭಜನಾ ಮಂಡಳಿಯಲ್ಲಿ ಶಾಸಕ ಲಾಲಾಜಿ ಆರ್ ಮೆಂಡನೆ,ಮಾಜಿ ಜಿ.ಪಂ ಶಶಿಕಾಂತ್ ಪಡುಬಿದ್ರಿ, ಎಂ ಆರ್ ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ,ಬಿಲಾಲ್ ನೇತ್ರತ್ವದ ಬದ್ರಿಯಾ ಹಾಗು ಯೋಜಕ ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯರಿದ್ದ ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಜಂಟಿ ಕಾರ್ಯಾಚರಣೆಗೆ ಸೂಚನೆ ನೀಡಿದ್ದರು.
ಸೋಮವಾರ ಬೆಳಿಗ್ಗಿನಿಂದಲೇ ಹೆಚ್ಚುವರಿ ಯಂತ್ರಗಳ ಸಹಾಯದಿಂದ ತೆರವು ಕಾರ್ಯಾಚರಣೆ ಎಲ್ಲಾ ಸಿದ್ದತೆಗಳನ್ನು ನಡೆಸಲಾಗಿದ್ದು,ಮಂಗಳವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಪ್ರಾರಂಭಿಸಿ ಮಗುಚಿ ಬಿದ್ದ ಟಗ್ ಸರಿ ನಿಲ್ಲಿಸುವಲ್ಲಿ ಯಶಸ್ಸು ಕಂಡಿದೆ.
ಮೂವರು ಸಿಬ್ಬಂದಿಗಳ ದೇಹಗಳ ಶೋಧನೆ:
ಟಗ್ ಮಗುಚಿ ಬಿದ್ದ ಸಂದರ್ಭ ಅದರಲ್ಲಿದ್ದ 8 ಜನರಲ್ಲಿ ಮೂವರು ಸಾಹಸಿಕ ಈಜಿನ ಮೂಲಕ ಕಟಪಾಡಿಯ ಮಟ್ಟು ಸಮೀಪ ದಡ ಸೇರಿದ್ದು, ಇಬ್ಬರ ಶವ ಪಡುಬಿದ್ರಿ ಎರ್ಮಾಳು ಕಡಲ ತೀರದಲ್ಲಿ ಪತ್ತೆಯಾಗಿತ್ತು.ಮಂಗಳವಾರ ಟಗ್ ಮೇಲಕ್ಕೆತ್ತುವ ಸಂದರ್ಭ ಟಗ್ಗಿನ ಒಳಭಾಗದಲ್ಲಿ ಉಳಿದ ಮೂವರು ಸಿಬ್ಬಂದಿಗಳ ದೇಹಗಳು ಇರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಈ ಬಗ್ಗೆ ಶೋಧನೆ ನಡೆಯುತ್ತಿವೆ.