Advertisement

ಜಿಲ್ಲೆಯ 100 ಕಡೆ ಯಶಸ್ವಿ ಅನುಷ್ಠಾನ; ಪರಿಸರ ಸ್ನೇಹಿ ಶೌಚಾಲಯ

11:24 PM Sep 20, 2019 | Sriram |

ಉಡುಪಿ: ಜಿಲ್ಲೆಯ ಮನೆಗಳಿಗೆ ಸುಸ್ಥಿರ ನೈರ್ಮಲ್ಯವನ್ನು ಖಾತ್ರಿಪಡಿಸುವ ಪ್ರಯತ್ನದಲ್ಲಿ, ಪೈಲಟ್‌ ಯೋಜನೆಯಡಿ ಉಚಿತವಾಗಿ ವೊರ್ಮ್ ಟಾಯ್ಲೆಟ್ಸ್‌ ಪರಿಸರ ಸ್ನೇಹಿ ಶೌಚಾಲಯದ ಹೊಂಡಗಳನ್ನು ರೂಪಿಸುವ ಯೋಜನೆಗಳನ್ನು ಸ್ವಚ್ಛ ಭಾರತ್‌ ಮಿಷನ್‌ ಜಾರಿಗೆ ತಂದಿದ್ದು, ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.

Advertisement

ಈ ಯೋಜನೆಗಾಗಿ 10 ಲ.ರೂ.ಗಳನ್ನು ಮೀಸಲಿರಿಸಲಾಗಿದ್ದು, ಒಟ್ಟು 100 ಕಡೆಗಳನ್ನು ಅನುಷ್ಠಾನಗೊಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಅದರಂತೆ ಆರು ತಿಂಗಳೊಳಗೆ ಕಾರ್ಕಳ ತಾಲೂಕಿನ ಕಡ್ತಲದಲ್ಲಿ 50 ಮನೆಗಳಿಗೆ, ಉಡುಪಿ ತಾಲೂಕಿನ ಅಂಬಲಪಾಡಿಯಲ್ಲಿ 10 ಮನೆಗಳಿಗೆ, ಕುಂದಾಪುರ ತಾಲೂಕಿನ ಹಂಗಳೂರಿನಲ್ಲಿ 20 ಮನೆಗಳಿಗೆ, ಬಸೂÅರಿನಲ್ಲಿ 10 ಮನೆ, ಹೊಸಾಡುವಿನಲ್ಲಿ 10 ಮನೆಗಳಿಗೆ ಅಳವಡಿಸಲಾಗಿದೆ.

ಆರು ತಿಂಗಳು ನಿಗಾ
ಸಾಮಾನ್ಯ ಟಾಯ್ಲೆಟ್‌ಗಳಲ್ಲಿ ಪಿಟ್‌ ಶೌಚಾಲಯಗಳು ಮತ್ತು ಸೆಪ್ಟಿಕ್‌ ಟ್ಯಾಂಕ್‌ಗಳಿಂದ ಉತ್ಪತ್ತಿಯಾಗುವ ಮಲ ಕೆಸರನ್ನು ಸಂಸ್ಕರಿಸಿಸುವುದು ಮತ್ತು ವಿಲೇವಾರಿ ಮಾಡುವುದು ಸವಾಲಿನ ಕೆಲಸವಾಗಿರುತ್ತದೆ.

ಶೌಚಾಲಯವನ್ನು ಸಂಸ್ಕರಣಾ ಘಟಕಕ್ಕೆ ಜೋಡಿಸುವ ಯಾವುದೇ ಒಳಚರಂಡಿ ಪೈಪ್‌ಲೈನ್‌ಗಳಿಲ್ಲದಿದ್ದರೆ ತೊಂದರೆ ಹೆಚ್ಚಾಗುತ್ತದೆ. ಆದರೆ ಇದು ಹಾಗಲ್ಲ. ಇದರಲ್ಲಿ ಹಾಕಿರುವ ಹುಳಗಳು ಪ್ರಕೃತಿಯ ಶ್ರೇಷ್ಠ ಚಯಾಪಚಯಕಾರಕಗಳಾಗಿ ಮಾನವ ತ್ಯಾಜ್ಯವನ್ನು ಮಣ್ಣಿನ ಪೋಷಕಾಂಶಗಳಾಗಿ ಪರಿವರ್ತಿಸುತ್ತವೆ. ಮನೆಗಳ ಶೌಚಾಲಯಗಳಿಗೆ ಈ ಮಾದರಿಯ ಟಾಯ್ಲೆಟ್‌ಗಳನ್ನು ಅಳವಡಿಸಿದ ಅನಂತರ 6 ತಿಂಗಳುಗಳ ಕಾಲ ನಿಗಾ ಇರಿಸುವ ಕೆಲಸವೂ ನಡೆಯುತ್ತದೆ.

ಏನಿದು ಟೈಗರ್‌ ವೋರ್ಮ್ ಟಾಯ್ಲೆಟ್ಸ್‌?
ಶೌಚ ಗುಂಡಿಗಳು ಸಾಮಾನ್ಯವಾಗಿ 8ರಿಂದ 9 ಅಡಿಗಳಷ್ಟು ಆಳವಿರುತ್ತವೆ. ಆದರೆ ಈ ಮಾದರಿಯಲ್ಲಿ ಕೇವಲ 4 ಅಡಿ ಮಾತ್ರ ಆಳವಿರುತ್ತದೆ. ಅನಂತರ ರಿಂಗ್‌ಗಳನ್ನು ಅಳವಡಿಸಿ ಇದ್ದಿಲು, ಜಲ್ಲಿಕಲ್ಲುಗಳನ್ನು ಹಾಕಿ ಅನಂತರ ಈ ಟೈಗರ್‌ ವೋರ್ಮ್ಗಳನ್ನು ಹಾಕಲಾಗುತ್ತದೆ. ಈ ಹುಳಗಳು ಎಣ್ಣೆ ಹುಳಗಳ ಒಂದು ಜಾತಿಯಾಗಿದ್ದು, ಮಾನವ ತ್ಯಾಜ್ಯವನ್ನು ಮಣ್ಣಿನ ಪೋಷಕಾಂಶಗಳಾಗಿ ಪರಿವರ್ತಿಸುತ್ತವೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಅಲ್ಲದೆ ಸಾಮಾನ್ಯ ಶೌಚ ಗುಂಡಿಗಳ ಪಕ್ಕದಲ್ಲಿ ಬಾವಿ ಇದ್ದರೆ ಅದು ಮಾಲಿನ್ಯವಾಗುವ ಸಾಧ್ಯತೆಗಳೇ ಹೆಚ್ಚಿರುತ್ತವೆ. ಈ ತಂತ್ರಜ್ಞಾನದಿಂದ ಅಂತಹ ಯಾವುದೇ ಪರಿಣಾಮ ಇರುವುದಿಲ್ಲ.

Advertisement

ಕಾಂಪೋಸ್ಟ್‌ ಆಗಿ ಪರಿವರ್ತನೆ
ಈಗಾಗಲೇ ಅಳವಡಿಸಲಾದ ಹೊಂಡಗಳು ಇತರ ಸಾಮಾನ್ಯ ಶೌಚಾಲಯಗಳಂತೆ ಕಾಣುತ್ತವೆ. ಆದರೆ ಅವು ಕೆಳಭಾಗದಲ್ಲಿ ಹುಳಗಳಿಂದ ತುಂಬಿದ ಫಿಲ್ಟರ್‌ ಬೆಡ್‌ ಹೊಂದಿರುತ್ತವೆ. ತ್ಯಾಜ್ಯವನ್ನು ನೀರು, ಇಂಗಾಲದ ಡೈಆಕ್ಸೆ„ಡ್‌ ಮತ್ತು ಕಾಂಪೋಸ್ಟ್‌ ಆಗಿ ಪರಿವರ್ತಿಸುವ ಮೂಲಕ ಸಂಸ್ಕರಿಸುತ್ತವೆ. ಈ ಪ್ರಕ್ರಿಯೆಯಲ್ಲಿ ರೋಗಕಾರಕ ಕ್ರಿಮಿಗಳು ಇಲ್ಲವಾಗುತ್ತವೆ. ಇಲ್ಲಿ ವಹಿಸಬೇಕಾದ ಕಾಳಜಿ ಎಂದರೆ ಕ್ರಿಮಿನಾಶಕ ಲಿಕ್ವಿಡ್‌ಗಳದ್ದು. ಅತೀ ಮಾರಕ ಎನಿಸುವಂತಹ ಲಿಕ್ವಿಡ್‌ಗಳನ್ನು ಶೌಚಾಲಯಕ್ಕೆ ಬಳಸಿದರೆ ಹುಳಗಳು ಸಾಯುವ ಸಾಧ್ಯತೆ ಇರುತ್ತವೆ. ಆದ್ದರಿಂದ ಪರಿಸರಪೂರಕ/ ಸಾವಯವ ಕ್ರಿಮಿನಾಶಕಗಳನ್ನು ಬಳಸಿದರೆ ಉತ್ತಮ.

ಉತ್ತಮ ಯೋಜನೆ
ಗ್ರಾಮ ಪಂಚಾಯತ್‌ ವತಿಯಿಂದ ಉಚಿತವಾಗಿ ನಿರ್ಮಿಸಿಕೊಟ್ಟಿದ್ದಾರೆ. ಈ ಯೋಜನೆಯಿಂದ ಬಹಳಷ್ಟು ಲಾಭವಾಗಿದೆ. ನೆರೆಹೊರೆಯಲ್ಲಿ ಅನೇಕ ಮನೆಗಳಿರುವುದರಿಂದ ಬಾವಿಯಲ್ಲಿ ನೀರಿನ ಮಾಲಿನ್ಯ ಉಂಟಾಗುತ್ತಿತ್ತು. ಈಗ ಆ ಸಮಸ್ಯೆ ಕಾಣುತ್ತಿಲ್ಲ.
– ಪುಷ್ಪಾ ಬಾಯಿ,
ಫ‌ಲಾನುಭವಿ, ಕಡ್ತಲ ಗ್ರಾಮ

ಹಾನಿ ತಡೆ ಉದ್ದೇಶ
ಈಗಾಗಲೇ ಜಿಲ್ಲೆಯಾದ್ಯಂತ 100 ಮನೆಗಳಿಗೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಜನರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾನ್ಯ ಶೌಚಗುಂಡಿಗಳಿಂದ ಸಮೀಪದ ಬಾವಿ, ಪರಿಸರಕ್ಕೆ ಆಗುವ ಹಾನಿಯನ್ನು ತಡೆಗಟ್ಟಲು ಟೈಗರ್‌ ವಾರ್ಮ್ ಟಾಯ್ಲೆಟ್‌ಗಳಿಂದ ಸಾಧ್ಯವಿದೆ.
– ಶ್ರೀನಿವಾಸ ರಾವ್‌,
ನೋಡಲ್‌ ಅಧಿಕಾರಿ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next