ಮಹಾನಗರ, ಮೇ 12: ‘ವೈವಿಧ್ಯತೆಯ ಸಂಭ್ರಮ’ ಶೀರ್ಷಿಕೆಯೊಂದಿಗೆ ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವವು ಸಂಸ್ಥೆಯ ಸಭಾಂಗಣದಲ್ಲಿ ಜರಗಿತು.
ರಂಗಭೂಮಿ, ಚಿತ್ರನಟ ಅರವಿಂದ ಬೋಳಾರ್ ಮಾತನಾಡಿ, ನಾವು ನಮ್ಮ ಜೀವನದಲ್ಲಿ ಯಾವುದೇ ಕೆಲಸವನ್ನು ಆಸಕ್ತಿಯಿಟ್ಟು ಮಾಡಿದರೆ ಖಂಡಿತವಾಗಿ ಯಶಸ್ಸು ಸಾಧ್ಯ ಹಾಗೆಯೇ ನಮಗೆ ಜನ್ಮಕೊಟ್ಟ ನಮ್ಮ ಹೆತ್ತವರು ಮತ್ತು ವಿದ್ಯೆಕೊಟ್ಟ ಸಂಸ್ಥೆಯನ್ನು ನಾವು ಯಾವತ್ತೂ ಮರೆಯಬಾರದು ಎಂದು ಹೇಳಿದರು.
ಸಮ್ಮಾನ:
ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ನಿರ್ಗಮಿಸುತ್ತಿರುವ ವಂ| ಮೆಲ್ವಿನ್ ಲೋಬೋ ಎಸ್.ಜೆ. ಅವರನ್ನು ಸಮ್ಮಾನಿಸಲಾಯಿತು. ನೂತನ ನಿರ್ದೇಶಕರಾಗಿ ಅಧಿಕಾರ ವಹಿಸುತ್ತಿರುವ ವಂ| ಸಿರಿಲ್ ಡಿಮೆಲ್ಲೊ ಎಸ್.ಜೆ. ಅವರನ್ನು ಪರಿಚಯಿಸಿ ತಮ್ಮ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಶೈಕ್ಷಣಿಕ ವರ್ಷದಲ್ಲಿ, ಕ್ರೀಡಾ ಸಾಧನೆ ಮಾಡಿದ ವಿಜೇತರಿಗೆ ಮತ್ತು ತರಬೇತಿಯಲ್ಲಿ ಉತ್ತಮ ಸಾಧನೆಗೈದ ತರಬೇತಿದಾರರಿಗೆ ಬಹುಮಾನ ವಿತರಿಸಲಾಯಿತು.
ಸಂತ ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ವಂ| ಡಯ್ನಾಶಿಯಸ್ ವಾಜ್ ಎಸ್.ಜೆ. ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ವಂ| ಮೆಲ್ವಿನ್ ಲೋಬೋ ಎಸ್.ಜೆ. ನೂತನ ನಿರ್ದೇಶಕ ವಂ| ಸಿರಿಲ್ ಡಿಮೆಲ್ಲೊ ಎಸ್.ಜೆ., ಪ್ರಾಂಶುಪಾಲ ವಿನ್ಸೆಂಟ್ ಮೆಂಡೋನ್ಸಾ, ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ರಸ್ಕೀನ್ಹಾ, ಕಾರ್ಯಕ್ರಮ ಸಂಯೋಜಕ ವಿಲ್ಸನ್ ಎನ್. ಮತ್ತು ವಿದ್ಯಾರ್ಥಿ ಪರಿಷತ್ ನಾಯಕ ಮಹಮ್ಮದ್ ಶಮೀರ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ವಿನ್ಸೆಂಟ್ ಮೆಂಡೋನ್ಸಾ ಸ್ವಾಗತಿಸಿದರು. ವಿದ್ಯಾರ್ಥಿ ಗ್ಯಾರಲ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ವಿಲ್ಸನ್ ವಂದಿಸಿದರು. ಈ ಪ್ರಯುಕ್ತ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು.