Advertisement

ಯಶಸ್ವಿ ವ್ಯವಸಾಯ- ವಲಸಿಗನ ಬದುಕು ಸಿಹಿಯಾಗಿಸಿದ ಕಬ್ಬು

06:08 PM Oct 28, 2024 | Team Udayavani |

ಉದಯವಾಣಿ ಸಮಾಚಾರ
ಕುಷ್ಟಗಿ; ದುಡಿಮೆಯನ್ನು ನಂಬಿದ ರೈತ ತಿಪ್ಪಣ್ಣ ಹಡಪದ ಕುಟುಂಬಕ್ಕೆ ಕಬ್ಬು ಕೃಷಿ ಖುಷಿ ಕೊಟ್ಟಿದೆ. ಕಳೆದ 9 ವರ್ಷಗಳಿಂದ ಏಕರೂಪದ ವಾಣಿಜ್ಯ ಬೆಳೆ ಕಬ್ಬಿನ ಗುಣಧರ್ಮದಂತೆ ಬದುಕನ್ನು ಸಿಹಿಯಾಗಿಸಿದೆ. ತಾಲೂಕಿನ ತಳವಗೇರಾ ಗ್ರಾಮದಿಂದ ಬ್ಯಾಲಿಹಾಳ, ಬೆಂಚಮಟ್ಟಿ ರಸ್ತೆಯಲ್ಲಿ ರಸ್ತೆಗೆ ಹೊಂದಿಕೊಂಡಿರುವ ರೈತ ತಿಪ್ಪಣ್ಣ ಹಡಪದ ಅವರ ಕಬ್ಬು ಬೆಳೆ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವುದು ಕಾಣಬಹುದಾಗಿದೆ. ಇದು 3ನೇ ಕುಳೆ ಕಬ್ಬು ಬೆಳೆ ಆಗಿದ್ದರೂ ಇದೇ ಮೊದಲ ಬೆಳೆಯಂತಿದೆ.

Advertisement

ಕೇವಲ ಆರೇಳು ತಿಂಗಳಿಗೆ ಕಬ್ಬು ಜೊಲ್ಲೆ ಅಂದಾಜು 10ರಿಂದ 12 ಅಡಿಯಷ್ಟು ಬೆಳೆದು ನಿಂತಿದೆ. ಈ ಬೆಳೆ ಮಾರ್ಚ್‌ ತಿಂಗಳಲ್ಲಿ ಕಟಾವಿಗೆ ಬರುತ್ತಿದ್ದರೂ, ಈಗಾಗಲೇ ಇಷ್ಟು ಎತ್ತರ ಬೆಳೆದಿರುವುದು ಈ ರಸ್ತೆಯಲ್ಲಿ ಸಂಚರಿಸುವವರ ಆಕರ್ಷಿಸುತ್ತಿದೆ. ಮೂರನೇಯ ಕುಳೆಯಾಗಿದ್ದರೂ ಹೊಳೆ ಸಾಲ ಕಬ್ಬನ್ನು ಮೀರಿಸುವಂತಿದೆ. ಈ ಕಬ್ಬು ಇಷ್ಟೊಂದು ಸಮೃದ್ಧಿಯಾಗಲು ರೈತ ತಿಪ್ಪಣ್ಣ ಹಡಪದ ಯಾವುದೇ ರಾಸಾಯನಿಕ ಗೊಬ್ಬರ ಮೊರೆ ಹೋಗಿಲ್ಲ. ಬರೀ ಸೆಗಣಿ ಗೊಬ್ಬರ ಬಳಸಿ ಸಮೃದ್ಧಿಯಾಗಿಸಿರುವುದು ಸಾವಯವ ಕೃಷಿಗೆ ಮಾದರಿಯಾಗಿದೆ.

ತೋಟದ ಮನೆಯಲ್ಲಿ ವಾಸವಾಗಿರುವ ರೈತ ತಿಪ್ಪಣ್ಣ ಹಡಪದ ಮನೆತನದ ಕ್ಷೌರಿಕ ವೃತ್ತಿ ಜೊತೆಗೆ ಪಿತ್ರಾರ್ಜಿತ ಆಸ್ತಿಯ 7 ಎಕರೆ ಜಮೀನಿನಲ್ಲಿ 6 ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. ಈ ಕಬ್ಬು ಬೆಳೆಗೆ ಯಾವುದೇ ಕಾರಣಕ್ಕೂ ನೀರಿನ ಕೊರತೆಯಾಗದಂತೆ ನಾಲ್ಕು ಕೊಳವೆ ಬಾವಿಗಳ ನೀರಿನ ಸಂಪನ್ಮೂಲ ಹೊಂದಿದ್ದಾರೆ. ಪ್ರತಿ ಬೆಳೆಗೆ ಮೂರು ಕುಳೆ ಬೆಳೆಯಂತೆ ಕಳೆದ 9 ವರ್ಷಗಳಿಂದ ಈ ಬೆಳೆ ಬೆಳೆಯುತ್ತಿದ್ದಾರೆ.

ಕಬ್ಬು ನಾಟಿ ಹಾಗೂ ಕುಳೆಗೆ ಬಿಟ್ಟ ನಂತರ ಹನಿ ನೀರಾವರಿ ಆಶ್ರಿತವಾಗಿ ಸಕಾಲಿಕ ನೀರು ನಿರ್ವಹಣೆ, ಅಂತರ ಬೇಸಾಯ, ಕಳೆ ನಿರ್ವಹಣೆಗೆ ಮೂರು ತಿಂಗಳ ಶ್ರಮಿಸಿದರೆ ಸಾಕು, ಉಳಿದ ತಿಂಗಳುವರೆಗೆ ಕಬ್ಬು ಕಟಾವು ಮಾಡುವವರಿಗೂ ಸಕಾಲಿಕ ನೀರು ನಿರ್ವಹಣೆಯೊಂದೇ ಕೆಲಸದಲ್ಲಿ ಈ ಇಳುವರಿ ಕಟಾವಿಗೆ ಬರುತ್ತದೆ. ನಂತರ ಕೆಲಸ ಸಕ್ಕರೆ ಕಾರ್ಖಾನೆಯ ಕಾರ್ಮಿಕರು ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳೆ ನಿರ್ವಹಣೆ ಕಡಿಮೆ ಲಾಭ ಹೆಚ್ಚು ಎನ್ನುವ ಕಾರಣಕ್ಕೆ ಈ ಬೆಳೆಯನ್ನೇ ನೆಚ್ಚಿಕೊಂಡಿದ್ದೇವೆ ಎಂದು ರೈತ ದಂಪತಿ ತಿಪ್ಪಣ್ಣ ಹಡಪದ ಹಾಗೂ ಅವರ ಪತ್ನಿ ಮಲ್ಲಮ್ಮ ವಿವರಿಸಿದರು.

ಕಳೆದ ವರ್ಷದಿಂದ ಪ್ರತಿ ಟನ್‌ಗೆ 2,600 ರೂ. ಸಿಗುತ್ತಿದೆ. ಪ್ರತಿ ಟನ್‌ಗೆ 25ರಿಂದ 30 ಟನ್‌ ಬರುತ್ತಿದ್ದಾರೆ. ಪ್ರತಿ ಬೆಳೆಯಿಂದ 3.5 ಲಕ್ಷ ರೂ. ಆದಾಯ ಬಂದರೂ, ಹೆಚ್ಚು ಕಡಿಮೆ 1 ಲಕ್ಷರೂ. ಖರ್ಚಾಗುತ್ತಿದ್ದು, ನಿವ್ವಳ 2.5 ಲಕ್ಷ ರೂ. ಆದಾಯ  ಉಳಿಯುತ್ತದೆ. ನಮ್ಮ ಬದುಕಿಗೆ ಇಷ್ಟು ಸಾಕು ಎನ್ನುತ್ತಾರೆ ರೈತ ತಿಪ್ಪಣ್ಣ ಹಡಪದ.

Advertisement

ಕಬ್ಬು ನಾಟಿ ಮಾಡಿದಾಗಿನಿಂದ ಬೆಳೆದ ಕಬ್ಬನ್ನು ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಧನ್ನೂರಿನ ಶ್ರೀ ಬಾಲಾಜಿ ಶುಗರ್ಸ್‌ ಕೆಮಿಕಲ್‌ ಫ್ಯಾಕ್ಟರಿಗೆ ಸಾಗಾಣೆಯಾಗುತ್ತಿದೆ. ಸದರಿ ಫ್ಯಾಕ್ಟರಿ ನಿಯಮಿತವಾಗಿ ಮೊತ್ತ ಪಾವತಿಸುತ್ತಿದ್ದಾರೆ. ನಮಗೆ ಅನಕೂಲವಾಗಿದೆ ಎನ್ನುತ್ತಾರೆ ರೈತ ತಿಪ್ಪಣ್ಣ ಹಡಪದ ನಮ್ಮ ತಂದೆಯ ಕಾಲದಲ್ಲಿ ಇಷ್ಟೇ ಜಮೀನು  ಇದ್ದರೂ, ಕಡು ಕಷ್ಟಕರ ಪರಿಸ್ಥಿತಿ ಎದುರಿಸಬೇಕಾಗಿತ್ತು.

ತುತ್ತು ಅನ್ನಕ್ಕೂ ಪರದಾಡಿರುವ ಜೀವನಾನುಭವವಾಗಿದೆ. ಈ ಮೊದಲು ಬಲಕುಂದಿ ಜೆಮ್‌ ಕಂಪನಿಯಲ್ಲಿ ಜಾಕ್‌ ಎತ್ತುವ ಕೆಲಸ ಮಾಡುತ್ತಿದೆ. ಅದೇಕೋ ಆ ಕೆಲಸ ಸರಿ ಹೊಂದಲಿಲ್ಲ. ನಂತರ ಮಂಗಳೂರಿಗೆ ಗುಳೇ ಹೋಗಿದ್ದೆ ಅಲ್ಲಿ ದುಡಿದಿರುವುದು ಸಾಕಾಗುತ್ತಿರಲಿಲ್ಲ. ಈಗ ಅಂತ ಪರಿಸ್ಥಿತಿ ಇಲ್ಲ ಎನ್ನುತ್ತಾರೆ ತಿಪ್ಪಣ್ಣ.

ಈ ಭೂಮಿ ತಾಯಿಯನ್ನು ನಂಬಿರುವುದಕ್ಕೆ ಆರೋಗ್ಯ ಸೇರಿದಂತೆ ಅಶ್ವರ್ಯ ಸಿಕ್ಕಿದೆ. ಇದನ್ನು ನಮ್ಮ ತಂದೆಯವರು ನೋಡದೇ
ಹೋದರಲ್ಲ ಎನ್ನುವ ಕೊರಗು ಈಗಲೂ ಕಾಡುತ್ತಿದೆ. ಅವರ ದಯೆಯಿಂದ ಸಂಕಷ್ಟಗಳು ಇನ್ನಿಲ್ಲವಾಗಿರುವುದು ಸಮಾಧಾನ
ತಂದಿದೆ.
ತಿಪ್ಪಣ್ಣ ಹಡಪದ ತಳವಗೇರಾ, ರೈತ

ಕಬ್ಬು ಬೆಳೆ ಸಲುವಾಗಿ ತೋಟದಲ್ಲಿ ವಾಸವಾಗಿದ್ದೇವೆ. ಮಕ್ಕಳನ್ನು ಸೊಸೆಯಂದಿರನ್ನು ಕರೆದುಕೊಂಡು ಕೆಲಸ ಮಾಡುತ್ತಿದ್ದೇವೆ. ನಮ್ಮ ಜೀವನ ಅನುಭವಗಳೇ ನಮಗೆ ಪಾಠವಾಗಿದೆ.
ಮಲ್ಲಮ್ಮ ಹಡಪದ, ರೈತ ಮಹಿಳೆ

*ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next