Advertisement

Banana Crop: ಇರಾನ್ ದೇಶಕ್ಕೆ ಜಗದಾಳ ಗ್ರಾಮದ ಬಾಳೆ ಹಣ್ಣು… 11 ತಿಂಗಳಲ್ಲಿ ಲಕ್ಷಾಂತರ ಲಾಭ

06:51 PM Oct 25, 2024 | Team Udayavani |

ರಬಕವಿ-ಬನಹಟ್ಟಿ: ತಾಲೂಕಿನ ಜಗದಾಳ ಗ್ರಾಮದ ರೈತರಾದ ಶ್ರೀನಾಥ ದೇವರಾಜ ರಾಠಿ ನಾಲ್ಕು ಎಕರೆ ತೋಟದಲ್ಲಿ ಬೆಳೆದ ಬಾಳೆ ಹಣ್ಣುಗಳು ಇಂದು ಇರಾನ ದೇಶಕ್ಕೆ ರಫ್ತಾಗುತ್ತಿವೆ. ಮುಂಬೈನಿಂದ ಬಂದ ಕಾರ್ಮಿಕರು ಬಾಳೆ ಹಣ್ಣಿನ ಗೊನೆಗಳನ್ನು ಕಡಿದು ತಂದು ಅವುಗಳನ್ನು ಶುಚಿಗೊಳಿಸಿ, ನಂತರ ಪ್ಲಾಸ್ಟಿಕ್ ಪೇಪರ್ ನಲ್ಲಿ ಪ್ಯಾಕ್ ಮಾಡಿ ವಾಹನಕ್ಕೆ ತುಂಬುವ ಕಾರ್ಯ ಮಾಡುತ್ತಿರುವುದು ಕಂಡು ಬಂತು.

Advertisement

ದೇವರಾಜ ರಾಠಿಯವರ ಮಗ ಶ್ರೀನಾಥ ಕೃಷಿಯಲ್ಲಿ ಬಿ ಎಸ್ ಸಿ ಪದವಿಧರರು. ತಂದೆಯ ಮಾರ್ಗದರ್ಶನದಲ್ಲಿ ಬಾಳೆ ಹಣ್ಣುಗಳನ್ನು ಬೆಳೆದಿದ್ದಾರೆ.

ನಾಲ್ಕು ಎಕರೆಯಲ್ಲಿ ಜೈನ ಕಂಪನಿಯ ಜಿ-9 ತಳಿಯ 7200 ಗಿಡಗಳನ್ನು ಹಚ್ಚಲಾಗಿದ್ದು, ಒಂದು ಗಿಡಕ್ಕೆ ಅಂದಾಜು 28 ರಿಂದ 30 ಕೆ.ಜಿಯಷ್ಟು ಬಾಳೆ ಹಣ್ಣು ಬರುತ್ತದೆ. ಸದ್ಯ ಒಂದು ಕೆ.ಜಿಗೆ ರೂ. 23 ರಂತೆ ಖರೀದಿ ಮಾಡುತ್ತಿದ್ಧಾರೆ. ಒಂದು ಸಸಿಗೆ ಇಲ್ಲಿಯವರೆಗೆ ಅಂದಾಜು ರೂ. 150 ರಿಂದ 200 ಖರ್ಚು ಮಾಡಲಾಗಿದೆ.

ಬಾಳೆ ಹಣ್ಣಿನ ಗೊನೆಗಳನ್ನು ಕಡಿದು ತಂದು ಅವುಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುವುದು ಎಲ್ಲವೂ ಮಧ್ಯಸ್ಥಗಾರರೇ ಮಾಡುತ್ತಿರುವುದರಿಂದ ನಮಗೆ ಮಾರುಕಟ್ಟೆಯ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಶ್ರೀನಾಥ ರಾಠಿ.

ನೂತನ ಪಟ್ಟಾ ಪದ್ಧತಿಯಲ್ಲಿ ಬಾಳೆ ಹಣ್ಣುಗಳನ್ನು ಬೆಳೆಯಲಾಗಿದೆ. ಸಾಮಾನ್ಯವಾಗಿ ಒಂದು ಎಕರೆಯಲ್ಲಿ 1450 ಗಿಡಗಳನ್ನು ಬೆಳೆಯುತ್ತಾರೆ. ಅದರೆ ನಾವು ಪಟ್ಟಾ ಪದ್ಧತಿಯಲ್ಲಿ 1800 ಸಸಿಗಳನ್ನು ನಾಟಿ ಮಾಡಿದ್ದೇವೆ. ಇದರಿಂದಾಗಿ ಬಾಳೆ ಗಿಡಗಳು ದಟ್ಟವಾಗಿ ಬೆಳೆಯುತ್ತದೆ. ಇಳೆ ಹಣ್ಣಿನ ಗೊನೆಗಳಿಗೆ ಬಿಸಿಲು ದೊರೆಯದೆ ಇರುವುದರಿಂದ ಬಾಳೆ ಹಣ್ಣುಗಳಿಗೆ ಸಾಕಷ್ಟು ಹೊಳಪು ಬರುತ್ತದೆ. ನೂತನ ಪದ್ಧತಿಯಲ್ಲಿ ಬೆಳೆದಿದ್ದು, ನಮ್ಮ ಪ್ರಯತ್ನ ಯಶಸ್ವಿಯಾಗಿದೆ ಎನ್ನುತ್ತಾರೆ ಶ್ರೀನಾಥ.

Advertisement

ನಾನು ಬೆಳೆದ ಬೆಳೆ ಇಂದು ಇರಾನ್ ದೇಶಕ್ಕೆ ತೆರಳುತ್ತಿರುವುದು ಬಹಳಷ್ಟು ಖುಷಿಯನ್ನು ತಂದಿದೆ ಎನ್ನುತ್ತಾರೆ. ರೈತ ದೇವರಾಜ ರಾಠಿ

ದೇವರಾಜ ರಾಠಿ ಯಾವುದೇ ಬೆಳೆಯನ್ನು ಮಾಡಿದರೂ ಬಹಳಷ್ಟು ಯೋಜನಾ ಬದ್ಧವಾಗಿ ಮಾಡುತ್ತಿದ್ದು, ತಾವು ಬೆಳೆದ ಪ್ರತಿಯೊಂದು ಬೆಳೆಯಿಂದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಗುಲಾಬಿ ಹೂ, ಚಂಡು ಹೂ, ಕ್ಯಾಪ್ಸಿಕಮ್, ಬದನೆ, ಪಪ್ಪಾಯಿ, ಹಸಿ ಮೆನಸಿನಕಾಯಿ ಬೆಳೆದು ಸಾಕಷ್ಟು ಲಾಭ ಮಾಡಿಕೊಂಡಿರುವ ರಾಠಿಯವರು ಈಗ ಬಾಳೆ ಹಣ್ಣನ್ನು ಬೆಳೆದು ಲಾಭವನ್ನು ಮಾಡಿಕೊಂಡಿದ್ದಾರೆ. ಅವರೊಬ್ಬ ಮಾದರಿ ಕೃಷಿಕರಾಗಿದ್ದಾರೆ.

ದೇವರಾಜ ರಾಠಿಯವರು ಕೃಷಿಯಲ್ಲಿ ತಾವೊಬ್ಬರೆ ಬೆಳೆಯದೆ, ಸುತ್ತ ಮುತ್ತಲಿನ ರೈತರಿಗೂ ಸಹಾಯ ಸಹಕಾರ ನೀಡುತ್ತ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ಹತ್ತಾರು ರೈತರು ಬೇರೆ ಬೇರೆ ಬೆಳೆಗಳನ್ನು ಬೆಳೆದು ಲಾಭವನ್ನು ಮಾಡಿಕೊಂಡಿರುವುದು ಕೂಡಾ ಹೆಮ್ಮೆಯ ಸಂಗತಿಯಾಗಿದೆ.

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next