Advertisement

ಮಿಶ್ರಬೆಳೆಯಲ್ಲಿ ಕಡಿಮೆ ಅವಧಿಯಲ್ಲಿ ಅಧಿಕ `ಧನ’ಲಾಭ : 4 ತಿಂಗಳಲ್ಲಿ 20 ಲಕ್ಷ ಆದಾಯ…!

01:40 PM Oct 09, 2022 | Team Udayavani |

ರಬಕವಿ-ಬನಹಟ್ಟಿ : ಕೃಷಿಯಲ್ಲಿ ಲಾಭ ಮಾಡಿಕೊಳ್ಳಲು ರೈತರು ಏನೆಲ್ಲ ಪ್ರಯೋಗಗಳನ್ನು ಮಾಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಆಕರ್ಷಕ ಬೆಲೆಯುಳ್ಳ ಬೆಳೆಗಳನ್ನು ಬೆಳೆದು ಲಾಭ ಪಡೆಯಲು ನೋಡುತ್ತಾರೆ ಅಲ್ಲಿ ಕೆಲವೊಂದು ಸಲ ಯಶಸ್ವಿಯಾದರೆ, ಹೆಚ್ಚು ಸಲ ಅವರು ಬೆಳೆದ ಬೆಳೆ ಕೈಗೆ ಬರುವವರೆಗೆ ಬೆಲೆ ಇಳಿದು ಕೈ ಸುಟ್ಟುಕೊಳ್ಳುವುದು ಉಂಟು. ಆದರೆ ಇಲ್ಲಿಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿಯ ಧನಪಾಲ ಯಲ್ಲಟ್ಟಿ ಕಡಿಮೆ ಭೂಮಿ ಮತ್ತು ಹಣದಲ್ಲಿ ಸಾವಯವ ಪದ್ಧತಿಯಲ್ಲಿ ಮಿಶ್ರ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆದರೆ ಹೆಚ್ಚಿನ ಪ್ರಮಾಣದಲ್ಲಿ ಲಾಭಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Advertisement

ಸನ್ 2010ರಲ್ಲಿ ಕೃಷಿ ಪಂಡಿತ ಮತ್ತು ಸನ್ 2012ರಲ್ಲಿ ಕೃಷಿರತ್ನ ಪ್ರಶಸ್ತಿ, 2014ರಲ್ಲಿ ರಾಷ್ಟ್ರ ಮಟ್ಟದ ಮಹಿಂದ್ರಾ ಸಮೃದ್ಧಿ ಪ್ರಶಸ್ತಿ ವಿಜೇತ ಹಳಿಂಗಳಿಯ ಧನಪಾಲ್ ಯಲ್ಲಟ್ಟಿ ತಮ್ಮ ತೋಟದ ಸುಮಾರು 2,10 ಎಕರೆ ಜಮೀನಿನಲ್ಲಿ ಮಿಶ್ರ ಬೆಳೆಗಳನ್ನು ಬೆಳೆದಿದ್ದು, ಕೇವಲ ನಾಲ್ಕು ತಿಂಗಳಲ್ಲಿ 20 ಲಕ್ಷ ಆದಾಯ ಗಳಿಸುವ ನಿರೀಕ್ಷೆಯಲ್ಲಿ ಧನಪಾಲ ಯಲ್ಲಟ್ಟಿ ಇದ್ದಾರೆ.
ಮಿಶ್ರ ಬೆಳೆ-ಎರಡುವರೆ ಎಕರೆ 10 ಗುಂಟೆ ಜಮೀನಿನಲ್ಲಿ ಒಂದು 30 ಗುಂಟೆ ಯಷ್ಟು ಜಮೀನಿನಲ್ಲಿ ಸಾಲಿನಿಂದ ಸಾಲಿಗೆ 5-ಫೂಟ್, ಜಿಗ್ ಜಾಗ ಪದ್ದತಿಯಲ್ಲಿ 2 -ಫೂಟ್ ಗೆ ಹೀರೆಕಾಯಿ ತರಕಾರಿ ಬೆಳೆದಿದ್ದು, ಇದರ ಜತೆಗೆ ಮಿಶ್ರ ಬೆಳೆಯಾಗಿ 4 ಪೂಟ್ ಗೆ ಒಂದರಂತೆ ಮಧ್ಯದಲ್ಲಿ ಟಮೇಟೋ ಬೆಳೆದಿದ್ದು, ಹಿರೇಕಾಯಿ ಕಟಾವು ನಡೆಯುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಧನಪಾಲ ಯಲ್ಲಟ್ಟಿ ಅವರ ಹೀರೆಕಾಯಿ ಮಾರಾಟವಾಗುತ್ತಿದೆ. ಇನ್ನೊಂದು ಎಕರೆ ಜಮೀನಿನಲ್ಲಿ ಜವಾರಿ ಹಾಗೂ ಹೈಬ್ರೀಡ್ ಟೊಮೆಟೊ ಪ್ರತ್ಯೇಕವಾಗಿ ಬೆಳೆದಿದ್ದು, ಅದು ಕೂಡ ಕಟಾವಿಗೆ ಬಂದಿದೆ. ಇನ್ನೂ 20 ಗುಂಟೆ(ಅರ್ಧ ಎಕರೆ) ಜಮೀನಿನಲ್ಲಿ ಸವತೆಕಾಯಿ ಬೆಳೆದಿದ್ದು, ಮಿಶ್ರ ಬೆಳೆಯಾಗಿ 3 ಪೂಟ್ ಗೆ ಒಂದರಂತೆ ಕ್ಯಾಪ್ಸಿಕಾಂ(ಡೊಣ್ಣ ಮೆಣಸಿನಕಾಯಿ) ಬೆಳೆಯುತ್ತಿದ್ದಾರೆ. ಎಲ್ಲ ಬೆಳೆಗಳು ಸತತ 45 ದಿನಗಳಿಗೂ ಅಧಿಕ ಕಟಾವು ನಡೆಯುತ್ತವೆ.

ಬೇಳೆ ವಿವರ : ನೀರಾವರಿಗಾಗಿ ತಮ್ಮದೇ ಆದ ಕೃಷಿಹೊಂಡದ ಮೂಲಕ ಹನಿ ನಿರಾವರಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಬೆಳೆಗಳನ್ನು ಬೆಳೆಯಲು ಮಲ್ಚಿಂಗ್ ಪೇಪರ ಬಳಕೆ ಮಾಡಲಾಗಿದ್ದು, ಇದರಿಂದ ಭೂಮಿಯಲ್ಲಿ ತೇವಾಂಶ ಕಡಿಮೆಗೊಳ್ಳುವುದಿಲ್ಲ. ಹಾಗೂ ಬೆಳೆಯ ಸುತ್ತಮುತ್ತ ಕಸ ಬೆಳೆಯುವುದಿಲ್ಲ. ನೀರು ಕೂಡ ಹೆಚ್ಚಿಗೆ ಪೋಲಾಗದೆ ಅವಶ್ಯಕತೆಗೆ ತಕ್ಕಂತೆ ಬೆಳೆಗೆ ಸೇರುತ್ತದೆ. ಮೊದಲಿಗೆ 1 ಎಕರೆಗೆ ಕುರಿ, ತಿಪ್ಪೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ 10 ಟನ್, ಡಿಎಪಿ 1 ಕ್ವಿಂಟಾಲ್, ಪೋಟ್ಯಾಶ 50 ಕೆಜಿ, ಸೂಕ್ಷ್ಮ ಪೋಷಕಾಂಶ 10 ಕೆಜಿ, ಮಣ್ಣು ಸುಧಾರಕ 50 ಕೆಜಿ ಹಾಕಿ ನಾಟಿ ಮಾಡಲಾಗಿದೆ. ಹವಾಮಾನಕ್ಕೆ ತಕ್ಕಂತೆ ಅವಶ್ಯಕ ನೀರಿನಲ್ಲಿ ಕರಗುವ ಎಂಪಿಕೆ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳನ್ನು ಡ್ರೀಫ್ ಮೂಲಕ ನೀಡಲಾಗಿದೆ. ಕಾಳಜಿಯಿಂದ ಬೆಳೆಗಳನ್ನು ಜೋಪಾನ ಮಾಡುತ್ತಿರುವ ಧನಪಾಲ ಯಲ್ಲಟ್ಟಿ ಅವರು, ಬೆಳಗ್ಗೆಯಿಂದ ಸಂಜೆ ವರೆಗೆ ತಮ್ಮ ಕೂಲಿ ಕಾರ್ಮಿಕರ ಜತೆಗೆ ತಾವು ಕೂಡ ಕಾರ್ಮಿಕರಂತೆ ಕೆಲಸ ಮಾಡಿ ಬೆಳೆಗಳ ಆರೈಕೆ ಮಾಡುತ್ತಾರೆ.

ಮೂಲ ಬೆಳೆ ಬೆಳೆಯುವುದರ ಜತೆಗೆ ಮಿಶ್ರ ಬೆಳೆ ಬೆಳೆಯುವ ಪದ್ಧತಿ ಅಳವಡಿಸಿಕೊಂಡಿರುವ ಧನಪಾಲ ಯಲ್ಲಟ್ಟಿ ಅವರು, ಮೂಲ ಬೆಳೆಗೆ ತಗಲುವ ಸಸಿ, ಗೊಬ್ಬರ, ಕೂಲಿಕಾರರ ಸಂಬಳ ಸೇರಿದಂತೆ ಇತರೇ ಬರುವ ಖರ್ಚನ್ನು ಮಿಶ್ರ ಬೆಳೆಯಿಂದ ಬರುವ ಆದಾಯದಲ್ಲಿಯೇ ಪಡೆದುಕೊಳ್ಳುತ್ತಿದ್ದಾರೆ. ಅಂದರೆ ಖರ್ಚು ಇಲ್ಲದೇ ಆದಾಯ ಗಳಿಸುವ ಪ್ರವೃತ್ತಿಗೆ ಧನಪಾಲ ಯಲ್ಲಟ್ಟಿ ಅಂಟಿಕೊಂಡಿದ್ದಾರೆ. ಆದ್ದರಿಂದಲೇ ಈಗ ತಮ್ಮ 2.10 ಎಕರೇ ಜಮೀನಿನಲ್ಲಿರುವ ಟೊಮೆಟೊ, ಹೀರೆಕಾಯಿ, ಕ್ಯಾಪ್ಸಿಕಾಂ ಹಾಗೂ ಸವತೆಯಿಂದ ಸುಮಾರು 90 ರಿಂದ 110 ದಿನಗಳಲ್ಲಿ 20 ಲಕ್ಷ ಆದಾಯ ಗಳಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ.

Advertisement

ಮಾರುಕಟ್ಟೆ : ನಮ್ಮ ಬೆಳೆಗಳನ್ನು ಸ್ಥಳೀಯ ಮಾರುಕಟ್ಟೆ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಮಾರುಕಟ್ಟೆಗಳಿಗೂ ಪೂರೈಸುತ್ತೇವೆ ಎನ್ನುತ್ತಾರೆ. ಕಡಿಮೆ ಹೂಡಿಕೆ ಮತ್ತು ಹೆಚ್ಚು ಆದಾಯ ಪಡೆಯಲು ಹರಸಾಹಸ ಪಡುವ ವಾಣಿಜ್ಯೋದ್ಯಮಿಗಳಿಗಿಂತ ಭೂತಾಯಿಯ ಮಡಿಲಲ್ಲಿ ಕಡಿಮೆ ಕಾಲಾವಧಿ ಮತ್ತು ವೆಚ್ಚದಲ್ಲಿ ಹೆಚ್ಚಿನ ಇಳುವರಿಯನ್ನು ಮಿಶ್ರ ಬೆಳೆ ಪದ್ದತಿ ಮೂಲಕ ಪಡೆಯಬಹುದೆಂಬುದನ್ನೂ ನಿರೂಪಿಸಿದ ಧನಪಾಲ ಕೃಷಿಯಲ್ಲಿ ನಿಜಕ್ಕೂ ಧನವಂತರೆ ಸರಿ !

ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದ ಕಾರಣ ಬಹುತೇಕ ರೈತರು ಒಂದೇ ಬೆಳೆಗೆ ಅಂಟಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಅದನ್ನು ಬಿಟ್ಟು ರೈತರು, ಪ್ರತಿ ತಿಂಗಳು ಆದಾಯ ಭರುವಂತಹ ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯ ಮಾಡಿಕೊಳ್ಳಬೇಕು.

– ಧನಪಾಲ ಯಲ್ಲಟ್ಟಿ, ಹಳಿಂಗಳಿ

ಹೆಚ್ಚಿನ ಮಾಹಿತಿಗಾಗಿ ಧನಪಾಲ ಎನ್. ಯಲ್ಲಟ್ಟಿ, ಹಳಿಂಗಳಿ ಗ್ರಾಮ, ತಾ. ರಬಕವಿ-ಬನಹಟ್ಟಿ ಜಿ. ಬಾಗಲಕೋಟ ಮೊ: 9900030678 ಗೆ ಸಂಪರ್ಕಿಸಬಹುದು.

 -ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next