ಪುತ್ತೂರು: ತರಕಾರಿ ಕೃಷಿಯ ಭೀಷ್ಮ ಎಂದೇ ಪ್ರಸಿದ್ದರಾದ ಬನ್ನೂರು ಗ್ರಾಮದ ಕೃಷಿಕ ಧರ್ಣಪ್ಪ ಗೌಡ ಕುಂಟ್ಯಾನ ಮಾ.22 ರಂದು ಚಾರ್ವಾಕ ಗ್ರಾಮದ ಕುಂಟ್ಯಾನ ಫಾರ್ಮ್ ನಲ್ಲಿ ನಿಧನರಾದರು.
50 ವರ್ಷಗಳಿಂದ ತರಕಾರಿ ಕೃಷಿಯಲ್ಲಿ ಪರಿಣಿತರಾಗಿದ್ದ ಇವರು, ಚಾರ್ವಾಕ, ಸಂಪ್ಯ, ಮಾಡಾವುಗಳಲ್ಲಿ ಜಾಗವನ್ನು ಖರೀದಿಸಿ ತನ್ನ ಕೃಷಿ ಕ್ಷೇತ್ರದ ಸಾಧನೆಯನ್ನು ವಿಸ್ತರಿಸಿದ್ದರು. ಕೃಷಿ ಕ್ಷೇತ್ರದ ಮಹಾನ್ ಸಾಧಕರಾಗಿದ್ದ ಧರ್ಣಪ್ಪ ಗೌಡರವರಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವರ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.
ಇದನ್ನೂ ಓದಿ:ಪುತ್ತೂರು: ಹೃದಯಾಘಾತದಿಂದ ಪಿಯುಸಿ ವಿದ್ಯಾರ್ಥಿನಿ ನಿಧನ
ಎತ್ತಿನಗಾಡಿಯಲ್ಲಿ ವ್ಯಾಪಾರ: ಹಣ್ಣಡಿಕೆ ವ್ಯಾಪಾರವನ್ನು ಆರಂಭಿಸಿದ ಮೊದಲಲ್ಲಿ ಅಡಿಕೆಯನ್ನು ತಲೆಹೊರೆಯಲ್ಲಿ ಹೊತ್ತು ವ್ಯಾಪಾರ ಮಾಡುತ್ತಿದ್ದ ಇವರು ಬಳಿಕ ಎತ್ತಿನಗಾಡಿಯೊಂದನ್ನು ಖರೀದಿಸಿ ಗೇರುಕಟ್ಟೆಯ ತನಕ ಸಂಚರಿಸಿ ವ್ಯಾಪಾರವನ್ನು ವೃದ್ಧಿಸಿಕೊಂಡರು. ನಂತರ ರಿಕ್ಷಾ ಟೆಂಪೋ ಒಂದನ್ನು ಖರೀದಿಸಿ ಅದರಲ್ಲಿ ತನ್ನ ವ್ಯಾಪಾರ ವಿಸ್ತರಿಸಿದ್ದರು.
ಧರ್ಣಪ್ಪ ಗೌಡರೊಬ್ಬ ಸೂಕ್ಷ್ಮ ಸಂವೇದನೆಯ ಆರ್ಥಿಕ ತಜ್ಞ. ತನ್ನ ತರಕಾರಿ ವ್ಯಾಪಾರದಲ್ಲಿ ಉಳಿಕೆಯಾದ ಹಣವನ್ನು ಡಬ್ಬಿಯಲ್ಲಿ ಸಂಗ್ರಹಿಸಿಡುತ್ತಿದ್ದರು. ಉತ್ತಮ ಮೊತ್ತವೊಂದು ಸಂಗ್ರಹವಾದಾಗ ಅದನ್ನು ವಿನಿಯೋಗಿಸಿ ಭೂಮಿ ಇಲ್ಲವೆ ವಾಹನ ಕೊಳ್ಳುವಂತಹ ಬೃಹತ್ ಹೂಡಿಕೆ ಮಾಡುತ್ತಿದ್ದರು. ಕೃಷಿಭೂಮಿಯಲ್ಲಿ ಸುರಿದ ಬೆವರು ಆಸ್ತಿಯಾಗಿ ಪರಿವರ್ತನೆಯಾಗುತ್ತಿತ್ತು.
ಇದನ್ನೂ ಓದಿ: ಸೌದಿಯಲ್ಲಿ ಉಳ್ಳಾಲದ ವ್ಯಕ್ತಿ ನಿಗೂಢ ಸಾವು: ತವರೂರಿಗೆ ಮೃತದೇಹ ತರಲು ಸ್ಪಂದಿಸಿದ ಶಾಸಕ
ಮೃತರು ಪತ್ನಿ ಚೆನ್ನಮ್ಮ, ಪುತ್ರ ಪ್ರವೀಣ್ ಕುಂಟ್ಯಾಣ, ಪುತ್ರಿ ಸುಚಿತ್ರಾ, ಸುಮಿತ್ರಾ ಅಳಿಯಂದಿರಾದ ರಾಧಾಕೃಷ್ಣ, ರವಿ, ಪುತ್ರಿ ಸುನೀತಾ, ಸೊಸೆ ಸವಿತಾ ಪ್ರವೀಣ್ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.