Advertisement

ಕರಾವಳಿಯಲ್ಲಿ ವಾರಾಂತ್ಯ ಕರ್ಫ್ಯೂ ಯಶಸ್ವಿ ಮುಕ್ತಾಯ

01:23 AM Jan 10, 2022 | Team Udayavani |

ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಶುಕ್ರವಾರ ರಾತ್ರಿಯಿಂದ ಜಾರಿಯಲ್ಲಿದ್ದ ವಾರಾಂತ್ಯ ಕರ್ಫ್ಯೂ ಸೋಮವಾರ ಮುಂಜಾನೆ 5 ಗಂಟೆಗೆ ಮುಕ್ತಾಯಗೊಂಡಿದೆ. ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂ ಜ.19ರ ವರೆಗೆ ಜಾರಿಯಲ್ಲಿರುತ್ತದೆ.

Advertisement

ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ರವಿವಾರವೂ ಉಭಯ ಜಿಲ್ಲೆಯಾದ್ಯಂತ ಜನಜೀವನ ವ್ಯತ್ಯಯಗೊಂಡಿತ್ತು. ಜೀನಸು ಅಂಗಡಿಗಳು, ಮೀನು ,ಮಾಂಸ, ತರಕಾರಿ, ಔಷಧ ಅಂಗಡಿಗಳು ಸೇರಿದಂತೆ ಜೀವನಾವಶ್ಯಕ ವಸ್ತುಗಳ ಮಳಿಗೆಗಳು ಎಂದಿನಂತೆ ಕಾರ್ಯಾಚರಿಸಿದವು. ಆದರೆ ರವಿವಾರ ರಜಾದಿನದ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಕೆಲವು ಅಂಗಡಿಗಳು ಮಧ್ಯಾಹ್ನದ ಬಳಿಕ ಮುಚ್ಚಿದ್ದರೆ ಗ್ರಾಮಾಂತರ ಪ್ರದೇಶಗಳಲ್ಲಿ ಎಂದಿನಂತೆ ತೆರೆದಿದ್ದವು.
ಬಸ್‌, ರಿಕ್ಷಾಗಳ ಸಂಚಾರವೂ ಕಡಿಮೆ ಇತ್ತು. ಶನಿವಾರ ಶೇ.50ರಷ್ಟು ಬಸ್‌ಗಳು ಸಂಚಾರ ನಡೆಸಿದ್ದರೆ. ರವಿವಾರ ಬಸ್‌ಗಳ ಸಂಚಾರದಲ್ಲಿ ಇನ್ನಷ್ಟು ಇಳಿಕೆಯಾಗಿತ್ತು.

ಪೂರ್ವ ನಿಗದಿತ ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಅಬಾಧಿತವಾಗಿ ನಡೆದಿವೆ. ಖಾಸಗಿ ವಾಹನಗಳಲ್ಲಿ ಬರುವವರಿಗೆ ತಪಾಸಣೆಯ ಕಿರಿಕಿರಿ ಎದುರಾಯಿತು. ಬಸ್‌ಗಳ ಸಂಚಾರವಿದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳಲ್ಲಿ ಜನರ ಪಾಲ್ಗೊಳ್ಳುವಿಕೆಯಲ್ಲಿ ಹೆಚ್ಚಿನ ವ್ಯತ್ಯಯ ಕಂಡುಬರಲಿಲ್ಲ.

ಉಡುಪಿ: ಉತ್ತಮ ಸ್ಪಂದನೆ
ಉಡುಪಿ: ವಾರಾಂತ್ಯ ಕರ್ಫ್ಯೂ ಎರಡನೇ ದಿನ ಉಡುಪಿಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸಂತೆಕಟ್ಟೆ ಸಂತೆಗೆ ಅವಕಾಶವಿಲ್ಲದಿದ್ದರೂ ಬೀದಿಬದಿ ವ್ಯಾಪಾರಸ್ಥರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಕಾರಣ ಸಂತೆಯ ವಾತಾವರಣವೇ ಸೃಷ್ಟಿಯಾಗಿತ್ತು.

ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ
ಮಂಗಳೂರು ನಗರ, ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಹಾಕಲಾಗಿದ್ದ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್‌ ಸಿಬಂದಿ ವಾಹನಗಳ ತಪಾಸಣೆ ನಡೆಸಿ ಅನಗತ್ಯವಾಗಿ ಹಾಗೂ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಇದನ್ನೂ ಓದಿ:ಹಿಮವರ್ಷ : ರಾಜ್ಯದ 400ಕ್ಕೂ ಅಧಿಕ ಪ್ರಮುಖ ರಸ್ತೆಗಳು ಬಂದ್‌

ನಿಯಮ ಉಲ್ಲಂಘನೆ: 534 ವಾಹನಗಳಿಗೆ ದಂಡ
ನಿಯಮ ಉಲ್ಲಂಘಿಸಿ ಸಂಚರಿಸಿದ ಆರೋಪ ಮೇಲೆ ಮಂಗಳೂರು ಪೊಲೀಸರು 534 ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡು 1,75,400 ರೂ. ದಂಡ ವಿಧಿಸಿದ್ದಾರೆೆ. ಮಾಸ್ಕ್ ಧರಿಸದ 240 ಮಂದಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು 39,570 ರೂ. ದಂಡ ವಿಧಿಸಲಾಗಿದೆ. 40 ವಾಹನಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗಿದೆ.

ಉಡುಪಿ: 59 ಲ.ರೂ. ದಂಡ ಸಂಗ್ರಹ
ಮಾಸ್ಕ್ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಇದುವರೆಗೆ 53, 916 ಮಂದಿಗೆ ದಂಡ ವಿಧಿಸಲಾಗಿದ್ದು, 59,73,770 ರೂ.ಸಂಗ್ರಹಿಸಲಾಗಿದೆ. ಪ್ರಸ್ತುತ 9 ಕಡೆಗಳಲ್ಲಿ ಕಂಟೈನ್‌ಮೆಂಟ್‌ ವಲಯ ಸಕ್ರಿಯವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next