Advertisement
ಬೆಳಗ್ಗಿನಿಂದಲೇ ರಾ. ಹೆ. ಇಲಾಖೆಯ ಅಧಿಕಾರಿಗಳು, ನವಯುಗ್ ಸಂಸ್ಥೆಯಅಧಿಕಾರಿಗಳು, ಸಿಬಂದಿ ಉಳ್ಳಾಲ ಪೊಲೀಸರು ಮತ್ತು ದಕ್ಷಿಣ ಸಂಚಾರಿ ಠಾಣೆಯ ಪೊಲೀಸರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ಆರಂಭಿಸಿದರು. ಕಲ್ಲಾಪುವಿನಲ್ಲಿ ಹಣ್ಣುಹಂಪಲು, ಮೀನಿನ ಅಂಗಡಿ ಸಹಿತ ಹೆದ್ದಾರಿ ಬದಿಯ ಸಣ್ಣಪುಟ್ಟ ಅಂಗಡಿಗಳನ್ನು ತೆರವುಗೊಳಿಸಲಾಯಿತು. ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಮೇಲ್ಸೇತುವೆಯ ಅಂಡರ್‌ಪಾಸ್‌ನಲ್ಲಿದ್ದ ಅಂಗಡಿ, ತೊಕ್ಕೊಟ್ಟು ಓವರ್‌ಬ್ರಿಡ್ಜ್, ಕೋಟೆ ಕಾರು ಬೀರಿ, ತಲಪಾಡಿ ಬದಿಯಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಅಂಗಡಿಗಳ ತೆರವು ಮಾಡಲಾಯಿತು.
ತಿಂಗಳ ಹಿಂದೆಯೇ ತೆರವು ಮಾಡಲು ಸೂಚನೆ ನೀಡಲಾಗಿತ್ತು. ಸೋಮವಾರ ಅಂಗಡಿ ಮಾಲಕರು ಸ್ವತಃ ತೆರವುಗೊಳಿಸಿದರೆ ನವಯುಗ್ ಸಂಸ್ಥೆಯ ಸಿಬಂದಿ ಸಹಕರಿಸಿದರು. ಅಧಿಕಾರಿ ಶಾಂತ ರಾಜ್, ರಾ.ಹೆ. ಇಲಾಖೆಯ ಅಧಿಕಾರಿ ಅಜೇಯ್, ನವಯುಗ್‌ನ ಶಿವಪ್ರಸಾದ್ ರೈ, ಟೋಲ್‌ಗೇಟ್ ಪಿಆರ್‌ಒ ಭಾಸ್ಕರ್ ಶೆಟ್ಟಿ ತಲಪಾಡಿ, ಉಳ್ಳಾಲ ಪೊಲೀಸರು, ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಉಪಸ್ಥಿತರಿದ್ದರು.