Advertisement

ಸಮರ್ಪಣ ಸೇವಾ ಮನೋಭಾವದಿಂದ ಯಶಸ್ಸು: ಆನೆಗುಂದಿ ಶ್ರೀ

10:17 PM Jun 20, 2019 | Sriram |

ಕುಂಬಳೆ: ಸಮರ್ಪಣ ಸೇವಾ ಮನೋಭಾವನೆಯ ತೊಡಗಿಸಿಕ್ಕೊಳ್ಳುವಿಕೆಯಿಂದ ಕಾರ್ಯಕ್ರಮದ ಯಶಸ್ಸು ಸಾಧ್ಯ. ಚಾತುರ್ಮಾಸ್ಯದ ಯಶಸ್ಸಿಗೆ ಸಮಸ್ತ ಶಿಷ್ಯವೃಂದದವರು ಒಂದೇ ಮನಸ್ಸಿನಿಂದ ಸಂಘಟಿತರಾಗಿ ಕಾರ್ಯಪ್ರವೃತ್ತ ರಾಗಬೇಕೆಂದು ಕಟಪಾಡಿಯ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮಿ ಕರೆ ನೀಡಿದರು.

Advertisement

ಪಡುಕುತ್ಯಾರಿನ ಆನೆಗುಂದಿ ಸಂಸ್ಥಾನದಲ್ಲಿ ಜು. 16ರಿಂದ ಸೆ. 14ರ ತನಕ ಜರಗಲಿರುವ 15ನೇ ವರುಷದ ಚಾತುರ್ಮಾಸ್ಯ ವ್ರತಾಚರಣೆಯ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಪೂಜ್ಯರು ಆಶೀರ್ವಚನ ನೀಡಿದರು.

ಸಮಸ್ತ ಶಿಷ್ಯವೃಂದದವರ ಮನೆ ಮನೆಗೆ ಆಮಂತ್ರಣ ಪತ್ರಿಕೆಯನ್ನು ತಲಪಿಸುವ ಮತ್ತು ಕಾರ್ಯ ಕ್ರಮದಲ್ಲಿ ಭಾಗಿಯಾಗಿಸುವ ಜವಾಬ್ದಾರಿ ಯನ್ನು ದೇವಸ್ಥಾನಗಳು, ಸಂಘಸಂಸ್ಥೆಗಳು, ವಲಯ ಸಮಿತಿ ಹಾಗೂ ಮಹಾಸಂಸ್ಥಾನದ ಗುರುಸೇವಾ ಪರಿಷತ್‌ ವಹಿಸಿ ಯಶಸ್ವಿಗೊಳಿಸಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚಾತುರ್ಮಾಸ್ಯ ವ್ರತ ನಿರ್ವಹಣ ಸಮಿತಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಆಚಾರ್ಯ ಹಳೆಯಂಗಡಿ ವಿನಂತಿಸಿದರು.
ಶ್ರೀಗಳು ಚಾತುರ್ಮಾಸ್ಯ ವ್ರತಾಚರಣೆಯ ಪೂರ್ವಭಾವಿ ಯಾಗಿ ಕರಾವಳಿಯ 15 ದೇವಸ್ಥಾನ ಗಳಿಗೆ ಹಾಗೂ ಮುಂಬಯಿಗೆ ಸಂದರ್ಶನ ನೀಡುವ ದಿನಗಳನ್ನು ತೀರ್ಮಾನಿಸಲಾಯಿತು. ಸಭೆಯಲ್ಲಿ ಚಾತುರ್ಮಾಸ್ಯ ದಿನಗಳಂದು ನಡೆಯುವ ವಿವಿಧ ಕಾರ್ಯಕ್ರಮಗಳ ಸಿದ್ಧತೆಯ ಬಗ್ಗೆ ಚರ್ಚಿಸಲಾಯಿತು.ಎ. 29 ಮತ್ತು ಆ. 4ರಂದು ನಡೆಯುವ ಜಗದ್ಗುರುಗಳ‌ ಜನ್ಮ ವರ್ಧಂತಿ ಪ್ರಯುಕ್ತ ಕಾರ್ಯಕ್ರಮಗಳು, ಆ. 25ರಂದು ವೈದಿಕ ಸಮಾವೇಶ, ಸೆ. 1ರಂದು ಮಹಿಳಾ ಸಮಾವೇಶ ಮತ್ತು ಸೆ. 8ರಂದು ಯುವ ಸಮಾವೇಶ ಹಾಗೂ ಪ್ರತಿ ದಿನ ಭಜನೆ, ಸತ್ಸಂಗ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾಸಂಸ್ಥಾನದ ಎಜುಕೇಶನಲ್‌ ಟ್ರಸ್ಟ್‌ ಮತ್ತು ಗೋಶಾಲಾ ಟ್ರಸ್ಟ್‌ ಇವುಗಳ‌ ಉದ್ಘಾಟನೆಯೂ ನಡೆಯಲಿವೆ.

ಸಂಸ್ಥಾನದ ಆಸ್ಥಾನ ವಿದ್ವಾಂಸ ಜೋತಿಷ ವಿದ್ವಾನ್‌ ಉಮೇಶ ಆಚಾರ್ಯ ಪಡೀಲು ಮಂಗಳೂರು, ಬ್ರಹ್ಮಶ್ರೀ ಪುರೋಹಿತ ಅಕ್ಷಯ ಶರ್ಮಾ ತಂತ್ರಿ, ಸಮಿತಿ ಗೌರವಾಧ್ಯಕ್ಷ ಪಿ.ವಿ. ಗಂಗಾಧರ ಆಚಾರ್ಯ ಉಡುಪಿ, ಸಮಿತಿಯ ಉಪಾಧ್ಯಕ್ಷ ರಾಗಿರುವ ಕರಾವಳಿ ಶ್ರೀ ಕಾಳಿಕಾಂಬಾ ದೇವಳಗಳ ಧರ್ಮದರ್ಶಿಗಳು ಭಾಗವಹಿಸಿ ಮಾತನಾಡಿದರು. ಆರಂಭದಲ್ಲಿ ವೇದ ಸಂಜೀವಿನಿ ಪಾಠ ಶಾಲೆಯ ವಿಧ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಚಾತುರ್ಮಾಸ್ಯ ವ್ರತ ನಿರ್ವಹಣ ಸಮಿತಿ ಗೌರವ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ. ಆಚಾರ್‌ ಕಂಬಾರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ ವಂದಿಸಿದರು.

ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮುಂಬಯಿ, ಬೆಂಗಳೂರು, ಕೊಯಮತ್ತೂರು ಪ್ರದೇಶಗಳ ಕಾಳಿಕಾಂಬಾ ದೇಗುಲಗಳು ಒಟ್ಟಾಗಿ ಪಡುಕುತ್ಯಾರಿನ ಸಂಸ್ಥಾನದಲ್ಲಿ ಈ ಬಾರಿಯ ವಿಕಾರಿ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆ ಯನ್ನು ಆಯೋಜಿಸಿವೆ. ಪ್ರಥಮವಾಗಿ ಕನ್ನಡ, ಮಲಯಾಳ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next