Advertisement
ಕೆಲವೇ ನಿಮಿಷಗಳಲ್ಲಿ ಮುಗಿದು ಹೋಗುವ, ಉತ್ತಮ ಸಂದೆೇಶಗಳನ್ನು ನೀಡುವ, ನಮ್ಮ ನಡುವೆ ಇರುವ ಸಮಸ್ಯೆಗಳನ್ನೇ ವಿಷಯವಾಗಿಸಿ ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಚಿತ್ರೀಕರಿಸಿ ಯೂಟ್ಯೂಬ್, ಫೇಸ್‌ಬುಕ್‌ಗಳಲ್ಲಿ ಹಂಚಿ ಲಕ್ಷಗಟ್ಟಲೆ ಪ್ರೇಕ್ಷಕರಿಂದ ವೀಕ್ಷಿಸಲ್ಪಟ್ಟು ಚಿತ್ರ ಹಿಟ್ ಆದಾಗ ಚಿತ್ರರಂಗದ ಬಾಗಿಲು ತೆರೆದು ಬಹುದೊಡ್ಡ ಕಲಾವಿದರಾಗಿ ಬೆಳೆದುಬಂದ ಉದಾಹರಣೆಗಳು ಬಹಳಷ್ಟಿವೆೆ.
ಶ್ರೀ ಭಾರತಿ ವಿದ್ಯಾಪೀಠ, ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಮಹಾಲಸ ಚಿತ್ರಕಲಾ ಶಾಲೆ ಮಂಗಳೂರಿನಲ್ಲಿ ಬಿ.ವಿ.ಎ. ಪದವಿ ಓದುತ್ತಿರುವ ಕೃಷ್ಣ ಶರ್ಮ ಮಹಾಲಿಂಗೇಶ್ವರ ಹಾಗೂ ಸಂಧ್ಯಾ ಸರಸ್ವತಿ ದಂಪತಿಯ ಮಗ. ಬಾಲ್ಯದಲ್ಲಿಯೇ ನಟನೆ ಹಾಗೂ ನಿರ್ದೇಶನದೆಡೆಗೆ ಆಸಕ್ತಿ ತೋರುತಿದ್ದ ಕೃಷ್ಣ ಶರ್ಮ ಮುಂದೆ ಆ ಕ್ಷೇತ್ರದತ್ತ ಹೆಜ್ಜೆಯನ್ನಿಟ್ಟರು. ಕಪ್ಪು ಹಣದ ಕರಾಳ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳನ್ನು ವಿಷಯವಾಗಿಟ್ಟು ತಯಾರಿಸಿದ ಮೊದಲ ಕಿರುಚಿತ್ರ ಬ್ಲ್ಯಾಕ್ ಆಂಡ್ ವೈಟ್” 1026ರಲ್ಲಿ ಬೆಳಕು ಕಂಡಿತು. ಇದೊಂದು ಮೂಕಚಿತ್ರವಾಗಿದ್ದು ಜನಮನಗೆಲ್ಲುವಲ್ಲಿ ಯಶಸ್ಸು ಕಂಡಿತು. ಇದು ಇವರ ಎರಡನೇ ಕಿರುಚಿತ್ರ ‘ಕಂಬಳ”ಕ್ಕೆ ಪ್ರೇರಣೆಯಾಯಿತು. ಕಂಬಳದ ಉಳಿವಿಗಾಗಿ ನಿರ್ಮಿಸಿದ ತುಳುಭಾಷಾ ಚಿತ್ರ. ಗೆಳೆಯ ಅಮೋಘನ ನಿರ್ದೇಶನ ಈ ಚಿತ್ರದ ಗೆಲುವಿಗೆ ಕಾರಣವಾಯಿತು. ಲಕ್ಷಾಂತರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
Related Articles
Advertisement
ಈ ಕಿರುಚಿತ್ರಗಳ ಯಶಸ್ಸು ‘ಡಂಗುರ’ ಎಂಬ ಫೇಸ್ ಬುಕ್ ಪೇಜ್ ಪ್ರಾರಂಭಿಸುವಂತೆ ಕೃಷ್ಣ ಶರ್ಮ ಅವರನ್ನು ಪ್ರೇರೇಪಿಸಿತು. ಕನ್ನಡ ಹಾಗೂ ತುಳು ಚಿತ್ರರಂಗದ ಎಲ್ಲಾ ಮಾಹಿತಿಗಳನ್ನು ಈ ಪುಟದಲ್ಲಿ ಹಂಚಲಾಗುತ್ತಿತ್ತು. ಕನ್ನಡದ ಖ್ಯಾತ ನಟ ರಮೇಶ್ ಭಟ್ ಹಾಗೂ ಒಂದು ಮೊಟ್ಟೆಯ ಕಥೆ ಖ್ಯಾತಿಯ ಚಿತ್ರ ನಟ ಹಾಗೂ ನಿರ್ದೇಶಕ ರಾಜೇಶ್ ಬಿ. ಶೆಟ್ಟಿ ಕೃಷ್ಣ ಶರ್ಮರ ಚಟುವಟಿಕೆಗಳಿಗೆ ಬೆನ್ನೆಲುಬಾಗಿರುವ ಈ ತಂಡಕ್ಕೆ ನಿಶ್ಯಬ್ದ ಚಿತ್ರದ ನಾಯಕ ನಟ ರೂಪೇಶ್ ಶೆಟ್ಟಿ, ಕಟಪ್ಪಾಡಿ ಕಟ್ಟಪ್ಪ ಚಿತ್ರದ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ಒಂದು ಮೊಟ್ಟೆಯ ಕಥೆ ಹಾಗೂ ಬಲೆ ತೆಲಿಪಾಲೆ ಖ್ಯಾತಿಯ ಪ್ರಕಾಶ್.ಕೆ ತೂಮಿನಾಡು, ಸೌಜನ್ಯ ಹೆಗಡೆ, ಅಸ್ಥಿಕ್, ಅವಿನಾಶ್, ಹಾಗೂ ಚಿತ್ರರಂಗದ ಪ್ರಮುಖರ ಬೆಂಬಲವಿದೆ. ತಾನು ತಯಾರಿಸಿದ ಐದು ಚಿತ್ರಗಳಿಗೂ ಛಾಯಾಗ್ರಹಣ, ನಿರ್ದೇಶನ ಮುಂತಾದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಕೃಷ್ಣ ಶರ್ಮ ‘ಹನುಮಾನ್ ಕ್ರಿಯೇಶನ್ಸ್’ ಎಂಬ ಯೂ ಟ್ಯೂಬ್ ಚಾನೆಲ್‌ನಲ್ಲಿ ತನ್ನ ಕಿರುಚಿತ್ರಗಳನ್ನು ಹರಿಯಬಿಡುತ್ತಿದ್ದಾರೆ. ಮಾತ್ರವಲ್ಲದೆ ಕನ್ನಡದ ಖ್ಯಾತ ನಿರ್ದೇಶಕ ಸತ್ಯಪ್ರಕಾಶ್ ಅವರ ”ಒಂದಲ್ಲಾ ಎರಡಲ್ಲಾ” ಚಿತ್ರಕ್ಕೆ ಸಹನಿರ್ದೇಶಕನಾಗಿಯೂ ಕೆಲಸಮಾಡಿರುವ ಕೃಷ್ಣ ಶರ್ಮ ತಾನೇ ಒಂದು ಚಿತ್ರವನ್ನು ನಿರ್ಮಿಸುವ ತಯಾರಿಯಲ್ಲಿದ್ದಾರೆ. ಆ ಚಿತ್ರದ ಚಿತ್ರಕಥೆ ಈಗಾಗಲೇ ಸಿದ್ಧಗೊಂಡಿದೆ. ಚಿಕ್ಕ ಪ್ರಾಯದ ಈ ಉತ್ಸಾಹಿ ಯುವಕನ ಕನಸು ನನಸಾಗಿ ಗಡಿನಾಡಿನ ಸಿನಿಮಾ ಪ್ರಿಯರ ನಿರೀಕ್ಷೆಗಳು ಸಾರ್ಥಕವಾಗಲಿ. — ಅಖಿಲೇಶ್ ನಗುಮೊಗಮ್