Advertisement

ಸುಸೂತ್ರ ಮತದಾನಕ್ಕೆ ಅಧಿಕಾರಿಗಳು, ಮತದಾರರೇ ಕಾರಣ: ಜಿಲ್ಲಾಧಿಕಾರಿ

08:00 AM May 18, 2018 | Karthik A |

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ/ಮತ ಎಣಿಕೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಜಿಲ್ಲಾ ಚುನಾವಣ ಆಯೋಗದ ಸರ್ವ ನೇತೃತ್ವದಲ್ಲಿ ಮತದಾನ ಪ್ರಕ್ರಿಯೆ ಸಾಂಗವಾಗಿ ಮತ್ತು ಶಾಂತಿಯುತವಾಗಿ ನಡೆದಿದೆ. ಇದರ ಉಸ್ತುವಾರಿ ನಿರ್ವಹಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಸುಸೂತ್ರ ಮತದಾನಕ್ಕೆ ಅಧಿಕಾರಿಗಳು, ಮತದಾರರೇ ಕಾರಣ ಎಂದಿದ್ದಾರೆ. ಅವರು ದಿನೇಶ್‌ ಇರಾ ಅವರ ಜತೆ ನಡೆಸಿದ ಮಾತುಕತೆ ಇಲ್ಲಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಯ ನಿರ್ವಹಣೆ ಹೇಗೆ ನಡೆಯಿತು?
– ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಮ್ಮ ಎಲ್ಲ ಹಂತದ ಅಧಿಕಾರಿಗಳ ತಂಡ ನಿರ್ವಹಣೆ ಮಾಡಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯೆಂಬಂತೆ ಇಲ್ಲಿನ ಎಲ್ಲ ಪಕ್ಷಗಳು ಕೂಡ ಅತ್ಯಂತ ಶಿಸ್ತಿನಿಂದ ನಮ್ಮ ಜತೆಗೆ ಸಹಕಾರ ನೀಡಿವೆ. ಜಿಲ್ಲೆಯ ಎಲ್ಲ ಮತದಾರರು ಕೂಡ ಅತ್ಯಂತ ಪರಿಪೂರ್ಣ ರೀತಿಯಲ್ಲಿ ಸಹಕರಿಸಿ, ಉತ್ತಮ ಮತದಾನವಾಗುವಂತೆ ನೋಡಿಕೊಂಡಿದ್ದಾರೆ. 

ಚುನಾವಣೆ ಯಶಸ್ಸಿಗೆ ಕಾರಣವೇನು?
– ಬೇರೆ ಸಮಯದಲ್ಲಿ ಬೆಳಗ್ಗೆ ಕಚೇರಿಗೆ ಬಂದು ಸಂಜೆ ಹೋಗುವ ಅಧಿಕಾರಿಗಳು ಚುನಾವಣೆ ಸಂದರ್ಭ ರಾತ್ರಿಯೆಲ್ಲ ರಸ್ತೆಯಲ್ಲಿ ನಿಂತಿದ್ದಾರೆ. ಅವರಿಗೆ ಪ್ರೇರಣೆ ಹಾಗೂ ಸ್ಫೂರ್ತಿ ನೀಡುವ ಕೆಲಸವನ್ನು ಜಿಲ್ಲಾಡಳಿತ ಮಾಡಿದೆ. ಸ್ವೀಪ್‌ ಸಹಿತ ಬೇರೆ ಬೇರೆ ರೀತಿಯ ಸಹಕಾರದಿಂದ ಉತ್ತಮ ಮತದಾನ ಕೂಡ ದಾಖಲಾಗಿದೆ. ಇಲ್ಲಿ ಎಲ್ಲ ಕಡೆಗಳಲ್ಲಿ ಪ್ರಬುದ್ಧ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಒಟ್ಟು ಚುನಾವಣೆ ಯಶಸ್ವಿಯಾಯಿತು.

ಚುನಾವಣ ನಿರ್ವಹಣೆಯ ಕಾಲದಲ್ಲಿ ಸಮಸ್ಯೆಗಳೇನಾದರು ಎದುರಾಯಿತೇ?
– ಸಹಜವಾಗಿ ಪ್ರತೀ ಚುನಾವಣೆ ವೇಳೆಗೆ ಒಂದೊಂದು ಸಮಸ್ಯೆಗಳು ಎದುರಾಗುತ್ತವೆ. ವಿಶೇಷವೆಂದರೆ ಈ ಬಾರಿಯ ಚುನಾವಣೆಯಲ್ಲಿ ಅಂತಹ ಯಾವುದೇ ದೊಡ್ಡ ಸಮಸ್ಯೆ ಎದುರಾಗಲಿಲ್ಲ. ಮತದಾನ ಮಾಡುವ ದಿನ ಆತಂಕ ಎದುರಾಗುವ ಸ್ಥಿತಿ ಈ ಬಾರಿ ನಿರ್ಮಾಣವಾಗಲಿಲ್ಲ. ಕೆಲವೊಮ್ಮೆ ಕೆಲವು ಬೂತ್‌ಗಳಲ್ಲಿ ಮತ ಯಂತ್ರ ಹಾಳಾಗಿ ಮರು ಮತದಾನ ಆಗುವ ಸಂದರ್ಭ ಎದುರಾಗುತ್ತದೆ. ಆದರೆ, ಈ ಬಾರಿ ಅಂತಹ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಇವಿಎಂ ಬಗ್ಗೆ ಕೆಲವು ಪಕ್ಷದವರು ದೂರು ನೀಡಿದ್ದಾರೆ. ಆದರೆ, ಮತದಾನ ಪ್ರಕ್ರಿಯೆ ಬಗ್ಗೆ ಅವರ ದೂರುಗಳಿರಲಿಲ್ಲ.

ಅಂತೂ, ಈ ಬಾರಿಯ ಚುನಾವಣೆ ಒಂದು ರೀತಿಯಲ್ಲಿ  ಸವಾಲು ಆಗಿತ್ತಾ?
– ಚುನಾವಣ ಅಧಿಕಾರಿಗಳು ಈ ಬಾರಿ ತುಂಬಾ ಜನ ಇದ್ದ ಕಾರಣದಿಂದ ಅವರನ್ನು ನಿಯೋಜಿಸುವ ವಿಚಾರ ನಮಗೆ ಸವಾಲಾಗಿತ್ತು. ಜತೆಗೆ, ವಿವಿ ಪ್ಯಾಟ್‌ ಅನ್ನು ಜನರಿಗೆ ಇನ್ನಷ್ಟು ಆಪ್ತಗೊಳಿಸುವುದು ನಮಗೆ ಸವಾಲಾಗಿತ್ತು. ಮತದಾರರು ಮತಗಟ್ಟೆಯ ಒಳಗಡೆ ಬಂದು ಅದೇನೆಂದು ಕೇಳದಂತಹ ವಾತಾವರಣವನ್ನು ನಾವು ಬಹುತೇಕ ಕಲ್ಪಿಸಿಕೊಟ್ಟಿದ್ದೇವೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಪಕ್ಷದವರ ಸ್ಪಂದನೆ ಹೇಗಿತ್ತು?
– ಚುನಾವಣೆ ಘೋಷಣೆಯಾದ ತತ್‌ಕ್ಷಣದಿಂದ ಇಲ್ಲಿನ ಎಲ್ಲ ರಾಜಕೀಯ ಪಕ್ಷದವರು ಜಿಲ್ಲಾಡಳಿತ ಎಲ್ಲ ಕಾರ್ಯಯೋಜನೆಗಳಿಗೆ ಸೂಕ್ತ ಸ್ಪಂದನೆಯನ್ನು ನೀಡುತ್ತಾ ಬಂದಿದ್ದಾರೆ. ಹೀಗಾಗಿ ವಿಶೇಷ ಅಭಿಯಾನ ಕಾರ್ಯಕ್ರಮವನ್ನು ಮುಕ್ತವಾಗಿ ಮಾಡಲು ಸಾಧ್ಯವಾಗಿದೆ. ಬೇರೆ ಜಿಲ್ಲೆಯಲ್ಲಾದರೆ, ಆ ಪಕ್ಷದವರು ಜಿಲ್ಲಾಡಳಿತದ ಜತೆಗೆ ನಾವಿದ್ದೇವೆ ಎಂದು ಹೇಳುತ್ತ ಅವರು ಭಾಗವಹಿಸುವುದಿಲ್ಲ. ಆದರೆ, ದ.ಕ. ಜಿಲ್ಲೆಯಲ್ಲಿ ಜಿಲ್ಲಾಡಳಿತ ಹೇಳಿದ ಸಂದರ್ಭ ಎಲ್ಲ ಪಕ್ಷಗಳು ಪಾಲ್ಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next