Advertisement
ಸ್ವಾತಂತ್ರ್ಯಪೂರ್ವದಲ್ಲಿ ದೇಶ ದಲ್ಲಿ ಅಂಬೆಗಾಲಿಟ್ಟು ಸಾಗುತ್ತಿದ್ದ ಉದ್ದಿಮೆ ಕ್ಷೇತ್ರ ಸ್ವಾತಂತ್ರ್ಯೋತ್ತರದ ಅವಧಿಯಲ್ಲಿ ಆಗಾಧವಾಗಿ ವಿಸ್ತಾರಗೊಂಡಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ದೇಶ ತನ್ನತನವನ್ನು ಪ್ರದರ್ಶಿಸಿದೆ. ಪ್ರಸ್ತುತ ಕೊರೊನಾ ಜಾಗತಿಕ ಕೈಗಾರಿಕ ಕ್ಷೇತ್ರದ ಪುನರ್ ಸಂಘ ಟನ ಆಯಾಮಕ್ಕೆ ನಾಂದಿ ಹಾಡಿದೆ. ಚೀನ ಸಹಿತ ಕೆಲವು ರಾಷ್ಟ್ರಗಳಲ್ಲಿನ ಕೆಲವು ಉದ್ಯಮಗಳು ವಿಶ್ವಾಸನೀಯ ಕೈಗಾರಿಕ ಭಾಗೀದಾರಿಗಳ ಹುಡುಕಾಟದಲ್ಲಿವೆ. ಭಾರತದ ಮಟ್ಟಿಗೆ ಹೇಳುವುದಾದರೆ ಸ್ವಾತ್ರಂತ್ಯದ ಶತಮಾನೋತ್ಸವದ ಮುಂದಿನ 25 ವರ್ಷಗಳ ಕಾಲಘಟ್ಟದ ಅವಧಿಯನ್ನು ಗಮನದಲ್ಲಿಟ್ಟು ಕೊಂಡು ವಿಶ್ಲೇಷಿಸುವುದಾದರೆ ಈ ಪರಿಸ್ಥಿತಿ ಉತ್ತಮ ಅವ ಕಾಶಗಳನ್ನು ಸೃಷ್ಟಿಸಿದೆ. ಇದಕ್ಕೆ ತೆರೆದುಕೊಳ್ಳುವಲ್ಲಿನ ನಮ್ಮ ಕಾರ್ಯಯೋಜನೆಯ ಮೇಲೆ ಕ್ಷೇತ್ರದ ಯಶಸ್ಸು ಅಡಗಿದೆ.
Related Articles
Advertisement
ಉದ್ಯೋಗಾವಕಾಶದಲ್ಲಿ ಇನ್ನೊಂದು ಪ್ರಮುಖ ಕ್ಷೇತ್ರ ವಾಗಿರುವ ಕೃಷಿ ಆಧಾರಿತ ಮತ್ತು ಆಹಾರ ಸಂಸ್ಕರಣ ಉದ್ದಿಮೆಗಳಿಗೆ ಕರಾವಳಿ ಹೆಚ್ಚು ಪೂರಕವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಆಧಾರಿತ ಮತ್ತು ಆಹಾರ ಸಂಸ್ಕರಣ ಉದ್ದಿಮೆಗಳ ಪಾರ್ಕ್‌ಗಳು ಸ್ಥಾಪನೆಯಾಗಬೇಕು. ಮಂಗಳೂರಿನಲ್ಲಿ ವಿಮಾನ ನಿಲ್ದಾಣವಿರುವುದರಿಂದ ಇಲ್ಲಿಂದ ಕಾರ್ಗೊ ಸೌಲಭ್ಯದ ಮೂಲಕ ಕೊಲ್ಲಿ ರಾಷ್ಟ್ರಗಳು ಸೇರಿದಂತೆ ವಿಶ್ವದ ಅನೇಕ ದೇಶಗಳಿಗೆ ಆಹಾರ, ಕೃಷ್ಯುತ್ಪನ್ನಗಳನ್ನು ರಫ್ತು ಮಾಡಲು ಅವಕಾಶವಿದೆ.
ಮಂಗಳೂರಿನಲ್ಲಿರುವ ಬೃಹತ್ ಬಂದರಿನ ಸರಕು ನಿರ್ವಹಣ ಸಾಮರ್ಥ್ಯದ ಪೂರ್ಣ ಬಳಕೆಗೆ ಪೂರಕವಾದ ಯೋಜನೆಗಳು ಅನುಷ್ಠಾನಗೊಳ್ಳಬೇಕಾಗಿದೆ. ಪ್ರಸ್ತುತ ಇದರ ಸಾಮರ್ಥ್ಯದ ಶೇ.50ರಷ್ಟು ಕೂಡಾ ಬಳಕೆಯಾಗುತ್ತಿಲ್ಲ. ಕರಾವಳಿಯಲ್ಲಿ ರಫ್ತು ಅಧಾರಿತ ಕೈಗಾರಿಕೆಗಳು, ರಫ್ತು ಹಬ್‌ಗಳು ಸ್ಥಾಪನೆಯಾಗುವುದು ಇದಕ್ಕೆ ಪೂರಕವಾಗುತ್ತವೆ. ರಾಜ್ಯದ ವಿವಿಧ ಕಡೆಗಳಿಂದ ಇಲ್ಲಿಗೆ ರಫ್ತು ಉತ್ಪನ್ನಗಳು ಸರಾಗವಾಗಿ ಬರುವ ನಿಟ್ಟಿನಲ್ಲಿ ರಸ್ತೆ ಸೌಲಭ್ಯಗಳು ಅಭಿವೃದ್ಧಿ ಯಾಗಬೇಕಾಗಿದೆ. ಬೆಂಗಳೂರು-ಮಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಶಿರಾಡಿ ಘಾಟ್‌ನ್ನು ಸುಗಮ ಸಂಚಾರಕ್ಕೆ ಪೂರಕವಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ಪ್ರಸ್ತಾವನೆಯಲ್ಲಿರುವ ಸುರಂಗ ಮಾರ್ಗ ಯೋಜನೆ ಅತೀ ಶೀಘ್ರ ಅನುಷ್ಠಾನಗೊಳ್ಳಬೇಕಾಗಿದೆ.
ಐಟಿಬಿಟಿ ಕ್ಷೇತ್ರದಲ್ಲಿ ಬೆಂಗಳೂರು ಬಿಟ್ಟರೆ ಮಂಗಳೂರು ವಿಫುಲ ಅವಕಾಶವಿರುವ ನಗರವಾಗಿದೆ. ಮಂಗಳೂರು ನಗರ ಉತ್ತಮ ಸಂಪರ್ಕ ಸೌಲಭ್ಯಗಳನ್ನು ಹೊಂದಿದೆ. ಐಟಿ ಉದ್ಯಮಿಗಳನ್ನು ಮಂಗಳೂರಿಗೆ ಆಕರ್ಷಿಸುವ ನಿಟ್ಟಿನಲ್ಲಿ ಪೂರಕ ಕಾರ್ಯಯೋಜನೆಗಳಾಗಬೇಕಿದೆ. ಪ್ರಸ್ತುತ ಪ್ರಸ್ತಾವನೆಯಲ್ಲಿರುವ ಐಟಿ ಪಾರ್ಕ್‌ಗಳ ಜತೆಗೆ ಒಂದಷ್ಟು ಹೊಸ ಸಾಧ್ಯತೆಗಳತ್ತಲೂ ಗಮನಹರಿಸಬೇಕಾಗಿದೆ.
ಕರಾವಳಿಯಲ್ಲಿ ಪ್ರವಾಸೋದ್ಯಮ ಒಂದು ಪ್ರಮುಖ ಕ್ಷೇತ್ರ. ಇಲ್ಲಿ ಬೀಚ್ ಟೂರಿಸಂ, ಧಾರ್ಮಿಕ ಟೂರಿಸಂ, ಹೆಲ್ತ್ ಟೂರಿಸಂಗೆ ಉತ್ತಮ ಅವಕಾಶಗಳಿವೆ. ಈ ಕ್ಷೇತ್ರದಲ್ಲಿ ಬೆಳ ವಣಿಗೆಗೆ ಅಗಾಧವಾಗಿರುವ ಅವಕಾಶಗಳನ್ನು ಬಳಸಿಕೊಂಡು ಕರಾವಳಿ ಮುಂದಿನ 25ವರ್ಷಗಳಲ್ಲಿ ದೇಶ-ವಿದೇಶಗಳ ಪ್ರವಾಸೋದ್ಯಮ ನಕಾಶೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಈಗಿನಿಂದಲೇ ನೀಲಿನಕಾಶೆಯನ್ನು ಸಿದ್ಧಪಡಿಸಿಕೊಂಡು ಕಾರ್ಯಯೋಜನೆ ರೂಪಿಸುವ ಕಾರ್ಯ ಆಗಬೇಕಾಗಿದೆ.
ಸಂಪರ್ಕ ಮೂಲ ಸೌಕರ್ಯಗಳಲ್ಲಿ ರೈಲ್ವೇ ಸೌಲಭ್ಯ ಪ್ರಮುಖವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಸ್ತುತ ಒಂದು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜಿಲ್ಲಾ ಕೇಂದ್ರ ವಾಗಿರುವ ಮತ್ತು ಉದ್ದಿಮೆಗಳ ಪಾಲಿಗೆ ಪ್ರಮುಖವಾಗಿರುವ ಮಂಗಳೂರು ದಕ್ಷಿಣ ರೈಲ್ವೇ, ನೈರುತ್ಯ ರೈಲ್ವೇ ಹಾಗೂ ಕೊಂಕಣ ರೈಲ್ವೇಯಲ್ಲಿ ಹಂಚಿಹೋಗಿದೆ. ಬಹುಶಃ ಈ ರೀತಿಯ ವ್ಯವಸ್ಥೆ ದೇಶದ ಯಾವುದೇ ಭಾಗದಲ್ಲಿರಲಾರದು. ಇದು ಕೈಗಾರಿಕೆಗಳ ಪಾಲಿಗೆ ಸಮಸ್ಯೆಯಾಗಿದೆ. ಇದನ್ನು ನಿವಾರಿಸಿ ನೈಋತ್ಯ ರೈಲ್ವೇಯ ಮೈಸೂರು ವಿಭಾಗಕ್ಕೆ ಮಂಗಳೂರನ್ನು ಸೇರಿಸಬೇಕು. ಹಾಸನ-ಮಂಗಳೂರು ಮಧ್ಯೆ ರೈಲು ಹಳಿಗಳನ್ನು ದ್ವಿಗುಣಗೊಳಿಸುವುದು ಕೂಡಾ ಅಗತ್ಯವಾಗಿದೆ.
ಕರಾವಳಿ ಜಿಲ್ಲೆಗಳು ಮುಂದಿನ 25 ವರ್ಷಗಳಲ್ಲಿ ದೇಶದ ಮುಂಚೂಣಿಯ ಕೈಗಾರಿಕ ಹಬ್‌ಗಳಲ್ಲೊಂದಾಗಿ ಗುರುತಿಸುವಂತಾಗಲಿ. ಈ ನಿಟ್ಟಿನಲ್ಲಿ ಬಲವಾದ ಇಚ್ಛಾಶಕ್ತಿ ಎಲ್ಲ ವಲಯಗಳಿಂದಲೂ ಪ್ರದರ್ಶಿತಗೊಳ್ಳಲಿ ಎಂಬ ಆಶಯ ನನ್ನದಾಗಿದೆ.
ಜೀವನ್ ಸಲ್ದಾನ
ಅಧ್ಯಕ್ಷರು, ಭಾರತೀಯ ಕೈಗಾರಿಕೆಗಳ ಒಕ್ಕೂಟದ
ದಕ್ಷಿಣ ಕನ್ನಡ ಜಿಲ್ಲಾ ಚಾಪ್ಟರ್