ಉಡುಪಿ: ಯಶಸ್ಸು ಎನ್ನುವುದು ಅಂತಸ್ತು, ಹುದ್ದೆ, ಸಂಪತ್ತಿನ ನೆಲೆಯಲ್ಲಿರುವುದಿಲ್ಲ, ಬದಲಾಗಿ ಮಾನವತೆಯ ಸಾಮಾನ್ಯ ಚಟುವಟಿಕೆಯಲ್ಲಿರುತ್ತದೆ ಎಂದು ಹರಿಯಾಣ ಸೋನಿಪತ್‌ನ ಶ್ರೇಷ್ಠ ಮಾನ್ಯತಾ ಸಂಸ್ಥೆ ಒಪಿ ಜಿಂದಾಲ್ ಗ್ಲೋಬಲ್ ಸ್ಥಾಪಕ ಕುಲಪತಿ ಡಾ| ಸಿ.ರಾಜ್‌ಕುಮಾರ್ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಮಣಿಪಾಲ ಮಾಹೆ ವಿ.ವಿ.ಯ ಮೊದಲ ದಿನದ ಆನ್‌ಲೈನ್ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಾವೀಗ ಅನಿವಾರ್ಯವಾಗಿ ವರ್ಚುವಲ್ ಘಟಿಕೋತ್ಸವವನ್ನು ನಡೆಸುತ್ತಿದ್ದೇವೆ. ಮುಖತಃ ವಿನಿಮಯ ಸಾಧ್ಯವಾಗದೆ ಎಲ್ಲ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಹಾರೈಸುತ್ತಿದ್ದೇವೆ ಎಂದು ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಶುಭ ಕೋರಿದರು.
ವಿ.ವಿ.ಯು 31 ಶಿಸ್ತುಗಳಲ್ಲಿ 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು 28,000 ವಿದ್ಯಾರ್ಥಿಗಳಿಗೆ ನಡೆಸಿದ್ದೇವೆ. ಕೇಂದ್ರ ಸರಕಾರದ ಶ್ರೇಷ್ಠ ಸಂಸ್ಥೆಯ ಮಾನ್ಯತೆ ಮಾಹೆಯ ಜಾಗತಿಕ ದಾಪುಗಾಲಿಗೆ ಇಂಬು ನೀಡಿದೆ ಎಂದು ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್ ಹೇಳಿದರು.
ಕೊರೊನಾ ಸೋಂಕು ಜಾಗತಿಕ ಚಟುವಟಿಕೆಗಳನ್ನು ಅಸ್ತವ್ಯಸ್ತಗೊಳಿಸಿದರೂ ಹೊಸ ಶೋಧಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ನಮ್ಮ ವಿ.ವಿ., ವಿದ್ಯಾರ್ಥಿಗಳು, ಬೋಧಕರು ಪೂರಕವಾಗಿ ಹೆಜ್ಜೆ ಇರಿಸಿದ್ದಾರೆ. ನಮ್ಮ ಸ್ಥಾಪಕರಾದ ಡಾ| ಟಿಎಂಎ ಪೈಯವರು ಹಾಕಿಕೊಟ್ಟ ಮಾರ್ಗದಲ್ಲಿ ಮಾಹೆಯ ಸಾಧನೆ ಮುಂದು ವರಿಯಲಿದೆ ಎಂದು ಸಹಕುಲಪತಿ ಡಾ| ಪಿಎಲ್‌ಎನ್‌ಜಿ ರಾವ್ ಅವರು ಹೇಳಿದರು.
ಮಾಹೆ ಟ್ರಸ್ಟಿ ವಸಂತಿ ಪೈ, ಸಹಕುಲಪತಿಗಳಾದ ಡಾ| ದಿಲೀಪ್ ನಾಯಕ್, ಡಾ| ಸಿ.ಜಿ.ತಮ್ಮಯ್ಯ, ಮೌಲ್ಯಮಾಪನ ಕುಲಸಚಿವ ಡಾ| ವಿನೋದ ಥಾಮಸ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ| ಗೀತಾ ಮಯ್ಯ, ವಿವಿಧ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕುಲಸಚಿವ ಡಾ| ನಾರಾಯಣ ಸಭಾಹಿತ್ ವಂದಿಸಿದರು.
ಸವಾಲಿಗೆ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ
ನೀವೇನು ಜೀವನದಲ್ಲಿ ಮಾಡಲು ಉದ್ದೇಶಿಸಿದ್ದಿರೋ ಅದು ಚಿಕ್ಕ ಪ್ರಮಾಣದ ಧೈರ್ಯ, ದಯೆ, ಪ್ರೀತಿ, ಔದಾರ್ಯದ ಮೂಲಕ ಸಾಧ್ಯವಾಗುತ್ತದೆ. ಈ ಗುಣಗಳು ಸುತ್ತಮುತ್ತಲಿನವರ ಮೇಲೆ ಭಾರೀ ಪರಿಣಾಮವನ್ನು ತರುತ್ತದೆ ಎಂದರು. ನಮ್ಮ ಜೀವನದಲ್ಲಿ ಇದುವರೆಗೆ ಕಾಣದಂತಹ ಬಿಕ್ಕಟ್ಟು ಕಂಡುಬಂದಿದೆ. ಕೊರೊನಾ ಕಾರಣದಿಂದ ಅನಿಶ್ಚಿತತೆ, ಸಂಕೀರ್ಣತೆ ಉಂಟಾಗಿದೆ. ಮಣಿಪಾಲ ವಿ.ವಿ.ಯ ಸುರಕ್ಷೆಯಲ್ಲಿರುವ ನೀವು ಜಾಗತಿಕವಾಗಿ ಕಂಡುಬಂದ ಸವಾಲುಗಳಿಗೆ ಉತ್ತರ ನೀಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಭವಿಷ್ಯದ ಜಾಗತಿಕ ನಾಯಕರಾಗಬೇಕು ಎಂದು ಡಾ| ರಾಜ್ ಕುಮಾರ್ ಹಾರೈಸಿದರು.