Advertisement

ಕೃಷಿ ಬೆಳೆಯ ಜತೆಗೆ ಹೈನುಗಾರಿಕೆಯಲ್ಲೂ ಯಶಸ್ಸು

10:08 AM Jan 04, 2020 | mahesh |

ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

Advertisement

ಹೆಸರು: ಪೂವಪ್ಪ ಬೆಳ್ಚಡ
ಏನು ಕೃಷಿ: ಮಿಶ್ರಬೆಳೆ, ಕೋಳಿಸಾಕಾಣಿಕೆ
ವಯಸ್ಸು: 58
ಕೃಷಿ ಪ್ರದೇಶ: 5 ಎಕ್ರೆ

ಬಂಟ್ವಾಳ: ಬಹು ವಿಧದ ಕೃಷಿಯ ಜತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆಯಲ್ಲಿ ಯಶಸ್ಸು ಕಂಡವರು ಚೇಳೂರು ಗ್ರಾಮದ ಮುಗುಳ್ಯದ ಕೃಷಿಕ ಪೂವಪ್ಪ ಬೆಳ್ಚಡ ಅವರು. ಅಡಿಕೆ-ತೆಂಗಿನ ಜತೆಗೆ ತರಕಾರಿ ಕೃಷಿ, ಬಾಳೆ ಕೃಷಿಯಲ್ಲೂ ಯಶಸ್ವಿಯಾಗಿದ್ದಾರೆ. ತನ್ನ 10ನೇ ವಯಸ್ಸಿನಲ್ಲೇ ಕೃಷಿ ಕಾಯಕದಲ್ಲಿ ತೊಡಗಿಕೊಂಡ ಅವರು ಸುಮಾರು 48 ವರ್ಷಗಳ ಕೃಷಿ ಅನುಭವ ಹೊಂದಿದ್ದಾರೆ. ಅಡಿಕೆ ಬೆಳೆ, ತೆಂಗು, ಬಾಳೆ, ತರಕಾರಿಗಳಲ್ಲಿ ಸೋರೆಕಾಯಿ, ಬಸಳೆ, ಅಲಸಂಡೆ, ಅರಿವೆ ಸೊಪ್ಪು, ಬೆಂಡೆ, ಹೀರೆಕಾಯಿ, ಹಾಗಲಕಾಯಿ, ಬದನೆ ಮೊದಲಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜತೆಗೆ ಹೈನುಗಾರಿಕೆಯನ್ನು ಮಾಡುತ್ತಿದ್ದು, ಪ್ರತಿನಿತ್ಯ ಬೆಳಗ್ಗೆ 10 ಲೀ. ಹಾಲನ್ನು ಡೈರಿಗೆ ನೀಡುತ್ತಿದ್ದಾರೆ. ಆದರೆ ಡೈರಿ ದೂರ ಇರುವ ಕಾರಣದಿಂದ ಸಂಜೆಯ ಹೊತ್ತು ಮನೆಯ ಖರ್ಚಿಗೆ ತಕ್ಕಷ್ಟೇ ಹಾಲು ಕರೆಯುತ್ತಾರೆ.ಇವರ ಬಳಿ ಸುಮಾರು 4 ಸಾವಿರದಷ್ಟು ಸಾಮರ್ಥ್ಯದ ಕೋಳಿ ಫಾರಂ ಇದ್ದು, ಪ್ರಾರಂಭದಲ್ಲಿ ಕಂಪೆನಿ ಯಿಂದ ಬಿಳಿ ಕೋಳಿಗಳನ್ನು ಪಡೆದು ಬಳಿಕ ಅದನ್ನು ಬೆಳೆಸಿ ಕಂಪೆನಿಗೆ ನೀಡುತ್ತಿ ದ್ದರು. ಆದರೆ ಅದರಿಂದ ನಿರೀಕ್ಷಿತ ಆದಾಯ ಸಿಗದ ಹಿನ್ನೆಲೆಯಲ್ಲಿ ಪ್ರಸ್ತುತ ಊರಿನ ಕೋಳಿ ಮರಿಗಳನ್ನು ಖರೀದಿಸಿ, ಪಣೋಲಿಬೈಲು ಭಕ್ತರ ಅಗೇಲು ಸೇವೆಗಾಗಿ ಮಾರಾಟ ಮಾಡುತ್ತಿದ್ದಾರೆ. ಜತೆಗೆ ಆಡುಗಳನ್ನೂ ಸಾಕುತ್ತಿದ್ದಾರೆ.

ಮಿಲ್‌ಗೆ ಮಾರಾಟ
ತಮ್ಮ ಗದ್ದೆಗಳಲ್ಲಿ ಅಡಿಕೆ ತೋಟ ಮಾಡಿದ್ದು, ಬೇರೆಯವರ ಗದ್ದೆಯನ್ನು ಗೇಣಿಗೆ ಪಡೆದು ಭತ್ತದ ಬೇಸಾಯ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೇಸಾಯ ಮಾಡಿದ್ದು, ಪ್ರಸ್ತುತ ಕಾಲು ನೋವಿನಿಂದಾಗಿ ಸುಮಾರು 80 ಸೆಂಟ್ಸ್‌ ಜಾಗದಲ್ಲಿ ಮಾತ್ರ ಬೇಸಾಯ ಮಾಡುತ್ತಿದ್ದಾರೆ. ಅದರಲ್ಲಿ ಮನೆ ಖರ್ಚಿಗೆ ಉಳಿಸಿಕೊಂಡು ಉಳಿದದ್ದನ್ನು ಮಿಲ್‌ಗೆ ಮಾರಾಟ ಮಾಡುತ್ತಿದ್ದಾರೆ.
ಒಂದು ಕಾಲದಲ್ಲಿ ಪೂವಪ್ಪ ಅವರು ಕೃಷಿಯ ಅವಿಭಾಜ್ಯ ಅಂಗವೆನಿಸಿಕೊಂಡಿರುವ ಕಂಬಳದ ಕೋಣ ಗಳನ್ನೂ ಸಾಕಿದ್ದರು. ಜತೆಗೆ ಓಲೆ ಬೆಲ್ಲವನ್ನೂ ತಯಾರಿಸಿ ಮಾರಾಟ ಮಾಡುತ್ತಿದ್ದರು. ಪ್ರಸ್ತುತ ಬೇರೆಯವರಿಂದ ಕಲ್ಲು ಪಡೆದು ಅದರಿಂದ ಬೆಲ್ಲ ತಯಾರಿಸುತ್ತಾರೆ. ಹೀಗೆ ಬಹು ವಿಧದ ಕೃಷಿಯ ಮೂಲಕ ಪೂವಪ್ಪ ಬೆಳ್ಚಡ ಅವರು ಯಶಸ್ವಿಯಾಗಿದ್ದಾರೆ. ಅಡಿಕೆ, ತೆಂಗನ್ನು ಮುಡಿಪು ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಉಳಿದಂತೆ ತರಕಾರಿಯನ್ನು ವಾರಕ್ಕೊಮ್ಮೆ ಆಟೋ ಮೂಲಕ ಮುಡಿಪು ಪೇಟೆಯ ಅಂಗಡಿಗೆ ನೀಡುತ್ತಾರೆ.

ಯಂತ್ರೋಪಕರಣಗಳ ಬಳಕೆ
ಹಿಂದೆ ಸ್ವತಃ ಗದ್ದೆಯ ಉಳುಮೆಗಾಗಿ ಟಿಲ್ಲರನ್ನು ಹೊಂದಿದ್ದ ಪೂವಪ್ಪ ಬೆಳ್ಚಡ ಅವರು ಪ್ರಸ್ತುತ ತಮ್ಮನ ಮನೆಯಿಂದ ಟಿಲ್ಲರ್‌ ಪಡೆದು ಉಳುಮೆ ಮಾಡುತ್ತಾರೆ. ಜತೆಗೆ ಹುಲ್ಲು ಕತ್ತರಿಸುವ ಯಂತ್ರ, ಔಷಧ ಸಿಂಪಡಿ ಸುವ ದೊಡ್ಡ ಹಾಗೂ ಸಣ್ಣ (ಬೆನ್ನಿಗೆ ಹಾಕುವ ಯಂತ್ರ) ಯಂತ್ರಗಳನ್ನು ಉಪಯೋಗಿಸುತ್ತಾರೆ. ನೀರಿಗಾಗಿ ಕೊಳವೆಬಾವಿ ಉಪಯೋಗಿಸುತ್ತಾರೆ.

Advertisement

ಪ್ರಶಸ್ತಿ
ಪೂವಪ್ಪ ಬೆಳ್ಚಡ ಅವರು ಕೃಷಿ ಇಲಾಖೆಯಿಂದ 2008ರಲ್ಲಿ ಕೃಷಿ ಪ್ರಶಸ್ತಿ, 2014ರಲ್ಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ.

 ಅಡಿಕೆ ಗಿಡಗಳು: 2,000
 ಕೋಳಿ ಫಾರಂ ಸಾಮರ್ಥ್ಯ: 4,000
 ಪ್ರತಿನಿತ್ಯ ಹಾಲು: 10 ಲೀ.
 ಗೇಣಿ ಪಡೆದ ಭತ್ತದ ಗದ್ದೆ: 80 ಸೆಂಟ್ಸ್‌
 ಒಟ್ಟು ಆದಾಯ: 5-6 ಲಕ್ಷ ರೂ.ಗಳು
 ಮೊಬೈಲ್‌: 9964154149


ಕೃಷಿಯಲ್ಲಿ ಹೆಚ್ಚು ದುಡಿಮೆ ಅಗತ್ಯ
ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ವರ್ಷಗಳ ಕೃಷಿ ಕಾಯಕದಲ್ಲಿ ತೊಡಗಿರುವ ಅನುಭವ ಹೊಂದಿದ್ದು, ಹಾಲಿ ಕಾಲು ನೋವಿನ ಸಮಸ್ಯೆ ಯಿಂದ ಹಿಂದಿನಂತೆ ದೊಡ್ಡ ಮಟ್ಟದಲ್ಲಿ ಕೃಷಿ ಕಾರ್ಯ ಮಾಡಲು ಕಷ್ಟವಾಗುತ್ತಿದೆ. ಪ್ರಸ್ತುತ ಮನೆ ಯವರ ಸಹಕಾರದಿಂದ ಕೃಷಿ ಕಾರ್ಯ ಮುಂದುವರಿಯುತ್ತಿದೆ. ಹಿಂದೆ ಟಿಲ್ಲರ್‌ ಕೂಡ ಹೊಂದಿದ್ದು, ಸುತ್ತ ಮುತ್ತಲ ಗದ್ದೆಗಳಿಗೆ ಉಳುವುದಕ್ಕೆ ಹೋಗುತ್ತಿದ್ದೆ. ಈಗ ಊರಿನ ಕೋಳಿ ಸಾಕಾಣಿಕೆ ಮಾಡುತ್ತಿದ್ದು, ಅದನ್ನು ಪಣೋಲಿಬೈಲಿಗೆ ಮಾರಾಟಕ್ಕೆ ಕಳುಹಿಸಿಕೊಡಲಾಗುತ್ತಿದೆ. ಕೃಷಿಯಲ್ಲಿ ಹೆಚ್ಚು ದುಡಿಮೆಯ ಅಗತ್ಯವಿದೆ.
-ಪೂವಪ್ಪ ಬೆಳ್ಚಡ ಮುಗುಳ್ಯ, ಪ್ರಗತಿಪರ ಕೃಷಿಕರು

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next