Advertisement

ಕಾಫಿ ಗಿಡಗಳ ಜತೆ ಕರಿ ಮೆಣಸು ಕೃಷಿಯಲ್ಲಿ ಯಶಸ್ಸು

09:44 PM Jan 11, 2020 | mahesh |

ಕರಿಮೆಣಸನ್ನು ಸಾಂಬಾರ ಪದಾರ್ಥಗಳ ರಾಜ ಎಂದು ಕರೆಯುತ್ತಾರೆ. ಈ ಕರಿಮೆಣಸು ಬೆಳೆಯನ್ನು ಕೇರಳ ರಾಜ್ಯದಲ್ಲಿ ಅತಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಇದೀಗ ದೇಶಾದ್ಯಂತ ರೈತಸ್ನೇಹಿ ಬೆಳೆಯಾಗಿ ವ್ಯಾಪಿಸಿದೆ. ಕಪ್ಪು ಬಂಗಾರವೆಂದು ಚಿರಪರಿಚಿತವಾಗಿರುವ ಕರಿಮೆಣಸು ಆಯುರ್ವೇದ ಔಷಧ ಗುಣವನ್ನು ಹೊಂದಿದೆ. ಔಷಧ ತಯಾರಿಕೆಗಳಲ್ಲಿ ಕಾಳುಮೆಣಸನ್ನು ಬಳಸುತ್ತಾರೆ. ಇಂದಿನ ದಿನಗಳಲ್ಲಿ ಅದೆಷ್ಟೋ ಕೃಷಿಕರು ತಮ್ಮ ತೋಟಗಳಲ್ಲಿ ಅಡಿಕೆ, ತೆಂಗು ಕೃಷಿಯೊಂದಿಗೆ ಮಿಶ್ರ ಬೆಳೆಯಾಗಿ ಕಾಳುಮೆಣಸನ್ನು ಬೆಳೆಯುತ್ತಿದ್ದಾರೆ. ಇದಕ್ಕೆ ಪ್ರತ್ಯೇಕ ಗೊಬ್ಬರ ಹಾಕುವ ಆವಶ್ಯಕತೆಯಿಲ್ಲ. ಮುಖ್ಯವಾಗಿ ಬಳ್ಳಿಯ ಬುಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ.

Advertisement

ಕರಾವಳಿಯ ಬಹುತೇಕ ಕೃಷಿಕರು ಮಿಶ್ರ ಬೆಳೆಯನ್ನು ಅವಲಂಬಿಸಿದ್ದಾರೆ. ಈ ಮಧ್ಯೆ ಕಾಳುಮೆಣಸು ಬೆಲೆ ಇಳಿಕೆಯಾಗಿ ರೈತರನ್ನು ಹತಾಶೆಗೆ ದೂಡಿದೆ. ಆದರೆ ಪುತ್ತೂರಿನ ಪೆರ್ನಾಜೆ ನಿವಾಸಿ ಪ್ರಗತಿಪರ ಕೃಷಿಕ ಕುಮಾರ್‌ ಅವರು ಮಾಡಿರುವ ಪ್ರಯೋಗ ಯಶಸ್ಸು ಕಂಡಿದೆ.

ಪೆರ್ನಾಜೆ ಅವರು ಈಗಾಗಲೇ ಹಲವಾರು ಕೃಷಿಯಲ್ಲಿ ಯಶಸ್ವಿ ಪ್ರಯೋಗವನ್ನು ನಡೆಸಿ ಸಫಲವಾಗಿ ಕಡಿಮೆ ಖರ್ಚಿನಲ್ಲಿ ಲಾಭ ಮಾಡುವಂತೆ ಕಾಫಿ ಗಿಡಗಳಿಗೆ ಕಾಳುಮೆಣಸಿನ ಬಳ್ಳಿಗಳನ್ನು ಹರಡಿಕೊಳ್ಳುವಂತೆ ಮಾಡಿದ್ದಾರೆ. ಇದರಿಂದ ಮಹಿಳೆಯರು, ಮಕ್ಕಳು ತಗ್ಗಿನಲ್ಲಿ ನೆಲದಲ್ಲಿ ನಿಂತು ಕೊಯ್ಲು ಮಾಡಲು ಸಾಧ್ಯವಾಗಿದೆ. ಕೃಷಿ ಖುಷಿ ಎಂಬಂತೆ ಕಾಫಿ ಗಿಡ ತುಂಬಾ ಕಾಳುಮೆಣಸು ಬೆಳೆಯುತ್ತಿದ್ದು, ಹೀಗೂ ಉಪಬೆಳೆಗಳು ಕೃಷಿಕನ ಕೈ ಹಿಡಿಯಲು ಸಾಧ್ಯ ಎಂದು ಅಚ್ಚರಿಪಡುವಂತಾಗಿದೆ.

ಒಂದು ಕಾಲದಲ್ಲಿ ಅಡಿಕೆ ಬೆಲೆ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ರೈತ ಕಾಳುಮೆಣಸಿಗೆ ದಕ್ಕಿದ ಬೆಲೆಯಿಂದಾಗಿ ಒಂದಷ್ಟು ಚೇತರಿಸಿಕೊಳ್ಳುತ್ತಿರುವಾಗಲೇ ಅನಿಯಮಿತ ಮಳೆಯಿಂದಾಗಿ ಕಾಳುಮೆಣಸಿನ ಬಳ್ಳಿಗೆ ರೋಗಬಾಧೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದ.

ಬಳ್ಳಿಯಿಂದ ಕಾಫಿಗೆ ಹಾನಿ ಇಲ್ಲ
ಮಲೆನಾಡು ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಅಡಿಕೆ ಮರದ ಮೇಲೆ ಕರಿಮೆಣಸು ಬಳ್ಳಿ ಹಬ್ಬಿಸಿ ಕೃಷಿ ಮಾಡುವುದನ್ನು ನಾವು ಕಾಣಬಹುದು. ಕರಿಮೆಣಸು ಕೃಷಿಕನಿಗೆ ಅಡಿಕೆಯೊಂದಿಗೆ ಉತ್ತಮ ಮಿಶ್ರಬೆಳೆಯಾಗಿ ಆರ್ಥಿಕ ಚೇತರಿಕೆ ನೀಡುವ ಕಾಲವೊಂದಿತ್ತು. ಅಡಿಕೆ ಮರಕ್ಕೆ ಕಾಳುಮೆಣಸು ಬಳ್ಳಿ ಹರಿಯಬಿಟ್ಟ ಸಂದರ್ಭದಲ್ಲಿ ಅಡಿಕೆ ಕೊಯಿಲು ಮಾಡುವಾಗ ಕಾಳುಮೆಣಸಿನ ಗಿಡಕ್ಕೂ ಹಾನಿಯಾಗುತ್ತದೆ. ಆದರೆ ಕಾಫಿ ಗಿಡದಲ್ಲಿ ಈ ಸಮಸ್ಯೆ ಇಲ್ಲ.

Advertisement

ವಿವಿಧ ತಳಿ
ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಸಮಸ್ಯೆಗೆ ನಮ್ಮಲ್ಲೇ ಉತ್ತರವಿದೆ. ಕಾಳು ಮೆಣಸಿನಲ್ಲಿ ಹಲವಾರು ತಳಿಗಳಿವೆ. ಊರ ತಳಿ, ಕರಿಮುಂದ, ಪನ್ನಿಯೂರ್‌-1, ಪನ್ನಿಯೂರ್‌-2, ಕಸಿ ಕಾಳು ಮೆಣಸಿನ ಗಿಡ, ಹೈಬ್ರಿಡ್‌ ಮಲ್ಲಿಗೆ ಸರ ಹೀಗೆ ಹೈಬ್ರಿಡ್‌ ತಳಿಗಳು ಹೆಚ್ಚು ಇಳುವರಿ ಕೊಡುವ ತಳಿಯಾಗಿದ್ದು, ಇದರ ಗೊಂಚಲುಗಳು ಉದ್ದವಾಗಿವೆ. ಕಾಯಿಗಳು ಗಾತ್ರದಲ್ಲಿ ದೊಡ್ಡದಾಗಿ ಹಾಗೂ ಎಲೆಗಳು ದೊಡ್ಡದಾಗಿದ್ದು ತಿಳಿ ಹಸಿರು ಬಣ್ಣ ಹೊಂದಿರುತ್ತದೆ.

ಬೋರ್ಡೊ ದ್ರಾವಣ ಬಳಸಿ
ಬೆಳೆದ ಕಾಳುಮೆಣಸು ಹಾಗೂ ಅದರ ಬಳ್ಳಿಗೆ ವಿವಿಧ ಬಗೆಯ ರೋಗಗಳು ತಪ್ಪಿದ್ದಲ್ಲ. ತೀವ್ರ ಸೊರಗು ರೋಗ, ಎಲೆಚುಕ್ಕೆ ರೋಗ, ಹಳದಿ ರೋಗ, ಅಂತಹ ಹಾವಳಿಗಳು ತುಂಬಾ ಇವೆ. ಇದಕ್ಕೆ ಬೋರ್ಡೊ ದ್ರಾವಣದ ಸ್ಪ್ರೆàಯಿಂದ ರೋಗವನ್ನು ಹತೋಟಿಗೆ ತರಬಹುದು. ಕಾಪರ್‌ ಆಕ್ಸಿಕ್ಲೋರೈಡ್‌, ಕ್ಲೋರೈಡ್‌ ದ್ರಾವಣಗಳನ್ನು ಬುಡಗಳಿಗೆ ಸುರಿಯುವುದರಿಂದ ರೋಗವನ್ನು ತಡೆಗಟ್ಟಬಹುದು ಎನ್ನುತ್ತಾರೆ ಕುಮಾರ್‌ ಪೆರ್ನಾಜೆ.

ಹೇರಳ ಫ‌ಸಲು
ಇತ್ತೀಚಿನ ದಿನಗಳಲ್ಲಿ ಕರಿಮೆಣಸು ಬಳ್ಳಿ ಬಿಡಲೆಂದು ಕೃಷಿಕರು ಮಡಿಕೇರಿ ಕಡೆ ಸಿಲ್ವರ್‌ ಓಕ್‌ ಮರಗಳನ್ನು ಬೆಳೆಸಿದ್ದಾರೆ. ಆದರೆ, ನಮ್ಮೂರಲ್ಲಿ ಗುಡ್ಡದ ಮರಗಳಿಗೆ, ಗೇರು, ಹೊಂಗಾರೆ ಮರಗಳನ್ನು ನೆಟ್ಟು ಕಾಳುಮೆಣಸು ಬಳ್ಳಿಗಳನ್ನು ಬಿಡುತ್ತಾರೆ. ಆದರೆ, ಕುಮಾರ ಪೆರ್ನಾಜೆಯವರು ತೋಟದ ಮಧ್ಯೆ ಕಾಫಿ ಗಿಡಗಳನ್ನು ನೆಟ್ಟು ಅದಕ್ಕೆ ಬಳ್ಳಿಯನ್ನು ಬಿಟ್ಟಿರುವುದರಿಂದ ಅವರಿಗೆ ಕಾಫಿಯ ಜತೆ ಕರಿಮೆಣಸು ಹೇರಳವಾಗಿ ಫಸಲು ಬಿಡುತ್ತಿದೆ. ಕಡಿಮೆ ಬಂಡವಾಳದಿಂದ ಅಧಿಕ ಆದಾಯ ಪಡೆಯಬಹುದೆಂದು ಅವರು ತೋರಿಸಿ ಕೊಟ್ಟಿದ್ದಾರೆ.

ಉತ್ತಮ ಫಸಲು
25 ಕಾಫಿ ಗಿಡಗಳಲ್ಲಿ ಕಾಳುಮೆಣಸು ನೆಟ್ಟಿದ್ದು ಅದರಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ಆದರೆ, ಕೊಕ್ಕೋ ಮರಗಳಿಗೆ ಕಾಳುಮೆಣಸು ಬಳ್ಳಿ ನೆಟ್ಟಿದ್ದು, ಅದರಲ್ಲಿ ಉತ್ತಮ ಬೆಳವಣಿಗೆ ಕಾಣಲಿಲ್ಲ. ಒಂದು ಕಾಫಿ ಗಿಡದಲ್ಲಿ ಮೂರರಿಂದ ನಾಲ್ಕು ಕವಲು ರೆಂಬೆಗಳು ಇರುತ್ತವೆ ಮತ್ತು ಅಲ್ಲಿ ಹರಡಿದ ಕಾಳುಮೆಣಸನ್ನು ಕೊಯ್ಯಲೂ ಸುಲಭವಾಗುತ್ತದೆ..
– ಕುಮಾರ ಪೆರ್ನಾಜೆ, ಕೃಷಿಕ

– ರಾಜೇಶ್‌ ಪಟ್ಟೆ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next