ಮಹಾನಗರ: ಏಕಾಗ್ರತೆ, ಉತ್ತಮ ತರಬೇತಿ, ಸಮತೋಲನ ಶಾರೀರಿಕ ಸಾಮರ್ಥ್ಯ ಮತ್ತು ಶಿಸ್ತು ಬದ್ಧ ಜೀವನ ಮುಂತಾದವುಗಳಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಇಂತಹ ಗುಣಗಳಿಂದಲೇ ಶ್ರೇಷ್ಠ ಕ್ರೀಡಾಳುಗಳು ಉದ್ಭವಿಸಿದ್ದಾರೆ ಎಂದು ಮಂಗಳೂರು ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ | ವಿಲಿಯಂ ಮಿನೇಜಸ್ ಹೇಳಿದರು.
ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ವತಿಯಿಂದ ನಗರದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ ಸಿಬಿಎಸ್‌ಸಿ – ಐಸಿಎಸ್‌ಇ ಅಂತರ್ ಶಾಲಾ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ನಿರಂತರ ಶ್ರಮ ಮತ್ತು ಉನ್ನತ ಲಕ್ಷ್ಯದಿಂದಲೇ ಉಸೇನ್ ಬೋಲ್ಟ್, ಸೈನಾ ನೆಹ್ವಾಲ್ ಮುಂತಾದವರು ಕ್ರೀಡಾ ರಂಗದಲ್ಲಿ ಬೆಳಗಿದ್ದಾರೆ. ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಬೆಳಗಿಸಲು ಈ ಶಾಲೆಯಲ್ಲಿ ಉತ್ತಮ ಭೂಮಿಕೆಯನ್ನು ನೀಡಲಾಗುತ್ತದೆ. ಅದರ ಸಂಪೂರ್ಣ ಪ್ರಯೋಜನ ಪಡೆದು ಜೀವನದಲ್ಲಿ ಯಶಸ್ಸನ್ನು ಗಳಿಸಲು ಪ್ರಯತ್ನಿಸುವಂತೆ ಅವರು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಫಾ | ವಿಲ್ಸನ್ ವೈಟಸ್ ಎಲ್. ಡಿ’ ಸೋಜಾ ಅವರು ದೈಹಿಕ ಕ್ಷಮತೆ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಲು ಕ್ರೀಡೆ, ವ್ಯಾಯಾಮಗಳು ಪೂರಕವಾಗಿವೆ. ದೇವರ ಆಶೀರ್ವಾದದಿಂದ ಮತ್ತು ಸತತ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸಿನ ಮೆಟ್ಟಲೇರಬೇಕು ಎಂದರು.
ದ.ಕ.,ಉಡುಪಿ ಜಿಲ್ಲೆಗಳನ್ನೊಳಗೊಂಡ 26 ಶಾಲೆಗಳಿಂದ ಬಾಲಕರ ವಿಭಾಗದಲ್ಲಿ 26 ತಂಡಗಳು ಹಾಗೂ ಬಾಲಕಿಯರ ಭಾಗದಲ್ಲಿ 20 ತಂಡಗಳು ಭಾಗವಹಿಸಿವೆ. ಶಾಲಾ ಪ್ರಾಂಶುಪಾಲ ರೋಬರ್ಟ್ ಡಿ’ಸೋಜಾ ಪ್ರಸ್ತಾವನೆಗೈದು ಸ್ವಾಗತಿಸಿದರು. ಡಾನ್‌ಬಾಸ್ಕೊ ಶಾಲಾ ಪ್ರಾಂಶುಪಾಲ ಫಾ| ಮ್ಯಾಕ್ಸಿಮ್ ಡಿ’ಸೋಜಾ, ಆಡಳಿತ ಮಂಡಳಿಯ ಸ್ಟೇನಿ ವಾಸ್, ದಾಯಿj ವಲ್ಡ್ ಪ್ರವೀಣ್ ತಾವ್ರೊ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ವಿಶ್ವನಾಥ್ ದೇವಾಡಿಗ, ಗೌತಮ್ ಶೆಟ್ಟಿ, ಧೀರೇಂದ್ರ ಆಳ್ವ ಅವರು ಸಂಯೋಜಿಸಿದರು.
ಶಿಕ್ಷಕಿಯರಾದ ಲಿನೆಟ್ ಪಿರೇರಾ ನಿರ್ವಹಿಸಿ, ಗ್ರೇಸ್ ರೋಚ್ ವಂದಿಸಿದರು.