Advertisement

ಅದೃಷ್ಟದ ಜತೆಗೆ ಪ್ರಯತ್ನದ ಬಲವಿದ್ದಾಗ ಯಶಸ್ಸು: ಎಂಆರ್‌ಜಿ ಪ್ರಕಾಶ್‌ ಶೆಟ್ಟಿ

12:05 AM Jun 08, 2024 | Team Udayavani |

ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ಸಜ್ಜಾದ ಎರಡು ದಿನಗಳ ಆಳ್ವಾಸ್‌ ಪ್ರಗತಿ-ಬೃಹತ್‌ ಉದ್ಯೋಗ ಮೇಳವನ್ನು ಶುಕ್ರವಾರ ಎಂಆರ್‌ಜಿ ಗ್ರೂಪ್‌ನ ಸ್ಥಾಪಕಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಉದ್ಘಾಟಿಸಿದರು.

Advertisement

ಸಾಂಸ್ಕೃತಿಕ, ಕ್ರೀಡೆ, ಶೆ„ಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿ ರುವ ಮೂಡುಬಿದಿರೆಯ ಆಳ್ವಾಸ್‌ ಸಂಸ್ಥೆ ಹಲವು ವರ್ಷಗಳಿಂದ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಉದ್ಯೋ ಗದ ಸದಾವಕಾಶವನ್ನು ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯೆಯೊಂದಿಗೆ ಸಾಮಾನ್ಯ ಜ್ಞಾನವೂ ಬೇಕು.ಯೋಜನೆ, ಆಡಳಿತ, ವ್ಯವಹಾರದ ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಬಹುದು ಎಂದು ಅವರು ಹೇಳಿದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಇದು ಸಂಪೂರ್ಣವಾಗಿ ಉಚಿತವಾಗಿ ನಡೆಯುವ ಬೃಹತ್‌ ಉದ್ಯೋಗ ಮೇಳ. ಈ ಬಾರಿಯೂ ದೇಶ ವಿದೇಶಗಳಿಂದ 254 ಪ್ರತಿಷ್ಠಿತ ಸಂಸ್ಥೆಗಳು ನೇಮಕಾತಿಯನ್ನು ನಡೆಸಲು ಬಂದಿರುವುದು ಸಂತಸದ ವಿಷಯ ಎಂದು ಹೇಳಿದರು.

ಕರಾವಳಿಗೆ ಬರಲಿ ಇನ್ನಷ್ಟು ಐಟಿ ಕಂಪೆನಿಗಳು
ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್‌, ಆಳ್ವಾಸ್‌ ಪ್ರಗತಿ ಎನ್ನುವ ಬೃಹತ್‌ ಉದ್ಯೋಗ ಮೇಳ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ವನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಶೈಕ್ಷಣಿಕವಾಗಿ ಮುಂದಿರುವ ಕರಾವಳಿ ಭಾಗದಲ್ಲಿ ಉದ್ಯೋಗ ಆಸಕ್ತರು ಬಹಳಷ್ಟು ಜನರಿದ್ದಾರೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಇನ್ನಷ್ಟು ಐಟಿ ಕಂಪೆನಿಗಳು ಕರಾವಳಿ ಭಾಗದಲ್ಲಿ ಸ್ಥಾಪನೆಯಾಗಲಿ ಎಂದರು.

ಪ್ರಗತಿ ವಿಶೇಷತೆ‌
ನೋಂದಣಿ, ವಿದ್ಯಾರ್ಹತೆಗೆ ತಕ್ಕಂತೆ ಕಲರ್‌ ಕೋಡ್‌ ವಿತರಣೆ, ಕಲರ್‌ ಕೋಡ್‌ಗೆ ಸಮವಾಗಿರುವ ವಿವಿಧ ಉದ್ಯೋಗಗಳ ಸಂದರ್ಶನ ಮೊದಲಾದ ವಿಷಯಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಲ್ಲ ವಿಭಾಗಗಳ ಉದ್ಯೋಗಗಳ ಪೂರ್ಣ ಮಾಹಿತಿಗಳಿರುವ ಕೈಪಿಡಿಯನ್ನು ಅಭ್ಯರ್ಥಿಗಳಿಗೆ ಆರಂಭದಲ್ಲೇ ನೀಡಲಾಯಿತು.

Advertisement

ಉದ್ಯೋಗ ಮಾಹಿತಿ ಕೇಂದ್ರ/ತರಬೇತಿ
ಉದ್ಯೋಗ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಉದ್ಯೋಗ ಮಾಹಿತಿ ಕೇಂದ್ರ ಹಾಗೂ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಮ್ಮಾನ
ಕರಾವಳಿಯಲ್ಲಿ ಐಟಿ ಕಂಪೆನಿಗಳನ್ನು ಸ್ಥಾಪಿಸಿರುವ 6 ಪ್ರಮುಖ ಕಂಪೆನಿಗಳ ಮುಖ್ಯಸ್ಥರನ್ನು ಸಮ್ಮಾನಿಸಲಾಯಿತು. ಗ್ಲೋಟಚ್‌ ಟೆಕ್ನಾಲಜಿಯ ಅಧ್ಯಕ್ಷೆ ವಿದ್ಯಾ ರವಿಚಂದ್ರನ್‌, ನೀವಿಯಸ್‌ ಸೊಲ್ಯೂಷನ್ಸ್‌ನ ಗೋಕುಲ್‌ ನಾಯಕ್‌, ಮಂಗಳೂರಿನ ಟಿಐಇಯ ಸಂಸ್ಥಾಪಕ, 99 ಗೇಮ್ಸ್‌ ಮತ್ತು ರೋಬೋಸಾಫ್ಟ್‌ನ ಅಧ್ಯಕ್ಷ ರೋಹಿತ್‌ ಭಟ್‌, ಇಜಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ನ ಸಿಇಒ ಮತ್ತು ನಿರ್ದೇಶಕ ಆನಂದ ಫೆನಾಂìಡಿಸ್‌ , ಜುಗೋ ಸ್ಟುಡಿಯೊಸ್‌ ಪ್ರೈವೇಟ್‌ ಲಿಮಿಟೆಡ್‌ನ‌ ಡೆಲಿವರಿ ವಿಭಾಗದ ಉಪಾಧ್ಯಕ್ಷ ಅಭಿಜಿತ್‌ ಶೆಟ್ಟಿ, ಮಂಗಳೂರಿನ ಬಿಪಿಎಂ ಆಪರೇಶನ್ಸ್‌ ಇನೊಧೀಸಿಸ್‌ನ ಮುಖ್ಯಸ್ಥ ಲಲಿತ್‌ ರೈ ಇವರನ್ನು ಸಮ್ಮಾನಿಸಲಾಯಿತು.

ಉದ್ಯಮಿ ಶ್ರೀಪತಿ ಭಟ್‌, ಟ್ರಸ್ಟಿ ವಿವೇಕ್‌ ಆಳ್ವ ಉಪಸ್ಥಿತರಿದ್ದರು.ಆಳ್ವಾಸ್‌ ಪ.ಪೂ.ಕಾಲೇಜಿನ ಕಲಾ ವಿಭಾಗದ ಡೀನ್‌ ವೇಣುಗೋಪಾಲ್‌ ಶೆಟ್ಟಿ ನಿರೂಪಿಸಿದರು.

ಮೊದಲ ದಿನದ ವಿವರ
-ಆಗಮಿಸಿದ ಕಂಪೆನಿಗಳು: 258
-ಆನ್‌ಲೈನ್‌ ನೋಂದಣಿ ಮಾಡಿಸಿದ ಉದ್ಯೋಗಾಕಾಂಕ್ಷಿಗಳು: 17,325
– ಸ್ಥಳದಲ್ಲೇ ನೋಂದಣಿ ಮಾಡಿಸಿದವರು: 1,573
– ಮೊದಲ ದಿನ ಆಗಮಿಸಿದ ಉದ್ಯೋಗಾಕಾಂಕ್ಷಿಗಳು: 13,238
-ಮೊದಲ ದಿನ ಆವಶ್ಯಕತೆ ಉಳ್ಳವರಿಗೆ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಉಚಿತ ವಸತಿ ವ್ಯವಸ್ಥೆ ಮಾಡಲಾಗಿತ್ತು.

“ಉತ್ತಮ ವ್ಯವಸ್ಥೆ. ಕಲರ್‌ ಕೋಡಿಂಗ್‌ ಮತ್ತು ಇತರ ವ್ಯವಸ್ಥೆಗಳು ನಮಗೆ ಸಹಕಾರಿ. ಕಂಪ್ಯೂಟರ್‌ ಸೈನ್‌ಗೆ ಸಂಬಂಧಿಸಿದ ಕಂಪೆನಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಒಳ್ಳೆಯದಿತ್ತು.
-ಯೋಗೀಶ್‌, ಸುಳ್ಯ
(ಕಂಪ್ಯೂಟರ್‌ ಸೈನ್ಸ್‌ ಡಿಪ್ಲೊಮಾ)

“ಆನ್‌ಥೆಂ ಬಯೋ ಸೈನ್ಸ್‌, ಆ್ಯಪ್ಸ್‌ ಆ್ಯಂಡ್‌ ಡಿವೈಸಸ್‌ ಮೊದಲಾದ ಉತ್ತಮ ಕಂಪೆನಿಗಳು ಬಂದಿವೆ, ಶನಿವಾರ ಮತ್ತೆ ಇನ್ನಷ್ಟು ಕಂಪೆನಿಗಳನ್ನು ಕಾಣಬೇಕಾಗಿದೆ. ವ್ಯವಸ್ಥೆ ಉತ್ತಮ.
-ಸೌಮ್ಯಾ ಮಂಗಳೂರು
(ಎಂಎಸ್‌ಸಿ ಇನ್‌ ಕೆಮಿಸ್ಟ್ರಿ)

Advertisement

Udayavani is now on Telegram. Click here to join our channel and stay updated with the latest news.

Next