Advertisement

ಯಶಸ್ಸು ಮತ್ತು ಚಾಕ್ಲೆಟ್ ಆಸೆ

12:56 AM Sep 04, 2019 | mahesh |

ಜೀವನದ ಅನೇಕ ಕ್ಷೇತ್ರಗಳಲ್ಲಿ ಸಾಫ‌ಲ್ಯ ಪಡೆಯುವ ಅತಿ ಮುಖ್ಯ ಮಾರ್ಗ ಯಾವುದು? ಒಂದು ಅತ್ಯುತ್ತಮ ಮಾರ್ಗವೆಂದರೆ ಆತ್ಮ ಸಂಯಮ. 1960ರಲ್ಲಿ ಸ್ಟಾನ್‌ಫ‌ರ್ಡ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ವಾಲ್ಟರ್‌ ಮಿಶೆಲ್ ಅವರು ಪುಟ್ಟ ಮಕ್ಕಳ ಆತ್ಮಸಂಯಮ, ತಾಳ್ಮೆಯನ್ನು ಪರೀಕ್ಷಿಸಲು ಪ್ರಯೋಗವೊಂದನ್ನು ನಡೆಸಿದರು. ಈ ಪ್ರಯೋಗ ‘ಮಾರ್ಶ್‌ಮೆಲ್ಲೋ ಎಕ್ಸ್‌ಪರಿಮೆಂಟ್’ ಎಂದು ವಿಖ್ಯಾತವಾಗಿದೆ. ಈ ಪ್ರಯೋಗದಲ್ಲಿ 165 ಮಕ್ಕಳು ಪಾಲ್ಗೊಂಡಿದ್ದರು.

Advertisement

ನೀವೇ ಯೋಚಿಸಿ ನೋಡಿ. 3 ವರ್ಷದ ಮಗುವಿನ ಆತ್ಮಸಂಯಮವನ್ನು ಪರೀಕ್ಷಿಸುವುದಕ್ಕೆ ಹೇಗೆ ಸಾಧ್ಯ? ವಾಲ್ಟರ್‌ ಮಿಶೆಲ್ ಏನು ಮಾಡಿದರೆಂದರೆ ಮಕ್ಕಳ ಮುಂದೆ ಮಾರ್ಶ್‌ಮೆಲ್ಲೋ ಎಂಬ ಸಿಹಿ ಖಾದ್ಯವನ್ನು(ಚಾಕ್ಲೆಟ್ ಎಂದುಕೊಳ್ಳಿ) ಇಟ್ಟು ಅವರಿಗೆ ಹೇಳಿದರು-‘ಈ ಚಾಕ್ಲೆಟ್‌ನ ನೀವು ಈಗಲೇ ತಿನ್ನಬಹುದು. ಇಲ್ಲದಿದ್ದರೆ 20 ನಿಮಿಷ ಕಾಯಬಹುದು. 20 ನಿಮಿಷ ತಿನ್ನದೇ ಇದ್ದರೆ, ಎರಡು ಚಾಕ್ಲೆಟ್ ಕೊಡುತ್ತೇವೆ!’ ಎಂದು ಮಕ್ಕಳಿಗೆ ಅರ್ಥಮಾಡಿಸಿದರು.

ಕೆಲವು ಮಕ್ಕಳು ಚಾಕ್ಲೆಟ್ ಎದುರು ಇಟ್ಟ ತಕ್ಷಣ ಒಂದು ಕ್ಷಣವೂ ಯೋಚನೆ ಮಾಡದೆ ಗಬಕ್ಕನೆ ತಿಂದು ಬಿಟ್ಟವು, ಇನ್ನೂ ಕೆಲವು ಮಕ್ಕಳು ಒಂದೆರಡು ನಿಮಿಷ ಯೋಚನೆ ಮಾಡಿ ಸಂಯಮ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದವಾದರೂ ಕೊನೆಗೆ ಅವುಗಳ‌ ಬುದ್ಧಿ ಕೈಕೊಟ್ಟಿತು, ಅವು ತಡೆಯಲಾರದೆ ಚಾಕ್ಲೆಟ್ ಎತ್ತಿಕೊಂಡವು. ಮತ್ತಷ್ಟು ಮಕ್ಕಳು 5-10 ನಿಮಿಷಗಳವರೆಗೆ ಚಾಕ್ಲೆಟ್ ತಿನ್ನದೇ ಇರಲು ಪ್ರಯತ್ನಿಸಿದವು-ಚಾಕ್ಲೆಟ್ ಕಡೆ ನೋಡದೇ ಅತ್ತಿತ್ತ ನೋಡುತ್ತಾ, ಕುಣಿದಾಡುತ್ತಾ ಮನಸ್ಸನ್ನು ಚಾಕ್ಲೆಟ್‌ನ ಆಸೆಯಿಂದ ದೂರವಿಡಲು ಪ್ರಯತ್ನಿಸಿದವಾದರೂ, ಕೊನೆಗೂ ಅವೂ ಸಂಯಮ ಕಳೆದುಕೊಂಡು ಜಿಹ್ವಾಚಾಪಲ್ಯಕ್ಕೆ ಶರಣಾದವು. ಆದರೆ ಕೆಲವೇ ಕೆಲವು ಮಕ್ಕಳು ಮಾತ್ರ 20 ನಿಮಿಷದವರೆಗೆ ಸಂಯಮ ಕಾಯ್ದುಕೊಂಡವು. ಆಟದಲ್ಲಿ ಗೆದ್ದದ್ದಕ್ಕಾಗಿ ಈ ಬೆರಳೆಣಿಕೆಯ ಮಕ್ಕಳಿಗೆ ಎರಡು ಚಾಕ್ಲೆಟ್ ಕೊಡಲಾಯಿತು.

ಪ್ರಯೋಗ ಇಲ್ಲಿಗೇ ನಿಲ್ಲಲಿಲ್ಲ. ಮುಂದೆ ಹಲವು ವರ್ಷಗಳು ಕಳೆದವು. ಅಂದು ಪ್ರಯೋಗದಲ್ಲಿ ಪಾಲ್ಗೊಂಡ ಮಕ್ಕಳು ಈಗ ಜೀವನದಲ್ಲಿ ಏನಾಗಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ವಾಲ್ಟರ್‌ ಮಿಶೆಲ್ ಮತ್ತು ತಂಡಕ್ಕೆ ಆರಂಭವಾಯಿತು. ಅವರು ಈ ಮಕ್ಕಳ ಬೆಳವಣಿಗೆಯ ಬಗ್ಗೆ ಮಾಹಿತಿ ಕಲೆಹಾಕಲಾರಂಭಿಸಿದರು. ಯಾವ ಮಕ್ಕಳು ಹೆಚ್ಚು ಆತ್ಮಸಂಯಮವನ್ನು, ತಾಳ್ಮೆಯನ್ನು ತೋರಿದ್ದರೋ ಅವರು ಓದಿನಲ್ಲಿ ಹೆಚ್ಚು ಅಂಕ ತೆಗೆದಿದ್ದವು, ದೊಡ್ಡವರಾಗಿ ಆ ಮಕ್ಕಳು ಒಳ್ಳೆಯ ಕೆಲಸ ಗಿಟ್ಟಿಸಿಕೊಂಡಿದ್ದರು, ಅವರಲ್ಲಿ ಸಿಟ್ಟು ಕಡಿಮೆ ಇತ್ತು, ಅವರ ಕೌಟುಂಬಿಕ ಸಂಬಂಧಗಳು ಮಧುರವಾಗಿದ್ದವು, ಡಿವೋರ್ಸ್‌ ರೇಟ್ಗಳು ಕಡಿಮೆಯಿದ್ದವು. ಆರೋಗ್ಯದ ವಿಚಾರದಲ್ಲೂ ಅಂದು 20 ನಿಮಿಷ ಸಂಯಮ ತೋರಿದ ಮಕ್ಕಳು ದೊಡ್ಡವರಾದ ಮೇಲೆ ತುಂಬಾ ಸ್ವಸ್ಥರಾಗಿದ್ದರು. ಏಕೆಂದರೆ ಅವರಿಗೆ ಹೇಗೂ ನಾಲಿಗೆಯ ಮೇಲೆ ಕಂಟ್ರೋಲ್ ಇತ್ತಲ್ಲ!

ಇನ್ನು ಯಾವ ಮಕ್ಕಳಲ್ಲಿ ಆತ್ಮಸಂಯಮ ಕಡಿಮೆ ಇತ್ತೋ, ಅವರು ಮುಂದೆ ಜೀವನದಲ್ಲಿ ಅನೇಕಾನೇಕ ಸಮಸ್ಯೆಗಳಲ್ಲಿ ಸಿಲುಕಿದ್ದರು. ಓದಿನಲ್ಲಿ ಅವರು ಕಷ್ಟ ಎದುರಿಸುತ್ತಿದ್ದರು, ಒಳ್ಳೆಯ ನೌಕರಿಯಲ್ಲಿ ಇರಲಿಲ್ಲ(ಒಳ್ಳೆಯ ನೌಕರಿ ಸಿಕ್ಕರೂ ಕೆಲವೇ ಸಮಯದಲ್ಲಿ ಅದನ್ನೂ ಕಳೆದುಕೊಳ್ಳುತ್ತಿದ್ದರು), ಸಾಂಸಾರಿಕ ತೊಂದರೆಗಳು ವಿಪರೀತವಾಗಿದ್ದವು, ಅವರಲ್ಲಿ ಕೆಲವರಂತೂ ಜೈಲಿಗೂ ಹೋಗಿ ಬಂದಿದ್ದರು, ಇನ್ನು ಬಹುತೇಕರ ದೇಹಾರೋಗ್ಯವೂ ಸರಿಯಾಗಿ ಇರಲಿಲ್ಲ. ನಾಲಿಗೆಯ ಮೇಲೆ ಹಿಡಿತವಿಲ್ಲದೇ ಬೊಜ್ಜು ಬೆಳೆಸಿಕೊಂಡಿದ್ದರು.

Advertisement

ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದ ಸಫ‌ಲತೆಯಲ್ಲೂ ತಾಳ್ಮೆ, ಸಂಯಮದ ಪಾತ್ರ ಮಹತ್ತರವಾದದ್ದು ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದರು.

ನಾನು ಈ ವಿಚಾರವನ್ನು ನನ್ನ ಪ್ರವಚನಗಳಲ್ಲಿ ಹೇಳಿದಾಗಲೆಲ್ಲ ಬಹುತೇಕರು ಎದುರಿಡುವ ಪ್ರಶ್ನೆ ಒಂದೇ- ‘ಸ್ವಾಮೀಜಿ ನನಗೆ ಚಿಕ್ಕಂದಿನಿಂದಲೂ ಆತ್ಮಸಂಯಮ ಇರಲಿಲ್ಲ, ಹಾಗಿದ್ದರೆ ಜೀವನದುದ್ದಕ್ಕೂ ವೈಫ‌ಲ್ಯವೇ ನನಗೆ ಕಟ್ಟಿಟ್ಟ ಬುತ್ತಿಯೇ?’ ಎನ್ನುವುದು.

ಇಲ್ಲ, ಖಂಡಿತ ಇಲ್ಲ. ದೇವರು ಪಶು ಪಕ್ಷಿಗಳಿಗೆ ಕೊಡದಂಥ ವಿಶೇಷ ಶಕ್ತಿಯೊಂದನ್ನು ನಮಗೆ ದಯಪಾಲಿಸಿದ್ದಾನೆ. ಅದೇ ‘ವಿವೇಕ’ ಎಂಬ ಶಕ್ತಿ . ಈ ವಿವೇಕ ಶಕ್ತಿಯು ಬರುವುದು ನಮ್ಮ ಮಿದುಳಿನಲ್ಲಿರುವ ಪೆರಿಫ್ರಂಟಲ್ ಕಾರ್ಟೆಕ್ಸ್‌ ಎಂಬ ಭಾಗದಿಂದ. ಪಶುವಿಗೆ ನಮ್ಮಷ್ಟು ವಿವೇಕ ಇರುವುದಿಲ್ಲ. ಅದು ದೀರ್ಘ‌ಕಾಲಿಕ ಲಾಭದ ಬಗ್ಗೆ ಯೋಚಿಸುವುದಿಲ್ಲ. ಆ ಕ್ಷಣಕ್ಕೆ ತೃಪ್ತಿ ನೀಡುವಂಥದ್ದನ್ನೇ ಅದು ಮಾಡುತ್ತದೆ. ಆದರೆ ನಾವು ವಿವೇಕ ಶಕ್ತಿಯ ಮೂಲಕ ನಮಗೆ ದೀರ್ಘ‌ಕಾಲಿಕ ಲಾಭವನ್ನು ತಂದುಕೊಡುವಂಥ ಹೆಜ್ಜೆಗಳನ್ನು ಇಡಬಹುದು.

ನೀವು ನಿಮ್ಮ ಮಾಂಸಖಂಡಗಳನ್ನು ಸದೃಢಗೊಳಿಸಬೇಕು ಎಂದುಕೊಳ್ಳಿ. ಏನು ಮಾಡುತ್ತೀರಿ? ವ್ಯಾಯಾಮ ಮಾಡುತ್ತೀರಿ ತಾನೆ? ಅದೇ ರೀತಿಯೇ ನಿತ್ಯವೂ ಸಂಯಮದ ಪ್ರಾಕ್ಟೀಸ್‌ ಮಾಡುವ ಮೂಲಕ ನಾವು ಪ್ರೀಫ್ರಂಟಲ್ ಕಾರ್ಟೆಕ್ಸ್‌ ಅನ್ನೂ ಸದೃಢಗೊಳಿಸಬಹುದು. ನಾವು ಸಂಯಮದ ಅಭ್ಯಾಸ ಮಾಡುತ್ತಾ ಸಾಗಿದಂತೆ ಪ್ರೀಫ್ರಂಟಲ್ ಕಾರ್ಟೆಕ್ಸ್‌ ವಿಕಸನಗೊಳ್ಳುತ್ತಾ ಹೋಗುತ್ತದೆ. ನಿತ್ಯ ಪರಿಶ್ರಮ ಮತ್ತು ಅಭ್ಯಾಸದ ಮೂಲಕ ಸಂಯಮಶಕ್ತಿಯನ್ನು ನಾವು ವೃದ್ಧಿಸಿಕೊಳ್ಳಬಹುದು.

ನಮ್ಮ ಆತ್ಮಸಂಯಮ, ವಿಲ್ ಪವರ್‌ ಎನ್ನುವುದು ಪೂರ್ವನಿರ್ಧರಿತವಾದದ್ದು, ಅದು ಹುಟ್ಟುಗುಣ, ಅದನ್ನು ಬದಲಿಸಲು ಸಾಧ್ಯವಿಲ್ಲ ಎನ್ನುವುದು ಬಹುದೊಡ್ಡ ತಪ್ಪು ಕಲ್ಪನೆ. ಆತ್ಮಸಂಯಮ ಹೆಚ್ಚಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ಉದಾಹರಣೆಗೆ, ನಿಮಗೆ ತುರಿಕೆಯಾಗುತ್ತಿದೆ ಎಂದುಕೊಳ್ಳಿ, ತೂರಿಸಿಕೊಂಡರೆ ಆ ಕ್ಷಣಕ್ಕೆ ಅತ್ಯಂತ ಆನಂದವಾಗುತ್ತದೆ. ಆದರೆ, ಚರ್ಮದ ಸಮಸ್ಯೆಯೇನೂ ಕಡಿಮೆಯಾಗುವುದಿಲ್ಲ. ಬದಲಿಗೆ ವಿಸ್ತರಿಸುತ್ತಾ ಹೋಗುತ್ತದೆ. ಆ ಕ್ಷಣಕ್ಕೆ ಕಷ್ಟವಾದರೂ ಆತ್ಮಸಂಯಮ ಕಾಯ್ದುಕೊಂಡರೆ, ಚರ್ಮರೋಗ ಬಹುಬೇಗ ತಗ್ಗುತ್ತದಲ್ಲವೇ?

ಆತ್ಮಸಂಯಮ ಬೆಳೆಸಿಕೊಳ್ಳಲು ಇರುವ ಮತ್ತೂಂದು ವಿಶೇಷ ಮಾರ್ಗವೆಂದರೆ ಧ್ಯಾನಮಾರ್ಗ. ಧ್ಯಾನ ಮಾಡುವಾಗ ನಮ್ಮ ತಲೆಯಲ್ಲಿ ನೂರಾರು ಯೋಚನೆಗಳು ಬರಲಾರಂಭಿಸುತ್ತವೆ. ಅವನ್ನೆಲ್ಲ ದೂರ ತಳ್ಳುತ್ತಾ ಒಂದೇ ಸಂಗತಿಯತ್ತ ಧ್ಯಾನ ಕೇಂದ್ರೀಕರಿಸುವುದು ಸರಳ ಕೆಲಸವಲ್ಲ. ಆರಂಭದಲ್ಲಿ ಈ ಪ್ರಯತ್ನದಲ್ಲಿ ನೀವು ವಿಫ‌ಲರಾಗಬಹುದು. ಆದರೆ ದಿನಗಳೆದಂತೆ ಆತ್ಮಸಂಯಮ ಬೆಳೆಯಲಾರಂಭಿಸುತ್ತದೆ. ಅದು ನಿಮ್ಮ ನಿತ್ಯ ಜೀವನದ ಇತರೆ ಸಂಗತಿಗಳತ್ತಲೂ ತನ್ನ ಪ್ರಭಾವಬೀರಲಾರಂಭಿಸುತ್ತದೆ.

ಪ್ರತಿ ದಿನವೂ ನೀವು ಕನಿಷ್ಠ ಒಂದುಗಂಟೆಯಾದರೂ ಧ್ಯಾನ ಮಾಡಲಾರಂಭಿಸಿದಿರಿ ಎಂದರೆ, ಆತ್ಮಸಂಯಮವೆಂಬ ಅತ್ಯಮೂಲ್ಯ ನಿಧಿ ನಿಮ್ಮ ಕೈವಶವಾಗುತ್ತದೆ. ತತ್ಪರಿಣಾಮವಾಗಿ, ನಿಮ್ಮ ಜೀವನದ ಯಾವುದೇ ಕ್ಷೇತ್ರವಿರಲಿ ಅದರಲ್ಲಿ ಸಫ‌ಲತೆ ಸಿಗಲಾರಂಭಿಸುತ್ತದೆ. ಡಯಟ್ ಮೂಲಕ ತೂಕ ಇಳಿಸುವುದಿರಲಿ, ವಿದ್ಯಾಭ್ಯಾಸದಲ್ಲಾಗಲಿ, ಕ್ರೀಡೆಯಲ್ಲಾಗಲಿ, ವ್ಯಾಯಾಮದಲ್ಲಾಗಲಿ, ಸಿಟ್ಟಿನ ನಿಯಂತ್ರಣವಾಗಲಿ, ಸಾಂಸಾರಿಕವಾಗಿಯೇ ಇರಲಿ…ಎಲ್ಲದರ‌ಲ್ಲೂ ಈ ನಿಧಿ ನಿಮ್ಮ ಉಪಯೋಗಕ್ಕೆ ಬರುತ್ತದೆ.

ಪೂಜೆ ಪುನಸ್ಕಾರ ಅಗತ್ಯವೇ?
ಅನೇಕರು ಪೂಜೆ ಪುನಸ್ಕಾರಗಳನ್ನು ಯಾವುದೋ ಉದ್ದೇಶದ ಪ್ರಾಪ್ತಿಗಾಗಿ ಮಾಡುತ್ತಿರುತ್ತಾರೆ. ಹಾಗೆಂದು ಪೂಜೆ-ಪುನಸ್ಕಾರ ಮಾಡಬೇಡಿ ಎಂದು ಹೇಳುತ್ತಿಲ್ಲ. ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲವರು, ಈ ಪಅೂಜೆ ಮಾಡಿಸಿದರೆ ನಿಮಗೆ ಲಾಭವಾಗುತ್ತದೆ, ಆ ಪೂಜೆ ಮಾಡಿಸಿದರೆ ನಿಮ್ಮ ಬದುಕು ಬದಲಾಗುತ್ತದೆ ಎಂದು ಹೇಳಿ ಲಾಭಮಾಡಿಕೊಳ್ಳುತ್ತಾರೆ. ಆದರೆ ಧರ್ಮದ ಗುರಿ ಏನು? ಧರ್ಮವು ನಮ್ಮನ್ನು ಆಂತರಿಕವಾಗಿ ಶುದ್ಧಗೊಳಿಸ ಲು, ಒಳ್ಳೆಯ ಆಚರಣೆಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ. ಪೂಜೆ ಮಾಡುವುದು ಒಂದು ಫಿಸಿಕಲ್(ಭೌತಿಕ) ಕ್ರಿಯೆ. ಇದರ ಮೂಲಕವೂ ಮನಶುದ್ಧಿ ಸಾಧ್ಯವಿದೆ. ಆದರೆ ಅನೇಕರು ‘ಓಂ ಜೈ ಜಗದೀಶ ಹರೇ’ ಎಂದು ಮಂತ್ರ ಹೇಳುತ್ತಾ, ‘ಮಗ ಶಾಲೆಯಿಂದ ಬಂದನೋ ಇಲ್ಲವೋ, ಸೀರಿಯಲ್ ಆರಂಭವಾಗುವ ಸಮಯವಾಯಿತೋ ಇಲ್ಲವೋ’ ಎಂದು ಯೋಚಿಸುತ್ತಿರುತ್ತಾರೆ! ಈ ರೀತಿಯ ಪೂಜೆಯು ಪುನರಾವರ್ತನ ಕ್ರಿಯೆಯಾಗುತ್ತದಷ್ಟೇ ಹೊರತು, ಅದರಿಂದ ಮನಶುದ್ಧಿಯಂತೂ ಆಗುವುದಿಲ್ಲ. ಅಂದರೆ, ಧರ್ಮದ ಉದ್ದೇಶವೇ ಇಲ್ಲಿ ಈಡೇರುವುದಿಲ್ಲ.

ತುಳಸಿದಾಸರು ಸ್ಪಷ್ಟವಾಗಿ ಬರೆದಿದ್ದಾರೆ: ಕಲಿಯುಗದಲ್ಲಿ ಯೋಗ, ಯಜ್ಞ, ಭೌತಿಕ ಪೂಜಾ ವಿಧಾನಗಳಿಗಿಂತಲೂ ದೇವರ ಕೀರ್ತನೆ, ಶ್ರವಣ ಮತ್ತು ಸ್ಮರಣೆಯು ಹೆಚ್ಚು ಪರಿಣಾಮಕಾರಿ ಎಂದು. ಇದನ್ನು ತ್ರಿ ಭಕ್ತಿ ಎನ್ನುತ್ತಾರೆ. ಇದರಲ್ಲಿ ಆಡಂಬರವೂ ಇರುವುದಿಲ್ಲ, ನಿರರ್ಥಕವಾಗಿ ಹಣವೂ ಖರ್ಚಾಗುವುದಿಲ್ಲ, ಯಾವುದೇ ಜಾಗದಲ್ಲೂ ಯಾವುದೇ ಸಮಯದಲ್ಲೂ ದೇವರ ಸ್ಮರಣೆ ಮಾಡಬಹುದು, ಭಜನೆ ಮಾಡಬಹುದು. ಇದನ್ನೇ ಶಾಸ್ತ್ರಗಳು ಈ ‘ಯುಗದ ಧರ್ಮ’ ಎಂದು ಹೇಳಿವೆ. ಹಾಗೆಂದು ಭೌತಿಕ ಪೂಜಾಪಾಠಗಳನ್ನು ಬೇಡವೆನ್ನುತ್ತಿಲ್ಲ, ಆದರೆ ‘ಈ ಪೂಜೆ ಮಾಡಿದರೆ ಈ ಲಾಭವಾಗುತ್ತದೆ, ಆ ಪೂಜೆ ಮಾಡಿದರೆ ಆ ಲಾಭ ದಕ್ಕುತ್ತದೆ’ ಎಂದು ಹೊರಟರೆ ಧರ್ಮದ ಉದ್ದೇಶವೇ ಹಳಿ ತಪ್ಪುತ್ತದೆ ಅಲ್ಲವೇ?

ಲೇಖಕರ ಕುರಿತು
ಸ್ವಾಮಿ ಮುಕುಂದಾನಂದ ಅವರು ಅಮೆರಿಕದ ಟೆಕ್ಸಾಸ್‌ನ‌ ‘ಜಗದ್ಗುರು ಕೃಪಾಲೂಜಿ’ ಯೋಗ ಸಂಸ್ಥೆಯ ಸ್ಥಾಪಕರು. ಯೋಗ, ಧ್ಯಾನ ಮತ್ತು ಆಧ್ಯಾತ್ಮದ ಗುರುವಾಗಿ ಪ್ರಖ್ಯಾತರಾಗಿರುವ ಅವರು, ದೆಹಲಿಯ ಇಂಡಿಯನ್‌ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಇಂಜಿನಿಯರಿಂಗ್‌ ಪದವಿ ಮತ್ತು ಕಲ್ಕತದ ಇಂಡಿಯನ್‌ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಸ್ವಾಮಿ ಮುಕುಂದಾನಂದ

Advertisement

Udayavani is now on Telegram. Click here to join our channel and stay updated with the latest news.

Next