Advertisement

ರೋಟರಿ ಜತೆ ಕೋಟಿ-ನಾಟಿ ಕಾರ್ಯಕ್ರಮ ಯಶಸ್ವಿಗೊಳಿಸಿ

02:14 PM May 01, 2019 | Team Udayavani |

ಕೋಲಾರ: ರೋಟರಿ ಸಂಸ್ಥೆ ಸಹಯೋಗದಲ್ಲಿ ನಡೆಸಲಾಗುತ್ತಿರುವ ಕೋಟಿ-ನಾಟಿ ಕಾರ್ಯಕ್ರಮವು ಕಳೆದ ಬಾರಿ ಯಶಸ್ವಿಯಾಗಿದ್ದು, ಈ ಬಾರಿಯೂ ಪ್ರತಿ ಗ್ರಾಪಂನಲ್ಲಿ 1000 ಗುಂಡಿಗಳನ್ನು ತೋಡಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಪಂ ಸಿಇಒ ಜಿ.ಜಗದೀಶ್‌ ಸೂಚಿಸಿದರು.

Advertisement

ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರ ನಡೆದ ಕೋಟಿ-ನಾಟಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಸಿಗಳನ್ನು ಹಾಕಿ ಕೈಬಿಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸರಕಾರಿ ಸ್ಥಳಗಳು, ರಸ್ತೆ ಬದಿ, ಶಾಲಾ ಆವರಣ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿಯೂ ಸಸಿ ನೆಟ್ಟು ಪೋಷಿಸಬೇಕಾಗಿದ್ದು, ಅದಕ್ಕಾಗಿ ನೋಡೆಲ್ ಅಧಿಕಾರಿಗಳನ್ನು ಈ ಕೂಡಲೇ ನೇಮಿಸಿ 2 ದಿನಗಳ ಒಳಗೆ ವರದಿ ಸಲ್ಲಿಸುವಂತೆ ತಾಪಂ ಇಒಗಳಿಗೆ ಸೂಚಿಸಿದರು.

ಕೋಲಾರವು ಬರಡು ಭೂಮಿಯಾಗುವುದನ್ನು ತಪ್ಪಿಸಲು ನರೇಗಾ ಯೋಜನೆಯೊಂದೇ ದಾರಿಯಾಗಿದೆ. ಅಲ್ಲದೆ, ಕೋಟಿ ನಾಟಿ ಆರಂಭಕ್ಕೂ ಸರಿಯಾದ ಸಮಯವಾಗಿದೆ. ಈಗಾಗಲೇ ನರೇಗಾ ಯೋಜನೆಯಡಿ 140 ಕೋಟಿ ರೂ.ನಲ್ಲಿ ಶೇ.61 ಹಣವನ್ನು ನೀರಿನ ಮೂಲಗಳ ಸಂರಕ್ಷಣೆಗೆ ವ್ಯಯ ಮಾಡಲಾಗಿದೆ. ಜಲಾಮೃತದಲ್ಲಿ ಒಂದು ಭಾಗವಾಗಿರುವ ಹಸಿರೀಕರಣವನ್ನು ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

ಪ್ರಚಾರ ನೀಡೋಣ: ಈಗಾಗಲೇ 25 ಲಕ್ಷ ಸಸಿಗಳನ್ನು ಯಶಸ್ವಿಯಾಗಿ ನೆಡಲಾಗಿರುವಂತೆಯೇ ಈ ಬಾರಿಯೂ ಕ್ರಮಕೈಗೊಳ್ಳಬೇಕಿದೆ. ಅಗತ್ಯವಿದ್ದರೆ ಬೇರೆ ಜಿಲ್ಲೆಗಳಿಂದಲೂ ಪಡೆದುಕೊಳ್ಳೋಣ ಎಂದ ಅವರು, ಡೆಲ್ಲಿ ಮಾದರಿ ಶಿಕ್ಷಣವನ್ನು ಜಾರಿ ಮಾಡಲು ಸದ್ಯದಲ್ಲೇ ಕಾರ್ಯಾಗಾರ ನಡೆಯಲಿದ್ದು, ಅಲ್ಲಿಯೂ ಸಹ ಕೋಟಿ-ನಾಟಿ ಬಗ್ಗೆ ಹೆಚ್ಚಿನ ಪ್ರಚಾರ ನೀಡೋಣ ಎಂದರು.

ಜಿಲ್ಲಾದ್ಯಂತ 22 ಲಕ್ಷ ಸಸಿ ನೆಡಲು ಸಂಕಲ್ಪ ನಿವೃತ್ತ ಐಎಎಸ್‌ ಅಕಾರಿ ಅಮರನಾರಾಯಣ ಮಾತನಾಡಿ, 22 ಲಕ್ಷ ಸಸಿಗಳನ್ನು ಈ ಬಾರಿ ನೆಡಲು ಪಣತೊಟ್ಟಿದ್ದು, ಅದಕ್ಕಾಗಿ ಅರಣ್ಯ ಇಲಾಖೆಯ ಜತೆಗೆ ತೋಟಗಾರಿಕೆ, ರೇಷ್ಮೆ ಇಲಾಖೆಗಳನ್ನು ಒಗ್ಗೂಡಿಸಿಕೊಳ್ಳಲಾಗಿದೆ ಎಂದರು.

Advertisement

ಹಸಿರು ಮಾಸಾಚರಣೆ: ಕೋಟಿ ನಾಟಿ ಕುರಿತಾಗಿ ಪುಸ್ತಕ ಅಲ್ಲದೆ ಸಿನಿಮಾಮಂದಿರ, ಯೂಟ್ಯೂಬ್‌, ಕೇಬಲ್ ಚಾನಲ್ಗಳ ಮೂಲಕವೂ ಪ್ರಚಾರ ನೀಡಲು ಕ್ರಮಕೈಗೊಳ್ಳಲಾಗಿದೆ. ಈ ಕಾರ್ಯವನ್ನು ಪ್ರತಿ ಗ್ರಾಪಂ, ಗ್ರಂಥಾಲಯಗಳಲ್ಲಿಯೂ ನಡೆಸಲಾಗುವುದು. ಒಟ್ಟಾರೆ ಜೂನ್‌ ತಿಂಗಳನ್ನು ಹಸಿರುಮಾಸವನ್ನಾಗಿ ಆಚರಿಸಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂದರು.

ರೋಟರಿ ಸಂಸ್ಥೆಯು ಸತತ 35 ವರ್ಷಗಳ ಪ್ರಯತ್ನದಿಂದ ಪೋಲಿಯೋವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲಾಗಿದ್ದು, ಅಂತೆಯೇ ಹಸಿರೀಕರಣವನ್ನು ಈ ಭಾಗದಲ್ಲಿ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಅರಣ್ಯ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು, ತಾಪಂ ಇಒಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next