Advertisement

ಉಪಕಾರಿಯಾಗುವುದೇ ಉಪನಗರ ರೈಲು?

06:35 AM Feb 04, 2019 | Team Udayavani |

ಬೆಂಗಳೂರಿಗರು ಹಾಗೂ ಜೀವನಕ್ಕಾಗಿ ಮಹಾನಗರವನ್ನು ಅವಲಂಬಿಸಿರುವ ಉಪನಗರಗಳ ನಾಗರಿಕರ ಬಹು ಕಾಲದ ಕನಸು ನನಸಾಗುವ ದಿನ ಸನ್ನಿಹಿತವಾಗಿದೆ. ಈಗಾಗಲೇ ಹಳಿ ಏರಿರುವ ಸಬ್‌ ಅರ್ಬನ್‌ ರೈಲು ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಅತ್ತ ಕೇಂದ್ರ ಬಜೆಟ್‌ನಲ್ಲೂ ದಶ ಕೋಟಿ ಹಣ ಸಿಕ್ಕಿದೆ.

Advertisement

ಉಪನಗರ ರೈಲು ತನ್ನ ಜಾಲ ವಿಸ್ತರಿಸಿದರೆ ನಗರವನ್ನು ಕಾಡುತ್ತಿರುವ ಸಂಚಾರದಟ್ಟಣೆಗೆ ಪರಿಹಾರ ಸಿಗುವುದು ಒಂದೆಡೆಯಾದರೆ, ಮುಂದಿನ ದಿನಗಳಲ್ಲಿ ಜನರ ಜೀವನ ನಿರ್ವಹಣೆ ಕೂಡ ಅಗ್ಗ ಆಗಬಹುದು ಎಂಬ ಆಸೆ ಚಿಗುರೊಡೆದಿದೆ. ಅದು ಹೇಗೆ? ಎಂಬ ಮಾಹಿತಿ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

ದಶಕಗಳ ಕನಸು ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಕೇಂದ್ರ ಬಜೆಟ್‌ನಲ್ಲಿ ಹತ್ತು ಕೋಟಿ ರೂಪಾಯಿಯೂ ದೊರೆತಿದೆ. ಈ ಮೂಲಕ ಯೋಜನೆ ಸಾಕಾರದತ್ತ ಮತ್ತೂಂದು ಹೆಜ್ಜೆ ಇಟ್ಟಂತಾಗಿದೆ. ಈ ಉಪನಗರ ರೈಲು ನಗರದ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಸಂಚಾರ ದಟ್ಟಣೆಗೆ ಮಾತ್ರ ಪರಿಹಾರ ನೀಡುವುದಿಲ್ಲ; ಜನರ ಜೀವನದ ಮೇಲೂ ಗಮನಾರ್ಹ ಪರಿಣಾಮ ಬೀರಲಿದೆ. ಹೌದು, ಉಪನಗರ ರೈಲು ಯೋಜನೆಯಿಂದ ಮುಂದಿನ ದಿನಗಳಲ್ಲಿ ಜನರ ಜೀವನ ನಿರ್ವಹಣೆ ಅಗ್ಗ ಆಗಬಹುದು ಎಂಬ ಆಸೆ ಚಿಗುರೊಡೆದಿದೆ. 

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ದುಬಾರಿ ಆಗುತ್ತಿದೆ. ಇದು ಕೆಲಸ ಅರಸಿ ಬರುವ ಮಧ್ಯಮ ವರ್ಗಕ್ಕೆ ಬಿಸಿ ತುಪ್ಪವಾಗುತ್ತಿದೆ. ಬಾಡಿಗೆ ಮನೆ, ಮಕ್ಕಳ ಶಿಕ್ಷಣ, ಮೂಲ ಸೌಕರ್ಯ ಸೇರಿದಂತೆ ಒಟ್ಟಾರೆ ಜೀವನ ನಿರ್ವಹಣೆ ವೆಚ್ಚ ವಿಪರೀತ ಹೆಚ್ಚಳವಾಗುತ್ತಿದೆ. ಈ ಮಧ್ಯೆ ನಗರದ ಮೇಲಿನ ಸಂಚಾರದ ಒತ್ತಡ ಕೂಡ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಉಪನಗರ ರೈಲು ಪರಿಹಾರ ಮಾರ್ಗವಾಗಿ ಗೋಚರಿಸುತ್ತಿದೆ.

ನಗರಕ್ಕೆ ಹೊಂದಿಕೊಂಡ ಊರುಗಳಿಂದ ಬಂದ ಲಕ್ಷಾಂತರ ಜನ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಅವರೆಲ್ಲರೂ “ದುಬಾರಿ ದುನಿಯಾ’ಗೆ ಒಗ್ಗಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಹಾಗೊಂದು ವೇಳೆ ಯಾವುದೇ ಟ್ರಾಫಿಕ್‌ ಕಿರಿಕಿರಿ ಇಲ್ಲದೆ, ಅತ್ಯಲ್ಪ ಅವಧಿಯಲ್ಲಿ ಉಪನಗರಗಳನ್ನು ತಲುಪಲು ಸಾಧ್ಯವಾದರೆ, ಅಕ್ಷರಶಃ ಮಧ್ಯಮವರ್ಗದ ಭಾಗ್ಯದ ಬಾಗಿಲು ತೆರೆಯಲಿದೆ. ಜನ ಉಪನಗರಗಳತ್ತ ಧೈರ್ಯವಾಗಿ ಮುಖಮಾಡುತ್ತಾರೆ. ತಮ್ಮ ಜೀವನ ಮಟ್ಟದಲ್ಲಿ ಸುಧಾರಣೆ ಕಂಡುಕೊಳ್ಳಲಿಕ್ಕೂ ಸಾಧ್ಯವಾಗುತ್ತದೆ.

Advertisement

ಮೆಟ್ರೋ, ಬಸ್‌ಗಿಂತ ಕಡಿಮೆ ದರ?: ಮೆಟ್ರೋ, ಬಸ್ಸು ಮತ್ತು ಆಟೋಗಳಿಗಿಂತ ಉಪನಗರ ರೈಲಿನ ಪ್ರಯಾಣ ದರ ಕಡಿಮೆ ಇರಲಿದೆ. ಇಷ್ಟೇ ಅಲ್ಲ, ಬೆಂಗಳೂರು ಸುತ್ತಲಿನ ಹಳ್ಳಿಗಳಿಂದ ನಿತ್ಯ ನೂರಾರು ರೈತರು ಅತ್ಯಂತ ಕಡಿಮೆ ದರದಲ್ಲಿ ರೈಲುಗಳಲ್ಲಿ ತರಕಾರಿ ತಂದು ಮಾರಾಟ ಮಾಡಿಕೊಂಡು ಹೋಗಬಹುದು. ಈಗ ಸರಿಯಾದ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದಿರುವುದರಿಂದ ಅಥವಾ ಇದ್ದರೂ ಸಂಚಾರ ದಟ್ಟಣೆ ಇರುವುದರಿಂದ ಬಹುತೇಕ ರೈತರು ಹೂವು, ತರಕಾರಿಯನ್ನು ನೆರೆಯ ಆಂಧ್ರಪ್ರದೇಶ, ತಮಿಳುನಾಡು ಮತ್ತಿತರ ಕಡೆಗೆ ಕಳಿಸುತ್ತಿದ್ದಾರೆ.

ಇನ್ನು ಕೆಲವರು ಖಾಸಗಿ ಬಸ್‌ಗಳು ಮತ್ತು ಸರಕು ಸಾಗಣೆ ವಾಹನಗಳನ್ನು ಅವಲಂಬಿಸಿದ್ದು, ಸಾಗಣೆ ವೆಚ್ಚ ದುಬಾರಿ ಆಗುತ್ತಿದೆ. ಇದಲ್ಲದೆ, ನಗರದಲ್ಲಿ ಜನ ತಾವು ಕೆಲಸ ಮಾಡುವ ಕಂಪನಿ ಬದಲಾಯಿಸುತ್ತಿದ್ದಂತೆ ಮನೆ ಸ್ಥಳಾಂತರ ಹಾಗೂ ಸಾರಿಗೆ ವ್ಯವಸ್ಥೆ ಬಗ್ಗೆ ಚಿಂತೆ ಮಾಡುತ್ತಾರೆ. ಉಪನಗರ ರೈಲು ಆ ಸಮಸ್ಯೆಯನ್ನೂ ನಿವಾರಿಸಲಿದೆ ಎಂದು ಉಪನಗರ ರೈಲು ಯೋಜನೆಯ ಹೋರಾಟಗಾರ ಸಂಜೀವ ದ್ಯಾಮಣ್ಣವರ ತಿಳಿಸಿದರು.

ಅಂದಹಾಗೆ ಉಪನಗರ ರೈಲು ಯೋಜನೆ ನಗರದ ಅತಿ ಹೆಚ್ಚು ಸಂಚಾರದಟ್ಟಣೆ ಇರುವ ಐಟಿ-ಬಿಟಿ ಕಂಪನಿಗಳಿರುವ ವೈಟ್‌ಫೀಲ್ಡ್‌ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. ಜತೆಗೆ ಸಿಟಿ ರೈಲು ನಿಲ್ದಾಣ, ಯಶವಂತಪುರ ಮತ್ತು ಬೈಯಪ್ಪನಹಳ್ಳಿ ಟರ್ಮಿನಲ್‌ಗ‌ಳ ಮೂಲಕ ಹಾದುಹೋಗುತ್ತದೆ. ಇದಕ್ಕೆ ಹೊಂದಿಕೊಂಡಂತೆ ಮೆಟ್ರೋ ಮಾರ್ಗವೂ ಇದೆ. ಇದರಿಂದ ರೈಲಿನಲ್ಲಿ ಬಂದಿಳಿದವರು ಮೆಟ್ರೋ ಅಥವಾ ಉಪನಗರ ರೈಲು ಏರಲು ಅನುಕೂಲ ಆಗಲಿದೆ. ಈ ಎಲ್ಲ ಕಾರಣಗಳಿಂದ ನಗರದ ಸಂಚಾರದಟ್ಟಣೆ ತಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಗರಿಷ್ಠ 17 ಲಕ್ಷ ಪ್ರಯಾಣಿಕರ ಸಾಮರ್ಥ್ಯ: ಇನ್ನೂ ವಿಶೇಷವೆಂದರೆ, “ನಮ್ಮ ಮೆಟ್ರೋ’ ಎರಡೂ ಹಂತಗಳಿಗಾಗಿ ವೆಚ್ಚ ಮಾಡುತ್ತಿರುವ ಹಣ ಸುಮಾರು 40 ಸಾವಿರ ಕೋಟಿ ರೂ. ನಿತ್ಯ ಇದು 12ರಿಂದ 15 ಲಕ್ಷ ಜನರನ್ನು ಕೊಂಡೊಯ್ಯಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಉಪನಗರ ರೈಲು ಯೋಜನಾ ವೆಚ್ಚ ಇದರರ್ಧ ಅಂದರೆ ಸುಮಾರು 23,093 ಕೋಟಿ ರೂ. ಇದ್ದು, ಸರಿಸುಮಾರು 16.83 ಲಕ್ಷ ಜನರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.

ಉಪನಗರ ರೈಲು 160 ಕಿ.ಮೀ. ಸಂಪರ್ಕ ಜಾಲವನ್ನು ಒಳಗೊಂಡಿದ್ದು, ಈಗಾಗಲೇ ಇರುವ 31 ಹಾಗೂ ಹೊಸದಾಗಿ 50 ಸೇರಿ ಒಟ್ಟಾರೆ 81 ನಿಲ್ದಾಣಗಳು ಯೋಜನೆ ಮಾರ್ಗದಲ್ಲಿ ಬರಲಿವೆ. ಮುಂದಿನ ಆರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಯೋಜನೆ ವಿಳಂಬವಾದರೆ ವೆಚ್ಚ ಕೂಡ ಏರಿಕೆ ಆಗಲಿದೆ. ಆದರೆ, ಮೆಟ್ರೋದಂತೆ ಇಲ್ಲಿ ಒಮ್ಮೆಲೆ ಪೂರ್ಣಗೊಂಡ ನಂತರ ಲೋಕಾರ್ಪಣೆ ಮಾಡುವುದಿಲ್ಲ. ಕಾಮಗಾರಿ ಪ್ರಗತಿಯಲ್ಲಿ ಇರುವಾಗಲೇ ಹಂತ ಹಂತವಾಗಿ ಸೇವೆ ಲಭ್ಯ ಆಗುತ್ತದೆ.

ಎಲ್ಲಿಂದ ಎಲ್ಲಿಗೆ?: ವರ್ತುಲ ರಸ್ತೆಗಳಂತೆ ಇಲ್ಲಿಯೂ ನಾಲ್ಕು ಕಾರಿಡಾರ್‌ಗಳಲ್ಲಿ ಯೋಜನೆ ಜಾರಿಯಾಗಲಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ದೇವನಹಳ್ಳಿ, ವಸಂತ ನರಸಪುರದಿಂದ ತುಮಕೂರು ಮಾರ್ಗವಾಗಿ ಬೈಯಪ್ಪನಹಳ್ಳಿವರೆಗೆ, ರಾಮನಗರದಿಂದ ಜ್ಞಾನಭಾರತಿ, ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ, ಹೊಸೂರಿನಿಂದ ದೊಡ್ಡಬಳ್ಳಾಪುರ ಹಾಗೂ ಕೆಂಗೇರಿಯಿಂದ ವೈಟ್‌ಫೀಲ್ಡ್‌ ನಡುವೆ ಇದು ಸಂಪರ್ಕ ಕಲ್ಪಿಸಲಿದೆ.

ಪ್ರತಿ ಹತ್ತು ನಿಮಿಷಗಳ ಅಂತರದಲ್ಲಿ ರೈಲುಗಳ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ ಮಾಹಿತಿ ನೀಡಿದರು. ಈ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಲಾ ಶೇ.50ರಷ್ಟು ವೆಚ್ಚ ಭರಿಸಲಿವೆ. ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯಲು ಉದ್ದೇಶಿಸಲಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರವು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಕಳೆದ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಈ ಯೋಜನೆಗೆ ಒಂದು ಕೋಟಿ ರೂ. ಮೀಸಲಿಟ್ಟಿದೆ.

ಇದಲ್ಲದೆ, ಬೈಯಪ್ಪನಹಳ್ಳಿ ಟರ್ಮಿನಲ್‌ ಕೂಡ ಬರುವ ಜೂನ್‌ನಲ್ಲಿ ಸಿದ್ಧಗೊಳ್ಳಲಿದೆ. ಇದರಿಂದ ರೈಲುಗಳ ನಿಲುಗಡೆಗೆ ಮತ್ತಷ್ಟು ಜಾಗ ಸಿಗಲಿದ್ದು, ದಟ್ಟಣೆಯಿಂದ  ರೈಲುಗಳ ಆಗಮನದಲ್ಲಿ ವಿಳಂಬ ಆಗುವುದಿಲ್ಲ. ಇದಕ್ಕೆ ಪೂರಕವಾಗಿ ಕಂಟೋನ್ಮೆಂಟ್‌ ರೈಲು ನಿಲ್ದಾಣದಿಂದ ವೈಟ್‌ಫೀಲ್ಡ್‌ ಮಾರ್ಗದಲ್ಲಿ ಅಟೊಮ್ಯಾಟಿಕ್‌ ಸಿಗ್ನಲ್‌ ವ್ಯವಸ್ಥೆ ಅಳವಡಿಸಿದ್ದು, ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದು ಹೆಚ್ಚು ರೈಲುಗಳ ಕಾರ್ಯಾಚರಣೆ ಆಗುವುದರ ಜತೆಗೆ ಕಾರ್ಯಾಚರಣೆಯ ನಿಖರತೆ ಹೆಚ್ಚಲಿದೆ. 

ಮಾರ್ಗಕ್ಕೆ ಕತ್ತರಿ; ಬೇಸರ: ಅನುಮೋದನೆಗೊಂಡ ಪರಿಷ್ಕೃತ ಸಮಗ್ರ ಯೋಜನಾ ವರದಿಯು ಕೇವಲ ನಗರದ ಹೊರವಲಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಅದರಾಚೆ ವಿಸ್ತರಣೆ ಆಗಬೇಕು. ಇಲ್ಲದಿದ್ದರೆ ಯೋಜನೆ ಉದ್ದೇಶ ಈಡೇರುವುದಿಲ್ಲ. ಇದಕ್ಕಾಗಿ ಇನ್ನೂ 100ರಿಂದ 150 ಕಿ.ಮೀ. ಸೇರ್ಪಡೆ ಆಗಬೇಕಾಗುತ್ತದೆ. ಈ ಸಂಬಂಧ ಉಪನಗರ ರೈಲು ಹೋರಾಟಗಾರರಿಂದ ಒತ್ತಾಯ ಕೇಳಿಬರುತ್ತಿದೆ.

ಈ ಮಧ್ಯೆ ಕಳೆದ ಜುಲೈನಿಂದಲೇ ಎಂಟು ಉಪನಗರ ರೈಲು ಸೇವೆಗಳನ್ನು ನೈರುತ್ಯ ರೈಲ್ವೆ ಆರಂಭಿಸಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಸಿಟಿ ರೈಲು ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೂಲಕ ವೈಟ್‌ಫೀಲ್ಡ್‌ ಮಾರ್ಗದಲ್ಲಿ ಮೆಮು ರೈಲುಗಳು ಮತ್ತು ಬಾಣಸವಾಡಿಯಿಂದ ಬೈಯಪ್ಪನಹಳ್ಳಿ ಮಾರ್ಗವಾಗಿ ಹೊಸೂರಿಗೆ ಡೆಮು ರೈಲುಗಳು ಸಂಚರಿಸುತ್ತಿವೆ. 

ಬೆಳವಣಿಗೆ ಶರವೇಗ; ಸಂಚಾರ ಆಮೆ ವೇಗ: ರಾಜಧಾನಿ ಬೆಂಗಳೂರು ಶರವೇಗದಲ್ಲಿ ಬೆಳೆಯುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ನಗರದ ಸಂಚಾರ ನಾಡಿಗಳು “ಆಮೆವೇಗ’ದಲ್ಲಿ ಸಾಗುತ್ತಿವೆ! ವಿವಿಧ ಸ್ಥಳೀಯ ಸಂಸ್ಥೆಗಳು ನಡೆಸುತ್ತಿರುವ ಅಭಿವೃದ್ಧಿ ಕಾಮಗಾರಿಗಳು, 70 ಲಕ್ಷಕ್ಕೂ ಹೆಚ್ಚು ವಾಹನಗಳ ಸಂಚಾರದಿಂದ ನಗರದ ವೇಗ ಸಾಕಷ್ಟು ಕುಸಿದಿದೆ. ನಗರದ ವಾಹನಗಳ ವೇಗಮಿತಿ ಗಂಟೆಗೆ ಸರಾಸರಿ ಕೇವಲ 14-16 ಕಿ.ಮೀ. ಕೆಲವು ಪ್ರಮುಖ ರಸ್ತೆಗಳಲ್ಲಿ ಪೀಕ್‌ ಅವರ್‌ನಲ್ಲಂತೂ ಇದು ಕೆಲವೊಮ್ಮೆ ಒಂದಂಕಿಗೆ ಇಳಿದದ್ದೂ ಇದೆ.

ಈಗ ನಮ್ಮ ಮೆಟ್ರೋ ಜತೆಗೆ ಉಪನಗರ ರೈಲು ಯೋಜನೆ ಬರುತ್ತಿದೆ. ಇದಕ್ಕೆ ಪೂರಕವಾಗಿ ನಗರದ ಹೃದಯಭಾಗದಲ್ಲಿರುವ ಖಾಸಗಿ ಬಸ್‌ಗಳನ್ನು ಹೊರವಲಯಕ್ಕೆ ಸೀಮಿತಗೊಳಿಸುವ ಚಿಂತನೆಯೂ ನಡೆದಿದ್ದು, ಈ ನಿಟ್ಟಿನಲ್ಲಿ ನಾಲ್ಕೂ ದಿಕ್ಕುಗಳಲ್ಲಿ ಬಸ್‌ ಟರ್ಮಿನಲ್‌ಗ‌ಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಮತ್ತೂಂದೆಡೆ ಪಾಡ್‌ಟ್ಯಾಕ್ಸಿ ಯೋಜನೆಯೂ ಇದೆ. ಇದೆಲ್ಲದರಿಂದ ನಗರದ ವಾಹನಗಳ ವೇಗ ಹೆಚ್ಚಬಹುದು ಎಂಬ ನಿರೀಕ್ಷೆ ಗರಿಗೆದರಿದೆ. 

ನಗರ ಬೆಳೆದಂತೆ ರಾಜ್ಯದ ನಾನಾ ಭಾಗಗಳಿಂದ ಕೆಲಸಕ್ಕಾಗಿ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಪರಿಣಾಮ ರಸ್ತೆಗಳ ಮೇಲೆ ಒತ್ತಡ ವೃದ್ಧಿಯಾಗಿದ್ದು, ಪ್ರಮುಖ ರಸ್ತೆಗಳು, ಜಂಕ್ಷನ್‌ಗಳಲ್ಲಿ ತೀವ್ರ ವಾಹನದಟ್ಟಣೆ ಆಗುತ್ತಿದೆ. ಗಂಟೆಗಟ್ಟಲೆ ರಸ್ತೆಗಳಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಇದು ವಾಯು ಮಾಲಿನ್ಯಕ್ಕೂ ಕಾರಣವಾಗಿದೆ.

ಉಪನಗರ ರೈಲು ಸೇವೆ ಆರಂಭವಾಗುವುದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಧಾರಣೆಯಾಗಲಿದೆ. ಇದರೊಂದಿಗೆ ಈಗಾಗಲೇ ಮೆಟ್ರೋ, ಬಿಎಂಟಿಸಿ ಸೇವೆಗಳಿರುವುದರಿಂದ ಜನರು ಸ್ವಂತ ವಾಹನಗಳ ಬಳಕೆ ಕಡಿಮೆ ಮಾಡುವ ಸಾಧ್ಯತೆಯಿದೆ. ನಗರದ ಒಂದು ಮೂಲೆಯಿಂದ ಮತ್ತೂಂದು ಮೂಲೆಗೆ ಯಾವುದೇ ಅಡತಡೆಗಳಿಲ್ಲದ ಸಂಪರ್ಕ ಸಾಧ್ಯವಾಗಲಿದೆ. ಪರಿಣಾಮ ಕೇಂದ್ರ ಭಾಗದಲ್ಲಿರುವ ಜನ ಹೊರವಲಯಗಳತ್ತ ಮುಖಮಾಡುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ.

ಇನ್ನು ಉಪನಗರ ರೈಲು ಸೇವೆಯೊಂದಿಗೆ, ಮೆಟ್ರೋ ಎರಡನೇ ಹಂತ ಪೂರ್ಣ, ಪಾಡ್‌ ಟ್ಯಾಕ್ಸಿ ಸೇವೆ ಆರಂಭ ಹಾಗೂ ಹೊರವಲಯದಲ್ಲಿ ಬಸ್‌ ಟರ್ಮಿನಲ್‌ ಸ್ಥಾಪನೆಯಾದರೆ, ಸದ್ಯ ನಗರಕ್ಕೆ ಬರುವ ವಾಹನಗಳ ಪ್ರಮಾಣದಲ್ಲಿ ಶೇ.30ರಷ್ಟು ಕಡಿಮೆಯಾಗಲಿದ್ದು, ರಸ್ತೆಗಳ ಮೇಲಿನ ಒತ್ತಡವೂ ತಗ್ಗಲಿದೆ. ಇದರಿಂದಾಗಿ ದಟ್ಟಣೆ ಸಮಸ್ಯೆಗೆ ಕೊಂಚ ಪರಿಹಾರ ಸಿಗಬಹುದು. ಆ ಮೂಲಕ ವಾಹನ ಸಂಚಾರ ವೇಗವೂ ಹೆಚ್ಚಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.

* ವಿಜಯಕುಮಾರ್‌ ಚಂದರಗಿ/ ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next