ಬೆಂಗಳೂರು: ಈಗಾಗಲೇ ರಾಜ್ಯ ರಾಜಧಾನಿಯಲ್ಲಿ ಮಳೆಯ ಅವಾಂತರಕ್ಕೆ ನೂರಾರು ಮರಗಳು ಧರೆಗೆ ಉರುಳಿವೆ. ಇದೀಗ ಉಪನಗರದ ರೈಲು ಯೋಜನೆಯಿಂದ 32 ಸಾವಿರ ಮರಗಳಿಗೆ ಕುತ್ತು ಬಂದಿದೆ.
ಕರ್ನಾಟಕ – ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್)ಯು ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಅನುಷ್ಠಾನಗೊಳಿಸುತ್ತಿದೆ. ನಗರದಲ್ಲಿ 149.348 ಕಿ.ಮೀ. ರೈಲು ಸಂಪರ್ಕ ಜಾಲ ನಿರ್ಮಿಸಲಾಗುತ್ತಿದೆ. ಒಟ್ಟು ನಾಲ್ಕು ಕಾರಿಡಾರ್‌ಗಳ ನಿರ್ಮಾಣಕ್ಕೆ 32,572 ಮರ ತೆರವುಗೊಳಿಸಲು ಗುರುತಿಸ ಲಾಗಿದೆ. ಇದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಉದ್ಯಾನ ನಗರಿ ಉಳಿಯಲಿದೆಯೇ ಎಂಬ ಆತಂಕ ಎದುರಾಗಿದೆ.
ಗಾಳಿ-ಮಳೆಯಿಂದ ಈಗಾಗಲೇ 400ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. “ನಮ್ಮ ಮೆಟ್ರೋ’ ಕಾರಿಡಾರ್ ನಿರ್ಮಿಸಲು 6,600 ಮರಗಳ ತೆರವುಗೊಳಿಸಲಾಗಿದೆ. ಬೃಹತ್ ಕಂಪನಿ ಅಥವಾ ಕಟ್ಟಡ ನಿರ್ಮಾಣಕ್ಕಾಗಿ ನಿತ್ಯ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಲೇ ಇದೆ. ಈ ಮಧ್ಯೆ ಉಪನಗರದ ರೈಲು ಯೋಜನೆಗೆಂದು 32,572 ಮರಗಳ ತೆರವುಗೊಳಿಸಲು ಮುಂದಾಗಿರುವುದನ್ನು ಇನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್‌ಮೆಂಟ್ (ಇಐಎ) ವರದಿ ತಿಳಿಸಿದೆ. 2021ರಿಂದ 23ರವರೆಗೆ ನಡೆದ ಇಐಎ ಸಮೀಕ್ಷೆಯಲ್ಲಿ, ಬಿಎಸ್‌ಆರ್‌ಪಿ ಸಂಪರ್ಕ ಜಾಲ ನಿರ್ಮಾಣದಿಂದ ಪರಿಸರದ ಮೇಲಾಗುವ ಪರಿಣಾಮಗಳು, ಅವುಗಳನ್ನು ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ.
ಬರೀ ಕಾರಿಡಾರ್‌ಗಳಿಗೆ 15,000 ಮರ ತೆರವು: ಕಾರಿಡಾರ್-1 (ಕೆಎಸ್‌ಆರ್, ಬೆಂಗಳೂರು ನಗರ- ಯಲಹಂಕ-ದೇವನಹಳ್ಳಿ)ರಲ್ಲಿ 7,198 ಮರ, ಕಾರಿಡಾರ್ -2 (ಬೈಯಪ್ಪನಹಳ್ಳಿ ಟರ್ಮಿನಲ್ – ಚಿಕ್ಕಬಾಣಾವರ) 3,469 ಮರ, ಕಾರಿಡಾರ್-3 (ಕೆಂಗೇರಿ- ಕಂಟೋನ್ಮೆಂಟ್- ವೈಟ್μàಲ್ಡ್) 2,072 ಮರ ಹಾಗೂ ಕಾರಿಡಾರ್-4 (ಹೀಲಲಿಗೆಯಿಂದ ರಾಜಾನುಕುಂಟೆ) 2,306 ಮರಗಳು. ಒಟ್ಟು ನಾಲ್ಕು ಕಾರಿಡಾರ್‌ಗಳಿಂದ 15,045 ಮರಗಳನ್ನು ತೆರವುಗೊಳಿಸಲು ಗುರುತಿಸಿದರೆ, ಕಾರಿಡಾರ್-1ಕ್ಕೆ ಅಕ್ಕುಪೇಟೆಯಲ್ಲಿ ಡಿಪೋ ನಿರ್ಮಿಸಲು 18.6 ಹೆಕ್ಟೇರ್ ಅರಣ್ಯ ಭೂಮಿ ಬಳಸಲಾಗುತ್ತಿದೆ. ಇಲ್ಲಿಯ 17,505 ಮರಗಳು, ಸೋಲದೇವನಹಳ್ಳಿ ಡಿಪೋ ನಿರ್ಮಾಣಕ್ಕೆ 22 ಮರ ಸೇರಿ ಒಟ್ಟು 32,572 ಮರಗಳ ತೆರವುಗೊಳಿಸಲು ಗುರುತಿಸಲಾಗಿದೆ.
ಇದರಲ್ಲಿ ಅರಳಿ ಮರ, ರೈನ್‌ಟ್ರೀ, ಇಂಡಿಯನ್ ಕಾರ್ಕ್, ಗುಲ್‌ಮೊಹರ್, ಕಾಪರ್ ಪಾಡ್ ಸೇರಿ ವಿವಿಧ ಜಾತಿಯ ಮರಗಳು ಒಳಗೊಂಡಿದ್ದು, ಈ ಮರಗಳ ಪೈಕಿ ಹೆಚ್ಚಿನವು ಭಾರತೀಯ ರೈಲ್ವೆ ಇಲಾಖೆ ಜಾಗದಲ್ಲಿವೆ. ಜತೆಗೆ ಖಾಸಗಿ, ಬಿಬಿಎಂಪಿ ಮತ್ತು ಸರ್ಕಾರಿ ಜಾಗದಲ್ಲಿವೆ. ಕೇವಲ ಮರಗಳಿಗೆ ಮಾತ್ರ ತೊಂದರೆ ಆಗುವುದಲ್ಲದೇ, ಬೆಂಗಳೂರು ಗ್ರಾಮಾಂತರದ ಅರಣ್ಯ ಭಾಗದಲ್ಲಿನ ಸ್ಲಾಟ್ ಬೇರ್, ಪ್ಯಾಂಥರ್, ಬ್ಲಾಕ್‌ಬಕ್, ಜಿಂಕೆ, ಮೊಲ, ನರಿ, ಮುಳ್ಳುಹಂದಿ, ವಿವಿಧ ಪ್ರಾಣಿಗಳಿಗೆ ತೊಂದರೆಯಾಗಲಿದೆ ಎಂದು ವರದಿ ವಿವರಿಸಿದೆ. ಅಭಿವೃದ್ಧಿ ಹೆಸರಿನಲ್ಲಿ ನಗರದಲ್ಲಿನ ಪರಿಸರ ಹಾಳು ಮಾಡಲಾಗುತ್ತಿದೆ. ಇದರ ಪರಿಣಾಮ ಭೀಕರ ಬರ, ಅಂತರ್ಜಲ ಕುಸಿತ, ನೀರಿನ ಅಭಾವ ಸೃಷ್ಟಿಯಾಗಿದೆ. ಅಭಿವೃದ್ಧಿಯು ಸುಸ್ಥಿರವಾಗಿರಬೇಕು. ಮರ ಕಡಿಯುವ ಮುನ್ನ ಸೂಕ್ತ ಜಾಗದಲ್ಲಿ ಸಸಿಗಳನ್ನು ನೆಡಬೇಕು ಎಂದು ಪರಿಸರ ತಜ್ಞ ವಿಜಯ್ ನಿಶಾಂತ್ ಹೇಳುತ್ತಾರೆ.
ಸರ್ಕಾರವು ನಗರದಲ್ಲಿನ ಮರಗಳ ಗಣತಿ ಮಾಡಲು ಅವಕಾಶ ನೀಡುತ್ತಿಲ್ಲ. ವರ್ಷಕ್ಕೆ 1 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈ 1 ಲಕ್ಷ ಸಸಿಗಳಲ್ಲಿ ಎಷ್ಟು ಬೆಳೆದು, ಆರೋಗ್ಯವಾಗಿ ನಿಂತಿವೆ ಎಂಬ ಅಂಕಿ-ಅಂಶ ಸಿಗುತ್ತಿಲ್ಲ.
ಸಸಿ ನೆಡುವುದಕ್ಕಿಂತ, ಇರುವ ಗಿಡ-ಮರಗಳನ್ನು ಸಂರಕ್ಷಿಸಿ, ಬೆಳೆಸುವುದಕ್ಕೆ, ಕಾಪಾಡಿಕೊಳ್ಳುವುದ್ದಕ್ಕೆ ಮೊದಲು ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಜಾರಿಗೆ ಜನ ಬಿಡುವುದಿಲ್ಲ
. ●ವಿಜಯ್ ನಿಶಾಂತ್, ಪರಿಸರ ತಜ್ಞ.
–ಭಾರತಿ ಸಜ್ಜನ್