ಬೆಂಗಳೂರು: ಪ್ರಧಾನಿ ಕಚೇರಿಯಿಂದ ಬೆಂಗಳೂರು ಉಪನಗರ ರೈಲು ಯೋಜನೆ ಕುರಿತು ಮರುಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ಕೆ-ರೈಡ್ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ) ಮತ್ತು ರೈಟ್ಸ್ ಸಂಸ್ಥೆಯು ಪರಿಷ್ಕೃತ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದು, ಅದರಂತೆ ರೈಲು ಮಾರ್ಗದ ಉದ್ದ 148 ಕಿ.ಮೀ.ಗೆ ಸೀಮಿತವಾಗಿದೆ. ಈ ಮೊದಲು 19,500 ಕೋಟಿ ರೂ. ವೆಚ್ಚದಲ್ಲಿ 161 ಕಿ.ಮೀ. ಉದ್ದದ ಉಪನಗರ ರೈಲು ಮಾರ್ಗ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಈಗ 13 ಕಿ.ಮೀ. ಮಾರ್ಗಕ್ಕೆ ಕತ್ತರಿ ಹಾಕಿದ್ದು, ಚಿಕ್ಕಬಾಣಾವರದಿಂದ ನೆಲಮಂಗಲ ನಡುವಿನ ಮಾರ್ಗವನ್ನು ಕೈಬಿಡಲಾಗಿದೆ. ಅಲ್ಲದೆ ಭೂಸ್ವಾಧೀನ ಪ್ರಮಾಣ ಕಡಿಮೆ ಮಾಡಿರುವುದು ಸೇರಿದಂತೆ ಹಲವು ಮಾರ್ಪಾಡುಗಳಿಂದ ಸುಮಾರು ಮೂರೂವರೆ ಸಾವಿರ ಕೋಟಿ ರೂ. ಯೋಜನಾ ವೆಚ್ಚವನ್ನೂ ಕಡಿಮೆ ಮಾಡಲಾಗಿದೆ. ಇದರಿಂದಾಗಿ ಅಂದಾಜು ವೆಚ್ಚ ಈಗ 16 ಸಾವಿರ ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ‘ನಮ್ಮ ಮೆಟ್ರೋ’ ಮತ್ತು ಉಪನಗರ ರೈಲು ಮಾರ್ಗಗಳು ಒಂದೇ ಕಡೆ ಸಂಧಿಸುವಂತಾಗಬಾರದು. ಈ ನಿಟ್ಟಿನಲ್ಲಿ ಉದ್ದೇಶಿತ ಯೋಜನೆಯನ್ನು ಮರುಪರಿಶೀಲಿಸುವಂತೆ ಪ್ರಧಾನಿ ಕಚೇರಿಯು ಮೂರು ತಿಂಗಳ ಹಿಂದೆ ರೈಲ್ವೆ ಇಲಾಖೆಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪರಿಷ್ಕೃತ ವರದಿ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಇದನ್ನು ರೈಲ್ವೆ ಮಂಡಳಿಗೆ ಸಲ್ಲಿಸಿ ನಂತರ ರೈಲ್ವೆ ಸಚಿವಾಲಯದ ಮೂಲಕ ಪ್ರಧಾನಿ ಕಚೇರಿಗೆ ಕಳುಹಿಸಲಾಗುತ್ತದೆ.
Advertisement
Related Articles
ಉಪನಗರ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಕೆಎಸ್‌ಆರ್)ನಿಂದ ದೇವನಹಳ್ಳಿ ಮಾರ್ಗದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಿದೆ. ದೇವನಹಳ್ಳಿ ಬಳಿ ಇರುವ ರೈಲು ಮಾರ್ಗದಿಂದ ವಿಮಾನ ನಿಲ್ದಾಣಕ್ಕೆ 5.5 ಕಿ.ಮೀ. ಉದ್ದ ರೈಲು ಮಾರ್ಗ ನಿರ್ಮಿಸಲಾಗುವುದು. ಇದು 0.5 ಕಿ.ಮೀ. ಉದ್ದದ ಎತ್ತರಿಸಿದ ರೈಲು ನಿಲ್ದಾಣವನ್ನೂ ಒಳಗೊಂಡಿರಲಿದೆ. 251.90 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಅಂದಾಜು 15.96 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
Advertisement