ಹುಮನಾಬಾದ: ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಪುರಸಭೆ ವತಿಯಿಂದ ನೀಡಬೇಕಾದ ಸಹಾಯಧನ ಸೂಕ್ತ ಸಮಯದಲ್ಲಿ ವಿತರಿಸದ ಕಾರಣ ಸುಮಾರು 15 ಲಕ್ಷ ರೂ. ಪುರಸಭೆಯಿಂದ ಮರಳಿ ಸರ್ಕಾರಕ್ಕೆ ಹೋಗಿದ್ದು, ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ಪಟ್ಟಣದ ಪುರಸಭೆಯಲ್ಲಿ ನಡೆದ ಉಳಿತಾಯ ಬಜೆಟ್ ಮಂಡನೆ ಸಭೆಯಲ್ಲಿ ಸಹಾಯಧನ ವಿತರಣೆ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ವೀರೇಶ ಸೀಗಿ, ಸೈಯದ್ ಅಬ್ದುಲ್ ಬಾಸಿದ್, ಅನೀಲ ಪಲ್ಲರಿ, ರಮೇಶ ಕಲ್ಲೂರ್, ಅಬ್ದುಲ್ ರಹೇಮಾನ್ ಗೊರೆಮಿಯ್ನಾ, ರಾಜರೆಡ್ಡಿ ಸೇರಿದಂತೆ ಇತರೆ ಸದಸ್ಯರು ಮಾತನಾಡಿ, ಯಾವ ಕಾರಣಕ್ಕೆ ಪುರಸಭೆಗೆ ಬಂದ ಅನುದಾನ ಮರಳಿ ಸರ್ಕಾರಕ್ಕೆ ಹೋಗಿದೆ?. ಪಟ್ಟಣದ ಜನರು ಶೌಚಾಲಯ ನಿರ್ಮಿಸಿಕೊಂಡು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದರೂ ಯಾವ ಕಾರಣಕ್ಕೆ ಫಲಾನುಭವಿಗಳ ಖಾತೆಗೆ ಹಣ ಹಾಕುವ ಕೆಲಸ ಆಗಿಲ್ಲ. ಕರ್ತವ್ಯಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಒಟ್ಟಾರೆ ಎಷ್ಟು ಜನ ಫಲಾನುಭವಿಗಳಿಗೆ ಅನುದಾನ ನೀಡಬೇಕಿತ್ತು. ಎಷ್ಟು ಜನರಿಗೆ ಅನುದಾನ ನೀಡಲಾಗಿದೆ ಎಂದು ಕೇಳಿದ ಮಾಹಿತಿಗೆ ಸಿಬ್ಬಂದಿಗಳು, ಪುರಸಭೆ ಅಧಿಕಾರಿ ಸ್ಥಳದಲ್ಲಿ ಉತ್ತರ ನೀಡುವಲ್ಲಿ ವಿಫಲರಾದರು.
ಪುರಸಭೆ ಮುಖ್ಯಾಧಿಕಾರಿ ಶೇಖ ಚಾಂದ್ ಪಟೇಲ್ ಮಾತನಾಡಿ, ಪ್ರತಿ ಕುಟುಂಬಕ್ಕೆ ಸರಾಸರಿ 12ರಿಂದ 15 ಸಾವಿರ ರೂ. ಸಹಾಯಧನ ನೀಡಬೇಕಾಗಿದ್ದು, ಯಾವ ಕಾರಣಕ್ಕೆ ಅನುದಾನದ ಮರಳಿ ಹೋಗಿದೆ. ಎಷ್ಟು ಫಲಾನುಭವಿಗಳು ಎಂಬುವುದು ಸಮಗ್ರ ಮಾಹಿತಿ ತಿಳಿದು ಸದಸ್ಯರಿಗೆ ಲಿಖೀತ ಉತ್ತರ ನೀಡುವುದಾಗಿ ಹೇಳಿದರು.
ನಂತರ 2022-23ನೇ ಸಾಲಿನ ಆಯವ್ಯಯ ಮಂಡಿಸಲಾಯಿತು. ಪುರಸಭೆ ಒಟ್ಟಾರೆ ಉಳಿತಾಯ 75 ಲಕ್ಷ ರೂ. ಬಜೆಟ್ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಭೆಯಲ್ಲಿ ಹಂಚಿಕೆ ಮಾಡಿ ಅನುಮೋದನೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಕಸ್ತೂರಬಾಯಿ, ಸದಸ್ಯರಾದ ಅಪ್ಸರ್‌ಮಿಯ್ನಾ, ರೇಷ್ಮಾ, ವಿಜಯಕುಮಾರ ದುರ್ಗದ, ಧನಲಕ್ಷ್ಮೀ ಅನೀಲ, ಸವಿತಾ, ಪಾರ್ವತಿ ಶೇರಿಕಾರ, ಭೀಮಬಾಯಿ, ಶಿವಲಿಂಗ ಸ್ವಾಮಿ, ವಿಜಯಕುಮಾರ, ಜಹಿರೋದ್ದೀನ್ ಹಾಗೂ ಇತರೆ ಸದಸ್ಯರು ಇದ್ದರು