Advertisement

ಅಡುಗೆ ಅನಿಲದ ಮೇಲಿನ ಸಬ್ಸಿಡಿ ರದ್ದು: ಪ್ರತಿಭಟನೆ

03:29 PM Aug 10, 2017 | |

ದೊಡ್ಡಬಳ್ಳಾಪುರ: ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಸಿಪಿಎಂ
ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ತಾಲೂಕು ಕಾರ್ಯದರ್ಶಿ ರುದ್ರಾರಾಧ್ಯ, ಅಚ್ಚೇ ದಿನ್‌ ಘೋಷಣೆಯನ್ನು ನಂಬಿದ್ದ ಬಡವರಿಗೆ ಕೇಂದ್ರ ಸರ್ಕಾರ ಕೆಟ್ಟದಿನಗಳ ದರ್ಶನ ಭಾಗ್ಯ ನೀಡಿದೆ. ಬಡವರ ಆಹಾರದ ಹಕ್ಕನ್ನು ಕಸಿದುಕೊಳ್ಳುವ ಸಲುವಾಗಿಯೇ ಆಹಾರ ಧಾನ್ಯಗಳ ವಿತರಣೆಗೆ ಬದಲಾಗಿದೆ ಫ‌ಲಾನುಭವಿಗಳ ಖಾತೆಗಳಿಗೆ ಹಣ
ವರ್ಗಾವಣೆ ಮಾಡುವ ಕ್ರಮಕ್ಕೆ ಮುಂದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಡಿತರ ವಿತರಣೆಯನ್ನೇ ರದ್ದುಗೊಳಿಸುವ ಹುನ್ನಾರ
ಇದರ ಹಿಂದೆ ಅಡಗಿದೆ ಎಂದು ಹೇಳಿದರು.

Advertisement

ಸೌಲಭ್ಯ ಕಡಿತ: ಜಿಲ್ಲಾ ಕಾರ್ಯದರ್ಶಿ ಆರ್‌. ಚಂದ್ರತೇಜಸ್ವಿ ಮಾತನಾಡಿ, ಬಡವರ ರಕ್ಷಣೆಗೆ ನಿಲ್ಲಬೇಕಿದ್ದ ಸರ್ಕಾರ ಬಡವರ ಜೀವನದ ಮೇಲೆ ಹೊರೆ ಯನ್ನು ಹಾಕುತ್ತಿದೆ. ಅಡುಗೆ ಸಿಲಿಂಡರ್‌ ಕೊಳ್ಳುವ ಜನಸಾಮಾನ್ಯರ
ಬ್ಯಾಂಕ್‌ ಖಾತೆಗೆ ಇಲ್ಲಿಯವರೆಗೂ ಸಬ್ಸಿಡಿ ಹಣ ವರ್ಗಾವಣೆಗೊಳ್ಳುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಬಡವರ ಹಣದ ಮೇಲೆ ಕಣ್ಣಿಟ್ಟಿದೆ. ಶ್ರೀಮಂತರನ್ನು ಉಳಿಸುವ ನಿಟ್ಟಿನಲ್ಲಿ ಬಡವರ ಸೌಲಭ್ಯ ಕಸಿದುಕೊಳ್ಳುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಡವರ ಬದುಕಿಗೆ ಕಂಟಕ: ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತಳೆಯುತ್ತಿದ್ದು, ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿದೆ. ನೋಟು ಅಮಾನ್ಯದಿಂದ ಶ್ರೀಮಂತರಿಗೆ ಮಾತ್ರ ಯಾವುದೇ ತೊಂದರೆಯಾಗಿಲ್ಲ. ಬಡವರ ಬದುಕನ್ನೂ ಬರಡು ಮಾಡು ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ. ಕೂಡಲೇ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಿರುವ ಕೇಂದ್ರ
ಸರ್ಕಾರ ತನ್ನ ಆದೇಶ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.  ಸಿಪಿಎಂ ಮುಖಂಡ ರಾದ ರೇಣುಕಾರಾಧ್ಯ,
ಮುಸ್ತಾಫ‌, ಪಿ.ಎ. ವೆಂಕಟೇಶ್‌, ಅಶ್ವತ್ಥ್, ಚೌಡಯ್ಯ, ಭರತ್‌ಬೋಸ್ಲೆ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next