Advertisement
ರಾಜ್ಯಾದ್ಯಂತ ಪ್ರವಾಸಿ ತಾಣಗಳಿಗೆ ಸಂಪರ್ಕಕಲ್ಪಿಸುವ ಸುಮಾರು 4,800 ಕಿ.ಮೀ. ಹೆದ್ದಾರಿ ಯನ್ನು ಗುರುತಿಸಲಾಗಿದೆ. ಆ ಹೆದ್ದಾರಿಗಳಿಂದ 2-3 ಕಿ.ಮೀ. ಆಸುಪಾಸಿನಲ್ಲಿ ಪೆಟ್ರೋಲ್ ಬಂಕ್‌ಗಳ ಮಾದರಿಯಲ್ಲಿ ಹೊಟೇಲ್, ರೆಸಾರ್ಟ್ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಆಯಾ ಮಾರ್ಗದಲ್ಲಿ ಭೇಟಿ ನೀಡುವ ಪ್ರವಾಸಿ ವರ್ಗಕ್ಕೆ ಅನುಗುಣವಾಗಿ ಈ ಸೌಕರ್ಯಗಳು ಸಿಗಲಿವೆ. ಅವುಗಳ ನಿರ್ಮಾಣಕ್ಕೆ ಮುಂದೆ ಬರುವವರಿಗೆ ಇಲಾಖೆಯಿಂದ ಸಬ್ಸಿಡಿ ನೀಡ ಲಾಗುವುದು ಎಂದಿದ್ದಾರೆ.
ಇದಲ್ಲದೆ ಧರ್ಮಸ್ಥಳ, ಪಂಡರೀಪುರ, ಸವದತ್ತಿ ಕ್ಷೇತ್ರ ಸೇರಿದಂತೆ ರಾಜ್ಯದ ನಾನಾ ಧಾರ್ಮಿಕ ಸ್ಥಳಗಳಿಗೆ ಭಕ್ತರು ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಅವರ ಅನುಕೂಲಕ್ಕಾಗಿ ಸಮುದಾಯ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಚಿಂತನೆಯೂ ಇದೆ. ಇದರಿಂದ ಋತುವಿನಲ್ಲಿ ಭಕ್ತರು ಅಲ್ಲಿ ವಾಸ್ತವ್ಯ ಹೂಡಬಹುದು. ಉಳಿದ ಸಂದರ್ಭಗಳಲ್ಲಿ ಆ ಕೇಂದ್ರಗಳನ್ನು ಮದುವೆ ಮತ್ತಿತರ ಕಾರ್ಯಕ್ರಮಗಳಿಗೂ ಬಳಸಿಕೊಳ್ಳಬಹುದು. ಇದರಿಂದ ಆದಾಯವೂ ಬರುತ್ತದೆ. ಈ ಸಂಬಂಧ ಸ್ಥಳೀಯರು ಮತ್ತು ಮುಜರಾಯಿ ಇಲಾಖೆಯ ನೆರವು ಅತ್ಯವಶ್ಯಕ ಎಂದು ಮಾಹಿತಿ ನೀಡಿದರು.
Related Articles
Advertisement
ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ?ಜಾಗತಿಕ ಹೂಡಿಕೆದಾರರ ಸಮಾವೇಶದ ಮಾದರಿಯಲ್ಲೇ ಶೀಘ್ರದಲ್ಲೇ ವಿಶ್ವ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ಸಚಿವ ಸಿ.ಟಿ. ರವಿ ತಿಳಿಸಿದರು. ಈ ಸಮಾ ವೇಶದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಉದ್ಯಮಿಗಳನ್ನು ಆಹ್ವಾನಿಸಲಾಗುವುದು. ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿ, ಹೂಡಿಕೆದಾರರ ಆಕರ್ಷಣೆಗೆ ಇದು ವೇದಿಕೆ ಆಗಲಿದೆ ಎಂದ ಅವರು, ಇದಕ್ಕೂ ಮುನ್ನ ಡಿ. 18 ಮತ್ತು 19ರಂದು ಪ್ರವಾಸೋದ್ಯಮ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹಿಂದಿನ ಪ್ರವಾಸೋದ್ಯಮ ಸಚಿವರು, ಇದೇ ಇಲಾಖೆಯಲ್ಲಿ ಸತತ ಎರಡು ವರ್ಷಗಳಿಗಿಂತ ಹೆಚ್ಚು ಅವಧಿ ಕಾರ್ಯನಿರ್ವಹಿಸಿದವರು, ಟ್ರಾವೆಲರ್, ಬ್ಲಾಗರ್ ಜತೆ ಸಂವಾದ ನಡೆಯಲಿದೆ ಎಂದರು. ಶೇ. 23 ಜಿಎಸ್‌ಡಿಪಿ ಗುರಿ
ಪ್ರಸ್ತುತ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆ (ಜಿಎಸ್‌ಡಿಪಿ)ಯಲ್ಲಿ ಪ್ರವಾಸೋದ್ಯಮದ ಪಾಲು ಶೇ. 14.5ರಷ್ಟಿದ್ದು, ಇದನ್ನು ಶೇ. 20ರಿಂದ 23ಕ್ಕೆ ಹೆಚ್ಚಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಮುಂದಿನ ಮೂರೂವರೆ ವರ್ಷಗಳಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
320 ಕಿ.ಮೀ. ಕರಾವಳಿ ಮಾರ್ಗ
5 ರಾಷ್ಟ್ರೀಯ ಉದ್ಯಾನಗಳು
30 ವನ್ಯಜೀವಿಗಳ ತಾಣ
40 ಜಲಪಾತಗಳು
17 ಗಿರಿಶ್ರೇಣಿಗಳು
1,453 ಭಾರತೀಯ ಪುರಾತತ್ವ ಇಲಾಖೆ ಅಡಿ ಬರುವ ಸ್ಮಾರಕಗಳು ಕಂಬಳಕ್ಕೆ ಹೈಟೆಕ್ ಸ್ಪರ್ಶ?
ಕರಾವಳಿಯ ಪ್ರಮುಖ ದೇಶೀಯ ಕ್ರೀಡೆ ಕಂಬಳ, ಉತ್ತರ ಕರ್ನಾಟಕದ ಎತ್ತಿನ ಬಂಡಿ ಸ್ಪರ್ಧೆ, ಜಾನಪದ ಜಾತ್ರೆ, ದಸರಾದಂತಹ ಉತ್ಸವಗಳಿಗೆ ಮುಂದಿನ ದಿನಗಳಲ್ಲಿ ಹೈಟೆಕ್ ಸ್ಪರ್ಶ ನೀಡಲು ಪ್ರವಾಸೋದ್ಯಮ ಇಲಾಖೆ ಉದ್ದೇಶಿಸಿದೆ. ಹಲವಾರು ವರ್ಷಗಳಿಂದ ಈ ಉತ್ಸವಗಳು ನಡೆಯುತ್ತಿವೆ. ಆದರೆ ಅವುಗಳನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಆಗುತ್ತಿಲ್ಲ. ಬೆಂಗಳೂರಿನಲ್ಲೇ 63 ದೇಶಗಳ ಸಾವಿರಾರು ಜನ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನೇ ರಾಯಭಾರಿಗಳನ್ನಾಗಿ ರೂಪಿಸಿ, ಆಯಾ ದೇಶಗಳಿಗೆ ಈ ಉತ್ಸವ ವೈಭವವನ್ನು ಪರಿಚಯಿಸಲಾಗುವುದು. ಆ ಮೂಲಕ ಇಲ್ಲಿಗೆ ವಿದೇಶಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ತರುವ ಕೆಲಸ ಆಗಬೇಕಿದೆ ಎಂದು ಸಚಿವ ರವಿ ಹೇಳಿದರು.