Advertisement

ಮೆಡಿಕಲ್‌ ಕಾಲೇಜ್‌ಗೆ ಅನುದಾನ ವಿಳಂಬ: ತರಾಟೆ

06:15 AM Feb 09, 2018 | Team Udayavani |

ಬೆಂಗಳೂರು :  ಬಜೆಟ್‌ನಲ್ಲಿ ಘೋಷಿಸಿದ ಹೊಸ ಮೆಡಿಕಲ್‌ ಕಾಲೇಜುಗಳಿಗೆ ಹಣಕಾಸು ವರ್ಷ ಮುಗಿಯುತ್ತಾ ಬಂದರೂ ಅನುದಾನ ಬಿಡುಗಡೆ ಮಾಡಿ ಕಾಲೇಜ್‌ ಪ್ರಾರಂಭಿಸದಿರುವ ಬಗ್ಗೆ ವಿಧಾನಸಭೆಯಲ್ಲಿ ಶಾಸಕರು ಪಕ್ಷಾತೀತವಾಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಪ್ರಶ್ನೋತ್ತರ ಕಲಾಪದ ಸಂದರ್ಭದಲ್ಲಿ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಮೆಡಿಕಲ್‌ ಕಾಲೇಜ್‌ ಮಂಜೂರಾಗಿದ್ದರೂ ಇದುವರೆಗೆ ಏಕೆ ಅನುದಾನ ಬಿಡುಗಡೆ ಮಾಡಿಲ್ಲವೆಂದು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ ಆರೋಗ್ಯ ಸಚಿವ ಯು.ಟಿ. ಖಾದರ್‌ ಅನುದಾನದ ಕೊರತೆಯಿಂದ ಹಣವನ್ನು ಬಿಡುಗಡೆ ಮಾಡಲಾಗಿಲ್ಲ.ಮುಂದಿನ ದಿನಗಳಲ್ಲಿ ಅನುದಾನ ನೀಡಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದರು.

ಸಚಿವರ ಈ ಉತ್ತರಕ್ಕೆ ಸಿ.ಟಿ ರವಿ ತೃಪ್ತರಾಗದೇ ಚಿಕ್ಕಮಗಳೂರು ಕಾಲೇಜಿಗೇ ಏಕೆ ಬಿಡುಗಡೆ ಮಾಡಿಲ್ಲ. ಈ ತಾರತಮ್ಯ ನೀತಿ ಏಕೆಂದು ಪ್ರಶ್ನಿಸಿದರು.ಇದಕ್ಕೆ ಸಭಾಧ್ಯಕ್ಷರ ಪೀಠದಲ್ಲಿ ಕುಳಿತಿದ್ದ ಉಪ ಸಭಾಧ್ಯಕ್ಷ ಶಿವಶಂಕರ ರೆಡ್ಡಿ ಸಹ ದನಿಗೂಡಿಸಿ ಚಿಕ್ಕಬಳ್ಳಾಪುರ ಕಾಲೇಜಿಗೂ ಅನುದಾನ ನೀಡಿಲ್ಲವೆಂದು ತಿಳಿಸಿದರು. ಆಡಳಿತ ಪಕ್ಷದ ಶಾಸಕ ಕೆ.ಎನ್‌ ರಾಜಣ್ಣ ಸಹ ತುಮಕೂರು ಮೆಡಿಕಲ್‌ ಕಾಲೇಜಿಗೆ ಸರ್ಕಾರ 5 ಕೋಟಿ ರೂಪಾಯಿ ಹಣ ನೀಡುವುದಾಗಿ ಹೇಳಿತ್ತು ಅದನ್ನು ಬಿಡುಗಡೆ ಮಾಡದೇ ಇರುವುದಕ್ಕೆ  ಕಾಲೇಜು ಆರಂಭ ನೆನೆಗುದಿಗೆ ಬಿದ್ದಿದೆ ಎಂದರು. ಸರ್ಕಾರಿ ಮೆಡಿಕಲ್‌ ಕಾಲೇಜ್‌ಗೆ ಅನುದಾನ ನೀಡದಿರುವ ಕುರಿತು ವಿವರವಾಗಿ ಚರ್ಚಿಸುವ ಅಗತ್ಯತೆಯಿದೆ. ಪ್ರಶ್ನೋತ್ತರ ಬದಲಿಗೆ ಅರ್ಧ ಗಂಟೆ ಚರ್ಚಿಸಲು ಸಮಯ ನಿಗದಿಪಡಿಸಿ ನಾಳೆ ಚರ್ಚೆಗೆ ತೆಗೆದುಕೊಳ್ಳುವುದು ಉತ್ತಮವೆಂದು ಸಲಹೆ ನೀಡಿದರು.ಇದಕ್ಕೆ ಉಪಸಭಾಧ್ಯಕ್ಷರು ಸಮ್ಮತಿ ಸೂಚಿಸಿ ಶುಕ್ರವಾರ ಅರ್ಧ ಗಂಟೆ ಚರ್ಚೆಗೆ ತೆಗೆದುಕೊಳ್ಳೋಣವೆಂದು ತಿಳಿಸಿದರು.

ಜೆಡಿಎಸ್‌ ನ ಹೆಚ್‌.ಡಿ ರೇವಣ್ಣ  ಮತ್ತೂಂದು ಪ್ರಶ್ನೆಯಲ್ಲಿ ಹಾಸನ ಮೆಡಿಕಲ್‌ ಕಾಲೇಜಿನಲ್ಲಿ ಪಿ.ಜಿ.ಕೋರ್ಸ್‌ ಆರಂಭಿಸಲು ಮೂಲಭೂತ ಸೌಲಭ್ಯಗಳಿಲ್ಲ, 10 ವರ್ಷಗಳಿಂದ ಇದು ನೆನೆಗುದಿಗೆ ಬಿದ್ದಿದೆ.ಇದಕ್ಕೆ 40 ಕೊಟಿ ರೂಗಳ ಅಗತ್ಯತೆಯಿದ್ದು ಸರ್ಕಾರ ಯಾವಾಗ ಹಣ ನೀಡುತ್ತದೆ ಎಂದು ಕೇಳಿದರು.ಆಗ ಈ ಎಲ್ಲ ವಿಚಾರಗಳ ಬಗ್ಗೆ ಶುಕ್ರವಾರ ವೈದ್ಯಕೀಯ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಚರ್ಚಿಸಿ ಉತ್ತರ ಪಡೆಯೋಣವೆಂದು ಡೆಪ್ಯುಟಿ ಸ್ಪೀಕರ್‌ ತಿಳಿಸಿ ಮೆಡಿಕಲ್‌ ಕಾಲೇಜ್‌ ಅನುದಾನ ನೀಡದಿರುವ ವಿಷಯದ ಚರ್ಚೆಗೆ ತೆರೆಯೆಳೆದರು.

ಸಚಿವರ ಗೈರಿಗೆ ಆಕ್ರೋಶ…
ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಅನುದಾನ ಬಿಡುಗಡೆ ವಿಷಯದ ಪ್ರಶ್ನೋತ್ತರ ಕಲಾಪದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಗೈರು ಹಾಜರಾತಿಗೆ ಪ್ರತಿ ಪಕ್ಷ ಬಿಜೆಪಿ ಸದಸ್ಯರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಶಾಸಕ ಲಕ್ಷ್ಮಣ ಸವದಿ ಸಚಿವರ ಗೈರು ವಿಷಯ ಪ್ರಸ್ಥಾಪಿಸಿ ಕಳೆದ 4 ದಿನಗಳಿಂದಲೂ ವೈದ್ಯಕೀಯ ಸಚಿವರು ಸದನದಲ್ಲಿ ಕಾಣಿಸಿಕೊಂಡಿಲ್ಲ.ಸಚಿವರು ಎಲ್ಲಿದ್ದಾರೆಂದು ಪ್ರಶ್ನಿಸಿದರು.ಸದನಕ್ಕೆ ಬರದಿರುವ ಬಗ್ಗೆ ಸ್ಪೀಕರ್‌ ಅವರಿಂದ ಅನುಮತಿ ಪಡೆದಿದ್ದಾರೆಯೇ ಎಂದು ಕೇಳಿದರು.ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಇದಕ್ಕೆ ದನಿಗೂಡಿಸಿ ಆಡಳಿತ ಪಕ್ಷದ ಮೊದಲನೇ ಸಾಲಿನಲ್ಲಿ ಒಬ್ಬರೇ ಒಬ್ಬ ಸಚಿವರಿಲ್ಲವೆಂದು ಖಾಲಿ ಕುರ್ಚಿಗಳ ಕಡೇ ಬೆರಳು ಮಾಡಿ ತೋರಿಸಿದರು.

Advertisement

ಹಿರಿಯ ಶಾಸಕ ಗೋವಿಂದ ಕಾರಜೋಳ ಸಚಿವರ ಗೈರು ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿ ಸದನಕ್ಕೆ ಬರದೇ ಇರುವಷ್ಟು ಪುರುಸೊತ್ತು ಇಲ್ಲದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ ಬಹಳಷ್ಟು ಜನ ಮಂತ್ರಿಗಳಾಗಲು ತಯಾರಿದ್ದಾರೆ.ಬಿ.ಆರ್‌ ಯಾವಗಲ್‌,ಜೆ.ಟಿ ಪಾಟೀಲ್‌ ಜಿ.ಎಸ್‌ ಪಾಟೀಲ್‌ ಮೊದಲಾದವರು ಸಚಿವರಾಗುವ ಅವಕಾಶಕ್ಕೆ ಕಾಯುತ್ತಿದ್ದಾರೆಂದು ಹೇಳಿದರು.

ಉಪ ಸಭಾಧ್ಯಕ್ಷ ಶಿವಶಂಕರ ರೆಡ್ಡಿ ಉತ್ತರಿಸುತ್ತಾ ಸಚಿವರು ಸದನಕ್ಕೆ ಬರದೇ ಇರುವ ಬಗ್ಗೆ ಸಭಾಧ್ಯಕ್ಷರ ಅನುಮತಿ ಪಡೆದಿದ್ದಾರೆಂದು ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next