ಮಲ್ಪೆ: ಯಾಂತ್ರಿಕ ಮೀನುಗಾರಿಕೆ ದೋಣಿಗಳಿಗೆ ಡೆಲಿವರಿ ಪಾಯಿಂಟ್‌ನಲ್ಲಿ ಮಾರಾಟ ತೆರಿಗೆ ರಹಿತ ಡೀಸೆಲ್ ನೀಡುತ್ತಿದ್ದ ಕ್ರಮವನ್ನು ಈಗೇಕೆ ಬದಲಾಯಿಸಲಾಗಿದೆ ಎಂಬ ಬಗ್ಗೆ ಇಲಾಖೆ ಕಾರ್ಯದರ್ಶಿಗಳ ಜತೆ ಚರ್ಚಿಸಲಾಗುವುದು. ಅವಶ್ಯ ಬಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೂ ತಂದು ಪರಿಹಾರ ಕಲ್ಪಿಸುವುದಾಗಿ ಪಶುಸಂಗೋಪನಾ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಭರವಸೆ ನೀಡಿದರು.
ಬುಧವಾರ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ, ಮೀನುಗಾರರ ಬೇಡಿಕೆಗಳ ಮನವಿ ಸ್ವೀಕರಿಸಿದ ಅವರು, ಮಲ್ಪೆ ಬಾಪುತೋಟದ ಬಳಿ ಇರುವ ಸ್ಲಿಪ್‌ವೇ ನಿರ್ವಹಣೆ ಬಗ್ಗೆಯೂ ಕಡತಗಳನ್ನು ಪರಿಶೀಲಿಸಿ, ಅವಕಾಶವಿದ್ದರೆ ಮೀನುಗಾರ ಸಂಘಕ್ಕೆ ಕೊಡಲಾಗುವುದು. ಕುಮಾರಸ್ವಾಮಿ ಸರಕಾರ ಬಡವರ, ಮೀನುಗಾರರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.
ಶಾಸಕ ಕೆ. ರಘುಪತಿ ಭಟ್ ಮೀನುಗಾರರ ಸಮಸ್ಯೆ, ಬೇಡಿಕೆಗಳ ಕುರಿತು ವಿವರಿಸಿದರು. ಸಚಿವರು ಮೀನುಗಾರಿಕೆ ಜೆಟ್ಟಿ, ಸ್ಲಿಪ್‌ವೇಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮೀನುಗಾರರ ಪರವಾಗಿ ಸಚಿವ ರನ್ನು ಸಮ್ಮಾನಿ ಸಲಾಯಿತು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮೀನುಗಾರಿಕಾ ನಿರ್ದೇಶಕ ಎಚ್. ಎಸ್. ವೀರಪ್ಪ ಗೌಡ, ಜಂಟಿ ನಿರ್ದೇಶಕ ದೊಡ್ಡಮನಿ, ಸಚಿವರ ಆಪ್ತ ಕಾರ್ಯದರ್ಶಿ ವಿರೂಪಾಕ್ಷ. ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮೀನುಗಾರಿಕಾ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಸ್ತೆ ಸರಿಯಿಲ್ಲವೆಂದು ಬಂದರು ವೀಕ್ಷಣೆ ರದ್ದು!
ಪಡುಬಿದ್ರಿ: ಹೆಜಮಾಡಿ ಮೀನುಗಾರಿಕಾ ಜೆಟ್ಟಿ ವೀಕ್ಷಣೆಗೆ ಬಂದಿದ್ದ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಅವರ ವಾಹನ ಸಂಚರಿಸಲು ರಸ್ತೆ ಯೋಗ್ಯವಲ್ಲ ಎಂಬ ಕಾರಣಕ್ಕೆ ಬಂದರು ಪ್ರದೇಶ ವೀಕ್ಷಣೆ ರದ್ದಾಯಿತು. ಸಚಿವರು ಬರುವರೆಂದು ಮೀನುಗಾರಿಕಾ ರಸ್ತೆ ದುರಸ್ತಿ ತರಾತುರಿಯಲ್ಲಿ ಆರಂಭಿಸಲಾಗಿತ್ತು. ಪರೀಕ್ಷಾರ್ಥ ತೆರಳಿದ್ದ ಇಲಾಖೆ ವಾಹನ ಹೂತು ಹೋಗಿದ್ದರಿಂದ ಸಚಿವರನ್ನು ಬಂದರಿ ನಿಂದ 1.2 ಕಿ.ಮೀ. ಮೊದಲೇ ನಿಲ್ಲಿಸಿ ಅಲ್ಲೇ ಮನವಿ ಸಲ್ಲಿಕೆ, ಮಾತುಕತೆ ಗಳನ್ನು ನಡೆಸಲಾಯಿತು.
ಬಂದರು ರಸ್ತೆಗೆ ಕಾಂಕ್ರೀಟ್ ಹಾಕಲು ಎನ್‌ಸಿಆರ್‌ಎಂಪಿ ಯೋಜನೆಯಂತೆ 171 ಲಕ್ಷ ರೂ.ಗಳ ಕಾಮಗಾರಿಗೆ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಗುದ್ದಲಿ ಪೂಜೆ ನಡೆಸಿದ್ದರು. ಚುನಾವಣೆ ಘೋಷಣೆಯಾದ್ದರಿಂದ ಕಾಮಗಾರಿ ನಡೆದಿರಲಿಲ್ಲ. ಬುಧವಾರ ಸಚಿವರು ಬರುತ್ತಾರೆಂದು ಮಣ್ಣು, ಜಲ್ಲಿ ಹುಡಿ ಹಾಕಿ ಸಮತಟ್ಟುಗೊಳಿಸಿ ರೋಲರ್ ಓಡಿಸಿದರೂ ಪ್ರಯೋಜನವಾಗಲಿಲ್ಲ.