Advertisement

ಸಬ್‌ ರಿಜಿಸ್ಟ್ರಾರ್‌ ಕಚೇರಿ ಮತ್ತೆ ಕಾರ್ಯಾರಂಭ

02:18 AM Jun 08, 2021 | Team Udayavani |

ಮಂಗಳೂರು/ಉಡುಪಿ: ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಒಂದು ತಿಂಗಳಿನಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ನೋಂದಣಿ ಕಚೇರಿ ಗಳು ಸೋಮವಾರ ಮತ್ತೆ ಪ್ರಾರಂಭ ಗೊಂಡಿದ್ದು, ನೋಂದಣಿ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

Advertisement

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೋಂದಣಿ ಕಚೇರಿಗಳನ್ನು ಮೇ 7ರಿಂದ ಮುಚ್ಚಲಾಗಿತ್ತು. ಇದೀಗ ಕೊರೊನಾ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ತೆರೆಯಲು ರಾಜ್ಯ ಸರಕಾರ ಅನುಮತಿಸಿದೆ.

ದ.ಕ. ಜಿಲ್ಲೆಯಲ್ಲಿ 9 ಹಾಗೂ ಉಡುಪಿ ಜಿಲ್ಲೆಯಲ್ಲಿ 6 ಉಪನೋಂದಣಿ ಕಚೇರಿಗಳು ಕಾರ್ಯಾಚರಿಸುತ್ತಿವೆ. ಜಿಲ್ಲಾ ನೋಂದಣಿ ಕಚೇರಿಗಳು ಹಾಗೂ ಮಂಗಳೂರು, ಮೂಲ್ಕಿ, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ, ವಿಟ್ಲ, ಪುತ್ತೂರು, ಸುಳ್ಯ ಹಾಗೂ ಉಡುಪಿ, ಕುಂದಾಪುರ, ಬ್ರಹ್ಮಾವರ, ಬೈಂದೂರು, ಶಂಕರನಾರಾಯಣ, ಕಾರ್ಕಳದಲ್ಲಿ ಉಪನೊಂàದಣಿ ಕಚೇರಿಗಳಿವೆ.

ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಸಂಬಂಧಿಸಿ ನೋಂದಣಿಗೆ ದಿನ ನಿಗದಿಗೊಳಿಸಿ ಉಪನೋಂದಣಿ ಕಚೇರಿಯಿಂದ ಟೋಕನ್‌ ಪಡೆಯಬೇಕಾಗುತ್ತದೆ. ಅದರಂತೆ ಕೆಲವು ಮಂದಿ ಟೋಕನ್‌ ಪಡೆದುಕೊಂಡಿದ್ದರು. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಚೇರಿ ಕಲಾಪ ಸ್ಥಗಿತಗೊಂಡ ಕಾರಣ ನೋಂದಣಿ ಕಾರ್ಯ ನಡೆದಿರಲಿಲ್ಲ. ಇದೀಗ ಅವರೆಲ್ಲರೂ ಹೊಸದಾಗಿ ದಿನ ನಿಗದಿಗೊಳಿಸಿ ಮತ್ತೆ ಟೋಕನ್‌ ಪಡೆಯಬೇಕಾಗುತ್ತದೆ.

ಉಪ ನೋಂದಣಾಧಿಕಾರಿ ಕಚೇರಿಗಳನ್ನು ಮುಚ್ಚಿದ್ದರಿಂದ ಕರಾವಳಿ ಜಿಲ್ಲೆಯ ಆರ್ಥಿಕತೆಯ ಮೇಲೂ ಪರಿಣಾಮ ಬೀರಿತ್ತು. ಆಸ್ತಿ, ಫ್ಲಾಟ್‌, ಅಂಗಡಿ ಕಟ್ಟಡಗಳ ಖರೀದಿ ಮತ್ತು ಮಾರಾಟ ಸೇರಿದಂತೆ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೂ ಹಿನ್ನಡೆಯಾಗಿತ್ತು.
ಅದುದರಿಂದ ಕೆಲವು ಮಾರ್ಗಸೂಚಿಗಳನ್ನು ಅಳವಡಿಸಿ ಶೇ. 50ರಷ್ಟು ಕಚೇರಿ ನಿರ್ವಹಣೆ ಸೂತ್ರದಲ್ಲಿ ಸಬ್‌ ರಿಜಿಸ್ಟ್ರಾರ್‌ ಕಚೇರಿ ತೆರೆಯಲು ಅನುಮತಿ ನೀಡಬೇಕೆಂಬ ಬೇಡಿಕೆ ರಿಯಲ್‌ಎಸ್ಟೇಟ್‌ ಕ್ಷೇತ್ರದಿಂದ ವ್ಯಕ್ತವಾಗಿತ್ತು.

Advertisement

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸರಕಾರಕ್ಕೆ ಅತೀ ಹೆಚ್ಚು ಆದಾಯ ತರುವ ಇಲಾಖೆಗಳಲ್ಲೊಂದಾಗಿದೆ. ಲಾಕ್‌ಡೌನ್‌ ಪೂರ್ವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಪ್ರತಿದಿನ ಸರಾಸರಿ ಸುಮಾರು 1.5 ಕೋಟಿ ರೂ. ಸರಕಾರದ ಬೊಕ್ಕಸಕ್ಕೆ ಆದಾಯ ಬರುತ್ತಿತ್ತು. 2021-22ನೇ ಸಾಲಿನ ಬಜೆಟ್‌ನಲ್ಲಿ ಈ ಇಲಾಖೆಗೆ 12,665 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 254 ಸಬ್‌ ರಿಜಿಸ್ಟ್ರಾರ್‌ ಕಚೇರಿ ಇದ್ದು, 20-21ನೇ ಸಾಲಿನಲ್ಲಿ 10,480 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ನೋಂದಣಿ ಪ್ರಾರಂಭ
ನೋಂದಣಿ ಕಚೇರಿಗಳ ಆರಂಭಕ್ಕೆ ರವಿವಾರ ಸರಕಾರ ಆದೇಶ ಮಾಡಿದ್ದು ಸೋಮವಾರ ದಿಂದ ನೋಂದಣಿ ಕಾರ್ಯ ಆರಂಭಗೊಂಡಿದೆ. ನೋಂದಣಿಗೆ ಬಾಕಿ ಇದ್ದವರು ಕಚೇರಿಗೆ ನೇರವಾಗಿ ಬಂದು ನೋಂದಣಿ ಮಾಡಿಸಿಕೊಳ್ಳಬಹುದು.
– ರವೀಂದ್ರ ಎಲ್‌. ಪೂಜಾರ್‌, ಬಿ.ಎಸ್‌. ಶ್ರೀಧರ್‌ ಜಿಲ್ಲಾ ನೋಂದಣಿ ಅಧಿಕಾರಿಗಳು, ದ.ಕ. ಮತ್ತು ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next