Advertisement

ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ ಗೆ ಸುಬ್ರಾಯ ಚೊಕ್ಕಾಡಿ ಆಯ್ಕೆ

04:39 PM May 11, 2018 | |

ಮುಂಬಯಿ: ಬಿಲ್ಲವರ ಅಸೋಸಿ ಯೇಶನ್‌ ಮುಖವಾಣಿ ಅಕ್ಷಯ ಪತ್ರಿಕೆಯ ಮಾಜಿ ಗೌರವ ಪ್ರಧಾನ ಸಂಪಾದಕ  ಎಂ. ಬಿ. ಕುಕ್ಯಾನ್‌ ಅವರು ಪ್ರಾಯೋಜಿಸಿ ಬಿಲ್ಲವರ ಅಸೋಸಿಯೇಶನ್‌  ಪ್ರಧಾನಿಸುತ್ತಿರುವ 2018 ನೇ ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕವಿ, ವಿಮರ್ಶಕ  ಸುಬ್ರಾಯ ಚೊಕ್ಕಾಡಿ ಅವರು ಆಯ್ಕೆಯಾಗಿದ್ದಾರೆ.

Advertisement

ಈ ಪ್ರಶಸ್ತಿಯು 25000 ರೂ. ನಗದು, ಪ್ರಶಸ್ತಿ ಫಲಕ, ಸಮ್ಮಾನ  ಪತ್ರಗಳನ್ನೊಳಗೊಂಡಿದೆ. ಹಿರಿಯ ಸಾಹಿತಿಗಳಾದ ಡಾ| ಸುನೀತಾ ಶೆಟ್ಟಿ ಹಾಗೂ ಸಾಹಿತಿ ವಿ.ಗ. ನಾಯಕರನ್ನೊಳಗೊಂಡ ಸಾಹಿತ್ಯ ಪ್ರಶಸ್ತಿ ನಿರ್ಣಾಯಕ ಸಮಿತಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಈ ಪ್ರಶಸ್ತಿಯನ್ನು ಸುಬ್ರಾಯ ಚೊಕ್ಕಾಡಿಯವರು ಕನ್ನಡ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.

ಸುಬ್ರಾಯ ಚೊಕ್ಕಾಡಿಯವರು ಪ್ರಸಿದ್ಧ ಕವಿ, ವಿಮರ್ಶಕರು ಹಾಗೂ ಶಿಕ್ಷಕರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ  ಜನಿಸಿರುವ ಸುಬ್ರಾಯ ಚೊಕ್ಕಾಡಿಯವರು ತಮ್ಮ ಊರಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಪಂಜ ಹೊಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದರು. ಅನಂತರ ಟೀಚರ್ ಟ್ರೈನಿಂಗ್‌ ಪಡೆದು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ ಪದವೀಧರರಾದರು.

ಆನಂತರ  ಕುಕ್ಕುಎಡ್ಕ, ಪೈಲಾರು, ಹಾಸನಡ್ಕ ಶಾಲೆಗಳಲ್ಲಿ 39 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಸುಬ್ರಾಯ ಚೊಕ್ಕಾಡಿಯವರ ತಂದೆಯವರು ಯಕ್ಷಗಾನ ಭಾಗವತರು. ಹಾಗಾಗಿ ಸುಬ್ರಾಯ ಚೊಕ್ಕಾಡಿ ಯಕ್ಷಗಾನಕ್ಕೆ ಆರ್ಕತರಾಗಿ ಯಕ್ಷಗಾನ ಹಾಗೂ ತಾಳ ಮದ್ದಳೆಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದರು. 

ಅಲ್ಲದೆ ನಾಟಕ ತಂಡ ಕಟ್ಟಿ ನಾಟಕಗಳನ್ನು ಪ್ರದರ್ಶಿಸಿ ನಟಿಸಿದ ಅನುಭವವೂ ಇವರಿಗಿದೆ. ಸಾಹಿತ್ಯಾಸಕ್ತರಾದ ಸುಬ್ರಾಯ ಚೊಕ್ಕಾಡಿಯವರು ಈ ವರೆಗೆ 10 ಕವನ ಸಂಕಲನ, ಒಂದು ಸಮಗ್ರ ಕಾವ್ಯ, ಒಂದು ಕಾದಂಬರಿ, ಒಂದು ಕಥಾ ಸಂಕಲನ, 4 ವಿಮಶಾìಕೃತಿ, 4 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. 20 ಸಿಡಿಗಳಲ್ಲಿ ಇವರ ಸ್ವರಚಿತ ಹಾಡುಗಳು ಧ್ವನಿಮುದ್ರಿತವಾಗಿದೆ. 

Advertisement

ಸಾಹಿತ್ಯ ಪರಿಷತ್ತು ಅಕಾಡೆಮಿ, ಆಳ್ವಾಸ್‌ ನುಡಿಸಿರಿ, ಕಾಂತಾವರ ಕನ್ನಡ ಸಂಘಗಳಿಂದ ಇವರು ಸಮ್ಮಾನಿತರಾಗಿದ್ದಾರೆ. ಹಲವು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಅಲಂಕರಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ 

ಮೇ 26ರಂದು ಅಪರಾಹ್ನ 4.30 ರಿಂದ ಸಾಂತಾಕ್ರೂಜ್‌ ಬಿಲ್ಲವ ಭವನದಲ್ಲಿ ಜರಗಲಿರುವ  ಸಮಾರಂಭದಲ್ಲಿ ಶ್ರೀ ಗುರುನಾರಾಯಣ ಪ್ರಶಸ್ತಿಯನ್ನು  ಸುಬ್ರಾಯ ಚೊಕ್ಕಾಡಿಯವರಿಗೆ ಪ್ರದಾನಿಸಲಾಗುವುದು. ಮುಖ್ಯ ಅತಿಥಿಯಾಗಿ ಪತ್ರಕರ್ತ, ಸಾಹಿತಿ ಲಕ್ಷಣ ಕೊಡಸೆಯವರು ಅವರು ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ  ಡಾ| ಈಶ್ವರ ಅಲೆವೂರು ರಚಿಸಿದ “ಪ್ರಗತಿಪರ ಚಿಂತನೆಯ ಸಾಹಿತಿ ಎಂ.ಬಿ. ಕುಕ್ಯಾನ್‌’ ಕೃತಿಯನ್ನು ಡಾ| ಸುನೀತಾ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಪ್ರಶಸ್ತಿಯ ಪ್ರಾಯೋಜಕ ಎಂ. ಬಿ. ಕುಕ್ಯಾನ್‌ ಅವರು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮವನ್ನು ಬಿಲ್ಲವರ ಮಹಾಮಂಡಳದ ಅಧ್ಯಕ್ಷರಾದ ಜಯ ಸಿ. ಸುವರ್ಣರು ಉದ್ಘಾಟಿಸಲಿದ್ದಾರೆ. ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮನೋ ರಂಜನಾ ಕಾರ್ಯಕ್ರಮವಾಗಿ ಶ್ರೀ ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಹಾಗೂ ನಲಸೋಪಾರ – ವಿರಾರ್‌ ಸ್ಥಳೀಯ ಸದಸ್ಯರಿಂದ ಮರಾಠಿ ಮೂಲದ ತುಳು ನಾಟಕ “ಕುಡೊಂಜಿ ಕತೆ’ ಪ್ರದರ್ಶನಗೊಳ್ಳಲಿದೆ. ಸಾಹಿತ್ಯಾಭಿಮಾನಿಗಳು, ತುಳು-ಕನ್ನಡಿಗರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next