Advertisement

Sahara: ಸುಬ್ರತಾ ರಾಯ್‌- ಮಹತ್ವಾಕಾಂಕ್ಷಿ ಉದ್ಯಮಿಯ ಏರಿಳಿತ

12:31 AM Nov 16, 2023 | Team Udayavani |

ಸಹರಾ ಇಂಡಿಯಾ ಪರಿವಾರ್‌ ಸಂಸ್ಥಾಪಕ ಸುಬ್ರತಾ ರಾಯ್‌, ಮಂಗಳವಾರ ರಾತ್ರಿ ನಿಧನಹೊಂದಿದ್ದು, ಈ ಮೂಲಕ  ಭಾರತದ ಉದ್ಯಮ ಕ್ಷೇತ್ರದ ಪ್ರಭಾವಿ ವ್ಯಕ್ತಿಯೊಬ್ಬರು ಇಹಲೋಕ ತ್ಯಜಿಸಿದಂತಾಗಿದೆ. ಸಾಮಾನ್ಯ ಕುಟುಂಬದಿಂದ ಬಂದ ಸುಬ್ರತಾ ರಾಯ್‌, ಬಿಲಿಯನೇರ್‌ ಹಂತಕ್ಕೆ ತಲುಪಿದ ಕಥೆಯೇ ರೋಚಕ. ಹಾಗೆಯೇ ಪೂರ್ಣ ಪೀಕ್‌ಗೆ ತೆರಳಿ, ಅಲ್ಲಿಂದ ಕೆಳಗೆ ಬಿದ್ದ ಕಥೆ ಅಷ್ಟೇ ಕುತೂಹಲಕಾರಿಯಾಗಿದೆ.

Advertisement

ಅಂದ ಹಾಗೆ, ಸುಬ್ರತಾ ರಾಯ್‌ ಜನಿಸಿದ್ದು ಬಿಹಾರದ ಅರಾರಿಯಾದಲ್ಲಿ. 1978ರಲ್ಲಿ ಅವರು ಸಹರಾ ಸಂಸ್ಥೆ ಸ್ಥಾಪಿಸಿದ್ದು, ಆಗ ಅವರಿಗೆ ಕೇವಲ 30 ವರ್ಷ.  ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಸುಮಾರು 2,000 ರೂ.ಗಳ ಬಂಡವಾಳ, ಜವಾನ, ಗುಮಾಸ್ತ ಮತ್ತು ಅವರ ತಂದೆಯ ಲ್ಯಾಂಬ್ರೆಟ್ಟಾ ಸ್ಕೂಟರ್‌ನೊಂದಿಗೆ ಈ ಉದ್ಯಮ ಆರಂಭಿಸಿದರು.

ವಿಶೇಷವೆಂದರೆ ಸಹರಾ ಅವರ ಮೊದಲ ಉದ್ಯಮವಲ್ಲ. ಇದಕ್ಕೂ ಮುನ್ನ ಅವರು ಬಿಹಾರದ ಗೋಪಾಲ್‌ಗಂಜ್‌ನಲ್ಲಿ ನೀರಾವರಿ ಇಲಾಖೆಗೆ ಕಲ್ಲುಗಳನ್ನು ಸರಬರಾಜು ಮಾಡುತ್ತಿದ್ದರು. ಹಾಗೆಯೇ ಬೆಳ್ಳಿಯ ಪರಿಶುದ್ಧತೆಯ ಪರೀಕ್ಷೆ ಮತ್ತು ವಿದ್ಯುತ್‌ ಫ್ಯಾನ್‌ಗಳನ್ನೂ ಮಾರಾಟ ಮಾಡಿದರು. ಇದಕ್ಕೆ ಅವರದ್ದೇ ಒಂದು ಬ್ರ್ಯಾಂಡ್‌ ನೇಮ್‌ ಕೂಡ ಇತ್ತು. ಅದರ ಹೆಸರು ಏರ್‌ ಸಹರಾ. ಮುಂದಿನ ದಿನಗಳಲ್ಲಿ ಇದನ್ನು ತಮ್ಮ ವಾಯುಯಾನ ಸಂಸ್ಥೆಗೆ ಏರ್‌ ಸಹರಾ ಎಂಬ ಹೆಸರನ್ನು ಇರಿಸಿಕೊಂಡಿದ್ದರು. ಜತೆಗೆ ಆಗ ಸಣ್ಣಪುಟ್ಟ ವ್ಯಾಪಾರಗಳಲ್ಲೂ ತೊಡಗಿಸಿಕೊಂಡಿದ್ದರು.

ಅವರ ತಂದೆ ಸುಧೀರ್‌ ಚಂದ್ರ ಮತ್ತು ತಾಯಿ ಸ್ವಪ್ನಾ ರಾಯ್‌ ಅವರ ಸಾವಿನ ಅನಂತರದಲ್ಲಿ ಸುಬ್ರತಾ ರಾಯ್‌ ಇನ್ನಷ್ಟು ಉದ್ಯಮ ಆರಂಭಿಸಿದ್ದರು. ಆದರೆ ಇವುಗಳು ಟೇಕ್‌ಆಫ್ ಆಗಲೇ ಇಲ್ಲ.

ಗೋರಖು³ರ ಕಾಲೇಜಿನಿಂದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದ ರಾಯ್‌, ಕೋಲ್ಕತಾದ ಹೋಲಿ ಚೈಲ್ಡ ಸ್ಕೂಲ್‌ ಮತ್ತು ವಾರಾಣಸಿಯ ಸಿಎಂ ಆಂಗ್ಲೋ ಬೆಂಗಾಲಿ ಇಂಟರ್ಮೀಡಿಯೇಟ್‌ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. ಮುಂದೆ ಅವರು ಆಂಬಿ ವ್ಯಾಲಿ ಸಿಟಿ, ಸಹರಾ ಮೂವಿ ಸ್ಟುಡಿಯೋಸ್‌, ಏರ್‌ ಸಹರಾ ಮತ್ತು ಫಿಲ್ಮಿಯಂತಹ ವ್ಯವಹಾರಗಳನ್ನು ಸೇರಿಸಿ ಸಹರಾ ಇಂಡಿಯಾ ಪರಿವಾರದ ಸ್ಥಾಪಕರಾದರು. ಇವರ ಸಾಮ್ರಾಜ್ಯದಲ್ಲಿ  ರಿಯಲ್‌ ಎಸ್ಟೇಟ್‌, ಹಣಕಾಸು, ಮಾಧ್ಯಮ, ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳು ಇದ್ದವು.

Advertisement

ರಾಯ್‌ ಅವರ ಅರೆ ಬ್ಯಾಂಕಿಂಗ್‌ ಸಂಸ್ಥೆಯಾದ ಸಹರಾ ಇಂಡಿಯಾ ಫೈನಾನ್ಷಿಯಲ್‌ ಕಾರ್ಪ್‌ ಲಿಮಿಟೆಡ್‌ ಸಹರಾ ಇಂಡಿಯಾದ ಪ್ರಮುಖ ಕಂಪೆನಿ. ಇಲ್ಲಿ ಅವರು ಕೆಲವೊಮ್ಮೆ ದಿನಕ್ಕೆ 1 ರೂ.ಗಿಂತ ಕಡಿಮೆ ಠೇವಣಿಗಳನ್ನು ತೆಗೆದುಕೊಳ್ಳುತ್ತಿದ್ದರು. ಗ್ರಾಹಕರಲ್ಲಿ ರಿಕ್ಷಾ ಎಳೆಯುವವರು ಮತ್ತು ಚಹಾ ಅಂಗಡಿ ಮಾಲಕರಂತಹ ಸಣ್ಣ ಹೂಡಿಕೆದಾರರು ಸೇರಿದ್ದರು.

2008ರ ಹೊತ್ತಿಗೆ 20,000 ಕೋಟಿ ರೂ.ಗಳ ಠೇವಣಿ ಪೋರ್ಟ್‌ಫೋಲಿಯೊದೊಂದಿಗೆ ಸಹರಾ ಇಂಡಿಯಾ ಫೈನಾನ್ಷಿಯಲ್‌ ಕಾರ್ಪೊರೇಶ‌ನ್‌ ದೇಶದ ಅತೀ ದೊಡ್ಡ ಬ್ಯಾಂಕೇತರ ಕಂಪೆನಿಯಾಗಿ ಮಾರ್ಪಟ್ಟಿತ್ತು.

ದೈತ್ಯ ಹೆಜ್ಜೆಗುರುತು

ಸಹರಾ ಕಂಪೆನಿ ಅತೀ ದೊಡ್ಡ ಮಾಧ್ಯಮ ಜಾಲ ಹೊಂದಿತ್ತು. ಸಹರಾ ಒನ್‌ ಮೀಡಿಯಾ ಆ್ಯಂಡ್‌ ಎಂಟರ್ಟೈನ್ಮೆಂಟ್‌ ಎಂಬ ಮಾಧ್ಯಮ ವಿಭಾಗವು ಮೂರು ಹಿಂದಿ ಭಾಷೆಯ ಚಾನೆಲ್‌ಗ‌ಳು, ಚಲನಚಿತ್ರ ಚಾನೆಲ್‌, ಫಿಲ್ಮಿ ಮತ್ತು ಸಾಮಾನ್ಯ ಮನರಂಜನಾ ಚಾನೆಲ್‌ ಆದ ಸಹರಾ ಒನ್‌ ಅನ್ನು ನಿರ್ವಹಿಸುತ್ತಿತ್ತು. ನಿರೂಪಕರು ಸಮವಸ್ತ್ರದಲ್ಲಿ ಪರದೆಯ ಮೇಲೆ ಕಾಣಿಸಿಕೊಂಡು ವೀಕ್ಷಕರನ್ನು “ಸಹರಾ ಪ್ರಣಾಮ’ ದೊಂದಿಗೆ ಸ್ವಾಗತಿಸುವುದನ್ನು ಅನೇಕರು ನೆನಪಿಸಿಕೊಳ್ಳುತ್ತಾರೆ.  ಸಹರಾ ಮೂವಿ ಸ್ಟುಡಿಯೋಸ್‌ ಹಲವಾರು ಹಿಟ್‌ ಚಿತ್ರಗಳನ್ನೂ ನೀಡಿದೆ. ಇವುಗಳ ಜತೆಗೆ ಹಿಂದಿ, ಇಂಗ್ಲಿಷ್‌ ಮತ್ತು ಉರ್ದು ಭಾಷೆಯ ಪತ್ರಿಕೆಗಳ ಒಡೆತನವನ್ನೂ ಸಹರಾ ಗ್ರೂಪ್‌ ಹೊಂದಿತ್ತು.

ಈ ಗ್ರೂಪ್‌ನಲ್ಲಿ ಏರ್‌ ಸಹರಾ ಪ್ರಮುಖ ಕಂಪೆನಿಯಾಗಿದ್ದು, 2006ರಲ್ಲಿ ಇದನ್ನು 500 ಮಿಲಿಯನ್‌ ಡಾಲರ್‌ಗೆ ಜೆಟ್‌ ಏರ್‌ವೇಸ್‌ಗೆ ಮಾರಾಟ ಮಾಡಲಾಯಿತು. ನ್ಯೂಯಾರ್ಕ್‌ನ ಪ್ಲಾಜಾ ಹೊಟೇಲ್‌ ಮತ್ತು ಲಂಡನ್‌ನ ಗ್ರಾಸ್ವೆನರ್‌ ಹೌಸ್‌ ಹೊಟೇಲ್‌ ಸೇರಿದಂತೆ ಐಷಾರಾಮಿ ಹೊಟೇಲ್‌ಗಳನ್ನು ಹೊಂದಿತ್ತು. ಇನ್ನು ಸಹರಾ ಗ್ರೂಪ್‌ 2013ರವರೆಗೆ ಭಾರತೀಯ ಕ್ರಿಕೆಟ್‌ ತಂಡವನ್ನು ಪ್ರಾಯೋಜಿಸಿತ್ತು. 2010ರಲ್ಲಿ, ಇದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪುಣೆ ಫ್ರಾಂಚೈಸಿಯನ್ನು 370 ಮಿಲಿಯನ್‌ಗೆ ಖರೀದಿಸಿತ್ತು.  ಭಾರತೀಯ ಹಾಕಿ ತಂಡದ ಪ್ರಾಯೋಜಕತ್ವವನ್ನು ಹೊಂದಿದ್ದ ಸಹರಾ ಇಂಡಿಯಾ, ಬಳಿಕ ಇನ್ನೊಬ್ಬ ಉದ್ಯಮಿ ವಿಜಯ್‌ ಮಲ್ಯ ಜತೆ ಸೇರಿ ಫಾರ್ಮುಲಾ ಒನ್‌ ರೇಸಿಂಗ್‌ ತಂಡದಲ್ಲಿ ಪಾಲು ಹೊಂದಿತ್ತು.

ವೇಗದ ಪಥ

ಐಷಾರಾಮಿ ಬದುಕಿಗೆ ಸಾರ್ಥಕವಾದಂತಿದ್ದರು ಸುಬ್ರತಾ ರಾಯ್‌. ಲಕ್ನೋದಲ್ಲಿನ ಅವರ 270 ಎಕ್ರೆ ಗೇಟೆಡ್‌ ನಿವಾಸ “ಸಹರಾ ಶೆಹರ್‌’ ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸಿತ್ತಿತ್ತು, ರಾಜಕಾರಣಿಗಳು, ಕಾರ್ಪೊರೇಟ್‌ ಗಣ್ಯರು ಮತ್ತು ಚಲನಚಿತ್ರ ತಾರೆಯರು ಅತಿಥಿಗಳಾಗಿ ಭಾಗವಹಿಸುತ್ತಿದ್ದರು.  2004ರಲ್ಲಿ ರಾಯ್‌ ಅವರು ತಮ್ಮ ಇಬ್ಬರು ಗಂಡು ಮಕ್ಕಳನ್ನು ಅತ್ಯಂತ ವೈಭವೋಪೇತವಾಗಿ ಮದುವೆ ಮಾಡಿದ್ದರು. ದೇಶಾದ್ಯಂತ ಸುಮಾರು 10,500 ಅತಿಥಿಗಳನ್ನು ಕರೆತರಲಾಯಿತು. ವಿಮಾನದಲ್ಲಿನ ಸೇವೆಯು ಚಿನ್ನದ ನ್ಯಾಪಿRನ್‌ಗಳನ್ನು ಒಳಗೊಂಡಿತ್ತು. ರೋಹಿತ್‌ ಬಾಲ್‌ ಮತ್ತು ಸವ್ಯಸಾಚಿಯಂತಹ ವಿನ್ಯಾಸಕರಿಂದ ಹಿಡಿದು ಬಚ್ಚನ್‌ ಕುಟುಂಬದಂತಹ ಬಾಲಿವುಡ್‌ನ‌ ದೊಡ್ಡ ದೊಡ್ಡವರೆಲ್ಲರೂ ಈ ವಿವಾಹದಲ್ಲಿ ಭಾಗಿಯಾಗಿದ್ದರು. ಈ ವಿವಾಹವನ್ನು ರಾಜ್‌ಕುಮಾರ್‌ ಸಂತೋಷಿ ಅವರು ಚಿತ್ರೀಕರಿಸಿದ್ದರು.

ತೊಂದರೆ ಆರಂಭ

1990ರಲ್ಲೇ ಸಹರಾ ಇಂಡಿಯಾ ಕೆಲವೊಂದು ಆರ್ಥಿಕ ತೊಂದರೆ ಅನುಭವಿಸಿತ್ತು. ಆದರೆ 2009ರಲ್ಲಿ ಸಹರಾ ಪ್ರೈಮ್‌ ಸಿಟಿ ಒಪಿಓಗೆ ಅರ್ಜಿ ಸಲ್ಲಿಸಿದಾಗ ಪ್ರಮುಖ ಬಿಕ್ಕಟ್ಟು ಎದುರಾಯಿತು. ಈ ಸಂದರ್ಭದಲ್ಲಿ ಸಾಕಷ್ಟು ತೆರಿಗೆ ಸಂಬಂಧಿಸಿದ ತೊಂದರೆಗಳೂ ಕಂಡು ಬಂದವು. ಅಂದರೆ ಆಪ್ಶನಲಿ ಫ‌ುಲ್ಲಿ ಕನ್ವರ್ಟಬಲ್‌ ಡಿಬೆಂಚರ್ಸ್‌(ಒಎಫ್ಸಿಡಿ)ಗಳನ್ನು ಹೂಡಿಕೆದಾರರಿಂದ ಚೆಕ್‌ ಅಥವಾ ಡಿಮ್ಯಾಂಡ್‌ ಡ್ರಾಫ್ಟ್ ಮೂಲಕ ಸ್ವೀಕರಿಸಲಾಗುತ್ತದೆ. ಆದರೆ ಇಲ್ಲಿ ನಗದು ರೂಪದಲ್ಲಿ ಸ್ವೀಕಾರ ಮಾಡಲಾಗುತ್ತಿತ್ತು. ಹೀಗಾಗಿ ಭಾರೀ ಪ್ರಮಾಣದ ತನಿಖೆಗೆ ಆದೇಶಿಸಲಾಗಿದ್ದು, ಅಲ್ಲಿಂದ ಕುಸಿತ ಶುರುವಾಯಿತು.

2008ರ ಆರಂಭದಲ್ಲಿ ಆರ್‌ಬಿಐ, ಜನರಿಂದ ಹೂಡಿಕೆ ಸ್ವೀಕಾರ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಿತು. ಅಷ್ಟೊತ್ತಿಗಾಗಲೇ ಕಂಪೆನಿ 20 ಸಾವಿರ ಕೋಟಿ ರೂ. ಮೌಲ್ಯದ ಠೇವಣಿ ಸ್ವೀಕಾರ ಮಾಡಿತ್ತು. ಜತೆಗೆ ಸೆಬಿಯೂ ಸಹರಾ ಪ್ರೈಮ್‌ ಸಿಟಿಯನ್ನು ಜನರಿಂದ ಹಣ ಸ್ವೀಕಾರ ಮಾಡದಂತೆ ನಿರ್ಬಂಧ ಮಾಡಿತ್ತು.

ಕಂಪೆನಿಯ 10,600 ಕೋಟಿ ರೂ.ಹಣವನ್ನು  ಮಹಾರಾಷ್ಟ್ರ ದ ಅಂಬಿ ವ್ಯಾಲಿ ಲಕ್ಸುರಿ ಟೌನ್‌ಶಿಪ್‌ ಮಾಡುವ ಸಲುವಾಗಿ ವೆಚ್ಚ ಮಾಡಲಾಗಿತ್ತು. ಜತೆಗೆ ದೇಶದ ವಿವಿಧೆಡೆಗಳಲ್ಲಿ ಸಹರಾ ಸಿಟಿ ಮತ್ತು ಸಹರಾ ಗ್ರೇಸ್‌ ಟೌನ್‌ಶಿಪ್‌ಗಳನ್ನೂ ಈ ಕಂಪೆನಿ ಹೊಂದಿತ್ತು.

ಇದಾದ ಮೇಲೆ ಸಹರಾ ಗ್ರೂಪ್‌ ಸೆಬಿ ವಿರುದ್ಧವೇ ತಿರುಗಿಬಿದ್ದಿತ್ತು. ಅದನ್ನು ಜವಾಬ್ದಾರಿ ರಹಿತ ಎಂದು ಕರೆದಿದ್ದ ಸಹರಾ ಕಂಪೆನಿ, 127 ಟ್ರಕ್‌ಗಳಲ್ಲಿ ಅರ್ಜಿಗಳನ್ನು ತುಂಬಿ ಸೆಬಿ ಕಚೇರಿ ಬಳಿಗೆ ಕಳುಹಿಸಿತ್ತು. ಇದರಲ್ಲಿ 30 ದಶಲಕ್ಷ ಅರ್ಜಿಗಳು ಇದ್ದವು. ಆದರೆ ಸೆಬಿ ಪ್ರಕಾರ, ಈ ಕಂಪೆನಿಯಲ್ಲಿ ಹೂಡಿಕೆ ಮಾಡಿದ ಹಲವಾರು ಮಂದಿ ಇರಲೇ ಇಲ್ಲ. ಅಲ್ಲದೆ ಸಹರಾ ಇಂಡಿಯಾ ರಿಯಲ್‌ ಎಸ್ಟೇಟ್‌ ಕಾರ್ಪೊರೇಶನ್‌ ಮತ್ತು ಸಹರಾ ಹೌಸಿಂಗ್‌ ಇನ್‌ವೆಸ್ಟ್‌ಮೆಂಟ್‌ ಕಾರ್ಪೊರೇಶನ್‌ಗೆ ಸೆಬಿಯ ನಿಯಮಾವಳಿ ಪಾಲಿಸದೇ ಹಣ ಸ್ವೀಕಾರ ಮಾಡಲಾಗುತ್ತಿತ್ತು. ಈ ಪ್ರಕರಣವೂ ಸುಪ್ರೀಂ ಕೋರ್ಟ್‌ಗೆ ಹೋಯಿತು.

ಎಲ್ಲವೂ ಅಂತ್ಯ

2014ರಲ್ಲಿ ಸಹರಾ ಕಂಪೆನಿಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯುಂಟಾಯಿತು. ಆಗ ಎಲ್ಲ ಠೇವಣಿದಾರರಿಗೆ ಶೇ.15ರ ಬಡ್ಡಿದರದ ಜತೆ ಹಣ ವಾಪಸ್‌ ಮಾಡುವಂತೆ ಆದೇಶಿಸಿತು. ಅಲ್ಲದೆ ಸುಬ್ರತಾ ರಾಯ್‌ ಅವರನ್ನೂ ಬಂಧಿಸಲಾಯಿತು. 2016ರಲ್ಲಿ ಅವರು ಪೆರೋಲ್‌ ಮೇಲೆ ಬಿಡುಗಡೆಯಾಗಿದ್ದರು. ಮತ್ತೆ ಜೈಲಿಗೆ ಹೋಗಿದ್ದರೂ ಪೆರೋಲ್‌ ಸಿಕ್ಕಿತು. ಅವರ ಹೆಚ್ಚಿನ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

ಇದಷ್ಟೇ ಅಲ್ಲ, ಆಗಿನಿಂದಲೂ ಇಲ್ಲಿವರೆಗೂ ಸುಬ್ರತಾ ರಾಯ್‌ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್‌ ಎದುರಿಸುತ್ತಲೇ ಇದ್ದರು. 2020ರಲ್ಲಿ ಹೂಡಿಕೆದಾರರಿಗೆ ಬಡ್ಡಿ ಮತ್ತು ದಂಡ ಸಹಿತ 62 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ವಾಪಸ್‌ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಅಲ್ಲದೆ ಕೊಡಲಿಲ್ಲವೆಂದಾದರೆ ಮತ್ತೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ ಹೂಡಿಕೆದಾರರ ಹಣ ಇನ್ನೂ ಜನರಿಗೆ ತಲುಪಿಲ್ಲ. ಕೇಂದ್ರ ಸರಕಾರ ಹೂಡಿಕೆದಾರರಿಗಾಗಿಯೇ ಸಹರಾ ಪೋರ್ಟಲ್‌ ತೆಗೆದಿದೆ. ಅಲ್ಲದೆ ಸೆಬಿ ಬಳಿ 25 ಸಾವಿರ ಕೋಟಿ ರೂ. ಬಂಡವಾಳವೂ ಉಳಿದಿದ್ದು, ಮುಂದೇನು ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next